Homeಮುಖಪುಟಮ್ಯಾನುವಲ್ ಸ್ಕ್ಯಾವೆಂಜಿಂಗ್ ಪ್ರಕರಣದಲ್ಲಿ ಮೃತರ ಕುಟುಂಬಕ್ಕೆ 30 ಲಕ್ಷ ಪರಿಹಾರಕ್ಕೆ ಹೈಕೋರ್ಟ್‌ ಸೂಚನೆ

ಮ್ಯಾನುವಲ್ ಸ್ಕ್ಯಾವೆಂಜಿಂಗ್ ಪ್ರಕರಣದಲ್ಲಿ ಮೃತರ ಕುಟುಂಬಕ್ಕೆ 30 ಲಕ್ಷ ಪರಿಹಾರಕ್ಕೆ ಹೈಕೋರ್ಟ್‌ ಸೂಚನೆ

- Advertisement -
- Advertisement -

ಮ್ಯಾನುವಲ್ ಸ್ಕ್ಯಾವೆಂಜಿಂಗ್ ಪ್ರಕರಣದಲ್ಲಿ ಸಂತ್ರಸ್ತರ ಕುಟುಂಬಕ್ಕೆ ಸರಕಾರ 30 ಲಕ್ಷ ರೂ. ಪರಿಹಾರವನ್ನು ನೀಡಬೇಕು ಮತ್ತು ಸುಪ್ರೀಂಕೋರ್ಟ್‌ ಈ ಮೊದಲು ನೀಡಿದ್ದ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ದೆಹಲಿ ಹೈಕೋರ್ಟ್‌ ಸೂಚಿಸಿದೆ.

ಈ ವಿಚಾರದಲ್ಲಿ ಓರ್ವ ಸಂತ್ರಸ್ತ ನ್ಯಾಯಾಲಯವನ್ನು ಸಂಪರ್ಕಿಸಿ ಅವರ ಪರವಾಗಿ ಆದೇಶವನ್ನು ಸ್ವೀಕರಿಸಿದಾಗ, ಇಂತಹ ಎಲ್ಲಾ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಒಂದೇ ರೀತಿಯಾಗಿ ಪರಿಹಾರವನ್ನು ನೀಡಬೇಕು ಎಂದು ನಿರೀಕ್ಷಿಸಲಾಗಿದೆ ಎಂದು ಪೀಠವು ಹೇಳಿದೆ.

ಮ್ಯಾನುವಲ್ ಸ್ಕ್ಯಾವೆಂಜಿಂಗ್ ಪ್ರಕರಣದಲ್ಲಿ ಪ್ರಾಣ ಕಳೆದುಕೊಂಡ ವ್ಯಕ್ತಿಗಳ ಕುಟುಂಬದ ಸದಸ್ಯರು ರಿಟ್ ಅರ್ಜಿಗಳನ್ನು ಸಲ್ಲಿಸಿ ನ್ಯಾಯಾಲಯವನ್ನು ಸಂಪರ್ಕಿಸಲು ಒತ್ತಾಯಿಸುವ ಬದಲು ಇದೇ ರೀತಿಯ ಎಲ್ಲಾ ಪ್ರಕರಣದಲ್ಲಿ ಸಂತ್ರಸ್ತರಿಗೆ ಸರಿಯಾಗಿ ಪರಿಹಾರವನ್ನು ನೀಡಲು ರಾಜ್ಯವು ಬದ್ಧವಾಗಿದೆ ಎಂದು ನ್ಯಾಯಾಲಯವು ನಿರೀಕ್ಷಿಸುತ್ತದೆ ಎಂದು ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಹೇಳಿದ್ದಾರೆ.

ಮ್ಯಾನುವಲ್ ಸ್ಕ್ಯಾವೆಂಜಿಂಗ್ ಪ್ರಕರಣದಲ್ಲಿ ಪತಿಯನ್ನು ಕಳೆದುಕೊಂಡಿರುವ ವಿಧವೆ ಈ ಕುರಿತು ಕೋರ್ಟ್‌ ಮೊರೆ ಹೋಗಿದ್ದರು. ದೆಹಲಿ ಸರ್ಕಾರದಿಂದ ಇಲ್ಲಿಯವರೆಗೆ 10 ಲಕ್ಷ ರೂ. ಮಾತ್ರ ಪರಿಹಾರ ನೀಡಿದೆ. ಇಂತಹ ಪ್ರಕರಣದಲ್ಲಿ 30 ಲಕ್ಷ ರೂ. ಪರಿಹಾರ ನೀಡುವಂತೆ ಇತ್ತೀಚೆಗೆ ಸುಪ್ರೀಂಕೋರ್ಟ್‌ ಆದೇಶವನ್ನು ನೀಡಿತ್ತು ಎಂದು ಸಂತ್ರಸ್ತೆ ಹೈಕೋರ್ಟ್‌ ಗಮನಕ್ಕೆ ತಂದಿದ್ದರು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸುಪ್ರೀಂಕೋರ್ಟ್ ಮ್ಯಾನ್ಯುವಲ್‌ ಸ್ಕ್ಯಾವೇಜಿಂಗ್‌ ಪ್ರಕರಣದಲ್ಲಿ ಪರಿಹಾರದ ಮೊತ್ತವನ್ನು ಪ್ರತಿ ಸಂತ್ರಸ್ತರಿಗೆ 10 ಲಕ್ಷದಿಂದ 30 ಲಕ್ಷಕ್ಕೆ ಏರಿಸಿತ್ತು.  ಇದುವರೆಗೆ ಈ ಮೊತ್ತವನ್ನು ಮಂಜೂರು ಮಾಡದ ಸಂತ್ರಸ್ತರಿಗೆ ಅದನ್ನು ಮತ್ತೆ ಮಂಜೂರು ಮಾಡಬೇಕು ಎಂದು ನ್ಯಾಯಾಲಯ ಹೇಳಿತ್ತು.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಪ್ರಕಾರ, 2018 ಮತ್ತು 2023 ರ ನಡುವೆ ಭಾರತದಲ್ಲಿ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ 339 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಕಾನೂನು ಏನು ಹೇಳುತ್ತದೆ?

ಮ್ಯಾನುವಲ್ ಸ್ಕ್ಯಾವೆಂಜಿಂಗ್ ಅನ್ನು ಸರ್ಕಾರ ಕಾನೂನುಗಳ ಮೂಲಕ ನಿಷೇಧಿಸಿದೆ. ಏಕೆಂದರೆ ಈ ಕೆಲಸ ಮಾಡುವಾಗ ಉಸಿರುಗಟ್ಟಿ, ಆಮ್ಲಜನಕದ ಕೊರತೆಯಿಂದ ಸಾವಿರಾರು ಪೌರಕಾರ್ಮಿಕರು ಪ್ರಾಣ ತೆತ್ತಿದ್ದಾರೆ. ಅದನ್ನು ತಡೆಯುವುದಕ್ಕಾಗಿ ಯಾರೇ ಅಧಿಕಾರಗಳು, ಸೂಪರ್‌ವೈಸರ್‌ಗಳು, ಮೇಸ್ತ್ರಿಗಳು ಪೌರಕಾರ್ಮಿಕರಿಂದ ಈ ಕೆಲಸ ಮಾಡಿಸಬಾರದೆಂದು ಕಟ್ಟು ನಿಟ್ಟಿನ ನಿಯಮಗಳನ್ನು ಹೇರಲಾಗಿದೆ. ಹಾಗಿದ್ದರೂ ಬಡವರ ಜೀವವನ್ನು ಲೆಕ್ಕಿಸದೆ ದುಷ್ಟ ಅಧಿಕಾರಿಗಳು ಪೌರ ಕಾರ್ಮಿಕರಿಂದ ಮ್ಯಾನುವಲ್ ಸ್ಕ್ಯಾವೆಂಜಿಂಗ್ ಮಾಡಿಸಿತ್ತಿರುವುದು ಅಲ್ಲಲ್ಲಿ ವರದಿಯಾಗುತ್ತಲೇ ಇದೆ.

ಯಾವುದೇ ವ್ಯಕ್ತಿಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್‌ನ ಅಪಾಯಕಾರಿ ಶುಚಿಗೊಳಿಸುವಿಕೆಗಾಗಿ ಬಳಸಿಕೊಳ್ಳಬಾರದು ಎಂದು 2013ರ ಕಾನೂನು ಸ್ಪಷ್ಟಪಡಿಸಿದೆ. ಇದಕ್ಕಾಗಿ ಯಂತ್ರಗಳನ್ನು ಮಾತ್ರವೇ ಬಳಸಬೇಕೆಂದು ಸೂಚಿಸಿದೆ.

ಇದುವರೆಗೂ ಸಫಾಯಿ ಕರ್ಮಚಾರಿಗಳಾಗಿದ್ದವರಿಗೆ ಪರ್ಯಾಯ ಪುನರ್‌ವಸತಿ ಕಲ್ಪಿಸುವುದು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕರ್ತವ್ಯವಾಗಿರುತ್ತದೆ. 2013ರ ಕಾಯಿದೆ ಮತ್ತು 2013ರ ನಿಯಮಗಳ ಅಡಿಯಲ್ಲಿ ಒಳಗೊಂಡಿರುವ ಶಾಸನಬದ್ಧ ನಿಬಂಧನೆಗಳನ್ನು ಅನುಸರಣೆ ಮಾಡುವಂತೆ ಸ್ಥಳೀಯ ಸಂಸ್ಥೆಗಳ ಎಲ್ಲಾ ಅಧಿಕಾರಿಗಳಿಗೆ ಜಾಗೃತಿ ಮೂಡಿಸುವುದು ಜಿಲ್ಲಾಧಿಕಾರಿಗಳ ಕರ್ತವ್ಯವಾಗಿರುತ್ತದೆ.

ಕೊಳಚೆ ತೆಗೆಯುವ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿಯ ರಕ್ಷಣೆಗಾಗಿ ಕಡ್ಡಾಯವಾಗಿ 40ಕ್ಕೂ ಹೆಚ್ಚು ರಕ್ಷಣಾತ್ಮಕ ಕ್ರಮ ಹಾಗೂ ಸಲಕರಣೆಗಳನ್ನು ಒದಗಿಸಬೇಕೆಂದು 2013ರ ಕಾನೂನು ಹೇಳಿದೆ. ಈ ಕೆಲಸಕ್ಕಾಗಿ ಸ್ಥಳೀಯ ಸಂಸ್ಥೆಗಳಲ್ಲಿ 14 ಯಂತ್ರೋಪಕರಣಗಳಾದರೂ ಇರಬೇಕು ಎಂದು ಕಾನೂನು ಹೇಳುತ್ತದೆ.

ಇದನ್ನು ಓದಿ: ಸರಕಾರಿ ವಸತಿ ನಿಲಯದಲ್ಲಿ ಇಬ್ಬರು ದಲಿತ ಬಾಲಕಿಯರು ಆತ್ಮಹತ್ಯೆ: ತನಿಖೆಗೆ ಕುಟುಂಬಸ್ಥರ ಆಗ್ರಹ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read