ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಶಾಲಾ ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನ ಹಾಸ್ಟೆಲ್‌ವೊಂದರಲ್ಲಿ ನಡೆದಿದ್ದು, ಘಟನೆಯ ಬಗ್ಗೆ ಸಂಶಯ ವ್ಯಕ್ತಪಡಿಸಿ ಮೃತರ ಕುಟುಂಬಸ್ಥರು ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಮೃತ ವಿದ್ಯಾರ್ಥಿಗಳು, ಭೋಂಗಿರ್‌ನಲ್ಲಿರುವ ತಮ್ಮ ಹಾಸ್ಟೆಲ್ ಬಳಿಯ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದರು. ಅವರಿಬ್ಬರ ಕುಟುಂಬಗಳು ನಗರದಲ್ಲಿ ವಾಸವಾಗಿತ್ತು. ಆತ್ಮಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
ತೆಲಂಗಾಣ ಸರ್ಕಾರದ ಅಧೀನದ ಪರಿಶಿಷ್ಟ ಜಾತಿಗಳ(ಎಸ್‌ಸಿ) ಹಾಸ್ಟೆಲ್‌ನಲ್ಲಿ ಜೂನಿಯರ್ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಇಬ್ಬರು ವಿದ್ಯಾರ್ಥಿನಿಯರ ಮೇಲೆ ಶಿಕ್ಷಕರು ಕ್ರಮವನ್ನು ಕೈಗೊಂಡಿದ್ದರು ಎನ್ನಲಾಗಿದೆ. ಆದರೆ 10ನೇ ತರಗತಿಯಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ ಪತ್ರವನ್ನು ಬರದಿದ್ದು, ಶಿಕ್ಷಕರೊಬ್ಬರು ತಾವು ಭಾಗಿಯಾಗದ ಪ್ರಕರಣದಲ್ಲಿ ನಮ್ಮ ಮೇಲೆ ಸುಳ್ಳು ಆರೋಪ ಮಾಡಿ ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ನಮ್ಮನ್ನು ಯಾರೂ ನಂಬುವುದಿಲ್ಲ, ನಾವು ಮಾಡದ ಕೆಲಸಕ್ಕಾಗಿ ನಮ್ಮ ಮೇಲೆ ಆರೋಪಿಸಲಾಗಿದೆ. ಇದನ್ನು ಸಹಿಸಲು ಸಾಧ್ಯವಾಗದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಅಂತ್ಯಕ್ರಿಯೆಯನ್ನು ಒಟ್ಟಿಗೆ ಮಾಡಿ ಎಂದು ಆತ್ಮಹತ್ಯೆ ಪತ್ರದಲ್ಲಿ ಬರೆಯಲಾಗಿದೆ.
ಈ ಬಗ್ಗೆ ಶಿಕ್ಷಣಾಧಿಕಾರಿ ನಾರಾಯಣರೆಡ್ಡಿ ಮಾತನಾಡಿದ್ದು, ಇಬ್ಬರು ಬಾಲಕಿಯರ ವಿರುದ್ಧ ಕಿರಿಯ ತರಗತಿಗಳ ವಿದ್ಯಾರ್ಥಿಗಳು ದೂರು ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದರೂ ಅದು ಸಣ್ಣಪುಟ್ಟ ಸಮಸ್ಯೆಯಾಗಿತ್ತು. ಬಳಿಕ ಬಾಲಕಿಯರಿಗೆ ಬುದ್ದಿವಾದ ಹೇಳಲಾಗಿದೆ. ಆದರೆ ಈ ಘಟನೆಯಿಂದ ಬಾಲಕಿಯರು ತೀವ್ರವಾಗಿ ವಿಚಲಿತರಾಗಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಹಾಸ್ಟೆಲ್ ವಾರ್ಡನ್ ಶೈಲಜಾ ಅವರ ಹೆಸರನ್ನು ಆತ್ಮಹತ್ಯೆ ಪತ್ರದಲ್ಲಿ ಬಾಲಕಿಯರು ಉಲ್ಲೇಖಿಸಿದ್ದಾರೆ. ನಮ್ಮನ್ನು ಯಾರೂ ನಂಬಿರಲಿಲ್ಲ. ಶೈಲಜಾ ಮೇಡಮ್ (ಹಾಸ್ಟೆಲ್ ವಾರ್ಡನ್) ಮಾತ್ರ ನಮ್ಮನ್ನು ನಂಬಿದ್ದರು. ನಮ್ಮ ಮೇಲೆ ಆರೋಪ ಮಾತ್ರ ಮಾಡಲಾಗಿದೆ, ಆದರೆ ನಾವು ಆ ಕೃತ್ಯವನ್ನು ಮಾಡಿಲ್ಲ. ನಾವು ಮಾಡದ ಕೆಲಸಕ್ಕೆ ನಮ್ಮನ್ನು ಆರೋಪಿಸಿರುವುದರಿಂದ ಅವಮಾನವಾಗಿದೆ ಮತ್ತು ಮುಜುಗರವಾಗಿದೆ, ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ಈ ಬಗ್ಗೆ ವಾರ್ಡನ್ ಮತ್ತು ಜಿಲ್ಲಾ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಇಬ್ಬರು ಹೆಣ್ಣುಮಕ್ಕಳು ಈ ಪತ್ರವನ್ನು ಬರೆದಿರುವುದು ನಮಗೆ ನಂಬಲು ಸಾಧ್ಯವಾಗುತ್ತಿಲ್ಲ, ಬಾಲಕಿಯರ ವಿರುದ್ಧ ದೂರುಗಳು ಬಂದಾಗ ಶಿಕ್ಷಕರು ಮತ್ತು ವಾರ್ಡನ್ ಏಕೆ ನಮಗೆ ಕರೆ ಮಾಡಿ ಮಾಹಿತಿ ನೀಡಲಿಲ್ಲ ಎಂದು ನಮಗೆ ಅರ್ಥವಾಗುತ್ತಿಲ್ಲ, ಪೊಲೀಸರು ಈ ಬಗ್ಗೆ ತನಿಖೆ ಮಾಡಬೇಕು ಎಂದು ಮೃತ ಬಾಲಕಿಯರ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಇದನ್ನು ಓದಿ: ‘ಒಂದು ರಾಷ್ಟ್ರ, ಒಂದು ಚುನಾವಣೆ‘; ಕೋವಿಂದ್ ಸಮಿತಿಗೆ ನಿಲುವನ್ನು ತಿಳಿಸಿದ ಪ್ರತಿಪಕ್ಷಗಳು


