ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಶುಲ್ಕ (ಟೋಲ್ ಶುಲ್ಕ) ವನ್ನು ಇಂದಿನಿಂದ (ಜೂನ್ 3) ಶೇ.5ರಷ್ಟು ಹೆಚ್ಚಿಸಿದೆ.
ಹೆದ್ದಾರಿ ಪ್ರಾಧಿಕಾರ ವಾರ್ಷಿಕವಾಗಿ ಬಳಕೆದಾರರ ಶುಲ್ಕವನ್ನು ಹೆಚ್ಚಿಸುತ್ತದೆ. ಈ ಬಾರಿಯ ಪರಿಷ್ಕರಣೆ ಏಪ್ರಿಲ್ 1ರಿಂದ ಜಾರಿಗೆ ಬರಬೇಕಿತ್ತು. ಆದರೆ, ಲೋಕಸಭೆ ಚುನಾವಣೆಯ ಕಾರಣ ಶುಲ್ಕ ಏರಿಕೆಯನ್ನು ಮುಂದೂಡಿತ್ತು. ಪರಿಷ್ಕೃತ ದರ ದೇಶದ ಎಲ್ಲಾ ಹೆದ್ದಾರಿಗಳಿಗೂ ಅನ್ವಯಿಸಲಿದೆ.
ಪ್ರತಿವರ್ಷ ಸಗಟು ಬೆಲೆ ಸೂಚ್ಯಂಕ (ಸಿಪಿಐ) ಆಧಾರದ ಮೇಲೆ ಟೋಲ್ ಶುಲ್ಕ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಎನ್‌ಹೆಚ್‌ಎಐ ತಿಳಿಸಿದೆ.
ರಾಷ್ಟ್ರೀಯ ಹೆದ್ದಾರಿ ಸರಪಳಿಯಲ್ಲಿ ಸುಮಾರು 855 ಟೋಲ್ ಪ್ಲಾಝಾಗಳಿದ್ದು, ಇವುಗಳ ಮೇಲೆ ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹಣೆ) ನಿಯಮಗಳು-2008ರ ಪ್ರಕಾರ ಬಳಕೆದಾರರ ಶುಲ್ಕವನ್ನು ವಿಧಿಸಲಾಗುತ್ತದೆ.
ಒಟ್ಟು ಟೋಲ್ ಪ್ಲಾಝಾಗಳ ಪೈಕಿ 675 ಪ್ಲಾಝಾಗಳು ಸರ್ಕಾರ್ ನೆರವಿನೊಂದಿಗೆ ಕಾರ್ಯಾಚರಿಸುತ್ತಿವೆ. ಉಳಿದ 180 ಪ್ಲಾಝಾಗಳು ಖಾಸಗಿ ಕಂಪನಿಗಳ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಿಸುತ್ತಿವೆ.
ಇದನ್ನೂ ಓದಿ : ಸರಿಯಾದ ಸಮಯಕ್ಕೆ ಬಂಧಿಸದ ಕಾರಣ ನೀರವ್ ಮೋದಿ, ಮಲ್ಯ, ಮೆಹುಲ್ ಚೋಕ್ಸಿ ಭಾರತದಿಂದ ಪಲಾಯನ ಮಾಡಿದ್ರು: ಮುಂಬೈ ಕೋರ್ಟ್


