ದ್ವೇಷ, ಹಗೆತನ ಮತ್ತು ಹಿಂಸಾಚಾರ ಯಾವುದೇ ಧಾರ್ಮಿಕ ಬೋಧನೆಗಳ ಭಾಗವಲ್ಲ ಮತ್ತು ಅದನ್ನು ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡುವವರು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ ಮತ್ತು ಅವರನ್ನು ದೂರವಿಡಬೇಕು, ದ್ವೇಷ ಬಿತ್ತುವ, ವಿಭಜನೀಯ ಶಕ್ತಿಗಳನ್ನು ವಿರೋಧಿಸಬೇಕು ಎಂದು ದಕ್ಷಿಣ ಆಫ್ರಿಕಾದ ಶಾಂತಿ ಹೋರಾಟಗಾರ್ತಿ ಮತ್ತು ಮಹಾತ್ಮ ಗಾಂಧಿ ಅವರ ಮೊಮ್ಮಗಳು ಎಲಾ ಗಾಂಧಿ ಹೇಳಿದ್ದಾರೆ.
‘ಗಾಂಧಿ ಡೆವಲಪ್‌ಮೆಂಟ್ ಮತ್ತು ಫೀನಿಕ್ಸ್ ಸೆಟ್ಲ್‌ಮೆಂಟ್ ಟ್ರಸ್ಟ್’ ಉದ್ದೇಶಪೂರ್ವಕವಾಗಿ ಹಿಂದೂ ಪ್ರಾರ್ಥನೆಗಳನ್ನು ಕಡೆಗಣಿಸಿದೆ ಎಂದು ಹೇಳುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸುವಾಗ ಅವರು ಈ ಹೇಳಿಕೆ ನೀಡಿದ್ದಾರೆ.
ನಮ್ಮ ಎಲ್ಲಾ ನಂಬಿಕೆಗಳು ಮತ್ತು ನಮ್ಮ ಧರ್ಮಗ್ರಂಥಗಳು ನಮಗೆ ಒಳ್ಳೆಯ, ಸಹಾನುಭೂತಿ ಮತ್ತು ಪ್ರೀತಿಯ ಜನರಾಗಲು ಮಾರ್ಗದರ್ಶನ ನೀಡುತ್ತವೆ. ದ್ವೇಷ, ಹಗೆತನ ಮತ್ತು ಹಿಂಸೆ ನಮ್ಮ ಅಗತ್ಯ ಧಾರ್ಮಿಕ ಬೋಧನೆಗಳ ಭಾಗವಲ್ಲ. ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡುವವರು ತಮ್ಮ ನಂಬಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ ಮತ್ತು ಅವರನ್ನು ದೂರವಿಡಬೇಕು ಎಂದು ಎಲಾ ಹೇಳಿದರು.
ಗಾಂಧಿ ಡೆವಲಪ್‌ಮೆಂಟ್ ಮತ್ತು ಫೀನಿಕ್ಸ್ ಸೆಟ್ಲ್‌ಮೆಂಟ್ ಟ್ರಸ್ಟ್‌ನ ಅಧ್ಯಕ್ಷರಾದ ಎಲಾ, ಇಂತಹ ನಡೆಗಳು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಒಡಕು ಮೂಡಿಸಲು ಮತ್ತು ಗಾಂಧೀಜಿ ಮತ್ತು ನನ್ನನ್ನು ಹಿಂದೂ ಸಮುದಾಯದಿಂದ ದೂರವಿಡುವ ಪ್ರಯತ್ನವಾಗಿದೆ ಎಂದು ಹೇಳಿದರು.
ಸತ್ಯಗಳನ್ನು ಸಾರ್ವಜನಿಕವಾಗಿ ಹೇಳುವುದು ಮುಖ್ಯ, ಇದರಿಂದ ಹಾದಿ ತಪ್ಪಿಸುವುದನ್ನು ಇದೀಗ ತಡೆಯಬಹುದು ಎಂದು ಎಲಾ ಸಾಪ್ತಾಹಿಕ ಪೋಸ್ಟ್‌ನಲ್ಲಿ ತೆರೆದ ಪತ್ರದಲ್ಲಿ ತಿಳಿಸಿದ್ದಾರೆ. ನಾನು ವೈಯಕ್ತಿಕವಾಗಿ ಅನೇಕ ಹಿಂದೂಗಳನ್ನು ಈ ಸಮಾರಂಭದಲ್ಲಿ ಹಿಂದೂ ಪ್ರಾರ್ಥನೆಯನ್ನು ಪಠಿಸಲು ಆಹ್ವಾನಿಸಿದ್ದೇನೆ ಎಂದ ಎಲಾ ಗಾಂಧಿ, ನಾಲ್ಕು ಹಿಂದೂ ಸಂಘಟನೆಗಳಿಗೆ ನೀಡಿರುವ ಆಹ್ವಾನವನ್ನು ಉಲ್ಲೇಖಿಸಿದ್ದಾರೆ.
ಇದನ್ನು ಓದಿ: ಚುನಾವಣಾ ಬಾಂಡ್ ಹಗರಣದ ಕುರಿತು ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಗೆ ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹ


