ಪ್ರಧಾನಿ ನರೇಂದ್ರ ಮೋದಿಯವರು ಕಳೆದ 10 ವರ್ಷಗಳಲ್ಲಿ 22 ಜನರ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದಾರೆ. ಆದರೆ, ಕಳೆದ ವರ್ಷ ಹಿಮಾಚಲ ಪ್ರದೇಶದಲ್ಲಿ ಮುಂಗಾರು ಮಳೆಯಿಂದ ಉಂಟಾದ ಹಾನಿಗೆ ಪರಿಹಾರವಾಗಿ 9 ಸಾವಿರ ಕೋಟಿ ರೂ. ನೀಡಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಹಿಮಾಚಲದ ಪ್ರದೇಶಕ್ಕೆ ಸಹಾಯ ಮಾಡುವ ಬದಲು, ಅಲ್ಲಿನ ಚುನಾಯಿತ ಸರ್ಕಾರವನ್ನು ಬೀಳಿಸುವ ಪ್ರಯತ್ನವನ್ನು ಮೋದಿ ಮಾಡಿದರು ಎಂದಿದ್ದಾರೆ.
ಕೇಂದ್ರ ಸರ್ಕಾರ ಹಿಮಾಚಲ ಪ್ರದೇಶಕ್ಕೆ ಬಿಡುಗಡೆ ಮಾಡಿರುವ ಮಳೆಹಾನಿ ಪರಿಹಾರವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ತಪ್ಪಾಗಿ ವಿತರಿಸಿದೆ ಎಂದು ಆರೋಪಿಸಿದ್ದ ಪ್ರಧಾನಿ ಮೋದಿ, ಸೂಕ್ತ ಕ್ರಮದ ಭರವಸೆ ನೀಡಿದ್ದು, ಈ ಬೆನ್ನಲ್ಲೇ ರಾಹುಲ್ ಗಾಂಧಿಯ ಹೇಳಿಕೆ ಬಂದಿದೆ.
ಹಿಮಾಚಲ ಪ್ರದೇಶದ ಶಿಮ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಸುಲ್ತಾನ್‌ಪುರಿ ಅವರ ಪರ ಸಿರ್ಮೌರ್ ಜಿಲ್ಲೆಯ ನಹಾನ್‌ನಲ್ಲಿ ಆಯೋಜಿಸಿದ್ದ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಸೇಬಿನ ಬೆಲೆ ನಿಯಂತ್ರಿಸಲು ಮೋದಿಯವರು ಒಬ್ಬ ವ್ಯಕ್ತಿಗೆ ಎಲ್ಲಾ ಶೇಖರಣಾ ಸೌಲಭ್ಯಗಳನ್ನು ಹಸ್ತಾಂತರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದಾಗಲೆಲ್ಲಾ ಅದಾನಿ ಒಡೆತನದ ಕಂಪನಿಗಳ ಷೇರುಗಳ ಬೆಲೆಗಳು ಏರುತ್ತವೆ ಎಂದ ರಾಹುಲ್ ಗಾಂಧಿ, ನಮ್ಮ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಲಾಗುವುದು ಮತ್ತು ಕೃಷಿ ಸಾಲ ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಬಡ ಕುಟುಂಬಗಳು ಬಡತನ ರೇಖೆಗಿಂತ ಮೇಲಕ್ಕೆ ಬರುವವರೆಗೆ ಪ್ರತಿ ವರ್ಷ 1 ಲಕ್ಷ ರೂ. ನೀಡಲಾಗುವುದು. ದೇಶದ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಲು ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ರಾಹುಲ್ ಗಾಂಧಿ ಭರವಸೆ ಕೊಟ್ಟಿದ್ದಾರೆ.
ಬಿಜೆಪಿ ನಾಯಕರು ಸಂವಿಧಾನವನ್ನು ರದ್ದುಪಡಿಸುವುದಾಗಿ ಹೇಳುತ್ತಿದ್ದಾರೆ. ಭಾರತದ ಸಂವಿಧಾನದ ಮೇಲೆ ದಾಳಿ ನಡೆಸುವ ಬಿಜೆಪಿ ನಾಯಕರ ಪ್ರಯತ್ನವನ್ನು ವಿಫಲಗೊಳಿಸಲು ಹಿಮಾಚಲದ ನಾಲ್ಕೂ ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಧ್ರುವ್ ಏಕಪಕ್ಷೀಯ ವೀಡಿಯೊ ಪೋಸ್ಟ್ ಮಾಡಿದ್ದಾರೆ, ನನಗೆ ಕೊಲೆ ಬೆದರಿಕೆಗಳು ಬರುತ್ತಿವೆ: ಸ್ವಾತಿ ಮಲಿವಾಲ್


