ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ನೇತೃತ್ವದ ತಮಿಳುನಾಡಿನ ಡಿಎಂಕೆ ಸರ್ಕಾರ ಪುರಾತನ ಹಿಂದೂ ದೇವಸ್ಥಾನವೊಂದನ್ನು ಕೆಡವಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬಲಪಂಥೀಯ ‘Tathvam-asi’ಎಂಬ ಎಕ್ಸ್ ಖಾತೆಯಲ್ಲಿ “ಇನ್ನು ಕಾಯಲು ಸಾಧ್ಯವಿಲ್ಲ, ಎಂ.ಕೆ ಸ್ಟಾಲಿನ್ ಮತ್ತು ಉದಯನಿಧಿ ಸ್ಟಾಲಿನ್ ನಮ್ಮ ಹಿಂದೂ ದೇವಾಲಯಗಳ ಮೇಲೆ ನಡೆಸುತ್ತಿರುವ ದಾಳಿಗೆ ಪರಿಣಾಮ ಎದುರಿಸಲಿದ್ದಾರೆ. ಕರ್ಮ ಅವರನ್ನು ಸುಮ್ಮನೆ ಬಿಡುವುದಿಲ್ಲ. ಅವರಿಗೆ ಮತ ಹಾಕಿದ ಹಿಂದೂಗಳಿಗೆ ನಾಚಿಕೆಯಾಗಬೇಕು” ಎಂದು ಬರೆದುಕೊಳ್ಳಲಾಗಿದೆ.
I can't wait for the @mkstalin @Udhaystalin family to face the consequences (karma to hit back) of their crimes against our Hindu temples.😡😡
Shame on all those Hindus who voted for them. 😭 pic.twitter.com/HW1WKJOOMG
— Tathvam-asi (@ssaratht) January 18, 2024
‘Boiled Anda’ ಎಂಬ ಮತ್ತೊಂದು ಎಕ್ಸ್ ಖಾತೆಯಲ್ಲೂ ಇದೇ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಸ್ಟಾಲಿನ್ ಕುಟುಂಬಕ್ಕೆ ಮತ ಹಾಕಿದ ಹಿಂದೂಗಳಿಗೆ ನಾಚಿಕೆಯಾಗ್ಬೇಕು” ಎಂದು ಬರೆದುಕೊಂಡಿದ್ದಾರೆ.
Shame on Hîndus who voted for the Stalin family 🤬🤬🤬 pic.twitter.com/A9DPF3IA2F
— Boiled Anda 🥚🇮🇳 (@AmitLeliSlayer) January 19, 2024
ಫ್ಯಾಕ್ಟ್ ಚೆಕ್ : ಮೇಲಿನ ಸುದ್ದಿಯ ಸತ್ಯಾಸತ್ಯತೆ ತಿಳಿಯಲು ನಾನುಗೌರಿ.ಕಾಂ ಮೊದಲು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸುದ್ದಿಯ ವಿಡಿಯೋ ಹುಡುಕಿದೆ. ಈ ವೇಳೆ ಜನವರಿ 22,2024ರಂದು ಇನ್‌ಶಾರ್ಟ್ ಶಾರ್ಟ್ ನ್ಯೂಸ್ ವೆಬ್‌ಸೈಟ್ ಈ ಬಗ್ಗೆ ಸುದ್ದಿ ಮಾಡಿರುವುದು ದೊರೆತಿದೆ. ಆ ಸುದ್ದಿಯಲ್ಲಿ “ತಮಿಳುನಾಡಿನಲ್ಲಿ ಖಾಸಗಿ ದೇವಸ್ಥಾನ ಕಡೆವಿರುವುದನ್ನು ತಪ್ಪಾಗಿ ವರದಿ ಮಾಡಲಾಗಿದೆ” ಎಂದು ಶೀರ್ಷಿಕೆ ಕೊಡಲಾಗಿದೆ.
“ಖಾಸಗಿ ಒಡೆತನದ ಕಾಂಚಿಪುರಂನ ಶ್ರೀ ನಲ್ಲಕಂಬ ವಿನಾಯಗರ್ ಹಳೆಯ ದೇವಸ್ಥಾನವನ್ನು ಹೊಸದಾಗಿ ನಿರ್ಮಿಸುವ ಸಲುವಾಗಿ ದೇವಸ್ಥಾನದ ಟ್ರಸ್ಟ್ ಕೆಡವಿದೆ. ಅದನ್ನು ತಪ್ಪಾಗಿ ಸರ್ಕಾರ ಹಿಂದೂ ದೇವಸ್ಥಾನ ಕೆಡವಿದ್ದಾಗಿ ಸುದ್ದಿ ಹಬ್ಬಲಾಗಿದೆ” ಎಂದು ಇನ್‌ಶಾರ್ಟ್ ವರದಿ ತಿಳಿಸಿದೆ.
ನಾವು ಇನ್ನಷ್ಟು ಪರಿಶೀಲನೆ ನಡೆಸಿದಾಗ ‘Tathvam-asi’ಎಕ್ಸ್ ಖಾತೆಯ ಪೋಸ್ಟ್‌ಗೆ ತಮಿಳುನಾಡು ಸರ್ಕಾರದ ಅಧಿಕೃತ ಸುಳ್ಳು ಸುದ್ದಿ ಪತ್ತೆ ಘಟಕ (ಫ್ಯಾಕ್ಟ್ ಚೆಕ್ ತಂಡ) ದ ‘TN Fact Check’ಎಂಬ ಎಕ್ಸ್ ಖಾತೆ ಪ್ರತಿಕ್ರಿಯೆ ಕೊಟ್ಟಿರುವುದು ಕಂಡು ಬಂದಿದೆ. ಅದರಲ್ಲಿ, ಈ ದೇವಾಲಯವು HR&CE (Hindu Religious and Charitable Endowments Department) ನಿಯಂತ್ರಣದಲ್ಲಿಲ್ಲ. ಇದು ಅವರ ಸ್ವಂತ ಆಡಳಿತದ ಖಾಸಗಿ ದೇವಾಲಯವಾಗಿದೆ. ಈ ದೇವಾಲಯವನ್ನು ತಮಿಳುನಾಡು ಸರ್ಕಾರ ಕೆಡವಲಿಲ್ಲ. ಖಾಸಗಿ ಆಡಳಿತವೇ ದೇವಾಲಯವನ್ನು ಕೆಡವಿದೆ” ಎಂದು ಸ್ಪಷ್ಟಪಡಿಸಿದೆ.
This temple is not under the control of HR&CE. It is a private temple under their own administration.
This temple is not demolished by TN Government. The private administration themselves demolished the temple. (1/3) https://t.co/qmk2yhunN6— TN Fact Check (@tn_factcheck) January 19, 2024
ಖಾಸಗಿ ಆಡಳಿತವು 1882 ರಲ್ಲಿ ನಿರ್ಮಿಸಿದ್ದ ಹಳೆಯ ಕಟ್ಟಡದ ಸ್ಥಳದಲ್ಲಿಯೇ ಹೊಸ ದೇವಾಲಯವನ್ನು ನಿರ್ಮಿಸಲು ಮುಂದಾಗಿದೆ. 8ನೇ ಡಿಸೆಂಬರ್ 2023ರಂದು ದೇವಸ್ಥಾನ ಕೆಡವಲು ಪ್ರಾರಂಭಿಸಲಾಗಿತ್ತು. ಅದಕ್ಕೂ ಮೊದಲು ದೇವಾಲಯ ಸಮಿತಿಯು ‘ಬಾಲಯಂ’ ಧಾರ್ಮಿಕ ಆಚರಣೆ ನಡೆಸಿದೆ ಎಂದು ತಿಳಿಸಿದೆ.
ತಮಿಳುನಾಡು ಸರ್ಕಾರವು ಹಿಂದೂ ದೇವಾಲಯಗಳನ್ನು ಕೆಡವುತ್ತಿದೆ ಎಂದು ಹೇಳುವ ಈ ವದಂತಿಗಳು ಮತ್ತು ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ನಾವು ಸಾರ್ವಜನಿಕರಲ್ಲಿ ವಿನಂತಿಸುತ್ತೇವೆ. ನಮ್ಮ Fact Check Unit (FCU)ಈ ಬಗ್ಗೆ ಪರಿಶೀಲನೆ ನಡೆಸಿದೆ ಎಂದು ಹೇಳಿದೆ.
ಇಂಗ್ಲಿಷ್ ಫ್ಯಾಕ್ಟ್ ಚೆಕ್ ವೆಬ್‌ಸೈಟ್ ಬೂಮ್ ಈ ಕುರಿತು ಮಾಹಿತಿ ಕಲೆ ಹಾಕಿದೆ. ಅದು ಕೆಡವಲ್ಪಟ್ಟ ಕಾಂಚಿಪುರಂನ ಶ್ರೀ ನಲ್ಲಕಂಬ ವಿನಾಯಗರ್ ದೇವಸ್ಥಾನದ ಟ್ರಸ್ಟಿ ಕೆ. ಸೆಂಥಿಲ್ ಕುಮಾರ್ ಅವರ ಪುತ್ರ ರಂಜಿತ್ ಕುಮಾರ್ ಅವರಿಂದ ಮಾಹಿತಿ ಕೇಳಿದೆ. ಈ ವೇಳೆ ರಂಜಿತ್ ಕುಮಾರ್ ಅವರು, “ಶ್ರೀ ನಲ್ಲಕಂಬ ವಿನಾಯಗರ್ ದೇವಸ್ಥಾನ 140 ವರ್ಷ ಹಳೆಯದು. ಅದು ನಮ್ಮ ಖಾಸಗಿ ದೇವಸ್ಥಾನ. ಹೊಸ ದೇವಸ್ಥಾನ ನಿರ್ಮಿಸುವ ಸಲುವಾಗಿ ಜನವರಿ 2, 2024ರಂದು ಹಳೆಯ ಕಟ್ಟಡ ಕೆಡವಿದ್ದೇವೆ. ಅದಕ್ಕೂ ಮುನ್ನ ‘ಬಾಲಯಂ’ ಆಚರಣೆ ಮಾಡಿದ್ದೇವೆ. ಹಳೆಯ ಕಟ್ಟಡ ಕೆಡವಿದ ಜಾಗದಲ್ಲೇ ದೇವಸ್ಥಾನ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ” ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ, ವೈರಲ್ ವಿಡಿಯೋದಲ್ಲಿರುವುದು ತಮಿಳುನಾಡಿನ ಕಾಂಚಿಪುರಂನ ಶ್ರೀ ನಲ್ಲಕಂಬ ವಿನಾಯಗರ್ ದೇವಸ್ಥಾನ. ಈ ಖಾಸಗಿ ದೇವಸ್ಥಾನವನ್ನು ಹೊಸದಾಗಿ ನಿರ್ಮಾಣ ಮಾಡುವ ಸಲುವಾಗಿ ಅದರ ಆಡಳಿತ ಮಂಡಳಿಯೇ ಕೆಡವಿದೆ ಎಂದು ತಿಳಿದು ಬಂದಿದೆ. ತಮಿಳುನಾಡಿನ ಡಿಎಂಕೆ ಸರ್ಕಾರ ಹಿಂದೂ ದೇವಸ್ಥಾನ ಕೆಡವಿದೆ ಎಂಬುವುದು ಸುಳ್ಳು ಎಂದು ಖಚಿತವಾಗಿದೆ.
ಇದನ್ನೂ ಓದಿ : Fact Check: ತಮಿಳುನಾಡು ಸರ್ಕಾರ ಹಿಂದೂ ದೇವಸ್ಥಾನ ಧ್ವಂಸಗೊಳಿಸಿದ್ದು ನಿಜಾನಾ?


