ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ.
ವಿವಾದಿತ ಸ್ಥಳದಲ್ಲಿ ಪಾಟೀದಾರ್ ಸಮುದಾಯದ ಗುಂಪು ಕಳೆದ ಬುಧವಾರ ರಾತ್ರಿ ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ಸ್ಥಾಪಿಸಿತ್ತು. ಗುರುವಾರ ಬೆಳಗ್ಗೆ ಇದು ಗಮನಕ್ಕೆ ಬರುತ್ತಿದ್ದಂತೆಯೇ ಸ್ಥಳದಲ್ಲಿ ಜಮಾಯಿಸಿದ ದಲಿತ ಸಮುದಾಯದವರು, ಟ್ರ್ಯಾಕ್ಟರ್ ಬಳಸಿ ಪ್ರತಿಮೆ ಉರುಳಿಸಿದ್ದಾರೆ. ಅದೇ ಸ್ಥಳದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವಂತೆ ಪಟ್ಟು ಹಿಡಿದಿದ್ದಾರೆ.
ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಆಡಳಿತ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಪಾಟೀದಾರರು ಸರ್ದಾರ್ ಪಟೇಲ್ ಪ್ರತಿಮೆಯನ್ನು ನಿರ್ಮಿಸಲು ಬಯಸಿದ್ದರು. ದಲಿತ ಸಮುದಾಯದವರು ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವಂತೆ ಆಗ್ರಹಿಸಿದ್ದರು. ಈ ವಿವಾದದ ನಡುವೆಯೇ ಕೆಲವರು ರಾತ್ರೋರಾತ್ರಿ ಪಟೇಲ್ ಪ್ರತಿಮೆ ತಂದು ನಿಲ್ಲಿಸಿದ್ದಾರೆ. ಇದು ದಲಿತ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿದೆ.
ಉಜ್ಜಯಿನಿ ನಗರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಮಾಕ್ರೋನ್‌ನಲ್ಲಿ ಈ ಘಟನೆ ನಡೆದಿದೆ. ಮಾಕ್ರೋನ್ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ತವರು ಕ್ಷೇತ್ರ. ಮಾಕ್ರೋನ್ ಪಟ್ಟಣದ ಬಸ್ ನಿಲ್ದಾಣದ ಬಳಿಯ ಪ್ರಮುಖ ವೃತ್ತದಲ್ಲಿ ಪಾಟೀದಾರ್ ಸಮುದಾಯ ಸರ್ದಾರ್ ಪಟೇಲ್ ಪ್ರತಿಮೆ ಸ್ಥಾಪಿಸಲು ಬಯಸಿದೆ. ದಲಿತ ಸಮುದಾಯವರು ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವಂತೆ ಒತ್ತಾಯಿಸಿದ್ದಾರೆ. ಪ್ರಸ್ತುತ ಈ ವಿಚಾರ ಅಲ್ಲಿನ ಪಟ್ಟಣ ಪಂಚಾಯತ್‌ನಲ್ಲಿದೆ, ಇನ್ನೂ ಯಾರ ಪ್ರತಿಮೆ ಸ್ಥಾಪಿಸಬೇಕೆಂದು ತೀರ್ಮಾನ ಆಗಿಲ್ಲ.
ಸರ್ದಾರ್ ಪಟೇಲ್ ಪ್ರತಿಮೆ ಉರುಳಿಸಿದ ಹಿನ್ನೆಲೆ ಮಾಕ್ರೋನ್ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಘಟನೆಯಲ್ಲಿ ಕೆಲ ಅಂಗಡಿ ಮುಂಗಟ್ಟುಗಳು ಧ್ವಂಸಗೊಂಡಿವೆ. ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಇದನ್ನೂ ಓದಿ: ಟಿಎಂಸಿ ಜೊತೆಗಿನ ಸೀಟು ಹಂಚಿಕೆ ಬಿಕ್ಕಟ್ಟು ಪರಿಹರಿಸಲು ಮುಂದಾದ ಕಾಂಗ್ರೆಸ್



Sada
Hi
Hlo