HomeದಿಟನಾಗರFact Check: ಸಿದ್ದರಾಮಯ್ಯ ಸರ್ಕಾರ ಅಂಗನವಾಡಿ ಹುದ್ದೆಗಳ ನೇಮಕಕ್ಕೆ 'ಉರ್ದು ಭಾಷೆ' ಕಡ್ಡಾಯಗೊಳಿಸಿದೆಯಾ?

Fact Check: ಸಿದ್ದರಾಮಯ್ಯ ಸರ್ಕಾರ ಅಂಗನವಾಡಿ ಹುದ್ದೆಗಳ ನೇಮಕಕ್ಕೆ ‘ಉರ್ದು ಭಾಷೆ’ ಕಡ್ಡಾಯಗೊಳಿಸಿದೆಯಾ?

- Advertisement -
- Advertisement -

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ‘ಉರ್ದು ಭಾಷೆ’ ಗೊತ್ತಿರುವುದನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಕಡ್ಡಾಯಗೊಳಿಸಿದೆ ಎಂಬ ಸುದ್ದಿಯೊಂದು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತುಮಕೂರು ನಗರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಖಾಲಿ ಇರುವ ಗೌರವಧನ ಆಧಾರಿತ ಅಂಗನವಾಡಿ ಕಾರ್ಯರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂಬ ಪತ್ರಿಕೆಯ ಪ್ರಕಟಣೆಯೊಂದನ್ನು ಮುಂದಿಟ್ಟುಕೊಂಡು ಈ ಸುದ್ದಿ ಹಬ್ಬಲಾಗಿದೆ.

Accidental Bhakth‘ಎಂಬ ಎಕ್ಸ್‌ ಖಾತೆಯಲ್ಲಿ “ಅಂಗನವಾಡಿ ಸಹಾಯಕಿಯರಿಗೆ ಉರ್ದು ಬರಲೇಬೇಕು, ಮಹಾನಗರ ಪಾಲಿಕೆ ಮೇಲೆ ಉರ್ದು ಬೋರ್ಡ್ ಇರಲೇ ಬೇಕು, ಕನ್ನಡ ಪರ ಬೋರ್ಡ್ ಹಾಕಿ ಅಂದವರನ್ನು ಒದ್ದು ಒಳಗೆ ಹಾಕಿದ್ದಾಯಿತು, ಕನ್ನಡರಾಮಯ್ಯ ಅಂತ ಅವನಿಗೆ ಮೆರವಣಿಗೆ ಮಾಡಿದ ಹೇಲಾಟಗಾರರ ಆತ್ಮಕ್ಕೆ ಎರಡು ನಿಮಿಷ ಮೌನಾಚರಣೆ ಮಾಡೋಣ ಬ್ರದರ್” ಎಂದು ಬರೆದುಕೊಂಡು ಮೇಲಿನ ಸುದ್ದಿಯ ಪತ್ರಿಕಾ ವರದಿ ಹಂಚಿಕೊಳ್ಳಲಾಗಿದೆ.

ಸಂವಾದ (Samvada) ಎಂಬ ಬಲಪಂಥೀಯ ಫೇಸ್‌ಬುಕ್ ಚಾನೆಲ್‌ನಲ್ಲಿ “ಉರ್ದು ಬಲ್ಲವರಿಗೆ ಮಾತ್ರ ಕೆಲಸ ಕರ್ನಾಟಕದಲ್ಲಿ ಘಾಜ್ವ-ಎ-ಹಿಂದ್‌ ಶುರು” ಎಂಬ ಶೀರ್ಷೆಕೆಯಲ್ಲಿ ವಿಡಿಯೋ ವರದಿಯನ್ನು ಮಾಡಲಾಗಿದೆ. ಈ ವರದಿಯಲ್ಲಿ ಈ ಹಿಂದಿನ ಆಗು-ಹೋಗುಗಳನ್ನು ಸೇರಿಸಿ ರಾಜ್ಯದ ಕಾಂಗ್ರೆಸ್‌ ಸರ್ಕಾರವನ್ನು ಕನ್ನಡ ವಿರೋಧಿ, ಉರ್ದು ಭಾಷೆ ಮತ್ತು ಮುಸ್ಲಿಮರ ಪರ ಎಂದು ಬಿಂಬಿಸಲಾಗಿದೆ. ವರದಿಯಲ್ಲಿ ಕನ್ನಡ ಹೋರಾಟಗಾರರು ಮತ್ತು ಮುಸ್ಲಿಂ ಸಮುದಾಯದ ವಿರುದ್ದ ದ್ವೇಷ ಕಾರಲಾಗಿದೆ.

ಫ್ಯಾಕ್ಟ್‌ಚೆಕ್‌ : ತುಮಕೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಕನ್ನಡ ಭಾಷೆಯ ಜೊತೆಗೆ ಉರ್ದು ಗೊತ್ತಿರಬೇಕು ಎಂಬ ಪತ್ರಿಕಾ ಪ್ರಕಟಣೆ ಮತ್ತು ಅದರ ಸುತ್ತ ಹರಡುತ್ತಿರುವ ಕೋಮು ಆಯಾಮದ ಸುದ್ದಿಗಳ ಸತ್ಯಾಸತ್ಯತೆ ಪರಿಶೀಲನೆಯನ್ನು ನಾನುಗೌರಿ. ಕಾಂ ಮಾಡಿದೆ.

ಸರ್ಕಾರ ಅಥವಾ ತುಮಕೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿಜವಾಗಿಯೂ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಉರ್ದು ಭಾಷೆಯನ್ನು ಕಡ್ಡಾಯಗೊಳಿಸಿದೆಯಾ? ಎಂಬ ಸತ್ಯವನ್ನು ನಾವು ಹೊರಗೆಳೆದಿದ್ದೇವೆ.

ಇದಕ್ಕಾಗಿ ನಾವು ಮೊದಲು ತುಮಕೂರಿನ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಉಪ ನಿರ್ದೇಶಕರಾದ ಚಿದಾನಂದ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದೇವೆ.

ಚಿದಾನಂದ ಅವರು ನೀಡಿದ ಮಾಹಿತಿ ಪ್ರಕಾರ, ಪ್ರಸ್ತುತ ಅಂಗನವಾಡಿ ಹುದ್ದೆಗಳ ಭರ್ತಿಗೆ 2022ರ ಡಿಸೆಂಬರ್ ತಿಂಗಳಲ್ಲಿ ಅಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ನೀಡಿದ ಆದೇಶದಂತೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರದ ಆದೇಶದ ಪ್ರಕಾರ ರಾಜ್ಯದ ಯಾವುದೇ ಪ್ರದೇಶದ ಅಂಗನವಾಡಿಗಳಿಗೆ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ನೇಮಕ ಮಾಡಿಕೊಳ್ಳುವಾಗ, ‘ಆ ಪ್ರದೇಶದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಜನಸಂಖ್ಯೆಯ ಶೇ.25ರಷ್ಟು ಜನರು ಮಾತನಾಡುವ ಭಾಷೆ’ ಅರ್ಜಿ ಸಲ್ಲಿಸುವವರಿಗೆ ಗೊತ್ತಿರಬೇಕು.

ಉದಾಹರಣೆಗೆ : ಮುಸ್ಲಿಮರು ಹೆಚ್ಚಿರುವ ಪ್ರದೇಶಗಳ ಅಂಗನವಾಡಿಗಳಿಗೆ ಕಾರ್ಯಕರ್ತೆಯರನ್ನು ನೇಮಿಸಿಕೊಳ್ಳುವಾಗ ಅವರಿಗೆ ಕನ್ನಡದ ಜೊತೆಗೆ ಉರ್ದು ಭಾಷೆ ಗೊತ್ತಿರಬೇಕು. ಕ್ರೈಸ್ತ ಸಮುದಾಯದ ಜನರು ಹೆಚ್ಚಿರುವ ಪ್ರದೇಶಗಳ ಅಂಗನವಾಡಿಗೆ ನೇಮಿಸಿಕೊಳ್ಳುವುದಾದರೆ ಅವರಿಗೆ ಕ್ರೈಸ್ತರು ಮಾತನಾಡುವ ಕೊಂಕಣಿಯೋ ಇತರ ಯಾವುದೇ ಭಾಷೆ ತಿಳಿದಿರಬೇಕು.

ಇಲ್ಲಿ ಕನ್ನಡದ ಜೊತೆಗೆ ಉರ್ದು ಮಾತ್ರ ಗೊತ್ತಿರಬೇಕು ಎಂದು ಎಲ್ಲೂ ಕಡ್ಡಾಯ ಮಾಡಿಲ್ಲ. ಅಂಗನವಾಡಿ ಇರುವ ಪ್ರದೇಶದ ಜನ ಸಂಖ್ಯೆಯ ಶೇ.25ರಷ್ಟು ಅಲ್ಪ ಸಂಖ್ಯಾತರು ಮಾತನಾಡುವ ಭಾಷೆ ಗೊತ್ತಿರಬೇಕು ಎಂದು ಹೇಳಲಾಗಿದೆ. ಆ ಭಾಷೆ ಉರ್ದು, ಕೊಂಕಣಿ, ಪಂಜಾಬಿ ಇತರ ಯಾವುದೂ ಆಗಿರಬಹುದು. ಇಲ್ಲಿ ಗಮನಾರ್ಹ ಸಂಗತಿ ಏನೆಂದರೆ, ಎಲ್ಲಾ ಕಡೆಯೂ ಕನ್ನಡ ಗೊತ್ತಿರಬೇಕೆನ್ನುವುದು ಮೊದಲ ಆದ್ಯತೆಯಾಗಿದೆ. ನಂತರ ಇತರ ಭಾಷೆಗಳು ತಿಳಿದಿರಬೇಕು ಎಂದು ಹೇಳಲಾಗಿದೆ.

ತುಮಕೂರಿನಲ್ಲಿ ಕನ್ನಡ ಜೊತೆ ಉರ್ದು ಭಾಷೆಯನ್ನೇ ಯಾಕೆ ಕಡ್ಡಾಯ ಮಾಡಲಾಗಿದೆ?

ತುಮಕೂರು ನಗರ ವ್ಯಾಪ್ತಿಯ 11 ವಾರ್ಡ್‌ಗಳ ವಿವಿಧ ಪ್ರದೇಶಗಳ ಅಂಗನವಾಡಿಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಅರ್ಜಿ ಸಲ್ಲಿಸುವವರಿಗೆ ಕನ್ನಡದ ಜೊತೆ ಉರ್ದು ಭಾಷೆ ತಿಳಿದಿರಬೇಕು ಎಂದು ಹೇಳಲಾಗಿದೆ.

ಚಿದಾನಂದ ಅವರು ನೀಡಿದ ಮಾಹಿತಿ ಪ್ರಕಾರ, ಮೇಲೆ ಅರ್ಜಿ ಆಹ್ವಾನಿಸಿರುವ ತುಮಕೂರಿನ 11 ವಾರ್ಡ್‌ಗಳ ಎಲ್ಲಾ ಅಂಗನವಾಡಿಗಳು ಕೂಡ ಅಲ್ಪಸಂಖ್ಯಾತ ವರ್ಗದ ಮುಸ್ಲಿಂ ಸಮುದಾಯದ ಜನರು ಹೆಚ್ಚಾಗಿ ಇರುವ ಪ್ರದೇಶಗಳದ್ದಾಗಿವೆ. ಮುಸ್ಲಿಮರು ಉರ್ದು ಭಾಷೆ ಮಾತನಾಡುವ ಕಾರಣ, ಸರ್ಕಾರದ ನಿಯಮದಂತೆ ಕನ್ನಡದ ಜೊತೆ ಉರ್ದು ಭಾಷೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಪ್ರದೇಶದಲ್ಲಿ ಒಂದು ವೇಳೆ ಕೊಂಕಣಿ ಮಾತನಾಡುವವರು ಹೆಚ್ಚಿದ್ದರೆ, ಕನ್ನಡದ ಜೊತೆ ಅವರ ಭಾಷೆಯನ್ನು ಕಡ್ಡಾಯಗೊಳಿಸಲಾಗುತ್ತಿತ್ತು.

‘Accidental Bhakth’ಎಕ್ಸ್‌ ಖಾತೆಯ ಪೋಸ್ಟ್‌ಗೆ ಜನವರಿ 18ರಂದು ಪ್ರತಿಕ್ರಿಯೆ ನೀಡಿದ್ದ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ “ನಾಳೆ ಇದರ ಅಸಲಿ ಸತ್ಯ ಎಲ್ಲೆರೆದುರು ಗೊತ್ತು ಮಾಡುತ್ತೇವೆ. ಈ ವಿಷಯವಾಗಿ ನೂರಾರು ಜನ ನನ್ನನ್ನು ಟ್ಯಾಗ್ ಮಾಡಿ ಕನ್ನಡ ಹೋರಾಟಗಾರರ ಮೇಲೆ ಅಸಭ್ಯ ಪದಗಳನ್ನು ಬಳಸಿ ಪ್ರಶ್ನೆ ಮಾಡಿದ್ದೀರಿ. ಇರಲಿ ನಾವಂತೂ ಯಾವುದಕ್ಕೂ ಹಿಂದೆ ಬೀಳೊಲ್ಲ. ನಾಳೆ ಇದಕ್ಕೆ ಉತ್ತರ ಸಿಗಲಿದೆ. ಪೋಸ್ಟ್ ಡಿಲೀಟ್ ಮಾಡದೆ ನಮ್ಮ ಉತ್ತರವನ್ನು ಹೀಗೆ ತಮ್ಮ ವಾಲ್ ಮೇಲೆ ಹಾಕಬೇಕು” ಎಂದಿದ್ದರು.

ಜನವರಿ 19ರಂದು ಎಕ್ಸ್‌ನಲ್ಲಿ ಮತ್ತೊಂದು ಪೋಸ್ಟ್ ಹಾಕಿದ್ದ ಅವರು, “ಅಂಗನವಾಡಿ ಶಿಕ್ಷಕರ ನೇಮಕ ವಿಚಾರವಾಗಿ ಇಂದು ತುಮಕೂರಿನ ಮಹಿಳಾ ಮಕ್ಕಳ ಇಲಾಖೆಗೆ ಹೋಗಿ ವಿಚಾರಿಸಲಾಗಿದೆ. ಈ ಆದೇಶ ಕಳೆದ ಸರ್ಕಾರದ ಅವಧಿ ದಿನಾಂಕ 3-12-2022 ರಂದು ಆಗಿದ್ದು, ಅದನ್ನು ಈಗ ಜಾರಿ ಮಾಡಿರೋದಾಗಿ ಅಧಿಕಾರಿಗಳು ತಿಳಿಸಿದ್ದು, ಈ ಆದೇಶ ಪರಿಶೀಲಿಸಿ ಕನ್ನಡ ಕಡ್ಡಾಯ ಮಾಡಲು ಮುಖ್ಯ ಇಲಾಖೆಗೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ” ಎಂದು ತಿಳಿಸಿದ್ದರು.

ದಿನಾಂಕ 3 ಡಿಸೆಂಬರ್ 2022ರಂದು ಮಹಿಳಾ ಮತ್ತು ಮಕ್ಕಳ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರ ಇಲಾಖೆಯ ಅಂದಿನ ಸರ್ಕಾರದ ಅಧೀನ ಕಾರ್ಯದರ್ಶಿ ನಿರ್ಮಲಾ ಎಸ್‌ ಖಟಾವರ್‌ಕರ್‌ ಅವರ ಹೆಸರಿನಲ್ಲಿ ಹೊರಡಿಸಲಾಗಿದ್ದ ಸುತ್ತೋಲೆಯ ಪ್ರತಿಯನ್ನು ಹಂಚಿಕೊಂಡಿದ್ದರು.

ಖಚಿತ ಮೂಲಗಳಿಂದ ನಮಗೆ ದೊರೆತಿರುವ ಮಾಹಿತಿ ಪ್ರಕಾರ, ರಾಜ್ಯ ಸರ್ಕಾರದ ಆದೇಶದಂತೆ ತುಮಕೂರು ನಗರ ವ್ಯಾಪ್ತಿಯ 11 ವಾರ್ಡ್‌ ವ್ಯಾಪ್ತಿಯ ಅಂಗನವಾಡಿಗಳಿಗೆ ಕಾರ್ಯರ್ತೆಯರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಇದರಲ್ಲಿ ಮುಸ್ಲಿಂ ಜನ ಸಂಖ್ಯೆ ಹೆಚ್ಚಿರುವ ಪ್ರದೇಶವಾದ್ದರಿಂದ ಕನ್ನಡದ ಜೊತೆ ಉರ್ದು ಭಾಷೆ ಕಡ್ಡಾಯಗೊಳಿಸಲಾಗಿದೆ. ಇಲ್ಲಿ ಮುಸ್ಲಿಮರನ್ನು ಓಲೈಸಲು ಪ್ರಸ್ತುತ ಇರುವ ರಾಜ್ಯ ಕಾಂಗ್ರೆಸ್ ಸರ್ಕಾರ ಉರ್ದು ಭಾಷೆಯನ್ನು ಕಡ್ಡಾಯಗೊಳಿಸಿಲ್ಲ.

ಸಂವಾದ ಸೇರಿದಂತ ಬಲಪಂಥೀಯ ಮಾಧ್ಯಮಗಳಲ್ಲಿ ಉರ್ದು ಭಾಷೆಯನ್ನು ಮುಂದಿಟ್ಟುಕೊಂಡು ಮುಸ್ಲಿಂ ಸಮುದಾಯದ ವಿರುದ್ದ ದ್ವೇಷ ಕಾರಲಾಗಿದೆ. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮುಸ್ಲಿಮರನ್ನು ಓಲೈಸುತ್ತಿದೆ, ಹಿಂದೂ ವಿರೋಧಿ ಸರ್ಕಾರ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗಿದೆ.

ಇದನ್ನೂ ಓದಿ : Fact Check: ರಾಹುಲ್ ಗಾಂಧಿ ಬಿಜೆಪಿ ಚಿಹ್ನೆಯಿರುವ ಟಿ ಶರ್ಟ್‌ ಧರಿಸಿದ್ದು ನಿಜಾನಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...