ಕಳೆದ 2 ತಿಂಗಳಿನಿಂದ ಇಸ್ರೇಲ್, ಪ್ಯಾಲೆಸ್ತೀನ್ ಮೇಲೆ ನಿರಂತರ ಬಾಂಬ್ ದಾಳಿ ನಡೆಸುತ್ತಿದೆ. ಈ ಭೀಕರ ಯುದ್ಧ ಗಾಝಾದಲ್ಲಿ ಹತ್ಯಾಕಾಂಡದ ಜೊತೆ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ. ಗಾಝಾದ ರಫಾ ಕ್ರಾಸಿಂಗ್‌ನಲ್ಲಿ ಆಹಾರ, ನೀರಿಗಾಗಿ ಜನರು ಟ್ರಕ್‌ಗಳನ್ನು ತಡೆಯುತ್ತಿದ್ದು, ಹಸಿವಿನಿಂದ ತತ್ತರಿಸಿದ ಜನರು ಪರಿಹಾರ ಸಾಮಾಗ್ರಿ ವಾಹನಗಳನ್ನು ತಡೆದು ಆಹಾರ ಕಸಿದು ತಿನ್ನುತ್ತಿರುವ ಮನಕಲಕುವ ದೃಶ್ಯಗಳು ಕಂಡು ಬಂದಿದೆ.
ಗಾಝಾದ ದಕ್ಷಿಣಕ್ಕೆ ಇಸ್ರೇಲ್ ಯುದ್ಧ ಘೋಷಣೆ ಬಳಿಕ ಲಕ್ಷಾಂತರ ಮಂದಿ ವಲಸೆ ಹೋಗಿದ್ದಾರೆ. ಇದರಿಂದ ಗಾಝಾದ ದಕ್ಷಿಣದಲ್ಲಿ ನಿರಾಶ್ರಿತರ ಕೇಂದ್ರಗಳಲ್ಲಿ ಲಕ್ಷಾಂತರ ಮಂದಿ ನೆಲೆಸಿದ್ದಾರೆ. ಈ ಭಾಗದಲ್ಲಿ ಹಸಿದ ಮತ್ತು ಹತಾಶೆಯ ಜನರು ಈಜಿಪ್ಟ್‌ನ ಗಡಿಯ ಸಮೀಪವಿರುವ ರಫಾ ಪ್ರದೇಶದಲ್ಲಿ ಆಹಾರ ಮತ್ತು ಇತರ ಸರಬರಾಜುಗಳನ್ನು ಸಾಗಿಸುವ ಟ್ರಕ್‌ಗಳನ್ನು ತಡೆಯುವುದು. ಆಹಾರ ಪೊಟ್ಟಣಗಳನ್ನು ಕಸಿದುಕೊಳ್ಳುತ್ತಿರುವುದು ಕಂಡು ಬಂದಿದೆ.
ರಫಾ ಕ್ರಾಸಿಂಗ್‌ನಲ್ಲಿ ಜನರು ನೆರವು ಸಾಗಾಟ ಮಾಡುವ ಟ್ರಕ್‌ಗಳನ್ನು ಸುತ್ತುವರಿಯುತ್ತಾರೆ, ಕೆಲವರು ಟ್ರಕ್‌ಗಳ ಮೇಲೆ ಹಾರುತ್ತಾರೆ. ನೀರಿನ ಬಾಟಲಿಗಳನ್ನು, ಆಹಾರದ ಪೊಟ್ಟಣಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಕೆಲವು ಟ್ರಕ್‌ಗಳನ್ನು ಮುಸುಕುಧಾರಿಗಳು ಕಾವಲು ಕಾಯುತ್ತಿರುವುದು ಕೂಡ ಕಂಡು ಬಂದಿದೆ.
ಇದು ಕೇವಲ ರಫಾ ನಗರದ ಸ್ಥಿತಿ ಮಾತ್ರವಲ್ಲ. ಗಾಝಾದಲ್ಲಿನ ಮಾನವೀಯ ಪರಿಸ್ಥಿತಿಯು ತುಂಬಾ ಕೆಟ್ಟದಾಗಿದೆ. ಒಂದು ಮಿಲಿಯನ್ ನಿರಾಶ್ರಿತ ಪ್ಯಾಲೆಸ್ತೀನ್ ನಾಗರಿಕರು ಹಸಿವು ಮತ್ತು ಬಾಯಾರಿಕೆಯಿಂದ ಬಳಲುತ್ತಿದ್ದಾರೆ ಎಂದು ಅಲ್ ಜಝೀರಾ ವರದಿ ಮಾಡಿದೆ.
ಪ್ಯಾಲೆಸ್ತೀನ್‌ಗೆ ಹರಿದು ಬರುತ್ತಿರುವ ನೆರವು ಸಾಕಾಗುತ್ತಿಲ್ಲ. ಜನರು ಮನೆಯಿಲ್ಲದೆ, ಆಹಾರವಿಲ್ಲದೆ, ನೀರಿಲ್ಲದೆ ಮತ್ತು ವೈದ್ಯಕೀಯ ಸಾಮಗ್ರಿಗಳಿಲ್ಲದೆ ಪರದಾಡುತ್ತಿದ್ದಾರೆ. ವಿಶ್ವಸಂಸ್ಥೆಯು ಇತ್ತೀಚೆಗೆ ಗಾಝಾದಲ್ಲಿರುವ ಜನರು ಆಹಾರಕ್ಕಾಗಿ ಹತಾಶರಾಗಿದ್ದಾರೆ, ಅವರು ನೆರವು ಟ್ರಕ್‌ಗಳನ್ನು ತಡೆದು ಸಿಕ್ಕಿದ್ದನ್ನು ಕಸಿದುಕೊಂಡು ತಿನ್ನುವ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿತ್ತು.
ಇತ್ತೀಚೆಗೆ ಗಾಝಾ ಪಟ್ಟಿಗೆ ಭೇಟಿ ನೀಡಿದ ಯುಎನ್‌ಆರ್‌ಡಬ್ಲ್ಯೂಎ ಮುಖ್ಯಸ್ಥ ಫಿಲಿಪ್ ಲಜ್ಜರಿನಿ ಮಾತನಾಡುತ್ತಾ, ಗಾಝಾ ನಿವಾಸಿಗಳು ಸುದೀರ್ಘ ವರ್ಷಗಳಿಂದ ಇಸ್ರೇಲ್‌ನ ದಾಳಿಗೆ ಒಳಗಾಗಿದ್ದರೂ ಈ ರೀತಿಯ ಹಸಿವನ್ನು ಎಂದು ಅನುಭವಿಸಿರಲಿಕ್ಕಿಲ್ಲ. ರಾಫಾದಲ್ಲಿನ ಜನರು ಸಂಪೂರ್ಣ ಹತಾಶೆಯಿಂದ ಟ್ರಕ್‌ನಲ್ಲಿ ಸಾಗಿಸುತ್ತಿದ್ದ ನೆರವು ಸಾಮಾಗ್ರಿ ಕಸಿದು ಸ್ಥಳದಲ್ಲೇ ತಿನ್ನುತ್ತಿದ್ದು, ಅವರ ಹಸಿವಿನ ದಾಹವನ್ನು ಸೂಚಿಸುತ್ತದೆ. ಈ ಭಯಾನಕ ಸ್ಥಿತಿ ನನ್ನ ಕಣ್ಣುಗಳಿಂದ ನೋಡಿದೆ ಎಂದು ಫಿಲಿಪ್ ಲಜ್ಜರಿನಿ ಹೇಳಿದ್ದಾರೆ.
WFP ಉಪ ಮುಖ್ಯಸ್ಥ ಕಾರ್ಲ್ ಸ್ಕೌ ಮಾತನಾಡುತ್ತಾ, ಗಾಝಾದಲ್ಲಿ ಸುಮಾರು ಅರ್ಧದಷ್ಟು ಜನರು ಹಸಿವಿನಿಂದ ಬಳಲುತ್ತಿದ್ದಾರೆ, ಅವರು ಮುಂದಿನ ಊಟ ನಮಗೆ ಸಿಗುತ್ತಾ ಎಂದು ತಿಳಿದಿಲ್ಲ ಎಂದು ಹೇಳಿದ್ದಾರೆ.
ರಫಾದಲ್ಲಿ ಪ್ರತಿ ಚದರ ಕಿಲೋಮೀಟರ್‌ಗೆ 12,000ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಇಸ್ರೇಲ್ ರಫಾವನ್ನು ಕೂಡ ಕೇಂದ್ರೀಕರಿಸಿ ದಾಳಿಯನ್ನು ನಡೆಸುತ್ತಿದೆ. ಇಸ್ರೇಲ್‌ನ ಬಾಂಬ್ ದಾಳಿಯಿಂದ ಈಗಾಗಲೇ 19,000ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಮತ್ತು 50,897 ಜನರು ಗಾಯಗೊಂಡಿದ್ದಾರೆ. ಸಾವಿರಾರು ಜನರು ಅವಶೇಷಗಳಡಿಯಲ್ಲಿ ಹೂತುಹೋಗಿದ್ದಾರೆ. ಆದರೆ ಇಸ್ರೇಲ್ ಗಾಝಾ ಮೇಲೆ ಆಕ್ರಮಣವನ್ನು ಮುಂದುವರಿಸಿದೆ.
ಇದನ್ನು ಓದಿ: ಕೇಸರೀಕರಣಗೊಂಡ ವಂದೇ ಭಾರತ್ ರೈಲು


