Homeಕರ್ನಾಟಕಮತದಾನದ ವಿವರ ತಡವಾಗಿ ಪ್ರಕಟ, ನೋಂದಾಯಿತ ಮತದಾರರ ಮಾಹಿತಿ ಮಾಯ: ಚು. ಆಯೋಗಕ್ಕೆ ಗಂಭೀರ ಪ್ರಶ್ನೆ...

ಮತದಾನದ ವಿವರ ತಡವಾಗಿ ಪ್ರಕಟ, ನೋಂದಾಯಿತ ಮತದಾರರ ಮಾಹಿತಿ ಮಾಯ: ಚು. ಆಯೋಗಕ್ಕೆ ಗಂಭೀರ ಪ್ರಶ್ನೆ ಎತ್ತಿದ ಖರ್ಗೆ

- Advertisement -
- Advertisement -

ಲೋಕಸಭೆ ಚುನಾವಣೆಯ ಮೊದಲ ಮತ್ತು ಎರಡನೇ ಹಂತದ ಮತದಾನದ ಅಂತಿಮ ಅಂಕಿ ಅಂಶಗಳನ್ನು ಬಹಳ ತಡವಾಗಿ ಬಿಡುಗಡೆಗೊಳಿಸಿರುವುದು ಮತ್ತು ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ ನೋಂದಾಯಿತ ಮತದಾರರ ಮಾಹಿತಿ ಕಾಣೆಯಾಗಿರುವುದು ಅನುಮಾನಗಳನ್ನು ಹುಟ್ಟು ಹಾಕಿದೆ.

ಇದು ಉದ್ದೇಶಪೂರ್ವಕವಾಗಿ ಮಾಡಿರುವ ಕೃತ್ಯ. ಮತದಾನದ ಫಲಿತಾಂಶ ಬದಲಿಸುವ ಹುನ್ನಾರ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಇಂಡಿಯಾ ಮೈತ್ರಿಕೂಟದ ಪಕ್ಷಗಳ ನಾಯಕರಿಗೆ ಈ ಕುರಿತು ವಿವರವಾದ ಪತ್ರವೊಂದನ್ನು ಬರೆದಿದ್ದಾರೆ.

ಪತ್ರದಲ್ಲಿ, “ಈ ಬಾರಿಯ ಲೋಕಸಭೆ ಚುನಾವಣೆ ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಹೋರಾಟವಾಗಿದೆ. ಇತ್ತೀಚಿನ ಬೆಳವಣಿಗೆಗಳಿಂದ ಭಾರತೀಯ ಚುನಾವಣಾ ಆಯೋಗದ ಮೇಲಿನ ವಿಶ್ವಾಸಾರ್ಹತೆ ಕಡಿಮೆಯಾಗಿದೆ. ಮೊದಲ ಮತ್ತು ಎರಡನೇ ಹಂತದ ಮತದಾನದ ಅಂಕಿ ಅಂಶಗಳನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ತಡವಾಗಿ ಬಹಿರಂಗಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.

ಮೂರನೇ ಹಂತದ ಮತದಾನಕ್ಕೆ ನೋಂದಾಯಿತ ಮತದಾರರ ಅಂತಿಮ ಪಟ್ಟಿಯನ್ನೂ ಬಿಡುಗಡೆ ಮಾಡಿಲ್ಲಎಂದು ವಿವಿಧ ಮಾಧ್ಯಮಗಳ ವರದಿಗಳ ಮೂಲಕ ತಿಳಿದು ಬಂದಿದೆ. ಇದು ಅತ್ಯಂತ ದಿಗ್ಭ್ರಮೆಗೊಳಿಸುವ ಸಂಗತಿಯಾಗಿದೆ. ಈ ಎಲ್ಲಾ ಬೆಳವಣಿಗೆಗಳು ಭಾರತದ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯ ಮೇಲೆ ಕರಾಳ ಛಾಯೆ ಮೂಡಿಸಿದೆ. ಚುನಾವಣಾ ಆಯೋಗ ಭಾರತದ ರಾಜ್ಯಗಳು ಮತ್ತು ಅದರ ಜನರ ಸಾಮೂಹಿಕ ಪ್ರಯತ್ನದಿಂದ ಸ್ಥಾಪಿಸಲಾದ ಸಂಸ್ಥೆಯಾಗಿದೆ ಎಂದು ಖರ್ಗೆ ಹೇಳಿದ್ದಾರೆ.

ಮೊದಲ ಮತ್ತು ಎರಡನೇ ಹಂತದ ಅಂತಿಮ ಮತದಾನದ ಶೇಕಡಾವಾರು ಅಂಕಿ ಅಂಶಗಳ ಬಿಡುಗಡೆಯಲ್ಲಿನ ಅತಿಯಾದ ವಿಳಂಬ ಅಂಕಿ ಅಂಶಗಳ ಗುಣಮಟ್ಟದ ಮೇಲೆ ಗಂಭೀರ ಅನುಮಾನಗಳನ್ನು ಹುಟ್ಟು ಹಾಕಿದೆ. ನನ್ನ 52 ವರ್ಷಗಳ ರಾಜಕೀಯ ಜೀವನದಲ್ಲಿ ಇಷ್ಟೊಂದು ವಿಳಂಬವಾಗಿ ಮತದಾನದ ಅಂಕಿ ಅಂಶ ಬಿಡುಗಡೆ ಮಾಡಿರುವುದನ್ನು ಎಂದಿಗೂ ನೋಡಿಲ್ಲ. ಮತದಾನ ನಡೆದ ಗಂಟೆಗಳ ಒಳಗೆ ಅಂಕಿ ಅಂಶ ಬಿಡುಗಡೆಯಾಗುತ್ತಿತ್ತು. ಹಾಗಾಗಿ, ಈ ಕೆಳಗಿನ ಪ್ರಶ್ನೆಗಳನ್ನು ನಾವು ಕೇಳಬೇಕಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಪತ್ರದಲ್ಲಿ ಹೇಳಿದ್ದಾರೆ.

ಖರ್ಗೆ ಪ್ರಸ್ತಾಪಿಸಿದ ಪ್ರಶ್ನೆಗಳು ಹೀಗಿವೆ..

1. ಏಪ್ರಿಲ್ 30, 2024 ರಂದು ಚುನಾವಣಾ ಆಯೋಗ 2024ರ ಲೋಕಸಭೆಯ ಚುನಾವಣೆಯ ಮೊದಲ ಮತ್ತು ಎರಡನೇ ಹಂತದ ಮತದಾನದ ಅಂತಿಮ ಶೇಕಡವಾರು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಮೊದಲ ಹಂತದ ಮತದಾನದ 11 ದಿನಗಳ ನಂತರ (19 ಏಪ್ರಿಲ್ 2024) ಮತ್ತು ಎರಡನೇ ಹಂತದ ಮತದಾನದ 4 ದಿನಗಳ ನಂತರ (26 ಏಪ್ರಿಲ್ 2024) ಡೇಟಾ ಬಿಡುಗಡೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗಕ್ಕೆ ನಮ್ಮ ಮೊದಲ ಪ್ರಶ್ನೆ ಏನೆಂದರೆ.. ಆಯೋಗವು ಮತದಾನದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲು ಇಷ್ಟೊಂದು ವಿಳಂಬ ಮಾಡಿದ್ದು ಏಕೆ?

2. ಈ ಹಿಂದೆಯೆಲ್ಲ ಆಯೋಗವು ಮತದಾನದ ನಡೆದ 24 ಗಂಟೆಗಳ ಒಳಗೆ ಅಂತಿಮ ಅಂಕಿ ಅಂಶಗಳನ್ನು ಪ್ರಕಟಿಸುತ್ತಿತ್ತು. ಈ ಬಾರಿ ಏನು ಬದಲಾಗಿದೆ? ರಾಜಕೀಯ ಪಕ್ಷಗಳು ಮತ್ತು ರಾಜಕೀಯ ಕಾರ್ಯಕರ್ತರು ಪದೇ ಪದೇ ಪ್ರಶ್ನಿಸುತ್ತಿದ್ದರೂ, ವಿಳಂಬವನ್ನು ಸಮರ್ಥಿಸಲು ಆಯೋಗ ಯಾವುದೇ ಸ್ಪಷ್ಟೀಕರಣವನ್ನು ನೀಡಲು ವಿಫಲವಾಗಿದ್ದು ಏಕೆ? ಇವಿಎಂಗಳಲ್ಲಿ ಸಮಸ್ಯೆ ಇದೆಯೇ?

3. ಮೊದಲ ಹಂತದಲ್ಲಿ 102 ಸ್ಥಾನಗಳಿಗೆ ನಡೆದ ಮತದಾನದ ಅಂಕಿ ಅಂಶಗಳನ್ನು19 ಏಪ್ರಿಲ್ 2024 ರಂದು ಸಂಜೆ 7 ಗಂಟೆಗೆ ಬಿಡುಗಡೆ ಮಾಡಿದ್ದ ಚುನಾವಣಾ ಆಯೋಗ, ಅಂದಾಜು 60% ಮತದಾನವಾಗಿದೆ ಎಂದಿತ್ತು. ಎರಡನೇ ಹಂತದಲ್ಲಿ 88 ಸ್ಥಾನಗಳಿಗೆ ನಡೆದ ಅಂದಾಜು ಮತದಾನದ ಪ್ರಮಾಣ 60.96 % ಎಂದಿತ್ತು.
ಈ ಎಲ್ಲಾ ಅಂಕಿ ಅಂಶಗಳು ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದೆ.

ಆದರೆ, ಏಪ್ರಿಲ್ 20 ರಂದು, ಆಯೋಗವು ಮೊದಲ ಹಂತದ ಮತದಾನದ ಪ್ರಮಾಣವನ್ನು 65.5% ಕ್ಕೆ ಮತ್ತು 27ರಂದು ಎರಡನೇ ಹಂತದ ಮತದಾನದ ಪ್ರಮಾಣವನ್ನು 66.7% ಕ್ಕೆ ಹೆಚ್ಚಿಸಿದೆ. ಅಂತಿಮವಾಗಿ ಏಪ್ರಿಲ್ 30 ರಂದು ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ಮೊದಲ ಹಂತದಲ್ಲಿ 66.14% ಮತ್ತು ಎರಡನೇ ಹಂತದಲ್ಲಿ 66.71% ಮತದಾನವಾಗಿದೆ ಎಂದು ದೃಢೀಕರಿಸಿದೆ. ಈ ರೀತಿ ಬದಲಾವಣೆಯಾಗಿದ್ದು ಏಕೆ?

4. ಏಪ್ರಿಲ್ 19ರಂದು ಮೊದಲ ಹಂತದ ಮತದಾನದ ದಿನ ಸಂಜೆ 7 ಗಂಟೆಯ ಹೊತ್ತಿಗೆ ಬಿಡುಗಡೆ ಮಾಡಲಾದ ಅಂದಾಜು ಅಂಕಿ ಅಂಶಕ್ಕಿಂತ, ಏಪ್ರಿಲ್ 30ರಂದು ಬಿಡುಗಡೆ ಮಾಡಲಾದ ಅಂತಿಮ ಅಂಕಿ ಅಂಶದಲ್ಲಿ ಮತದಾನದ ಪ್ರಮಾಣ ಶೇ. 5.5ರಷ್ಟು ಹೆಚ್ಚಳವಾಗಿದ್ದು ಏಕೆ?

ಏಪ್ರಿಲ್ 26ರಂದು ಎರಡನೇ ಹಂತದ ಮತದಾನದ ದಿನ ಸಂಜೆ 7 ಗಂಟೆಯ ಹೊತ್ತಿಗೆ ಬಿಡುಗಡೆ ಮಾಡಲಾದ ಅಂದಾಜು ಅಂಕಿ ಅಂಶಕ್ಕಿಂತ, ಏಪ್ರಿಲ್ 30ರಂದು ಬಿಡುಗಡೆ ಮಾಡಲಾದ ಅಂತಿಮ ಅಂಕಿ ಅಂಶದಲ್ಲಿ ಮತದಾನ ಪ್ರಮಾಣ 5.74ರಷ್ಟು ಹೆಚ್ಚಳವಾಗಿದ್ದು ಹೇಗೆ?

5.ಪ್ರತೀ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳಲ್ಲಿ ನೋಂದಾಯಿತ ಮತದಾರರು ಮತ್ತು ಹಕ್ಕು ಚಲಾಯಿಸಿದ ಮತದಾರರ ಅಂಕಿ ಅಂಶಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ ಏಕೆ? ಆ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದರೆ ಶೇ.5ರಷ್ಟು ಮತದಾನ ಹೇಗೆ ಹೆಚ್ಚಾಯಿತು ಎಂದು ನಮಗೆ ತಿಳಿದುಕೊಳ್ಳಬಹುದು.

ಸಾರ್ವಜನಿಕ ವಲಯದಲ್ಲಿ ಎದ್ದಿರುವ ಈ ಪ್ರಶ್ನೆಗಳನ್ನು ನಿವಾರಿಸಲು ಚುನಾವಣಾ ಆಯೋಗ ಪ್ರತಿ ಲೋಕಸಭೆ ಕ್ಷೇತ್ರದ ಮತದಾರರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದರೆ ಸಾಲದು. ಪ್ರತಿ ಮತಗಟ್ಟೆಯಲ್ಲಿನ ಮತದಾನದ ದತ್ತಾಂಶವನ್ನೂ ಬಿಡುಗಡೆ ಮಾಡಬೇಕು. ಇದರ ಜೊತೆಗೆ ಪ್ರತಿ ಮತಗಟ್ಟೆ, ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳು ಸಲ್ಲಿಸಿರುವ ದೂರುಗಳನ್ನು ತಿಳಿಸಬೇಕು ಎಂದು ಖರ್ಗೆ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಮೇಲೆ ಉಲ್ಲೇಖಿಸಿದ ಎಲ್ಲಾ ಪ್ರಶ್ನೆಗಳನ್ನು ಇಂಡಿಯಾ ಮೈತ್ರಿಕೂಟದ ನಾಯಕರು ಎತ್ತಬೇಕು. ಈ ಮೂಲಕ ನಮ್ಮ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ಒಗ್ಗಟ್ಟಿನ ಪ್ರಯತ್ನ ಮಾಡಬೇಕು ಎಂದು ಖರ್ಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಲೋಕಸಭೆ ಚುನಾವಣೆ : ಕರ್ನಾಟಕದ 14 ಸೇರಿ ದೇಶದ 93 ಕ್ಷೇತ್ರಗಳಲ್ಲಿ ಇಂದು ಮತದಾನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತ ಭೂದಾಳಿ ನಡೆಸಲು ಸಿದ್ಧವಾಗಿತ್ತು: ಆಪರೇಷನ್ ಸಿಂಧೂರ್ ಮುಂದುವರೆದಿದೆ ಎಂದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ 

ಮಂಗಳವಾರ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಆಪರೇಷನ್ ಸಿಂಧೂರ್ ಮುಂದುವರೆದಿದೆ ಎಂದು ಹೇಳಿದ್ದು, ಯಾವುದೇ ದುಸ್ಸಾಹಸವನ್ನು ಪರಿಣಾಮಕಾರಿಯಾಗಿ ನಿಭಾಯಿಸಲಾಗುವುದು ಎಂದು ಹೇಳಿದ್ದಾರೆ.  ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು...

ಕೊಪ್ಪಳ | ಸಂಪೂರ್ಣ ಮದ್ಯ ನಿಷೇಧಿಸಿ ತೀರ್ಮಾನ ತೆಗೆದುಕೊಂಡ ಗ್ರಾಮಸ್ಥರು : ಮದ್ಯದಂಗಡಿಗಳಿಗೆ ಶನಿವಾರದವರೆಗೆ ಗಡುವು

ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಈಳಿಗನೂರು ಗ್ರಾಮದಲ್ಲಿ ಸಂಪೂರ್ಣ ಮದ್ಯ ನಿಷೇಧಿಸಿ ಜನರು ಸರ್ವಾನುಮತದ ತೀರ್ಮಾನ ತೆಗೆದುಕೊಂಡಿದ್ದು, ಮದ್ಯದ ಅಂಗಡಿಗಳಿಗೆ ಮಾರಾಟ ಸ್ಥಗಿತಗೊಳಿಸಲು ಶನಿವಾರದವರೆಗೆ ಗಡುವು ವಿಧಿಸಿದ್ದಾರೆ. ಗ್ರಾಮದಲ್ಲಿ ಶಾಂತಿ, ನೆಮ್ಮದಿ, ಸಾಮಾಜಿಕ...

ವಿಬಿ-ಜಿ ರಾಮ್ ಜಿ ಕಾಯ್ದೆ ರದ್ದಾಗುವವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ

ನರೇಗಾ ಕಾಯ್ದೆ ಪುನ:ಸ್ಥಾಪನೆ ಆಗಿ ವಿಬಿ-ಜಿ ರಾಮ್ ಜಿ ಕಾಯ್ದೆ ರದ್ದಾಗುವವರೆಗೆ ನಮ್ಮ ಹೋರಾಟವನ್ನು ಮುಂದುವರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಕೆಪಿಸಿಸಿ ವತಿಯಿಂದ ಮಂಗಳವಾರ (ಜ.13) ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ...

ಪಶ್ಚಿಮ ಬಂಗಾಳ: ಸೋಮವಾರ ಪ್ರತ್ಯೇಕ ಸ್ಥಳಗಳಲ್ಲಿ ಎರಡು ಸಾವು: ಎಸ್‌ಐಆರ್ ಆತಂಕವೇ ಸಾವಿಗೆ ಕಾರಣ ಎಂದ ಕುಟುಂಬಗಳು 

ಪಶ್ಚಿಮ ಬಂಗಾಳದಲ್ಲಿ ಸೋಮವಾರ ಇಬ್ಬರು ಸಾವನ್ನಪ್ಪಿದ್ದು, ಉತ್ತರ ದಿನಾಜ್‌ಪುರದಲ್ಲಿ ಒಬ್ಬರು ಮತ್ತು ಉತ್ತರ 24 ಪರಗಣದಲ್ಲಿ ಮತ್ತೊಬ್ಬರು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಗೆ ಸಂಬಂಧಿಸಿದ ಆತಂಕವೇ ಅವರ ಸಾವಿಗೆ...

ಮರ್ಯಾದೆಗೇಡು ಹತ್ಯೆ : ಪ್ರೀತಿಸಿದ ಯುವಕನೊಂದಿಗೆ ತೆರಳಿದ್ದ ಬಾಲಕಿಯನ್ನು ಕೊಂದು ಮೃತದೇಹ ಸುಟ್ಟು ಹಾಕಿದ ಕುಟುಂಬಸ್ಥರು

ಪ್ರೀತಿಸಿದ ಯುವಕನೊಂದಿಗೆ ತೆರಳಿದ 16 ವರ್ಷದ ಬಾಲಕಿಯನ್ನು ಆಕೆಯ ಮನೆಯವರೇ ಕೊಂದು, ಮೃತದೇಹವನ್ನು ಸುಟ್ಟು ಹಾಕಿದ ಭೀಕರ ಘಟನೆ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿಯ ಕುಟುಂಬಸ್ಥರು ಪ್ರಸ್ತುತ ಪರಾರಿಯಾಗಿದ್ದಾರೆ. ಅವರ ಮನೆಗೆ...

ಚುನಾವಣಾ ಪ್ರಚಾರದ ವೇಳೆ ಬ್ಯಾಗ್ ಮೇಲೆ ಪ್ಯಾಲೆಸ್ಟೀನಿಯನ್ ಧ್ವಜ: ಆರ್‌ಡಬ್ಲ್ಯೂಪಿಐ ಅಭ್ಯರ್ಥಿಗೆ ನೋಟಿಸ್ ಜಾರಿ ಮಾಡಿದ ಮುಂಬೈ ಪೊಲೀಸರು

ಮುಂಬೈ: ಮುನ್ಸಿಪಲ್ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ್ದ ರೆವಲ್ಯೂಷನರಿ ವರ್ಕರ್ಸ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿಯೊಬ್ಬರು ತಮ್ಮ ಪ್ರಚಾರ ಕಾರ್ಯಕರ್ತರ ಬಳಿ ಹೊತ್ತೊಯ್ದಿದ್ದ ಬ್ಯಾಗ್ ಮೇಲೆ ಪ್ಯಾಲೆಸ್ಟೀನಿಯನ್ ಧ್ವಜ ಕಾಣಿಸಿಕೊಂಡಿದ್ದು, ಇದು ಮಾನವ ಹಕ್ಕುಗಳ...

ಇರಾನ್‌ನೊಂದಿಗೆ ವ್ಯವಹಾರ ನಡೆಸುವ ರಾಷ್ಟ್ರಗಳ ಮೇಲೆ ಶೇ. 25 ಸುಂಕ ವಿಧಿಸಿದ ಟ್ರಂಪ್

ಇರಾನ್ ಜೊತೆ ವ್ಯಾಪಾರ ನಡೆಸುವ ಯಾವುದೇ ದೇಶದ ಮೇಲೆ ಶೇಕಡ 25ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ (ಜ.12) ಘೋಷಿಸಿದ್ದಾರೆ. "ತಕ್ಷಣದಿಂದಲೇ ಜಾರಿಗೆ ಬರುವಂತೆ, ಇರಾನ್ ಇಸ್ಲಾಮಿಕ್ ಗಣರಾಜ್ಯದೊಂದಿಗೆ ವ್ಯವಹಾರ...

ಮಂಗಳೂರು | ಬಾಂಗ್ಲಾದೇಶಿಯೆಂದು ಆರೋಪಿಸಿ ವಲಸೆ ಕಾರ್ಮಿಕನ ಮೇಲೆ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಬಾಂಗ್ಲಾದೇಶಿ ಎಂದು ಆರೋಪಿಸಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಕೊಲೆ ಯತ್ನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಂಗಳೂರಿನ ಕಾವೂರು ಪೊಲೀಸರು ಸೋಮವಾರ (ಜ.12)...

ಬಿಜೆಪಿ ನಿಯೋಗದಿಂದ ಕರ್ನಾಟಕ ರಾಜ್ಯಪಾಲರ ಭೇಟಿ: ‘ದ್ವೇಷ ಭಾಷಣ ತಡೆ’ ಮಸೂದೆಗೆ ಒಪ್ಪಿಗೆ ನೀಡದಂತೆ ಮನವಿ

ಬೆಂಗಳೂರು: ದ್ವೇಷ ಭಾಷಣ ಮಸೂದೆಯನ್ನು"ವಾಕ್ ಸ್ವಾತಂತ್ರ್ಯದ ಮೇಲಿನ ನೇರ ದಾಳಿ" ಮತ್ತು "ರಾಜಕೀಯ ಸೇಡಿನ ಸಾಧನ" ಎಂದು ಕರೆದಿರುವ ಬಿಜೆಪಿ ನಾಯಕರ ನಿಯೋಗವು ಸೋಮವಾರ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ...

ಟೆಕ್ಕಿ ಶರ್ಮಿಳಾ ಕೊಲೆ ಪ್ರಕರಣ : ಪಿಯು ವಿದ್ಯಾರ್ಥಿಯನ್ನು ಬಂಧಿಸಿದ ಪೊಲೀಸರು

ಬೆಂಗಳೂರಿನ ರಾಮಮೂರ್ತಿ ನಗರದ ಸುಬ್ರಹ್ಮಣ್ಯ ಬಡಾವಣೆಯಲ್ಲಿ 2026ರ ಜನವರಿ 3ರಂದು ರಾತ್ರಿ ನಡೆದ ಮಂಗಳೂರು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಶರ್ಮಿಳಾ ಕುಶಾಲಪ್ಪ (34) ಅವರ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಆರಂಭದಲ್ಲಿ, ಫ್ಲ್ಯಾಟ್‌ಗೆ ಬೆಂಕಿ...