‘ಗುಣಮಟ್ಟದ ಶಿಕ್ಷಣ ನೀಡುವುದು ತಮ್ಮ ಸರ್ಕಾರದ ಗುರಿಯಾಗಿದೆ. ತನಿಖಾ ಸಂಸ್ಥೆಗಳು ನನಗೆ ಕಳುಹಿಸಿರುವ ಸಮನ್ಸ್‌ಗಳ ಸಂಖ್ಯೆಯಷ್ಟು ಶಾಲೆಗಳನ್ನು ನಗರದಲ್ಲಿ ತೆರೆಯಲಾಗುವುದು’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.
ಮಯೂರ್ ವಿಹಾರ್ ಹಂತ 3ರಲ್ಲಿ ಸರ್ಕಾರಿ ಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿದ ನಂತರ ಮಾತನಾಡಿದ ಕೇಜ್ರಿವಾಲ್, ‘ದೇಶದ ದೊಡ್ಡ ಭಯೋತ್ಪಾದಕ ಎಂಬಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಎಲ್ಲ ತನಿಖಾ ಸಂಸ್ಥೆಗಳನ್ನು ನನ್ನ ವಿರುದ್ಧ ಛೂಬಿಟ್ಟಿದೆ’ ಎಂದು ಆರೋಪಿಸಿದರು.
ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕನ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 17 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ.
ಆಪಾದಿತ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ವಿಚಾರಣೆಗಾಗಿ ಕೇಂದ್ರ ಏಜೆನ್ಸಿಯು ತನ್ನ ವಿರುದ್ಧ ಹೊರಡಿಸಿದ ಐದು ಸಮನ್ಸ್‌ಗಳನ್ನು ಕೇಜ್ರಿವಾಲ್ ನಿರ್ಲಕ್ಷಿಸಿದ್ದಾರೆ. ‘ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರಿಂದ ಒಂದು ಪೀಳಿಗೆಯೊಳಗೆ ಬಡತನ ನಿರ್ಮೂಲನೆಯಾಗುತ್ತದೆ. ಆ ಗುರಿಯನ್ನು ಸಾಧಿಸಲು ದೆಹಲಿಯಲ್ಲಿ ಹೆಚ್ಚು ಶಾಲೆಗಳನ್ನು ತೆರೆಯುತ್ತಿದ್ದೇವೆ’ ಎಂದು ಹೇಳಿದರು.
‘ರಾಷ್ಟ್ರ ರಾಜಧಾನಿಯ ಸರ್ಕಾರಿ ಶಾಲೆಗಳ ಸ್ಥಿತಿ, ಶಿಕ್ಷಣವು ಮೊದಲು ಹತಾಶವಾಗಿತ್ತು ಮತ್ತು ಬಡ ಜನರ ಮಕ್ಕಳಿಗೆ ಭವಿಷ್ಯವಿರಲಿಲ್ಲ. ದೆಹಲಿಯಲ್ಲಿ ಎಎಪಿ ಸರ್ಕಾರ ರಚನೆಯಾದ ನಂತರ ನಾವು ಹಲವಾರು ಭವ್ಯವಾದ ಶಾಲೆಗಳನ್ನು ತೆರೆದಿದ್ದೇವೆ. ಬುರಾರಿ, ರೋಹಿಣಿ ಮತ್ತು ಪಾಲಂ ಸೇರಿದಂತೆ ಹಲವಾರು ಹೊಸ ಶಾಲೆಗಳನ್ನು ಇತ್ತೀಚೆಗೆ ಉದ್ಘಾಟಿಸಲಾಗಿದೆ, ಇದರಲ್ಲಿ 1.5 ಲಕ್ಷ ಮಕ್ಕಳು ಶಿಕ್ಷಣ ಪಡೆಯುತ್ತಾರೆ’ ಎಂದು ಅವರು ಹೇಳಿದರು.
‘ದೆಹಲಿಯ ಪ್ರತಿ ಮಗುವು ಉಚಿತ ಮತ್ತು ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಾರೆ, ಹಳೆಯ ಕಟ್ಟಡಗಳ ಬದಲಿಗೆ ಹೊಸ ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಹೊಸ ಪ್ರಯೋಗಾಲಯಗಳು, ಗ್ರಂಥಾಲಯಗಳು, ಎಲಿವೇಟರ್‌ಗಳು ಮತ್ತು ಚಟುವಟಿಕೆ ಕೊಠಡಿಗಳು ಸೇರಿದಂತೆ ಅತ್ಯುತ್ತಮ ಮೂಲಸೌಕರ್ಯಗಳನ್ನು ಹೊಂದಿರುತ್ತವೆ’ ಎಂದರು.
‘ಎಲ್ಲಾ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸನ್ನು ನಾವು ಈಡೇರಿಸುತ್ತಿದ್ದೇವೆ. ಎರಡು ವರ್ಷಗಳ ಹಿಂದೆ ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆಯನ್ನು ತಮ್ಮ ಸರ್ಕಾರ ಪ್ರಸ್ತಾಪಿಸಿದೆ. ಆದರೆ, ಕೇಂದ್ರವು ಅದಕ್ಕೆ ಅವಕಾಶ ನೀಡಲಿಲ್ಲ. ಅವರು ಲೆಫ್ಟಿನೆಂಟ್ ಜನರಲ್ ಮೂಲಕ ಅದನ್ನು ತಡೆದರು. ಆದರೆ ನಾವು ಶನಿವಾರದಿಂದ ಪಂಜಾಬ್‌ನಲ್ಲಿ ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸಲಿದ್ದೇವೆ’ ಎಂದು ಘೋಷಿಸಿದರು.
‘ಪಂಜಾಬ್‌ನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದ ನಂತರ, ಇದನ್ನು ದೆಹಲಿಯಲ್ಲೂ ಮಾಡಬಹುದು ಮತ್ತು ಅದನ್ನು ನಿಲ್ಲಿಸಲು ಕೇಂದ್ರಕ್ಕೆ ಸಾಧ್ಯವಾಗುವುದಿಲ್ಲ. ಎಎಪಿ ಸರ್ಕಾರದ ಕೆಲಸದಲ್ಲಿ ಕೇಂದ್ರವು ಹಲವು ಅಡೆತಡೆಗಳನ್ನು ಸೃಷ್ಟಿಸಿದೆ, ದೆಹಲಿ ಅರ್ಧ ಮಾತ್ರ ರಾಜ್ಯವಾಗಿದೆ’ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
‘ಅದು ಪೂರ್ಣ ರಾಜ್ಯವಾಗಲಿ ಎಂದು ನಾನು ಹೇಳಿದೆ. ಆದರೆ, ಅವರು ಏನನ್ನೂ ಮಾಡುವುದಿಲ್ಲ ಅಥವಾ ನನಗೆ ಮಾಡಲು ಬಿಡುವುದಿಲ್ಲ. ಕೇಸರಿ ಆಡಳಿತವಿರುವ ರಾಜ್ಯಗಳಲ್ಲಿ ಈ ಸೌಲಭ್ಯಗಳು ದುಬಾರಿ ಮತ್ತು ಕಳಪೆ ಗುಣಮಟ್ಟದ್ದಾಗಿರುವಾಗ ದೆಹಲಿಯಲ್ಲಿ ಜನರಿಗೆ ಉಚಿತ ವಿದ್ಯುತ್, ಆರೋಗ್ಯ ಮತ್ತು ಶಿಕ್ಷಣವನ್ನು ಒದಗಿಸಿದ್ದರೂ ಭಾರತೀಯ ಜನತಾ ಪಕ್ಷ (ಬಿಜೆಪಿ) ನಮ್ಮನ್ನು “ಕಳ್ಳ” ಎಂದು ಲೇಬಲ್ ಮಾಡಿದೆ’ ಎಂದು ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ; ಚರಣ್ ಸಿಂಗ್, ಪಿವಿ ನರಸಿಂಹರಾವ್, ಎಂ.ಎಸ್.ಸ್ವಾಮಿನಾಥನ್ ಅವರಿಗೆ ಭಾರತ ರತ್ನ


