Homeಕರ್ನಾಟಕಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ: 'ಜನಪರ ಚಳವಳಿಗಳ ಒಕ್ಕೂಟ'ದಿಂದ ಮೇ.30ರಂದು 'ಹಾಸನ ಚಲೋ'

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ: ‘ಜನಪರ ಚಳವಳಿಗಳ ಒಕ್ಕೂಟ’ದಿಂದ ಮೇ.30ರಂದು ‘ಹಾಸನ ಚಲೋ’

- Advertisement -
- Advertisement -

ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಬೃಹತ್ ಲೈಂಗಿಕ ಹಗರಣದ ಪ್ರಮುಖ ಆರೋಪಿ, ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಶೀಘ್ರ ಬಂಧನಕ್ಕೆ ಆಗ್ರಹಿಸಿ ಮತ್ತು ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ‘ಕರ್ನಾಟಕ ರಾಜ್ಯ ಜನಪರ ಚಳವಳಿಗಳ ಒಕ್ಕೂಟ’ದಿಂದ ಮೇ 30ರಂದು ಹಾಸನ ಚಲೋ ಬೃಹತ್ ಹೋರಾಟವನ್ನು ಹಮ್ಮಿಕೊಂಡಿವೆ. ಬಹುತೇಕ ಮಹಿಳಾ ಸಂಘಟನೆಗಳೆ ಮುನ್ನಡೆಸುತ್ತಿರುವ ಈ ಹೋರಾಟದಲ್ಲಿ 40ಕ್ಕೂ ಅಧಿಕ ಸಂಘಟನೆಗಳು ಭಾಗಿಯಾಗಲಿದ್ದು, 10 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

‘ಹೋರಾಟದ ನಡಿಗೆ ಹಾಸನದ ಕಡೆಗೆ’:

ಈ ಕುರಿತು ಸಂಘಟನೆ ಈಗಾಗಲೇ ಕರಪತ್ರ ಹೊರಡಿಸಿದ್ದು, ‘ನಮ್ಮೆಲ್ಲರ ಹೋರಾಟದ ನಡಿಗೆ ಹಾಸನದ ಕಡೆಗೆ’ ಎಂಬ ಘೋಷ ವಾಖ್ಯದೊಂದಿಗೆ ರ್ಯಾಲಿ ನಡೆಸಲು ಮುಂದಾಗಿದ್ದಾರೆ. “ಹಾಸನದ ಸಂಸತ್‌ ಸದಸ್ಯ ಪ್ರಜ್ವಲ್‌ ರೇವಣ್ಣನಿಂದ ನಡೆದಿರುವ ವಿಕೃತ ಲೈಂಗಿಕ ಹಗರಣವನ್ನು ತೀವ್ರವಾಗಿ ವಿರೋಧಿಸಿ, ಹೋರಾಟದ ನಡಿಗೆ ಹಾಸನದ ಕಡೆಗೆ’ ಬೃಹತ್‌ ಪ್ರತಿಭಟನೆ ಹಾಗೂ ಬಹಿರ೦ಗ ಸಭೆ ಇದೇ 2024ರ ಮೇ 30ರ ಗುರುವಾರದಂದು ಹಾಸನದಲ್ಲಿ ನಡೆಯಲಿದ್ದು, ರಾಜ್ಯದ ಎಲ್ಲ ಮೂಲೆಗಳಿಂದಲೂ ಕರ್ನಾಟಕ ರಾಜ್ಯ ಜನಪರ ಚಳವಳಿಗಳ ಹಾಗೂ ಮಹಿಳಾ ಸಂಘಟನೆಗಳ ಮುಖಂಡರು, ಸದಸ್ಯರು, ಚಿಂತಕರು, ಸಾಹಿತಿಗಳು, ಕಲಾವಿದರು ಹಾಗೂ ಪ್ರಜ್ಞಾವಂತ ನಾಗರಿಕರು ಇದರಲ್ಲಿ ಮನಃಪೂರ್ವಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇವೆ” ಎಂದು ಸಂಘಟನೆ ಮನವಿ ಮಾಡಿದೆ.

ಈ ಕುರಿತು 18 ಮೇ 2024ರಂದು ಹಾಸನದಲ್ಲಿ ನಡೆದ ಕರ್ನಾಟಕ ರಾಜ್ಯದ ಮತ್ತು ಹಾಸನ ಜಿಲ್ಲೆಯ ಎಲ್ಲಾ ಮಹಿಳಾ, ದಲಿತ, ರೈತ, ಕಾರ್ಮಿಕ, ಅಲ್ಪಸಂಖ್ಯಾತ, ಹಿಂದುಳಿದ, ಲೈಂಗಿಕ ಅಲ್ಪಸಂಖ್ಯಾತ, ವಿಜ್ಞಾನ ಚಳವಳಿ, ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳ ಪ್ರಮುಖರ ಹಾಗೂ ಸಮಾನಮನಸ್ಮರ ರಾಜ್ಯ ಮಟ್ಟದ ಸಮಾಲೋಚನಾ ಸಭೆಯಲ್ಲಿ ನಿರ್ಧಾರಿಸಲಾಯಿತು.

“ಹಾಸನದ ಜೆಡಿಎಸ್‌ ಸ೦ಸದ ಪ್ರಜ್ವಲ್‌ ರೇವಣ್ಣ ತನ್ನ ರಾಜಕೀಯ ಅಧಿಕಾರ, ಕುಟುಂಬದ ಹಿನ್ನೆಲೆ ಮತ್ತು ಪ್ರಬಲ ಜಾತಿಯ ಅಹಮಿಕೆಯನ್ನು ಬಳಸಿಕೊ೦ಡು ನೂರಾರು ಮಹಿಳೆಯರ ಮೇಲೆ ಪ್ರಭಾವ ಬೀರಿ, ಒತ್ತಡ ಹಾಕಿ ಅವರನ್ನು ತನ್ನ ವಿಕೃತ ಲೈಂಗಿಕ ದಾಹಕ್ಕೆ ಬಳಸಿಕೊಂಡಿದ್ದಾರೆ. ಜೊತೆಗೆ ಅವರ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆಯ ಮತ್ತು ಅವರ ನಗ್ನ ವಿಡಿಯೋಗಳನ್ನು, ಫೋಟೋಗಳನ್ನು, ವಿಡಿಯೋ ಕಾಲ್‌ ಸ್ಕೀನ್‌ಶಾಟ್‌ಗಳನ್ನು ಸಾವಿರಾರು ಸಂಖ್ಯೆಯಲ್ಲಿ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊ೦ಡಿರುವುದು ಹಾಗೂ ಶೇಖರಿಸಿಟ್ಟುಕೊ೦ಡಿರುವ ಪ್ರಕರಣವು ಈ ಹಿಂದೆ ಯಾರೂ ಎಲ್ಲಿಯೂ ಕಂಡುಕೇಳರಿಯದ ಅತ್ಯ೦ತ ಹೀನ ಮತ್ತು ನೀಚ ಕೃತ್ಯವಾಗಿದೆ” ಎಂದು ಒಕ್ಕೂಟ ಆಕ್ರೋಶ ಹೊರಹಾಕಿದೆ.

“ಜನಪ್ರತಿನಿಧಿಯಾದ ಪ್ರಜ್ವಲ್‌ ರೇವಣ್ಣ ತನ್ನ ಬಳಿ ಸಹಾಯ ಕೇಳಿಬಂದ ವಿವಿಧ ಹಿನ್ನೆಲೆಯ ಮಹಿಳೆಯರನ್ನು, ತಮ್ಮ ಕುಟುಂಬಕ್ಕಾಗಿ ಕೆಲಸ ಮಾಡುತ್ತಿದ್ದ ಮಹಿಳೆಯರನ್ನು, ತನ್ನದೇ ಪಕ್ಷದ ಸಂಘಟನೆಗಾಗಿ ಮತ್ತು ಚುನಾವಣೆಯ ಗೆಲುವಿಗಾಗಿ ದುಡಿಯುತ್ತಿದ್ದ ಕೆಲ ಮಹಿಳಾ ನಾಯಕರು ಮತ್ತು ಕಾರ್ಯಕರ್ತೆಯರನ್ನು, ಸರ್ಕಾರವು ಮಾಜಿ ಪ್ರಧಾನಿ ಮತ್ತು ಲೋಕಸಭಾ ಸದಸ್ಯರಿಗೆ ಒದಗಿಸಿರುವ ವಸತಿ ಗೃಹಗಳಲ್ಲಿ ತನ್ನ ವಿಕೃತ ಮತ್ತು ವಿಕ್ಷಿಪ್ತ ಲೈಂಗಿಕತೆಗಾಗಿ ದುರ್ಬಳಕೆ ಮಾಡಿಕೊಂಡಿರುವುದು ಗಂಭೀರ ಪ್ರಕರಣವಾಗಿದೆ. ಸಂಸದ ಪ್ರಜ್ವಲ್‌ ರೇವಣ್ಣ ಇಂತಹ ನೀಚ ಕೃತ್ಯದಲ್ಲಿ ಭಾಗಿಯಾಗಿರುವ ಕುರಿತು ಅರಿವಿದ್ದರೂ 2024ರ 18ನೇ ಲೋಕಸಭಾ ಚುನಾವಣೆಯಲ್ಲಿ ಆತನನ್ನೇ ಮತ್ತೆ ಹಾಸನ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಿದ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ನಡೆ ತೀವ್ರ ಖಂಡನೀಯವಾದದ್ದು” ಎಂದು ಒಕ್ಕೂಟ ಹೇಳಿದೆ.

“ಜೊತೆಗೆ, ಚುನಾವಣೆಗೆ ಕೆಲವೇ ದಿನಗಳಿರುವಾಗ, ಮತದಾರರ ಮೇಲೆ ಪ್ರಭಾವ ಬೀರುವ ದುರುದ್ದೇಶದಿಂದ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣನ ಲೈಂಗಿಕ ದೌರ್ಜನ್ಯದ ವಿಡಿಯೋಗಳು, ಚಿತ್ರಗಳನ್ನು ಪೆನ್‌ಡ್ರೈವ್‌ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ದುರುಳರು ಸಾರ್ವಜನಿಕರಿಗೆ ಹಂಚಿರುವುದು, ದೌರ್ಜನ್ಯಕ್ಕೊಳಗಾದ ಮಹಿಳೆಯರ ಗೌಪ್ಯತೆ ಮತ್ತು ಘನತೆಯನ್ನು ಸಾರ್ವಜನಿಕವಾಗಿ ಹಾಳುಮಾಡಿರುವುದು ಅತ್ಯಂತ ಖಂಡನೀಯವಾದುದು. ಈ ಲೈಂಗಿಕ ದೌರ್ಜನ್ಯದ ಸಾವಿರಾರು ವಿಡಿಯೋಗಳು ಮತ್ತು ಚಿತ್ರಗಳು ತನ್ನ ಬಳಿ ಇರುವುದನ್ನು ಹಾಸನದ ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಮಾಧ್ಯಮಗಳ ಮುಖಾಂತರ ಹಲವು ತಿ೦ಗಳ ಹಿಂದೆಯೇ ಪ್ರಸ್ತಾಪ ಮಾಡಿದ್ದರೂ, ಆ ತಕ್ಷಣವೇ ಅವರನ್ನು ಮತ್ತು ಪ್ರಜ್ವಲ್‌ ರೇವಣ್ಣ ಕಾರಿನ ಮಾಜಿ ಚಾಲಕ ಕಾರ್ತಿಕ್‌ ಇಬ್ಬರನ್ನು ಬಂಧಿಸಿ ಹೆಚ್ಚಿನ ವಿಡಿಯೋಗಳು ಹಂಚಿಕೆಯಾಗದಂತೆ ತಡೆಯುವುದರಲ್ಲಿ ಚುನಾವಣಾ ಆಯೋಗ ಮತ್ತು ಪೂಲೀಸ್‌ ಇಲಾಖೆಯು ಸಂಪೂರ್ಣ ವಿಫಲವಾಗಿರುವುದೂ ಈ ಸಾಮಾಜಿಕ ತಲ್ಲಣಕ್ಕೆ ಕಾರಣವಾಗಿದೆ” ಎಂದು ಒಕ್ಕೂಟ ತನ್ನ ಹೇಳಿಕೆಯಲ್ಲಿ ಅಸಮಾಧಾನ ಹೊರಹಾಕಿದೆ.

ಹೋರಾಟದ ಪ್ರಮುಖ ಆಗ್ರಹಗಳು:

1. ಈಗಾಗಲೇ ವಿಳಂಬವಾಗಿರುವ ವಿಕೃತ ಲೈಂಗಿಕ ಅತ್ಯಾಚಾರ ಆರೋಪಿ ಸಂಸದ ಪ್ರಜ್ವಲ್‌ ರೇವಣ್ಣನನ್ನು ಕೂಡಲೇ ಬಂಧಿಸಬೇಕು ಮತ್ತು ಕಾನೂನಾತ್ಮಕ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಈ ಸಂಬಂಧ ರೆಡ್‌ ಕಾರ್ನರ್‌ ನೋಟೀಸ್ ಹೊರಡಿಸಬೇಕು. ಅವನ ಬ್ಯಾಂಕ್‌ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಕೇಂದ್ರ ಸರ್ಕಾರವು ಪ್ರಜ್ವಲ್‌ ರೇವಣ್ಣನ ರಾಜತಾಂತ್ರಿಕ ಪಾಸ್‌ಪೋರ್ಟ್‌ ಮತ್ತು ವೀಸಾವನ್ನು ಕೂಡಲೇ ರದ್ದುಪಡಿಸಿ, ಇಂಟರ್‌ಪೋಲ್‌ ಸಹಾಯ ಪಡೆದು, ಜಗತ್ತಿನ ಯಾವುದೇ ದೇಶದಲ್ಲಿದ್ದರೂ ಅಲ್ಲಿ ಬಂಧಿಸಲು ರಾಜ್ಯ ಸರ್ಕಾರಕ್ಕೆ ಹಾಗೂ ಎಸ್‌ಐಟಿಗೆ ಅಗತ್ಯ ನೆರವು ನೀಡಬೇಕು.

2. ವಿಕೃತ ಲೈಂಗಿಕ ಹಗರಣದ ವಿಡಿಯೋಗಳು ಮತ್ತು ಚಿತ್ರಗಳನ್ನು ಸಾರ್ವಜನಿಕರಿಗೆ ಪೆನ್‌ಡ್ರೈವ್‌, ಸಾಮಾಜಿಕ ಮಾಧ್ಯಮ ಮತ್ತಿತರೆ ಸಾಧನಗಳ ಮುಖಾಂತರ ಸಾರ್ವಜನಿಕವಾಗಿ ಹಂಚಲು ಸಂಚು ನಡೆಸಿದ, ವ್ಯಾಪಕವಾಗಿ ಹಂಚಿದ ಮತ್ತು ಸಂಗ್ರಹಿಸಿಟ್ಟುಕೊಳ್ಳುವ ಮೂಲಕ ಮಹಿಳೆಯರ ಖಾಸಗಿತನ, ಕುಟು೦ಬ, ಬದುಕಿನ ಮೇಲೆ ದಾಳಿ ಮಾಡಿದ ಪ್ರತಿಯೊಬ್ಬ ಅಪರಾಧಿಯನ್ನು ಕೂಡಲೇ ಬಂಧಿಸಬೇಕು ಹಾಗೂ ಅವರ ಮೇಲೆ ಕಠಿಣ ಕಾನೂನು ಪ್ರಕರಣ ದಾಖಲಿಸಬೇಕು.

3. ಈ ವಿಕೃತ ಲೈಂಗಿಕ ಹಗರಣದ ಆರೋಪಿಯಾದ ತಮ್ಮ ಮೊಮ್ಮಗ, ಪ್ರಜ್ವಲ್‌ ರೇವಣ್ಣನನ್ನು ಯಾವುದೇ ದೇಶದಲ್ಲಿದ್ದರೂ ಶತಾಯಗತಾಯ ಹಿಡಿದು ತರುವಂತೆ ಮಾಜಿ ಪ್ರಧಾನಿ ದೇವೇಗೌಡರು ಈ ಕೂಡಲೇ ಪ್ರಧಾನಮಂತ್ರಿಗಳಿಗೆ ಪತ್ರವನ್ನು ಬರೆದು ಒತ್ತಡ ಹಾಕಬೇಕು.

4. ಈ ಲೈಂಗಿಕ ಹಗರಣದಲ್ಲಿ ವಿವಿಧ ಬಗೆಯ ಲೈಂಗಿಕ ದುರ್ಬಳಕೆಗೆ ಒಳಗಾಗಿರುವ ಹಾಗೂ ಪ್ರಕರಣ ದಾಖಲಿಸಲು ಮುಂದಾಗುವ ಮಹಿಳೆಯರ ಗೌಪ್ಶತೆ ಕಾಪಾಡಲು, ಅವರಿಗೆ ಬೇಕಾದ ಮನೋವೈದ್ಯಕೀಯ ಆಪ್ತ ಸಮಾಲೋಚನೆ, ಕಾನೂನು ಸಲಹೆ, ಸೂಕ್ತ ರಕ್ಷಣೆ, ಪುನರ್ವಸತಿ ಮತ್ತು ಪರಿಹಾರವನ್ನು ತುರ್ತಾಗಿ ನೀಡಬೇಕು.

5. ವಿಶೇಷ ತನಿಖಾ ತಂಡವು ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಪಕ್ಷಗಳ ಪ್ರಭಾವಕ್ಕೆ ಒಳಗಾಗದೇ, ನಿಷ್ಪಕ್ಷಪಾತವಾಗಿ ತನಿಖೆ ನಡೆಸುವುದನ್ನು ಖಾತ್ರಿ ಪಡಿಸುವ ಗುರುತರ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಹೀಗಾಗಿ, ಆಮೂಲಾಗ್ರವಾಗಿ, ನಿರ್ಭೀತಿಯಿಂದ ತನಿಖೆ ನಡೆಸಲು ಬೇಕಾದ ಅಧಿಕಾರವನ್ನು ಮತ್ತು ಅನುಕೂಲಗಳನ್ನು ಎಸ್‌ಐಟಿ ಮುಖ್ಯಸ್ಥರಿಗೆ ಸರ್ಕಾರವು ನೀಡಬೇಕು.

6. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫೊರೆನ್ಸಿಕ್‌ ಸೈನ್ಸ್‌ ಲ್ಯಾಬೊರೆಟರಿ (ಎಫ್‌ಎಸ್‌ಎಲ್‌) ವರದಿಯನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು.

7. ಮಾಜಿ ಪ್ರಧಾನಿ ದೇವೇಗೌಡರಿಗಾಗಿ ವಿಶೇಷವಾಗಿ ನಿರ್ಮಿಸಿದ್ದ ವಸತಿಗೃಹ ದುರುಪಯೋಗ ಮಾಡಿಕೊಂಡು ಸಂಸದ ಪ್ರಜ್ವಲ್‌ ರೇವಣ್ಣ ಕಾನೂನುಬಾಹಿರ ಚಟುವಟಿಕೆ ನಡೆಸಿರುವುದಕ್ಕೆ ಪ್ರತ್ಯೇಕ ಮೊಕದ್ದಮೆ ಹೂಡಬೇಕು. ಹಾಗೂ ಕೆಲಸದ ಸ್ಥಳದಲ್ಲಿ ಲೈಂಗಿಕ ತಡೆ ಕಾಯ್ದೆಯನ್ವಯ ಪ್ರತ್ಯೇಕ ಕಲಂಗಳನ್ನು, ಸಾಧ್ಯವಿರುವ ಪ್ರಕರಣಗಳಲ್ಲಿ ಸೇರ್ಪಡೆಗೊಳಿಸಬೇಕು.

8. ಶಾಸಕ ರೇವಣ್ಣ ಅವರ ಮೇಲೆ ಕೂಡ ಲೈಂಗಿಕ ಕಿರುಕುಳ ಹಾಗೂ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಾಗಿದೆ. ಜೊತೆಗೆ, ಪ್ರಜ್ವಲ್‌ ರೇವಣ್ಣನಿಂದ ಅತ್ಯಾಚಾರಕ್ಕೊಳಗಾಗಿರುವ ಸಂತೃಸ್ತ ಮಹಿಳೆಯ ಅಪಹರಣದ ಪ್ರಮುಖ ಆರೋಪಿಯೆಂದು ಕೂಡ ಅವರ ಮೇಲೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಇರುವ ಎಲ್ಲ ಆರೋಪಿಗಳ ಶೀಘ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆದು ಅಪರಾಧಿಗಳನ್ನು ತಕ್ಷಣವೇ ಬಂಧನಕ್ಕೊಳಪಡಿಸಬೇಕು.

9. ಈ ಸೂಕ್ಷ್ಮ ಮತ್ತು ಸಂಕೀರ್ಣ ಪ್ರಕರಣವನ್ನು ಮಹಿಳೆಯರ ಫನತೆಗೆ ಧಕ್ಕೆ ಬಾರದಂತೆ ಸಮರ್ಪಕವಾಗಿ ಇತ್ಯರ್ಥಪಡಿಸಲು ತ್ವರಿತ ‘ಎಶೇಷ ನ್ಯಾಯಾಲಯ’ ಸ್ಥಾಪಿಸಬೇಕು. ಹಾಗೂ ಕಾನೂನಿನ ಪ್ರಕಾರ ನಿಗದಿತ ಕಾಲಾವಧಿಯಲ್ಲಿ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ಖಾತ್ರಿಪಡಿಸಬೇಕು.

10. ಎಸ್‌ಐಟಿ ತನಿಖೆಯ ಅಂತಿಮ ವರದಿಯನ್ನು ಹೈಕೋರ್ಟ್‌ ನ್ಯಾಯಾಧೀಶರೊಬ್ಬರ ಉಸ್ತುವಾರಿ ಮತ್ತು ಪರಿಶೀಲನೆಯಲ್ಲಿ ಅಂತಿಮಗೊಳಿಸಿದ ನಂತರ ವರದಿಯನ್ನು ಸರ್ಕಾರಕ್ಕೆ ನೀಡಬೇಕು. ಈ ಕುರಿತು ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು.

11. ಯಾವುದೇ ಸಂತ್ರಸ್ತರ ಘನತೆಗೆ ಧಕ್ಕೆ ಉಂಟುಮಾಡುವ, ಆತ್ಮವಿಶ್ವಾಸ ಕುಗ್ಗಿಸುವ, ದೂರು ದಾಖಲಿಸಲು
ಅಡ್ಡಿಪಡಿಸುವಂತಹ ಮಾತುಗಳನ್ನು ಯಾರೇ ಆಡಿದರೂ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಸಂತ್ರಸ್ತರ ಪ್ರಾಣ ಮತ್ತು ಆಸ್ತಿಪಾಸ್ತಿಗೆ ಆರೋಪಿಗಳ ಕಡೆಯವರಿಂದ ಯಾವುದೇ ಧಕ್ಕೆಯಾಗದಂತೆ ಬಿಗಿಭದ್ರತೆ ಹಾಗೂ ರಕ್ಷಣೆ ಒದಗಿಸಬೇಕು.

12. ಹಾಸನದ ಈ ವಿಕೃತ ಲೈಂಗಿಕ ಪ್ರಕರಣದ ವಿಡಿಯೋ, ಫೋಟೋಗಳು ಇನ್ನು ಮುಂದೆ ಯಾವುದೂ ಬಿಡುಗಡೆಗೊಳ್ಳದಂತೆ, ಅವುಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುವ ಎಲ್ಲರಿಂದಲೂ ಅವನ್ನು ಪಡೆದು ನಾಶಗೊಳಿಸಬೇಕು ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಇದಕ್ಕಾಗಿಯೇ ಸೈಬರ್‌ ಪೊಲೀಸ್‌ ಇಲಾಖೆಯಲ್ಲಿ ವಿಶೇಷ ತಾಂತ್ರಿಕ ಅಧಿಕಾರಿಗಳನ್ನು ನೇಮಕ ಮಾಡಿ, ಅಂತರ್ಜಾಲದಲ್ಲಿ ಇರುವ ಈ ಸಂಬಂಧಿತ ಎಲ್ಲ ಫೋಟೋ, ಎಡಿಯೋಗಳನ್ನು ತೆಗೆದುಹಾಕುವಂತೆ ಕ್ರಮವಹಿಸಬೇಕು.

13. ಸಂತ್ರಸ್ತರ ಹಿತದೃಷ್ಟಿಯಿಂದ ನಿಷ್ಪಕ್ಷಪಾತ ತನಿಖೆ ಮತ್ತು ವಿಚಾರಣೆ ನಡೆಸಲು ಅಗತ್ಯವಾದ ಎಲ್ಲ ಸೌಕರ್ಯಗಳನ್ನು ಹಾಗೂ ವಾತಾವರಣವನ್ನು ಕಲ್ಪಿಸಲು ಎಲ್ಲ ಪಕ್ಷಗಳ ನಾಯಕರೂ ಅನುವು ಮಾಡಿಕೊಡಬೇಕು. ಇದಕ್ಕೆ ಅಡ್ಡಿಪಡಿಸುವವರ ವಿರುದ್ಧವಾಗಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಹಾಗೂ ಸಂತ್ರಸ್ತರ ಮೇಲೆ ಆರೋಪಿಗಳ ಕಡೆಯವರಿಂದ ಯಾವುದೇ ಆಮಿಷ ಹಾಗೂ ಪ್ರಭಾವಗಳು ಬೀರದಂತೆ ಸರ್ಕಾರವು ಎಲ್ಲ ರೀತಿಯ ಎಚ್ಚರಿಕೆ ವಹಿಸಬೇಕು.

14. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಹಾಸನಕ್ಕೆ ತುರ್ತಾಗಿ ಆಗಮಿಸಿ, ವಿಕೃತ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಾರ್ವಜನಿಕವಾಗಿ ಸಾಂತ್ಚನ ಹೇಳಿ, ಧೃರ್ಯ ತುಂಬಬೇಕು. ಗೌಪ್ಯತೆ ಕಾಪಾಡುವ ಭರವಸೆ ನೀಡಬೇಕು. ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲ ಕಾನೂನು ನೆರವು, ಭದ್ರತೆ, ಪರಿಹಾರ, ಪುನರ್ವಸತಿ ಮತ್ತು ರಕ್ಷಣೆಯನ್ನು ಖಾತ್ರಿಗೊಳಿಸಬೇಕು. ಜೊತೆಗೆ ಈ ಲೈಂಗಿಕ ದೌರ್ಜನ್ಯದ ವಿರುದ್ಧ ಹಾಗೂ ಸಂತ್ರಸ್ತ ಮಹಿಳೆಯರ ಪರವಾಗಿ ಹೋರಾಟ ನಡೆಸುತ್ತಿರುವ ಸಂಘಟನೆಗಳ ಪ್ರಮುಖರನ್ನು ಭೇಟಿಯಾಗಿ ವಾಸ್ತವಾಂಶವನ್ನು ವಿವರವಾಗಿ ಚರ್ಚಿಸಿ, ಅದನ್ನಾಧರಿಸಿ ತುರ್ತು ಕ್ರಮ ಕೈಗೊಳ್ಳಬೇಕು.

‘ಹಾಸನ ಚಲೋ’ ಹೋರಾಟದಲ್ಲಿ ಭಾಗಿಯಾಗುತ್ತಿರುವ ಸಂಘಟನೆಗಳು:

ಜನಪರ ಚಳವಳಿಗಳ ಒಕ್ಕೂಟವು- ಮಹಿಳಾ, ದಲಿತ, ಕಾರ್ಮಿಕ, ರೈತ, ಅಲ್ಪಸಂಖ್ಯಾತ, ಹಿಂದುಳಿದ, ಲೈಂಗಿಕ ಅಲ್ಪಸಂಖ್ಯಾತ, ಆದಿವಾಸಿ, ವಿಜ್ಞಾನ ಚಳವಳಿ, ನಿವೃತ್ತ ಸರ್ಕಾರಿ ಅಧಿಕಾರಿಗಳು/ನೌಕರರ ಸಂಘಟನೆ, ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಹಾಗೂ ಸಮಾನಮನಸ್ಕರನ್ನು ಒಳಗೊಂಡಿದೆ.

ಇದನ್ನೂ ಓದಿ; ಧ್ವನಿ ಬದಲಿಸುವ ಆ್ಯಪ್‌ನಿಂದ ಶಿಕ್ಷಕಿಯಂತೆ ಮಾತನಾಡಿ 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...