| ಸಂದರ್ಶನ :ಪತ್ರಿಕಾ ತಂಡ |
ರೈತಸಂಘದ ಏಳು-ಬೀಳುಗಳು, ಇಂದಿನ ದಿನಗಳಲ್ಲಿ ರೈತಸಂಘದ ಮುಂದಿರುವ ಸವಾಲು, ಅದನ್ನು ಎದುರಿಸಲು ಯಾವ ರೀತಿ ತಯಾರಿಯಿದೆ ಇತ್ಯಾದಿ ಪ್ರಶ್ನೆಗಳನ್ನು ರೈತಸಂಘದ (ಪುಟ್ಟಣ್ಣಯ್ಯ ಬಣ) ಹಾಲಿ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರನ್ನು ಕೇಳುವುದಿತ್ತು. ಆದರೆ, ಅವರು ಬರ-ನೆರೆ ಪೀಡಿತ ಕರ್ನಾಟಕಕ್ಕೆ ಪರಿಹಾರ ಕೇಳಲು ದೊಡ್ಡ ಅಧಿವೇಶನದ ತಯಾರಿಯಲ್ಲಿದ್ದರು. ಸಹಜವಾಗಿ ಪ್ರಶ್ನೆಗಳು ಅದರ ಸುತ್ತಲೇ ಸುತ್ತಿದವು. ವಿವಿಧ ರೈತ ನಾಯಕರೆಲ್ಲರನ್ನೂ ಸಂದರ್ಶಿಸಿ ಮೇಲಿನ ಪ್ರಶ್ನೆಗಳನ್ನು ‘ಪತ್ರಿಕೆ’ಯ ಓದುಗರಿಗಾಗಿ ಕೇಳುವ ಯೋಜನೆಯನ್ನು ನಂತರದ ದಿನಗಳಿಗೆ ಇಟ್ಟುಕೊಂಡು, ನೆರೆ ಪರಿಹಾರದ ಕುರಿತ ಅವರ ಆಂದೋಲನದ ಬಗ್ಗೆ ಮಾತ್ರ ಪ್ರಶ್ನೆಗಳನ್ನು ಕೇಳಲಾಯಿತು
ಕರ್ನಾಟಕವನ್ನು ಕಾಡಿರುವ ಈ ವರ್ಷದ ಪ್ರವಾಹವನ್ನು ಸರ್ಕಾರ ಯಾವ ರೀತಿ ನಿಭಾಯಿಸಿದೆ?
ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಸರ್ಕಾರದ ಅಂಕಿ ಅಂಶದ ಪ್ರಕಾರದ 22 ಜಿಲ್ಲೆಗಳಲ್ಲಿ 103 ತಾಲ್ಲೂಕುಗಳು ಪ್ರವಾಹ ಪೀಡಿತವಾಗಿವೆ. ಸರ್ಕಾರದ ವತಿಯಿಂದ ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿಕೊಟ್ಟಿದ್ದಾರೆಯೇ ಹೊರತು ಬೀದಿಗೆ ಬಿದ್ದಿರುವ ಜನರ ಜೀವನ ಸರಿಪಡಿಸುವುದಕ್ಕೆ ಯಾವ ಆಲೋಚನೆಯನ್ನೂ ಹೊಂದಿಲ್ಲ. ಇನ್ನು ಕೇಂದ್ರ ಸರ್ಕಾರವಂತೂ ಕರ್ನಾಟಕವನ್ನು ಸಂಪೂರ್ಣವನ್ನು ಮರೆತಿರುವಂತಿದೆ. ನೆಪ ಮಾತ್ರಕ್ಕೆ ಬಂದು ಕಣ್ಣೊರೆಸುವ ಕೆಲಸವನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿಹೋಗಿದ್ದಾರೆ. ಓಡಿಸ್ಸಾದಲ್ಲಿ ಪ್ರವಾಹವಾದಾಗ ಚುನಾವಣೆ ಪ್ರಚಾರವನ್ನು ಬದಿಗೊತ್ತಿ ವೈಮಾನಿಕ ಸಮೀಕ್ಷೆ ಮಾಡಿ ಅಲ್ಲಿಯ ಮುಖ್ಯಮಂತ್ರಿಯನ್ನು ಕೂಡಲೇ ಭೇಟಿಮಾಡಿ ಅವರಿಗೆ ನೆರವು ಕೊಡುತ್ತೇವೆ ಎಂದು ಅಲ್ಲಿಯ ಜನರಿಗೆ ನರೇಂದ್ರ ಮೋದಿಯವರು ಚುನಾವಣಾ ಪೂರ್ವದಲ್ಲಿ ಆತ್ಮಸ್ಥೈರ್ಯವನ್ನು ತುಂಬಿದ್ದರು. ಆದರೆ ಕರ್ನಾಟಕದಲ್ಲಿ ನೆರೆ ಬಂದು ಎರಡು ತಿಂಗಳು ಕಳೆದಿವೆ. ಚಂದ್ರಯಾನ ನೋಡುವುದಕ್ಕೆ ಬೆಂಗಳೂರಿಗೆ ಬಂದ ಪ್ರಧಾನಿಗೆ ನೆರೆ ಸಂತ್ರಸ್ತರ ನೆನಪಾಗಲಿಲ್ಲ. ವಿದೇಶಕ್ಕೆ ಹೋಗುವುದಕ್ಕೆ ಬೇಕಾದಷ್ಟು ಸಮಯವಿರುವ ಪ್ರಧಾನಿ ರೈತಾಪಿ ವರ್ಗದ ಬಗ್ಗೆ ಕಿಂಚಿತ್ತು ತಲೆ ಕೆಡಿಸ್ಕೊಂಡಿಲ್ಲಾ. ಒಂದು ಕಡೆ ಪಂಚೆ, ಇನ್ನೊಂದು ಕಡೆ ಇನ್ನೊಂತರ ಡ್ರೆಸ್ ಹಾಕ್ಕೊಂಡು ಓಡಾಡ್ತಾಯಿದ್ದಾರೆ.
1,200 ಕೋಟಿ ರೂ. ಪರಿಹಾರ ಘೋಷಿಸಿದ್ದಾರಲ್ವಾ?
ಇದು ಬರಿ ಭಿಕ್ಷೆ ಅಂತ ಹೇಳ್ತಿವಿ. ಇದನ್ನು ರಾಜ್ಯ ಸರ್ಕಾರವೇ ಪ್ರತಿಭಟಿಸಬೇಕಿತ್ತು. 25 ಜನ ಎಂ.ಪಿ.ಗಳು ಬಿಜೆಪಿ ಪಕ್ಷದಿಂದ ನಮ್ಮ ರಾಜ್ಯದಲ್ಲಿ ಗೆದ್ದಿದ್ದಾರೆ. ಅವರು ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿ ಅಸಮಾಧಾನ ವ್ಯಕ್ತಪಡಿಸಬೇಕಾಗಿತ್ತು. ಕರ್ನಾಟಕದಿಂದ 3+1 ಜನ ಮಂತ್ರಿಗಳಿದ್ದಾರೆ. ಅವರೂ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಇದು ಸಂಪೂರ್ಣವಾಗಿ ಭಿಕ್ಷೆ ರೂಪದಲ್ಲಿದೆ. ಎನ್‍ಡಿಆರ್‍ಎಫ್ ಮಾನದಂಡವೇ ಅವೈಜ್ಞಾನಿಕವಾದದ್ದು, ಅದನ್ನು ಈಗ ಅಳವಡಿಸಿಕೊಳ್ಳಲು ಆಗುವುದಿಲ್ಲ. ಅದರ ಮೂಲ ಮಾನದಂಡವನ್ನೇ ಬದಲಾಯಿಸಬೇಕು. ವಾಸ್ತವದ ನೆಲೆಗಟ್ಟಿನಲ್ಲಿ ನಿಜವಾದ ನಷ್ಟವನ್ನು ತುಂಬಿಕೊಡುವಂತದ್ದು ಮತ್ತು ನಾಶವಾಗಿರುವ ಬದುಕನ್ನು ಪುನಃ ಕಟ್ಟಿಕೊಡುವಂತಹÀ ದೂರದೃಷ್ಟಿ ಇರುವ ಮಾನದಂಡ ರಚನೆಯಾಗಬೇಕು.
ಸರ್ ಇವತ್ತು ಬರಿ ಗ್ರಾಮಿಣ ಭಾಗದ್ದಲ್ಲ, ಇಡೀ ದೇಶದ ಆರ್ಥಿಕತೆಯೇ ಬಿಕ್ಕಟ್ಟಿನಲ್ಲಿದೆ. ಜಿಡಿಪಿ ಕುಸಿದಿದೆ. ಸರ್ಕಾರ ಇನ್ನಷ್ಟು ಕೈಗಾರಿಕೆಗಳಿಗೆ ಒತ್ತು ಕೊಟ್ಟರೆ ಜಿಡಿಪಿನ ಹೆಚ್ಚಿಸುವುದಕ್ಕೆ ಸಾಧ್ಯ ಎನ್ನಲಾಗುತ್ತಿದೆ ಇದರ ಬಗ್ಗೆ ಹೇಳಿ:
ಜಿಡಿಪಿ ಲೆಕ್ಕಾಚಾರದ ಮಾನದಂಡವೇ ಒಪ್ಪುವಂತದ್ದಲ್ಲ. ಹಿಂದೆ ಕೈಗಾರಿಕೆಗೆ ಕಾರ್ಪೊರೆಟ್ ನೀತಿಯಿಂದ ಪ್ರಾಮುಖ್ಯತೆ ಕೊಟ್ಟಾಗಿದೆ. ಅದರಿಂದ ಏನು ಬದಲಾವಣೆ ಆಗಿಲ್ಲ. ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ, ನಿರುದ್ಯೋಗ ಜಾಸ್ತಿಯಾಗುತ್ತಿದೆ. ಇದು ದೇಶದ ಆರ್ಥಿಕ ಕುಸಿತಕ್ಕೂ ಕಾರಣವಾಗಿದೆ. ನಾವು ಮೂಲಭೂತವಾಗಿ ಅರ್ಥ ಮಾಡಿಕೊಳ್ಳಬೇಕಿರುವುದು ಭಾರತ ದೇಶ ಗ್ರಾಮೀಣ ಭಾಗದಿಂದ ಕೂಡಿದ್ದು ಮತ್ತು ಕೃಷಿಗೆ ಪೂರಕವಾಗಿ ಇರುವಂಥದ್ದು ಎಂದು. ಯಾವಾಗಲೂ ಉದ್ಯಮಗಳು ಒಂದಲ್ಲಾ ಒಂದು ರೀತಿಯಲ್ಲಿ ಕೃಷಿ ಉತ್ಪನ್ನದ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಹೋಟಲ್, ಅಂಗಡಿಗಳು, ಕಾರ್ಖಾನೆಗಳು, ಆಟೋ-ಮೊಬೈಲ್ ರಂಗ ಕೂಡ ಕೃಷಿ ವಲಯದ ಬೇಡಿಕೆಯಿಂದಲೇ ಬೆಳೆಯುವುದು. ಆದರೆ ಇಲ್ಲಿ ಕೃಷಿ ಮತ್ತು ಗ್ರಾಮೀಣ ಆದಾಯವೇ ಮರೆಯಾಗುತ್ತಿದೆ. ಗ್ರಾಮೀಣ ಜನಕ್ಕೆ ಆದಾಯ ಹೆಚ್ಚಾಗಿದ್ದರೆ ಕೊಳ್ಳುವ ಶಕ್ತಿ ಹೆಚ್ಚಾಗಿರುತ್ತದೆ. ಕೊಳ್ಳುವ ಶಕ್ತಿ ಇದ್ದಾಗಲೇ ಬೇರೆ ಉದ್ಯಮ ಬೆಳೆಯುವುದಕ್ಕೆ ಸಾಧ್ಯ. ಈಗ ನಾವು ಅಂಗಡಿಗೆ ಹೋಗಿ ವ್ಯಾಪಾರ ಮಾಡಿದರೆ ಅಂಗಡಿಯವನಿಗೆ ವ್ಯಾಪಾರವಾಗುತ್ತದೆ. ಒಂದು ಕಾರ್-ಬೈಕ್ ತಗೋಬೇಕು ಎಂದರೂ ಆರ್ಥಿಕ ಸ್ಥಿತಿ ಉತ್ತಮವಾಗಿರಬೇಕು. ನಮ್ಮ ಆಟೊಮೊಬೈಲ್ ಉದ್ದಿಮೆಗಳಾಗಿರಬಹುದು, ಬೇರೆ ಉದ್ಯಮಗಳಾಗಿರಬಹುದು ಅವುಗಳ ಆರ್ಥಿಕ ಸ್ಥಿತಿ ಬೆಳೆಯಬೇಕಾದರೆ ಸಾಮಾನ್ಯ ಜನರ ಆರ್ಥಿಕತೆ ಗಟ್ಟಿಯಿದ್ದಾಗ ಮಾತ್ರ ಸಾಧ್ಯ. ಕೃಷಿ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಆರ್ಥಿಕ ಕುಸಿತವಾದರೆ ಎಲ್ಲಾ ರಂಗದಲ್ಲೂ ಆರ್ಥಿಕ ಕುಸಿತವಾಗುತ್ತದೆ. ಅದಕ್ಕೆ ಭಾರತದ ಪರಿಸ್ಥಿತಿ ಹೀಗಾಗಿದೆ.
ಒಂದು ಲಕ್ಷ ಕೋಟಿ ಪ್ಯಾಕೇಜ್ ಕೇಳುತ್ತಿದ್ದೀರಲ್ಲಾ. ಸಮಾವೇಶದ ನಂತರದಲ್ಲಿ ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಇದಕ್ಕೆ ಸ್ಪಂದಿಸದಿದ್ದರೆ, ಆಗ ಮುಂದಿನ ಕಾರ್ಯಕ್ರಮ ಏನು?
ಒಟ್ಟು ಇವತ್ತು ನಾವು ಕರ್ನಾಟಕದ ಸಮಗ್ರ ಸಂಕಷ್ಟಗಳನ್ನ ಚರ್ಚೆ ಮಾಡುವುದಕ್ಕೆ ಬಂದಿದ್ದೇವೆ. ಹಕ್ಕೊತ್ತಾಯ ಮಾಡುತ್ತೇವೆ. ರಾಜ್ಯ, ಕೇಂದ್ರ ಸರ್ಕಾರಗಳು ನಮಗೆ ಸ್ಪಂದಿಸದಿದ್ದರೆ ಇದನ್ನು ಇಷ್ಟಕ್ಕೆ ನಿಲ್ಲಿಸುವುದಿಲ್ಲ. ಇನ್ನೂ ಮುಂದುವರೆದ ಹೋರಾಟ ಇದ್ದೇ ಇರುತ್ತದೆ. ಜನಪ್ರತಿನಿಧಿಗಳಿಗೆ ಜಾಗೃತಿ ಮೂಡಿಸಬೇಕು, ಎಚ್ಚರಿಕೆ ಕೊಡಬೇಕು. ಕರ್ನಾಟಕದಿಂದ ಕೇಂದ್ರ ಸಚಿವರಾಗಿರುವ ನಿರ್ಮಲಾ ಸೀತಾರಾಮನ್, ಸದಾನಂದ ಗೌಡರು, ಸುರೇಶ ಅಂಗಡಿ ಮತ್ತು ಜೋಷಿಯವರ ಮನೆ ಮುಂದೆ ಹೋಗಿ ಪ್ರತಿಭಟನೆ ಮಾಡುತ್ತೇವೆ. ಅವರು ಕರ್ನಾಟಕದ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಹಕ್ಕೊತ್ತಾಯಗಳನ್ನು ಜಾರಿಗೆ ತರಬೇಕೆಂದು ಕೇಂದ್ರದಲ್ಲಿ ಒತ್ತಾಯಿಸಬೇಕು. ಅಧಿಕಾರದಲ್ಲಿರುವ ಪಕ್ಷದಿಂದ ಗೆದ್ದಿರುವ 25 ಸಂಸದರಿಗೆ ಪ್ರಧಾನಿಯನ್ನು ಭೇಟಿಯಾಗುವಷ್ಟು ತಾಕತ್ತಿಲ್ಲ. ಅವರು ಎಂ.ಪಿ.ಗಳು ಅನ್ನಿಸಿಕೊಳ್ಳೋಕೆ ನಾಲಾಯಕ್ಕು. ಅದರಿಂದ 25 ಸಂಸದರ ಮನೆ ಮುಂದೆಯೂ ನಾವು ಹೋಗುತ್ತೆವೆ. ಇನ್ನು ಮೂರು ಜನ ಎಂ.ಪಿಗಳು, ರಾಜ್ಯಸಭೆಯ ಸದಸ್ಯರ ಮನೆ ಮುಂದೆಯೂ ಹೋಗುತ್ತೇವೆ. ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಯಿಂದ ಹಿಡಿದು ಶಾಸಕರಿಗೂ ಪ್ರಶ್ನೆ ಮಾಡುವ ಮೂಲಕ ನಮ್ಮ ಹಕ್ಕೊತ್ತಾಯಗಳ ಚರ್ಚೆ ಮಾಡಬೇಕು. ಸರ್ಕಾರದ ಧೋರಣೆಯನ್ನು ಹಳ್ಳಿ ಹಳ್ಳಿಗೂ ತೆಗೆದುಕೊಂಡು ಹೋಗಿ, ಪ್ರತಿಯೊಂದು ಕುಟುಂಬಕ್ಕೂ ತಿಳಿಸುವಂತಹ ಕೆಲಸ ಮಾಡುತ್ತೇವೆ.
ಎಷ್ಟು ಕೋಟಿ ಪರಿಹಾರ ಬೇಕು, ಯಾವ ರೀತಿಯ ಕೆಲಸಗಳಾಬೇಕು?
19 ವರ್ಷದ ಕರ್ನಾಟಕದ ಇತಿಹಾಸದಲ್ಲಿ 14 ವರ್ಷಗಳ ಕಾಲ ಅರ್ಧಕ್ಕಿಂತ ಹೆಚ್ಚು ಜಿಲ್ಲೆಗಳು ಬರವನ್ನು ಅನುಭವಿಸಿವೆ. ಕೆಲವು ಜಿಲ್ಲೆಗಳು ಖಾಯಂ ಬರ ಪೀಡಿತ ಪ್ರದೇಶಗಳಾಗಿವೆ. 14 ವರ್ಷಗಳ ಬರ ಮತ್ತು 3 ವರ್ಷಗಳ ನೆರೆಯಿಂದಾಗಿ ದುಡಿಯುವಂತಹ ಜನರ ಬದುಕು ಬರಡಾಗಿದೆ. ಆದ್ದರಿಂದ ಕರ್ನಾಟಕದ ಇವತ್ತಿನ ಪರಿಸ್ಥಿತಿಗೆ ಕೇಂದ್ರ ಸರ್ಕಾರ ಕನಿಷ್ಟ ಒಂದು ಲಕ್ಷ ಕೋಟಿ ಕೋಡಬೇಕು. ಅಷ್ಟು ಕೊಟ್ಟರೆ ಸಂತ್ರಸ್ತರ ಬದುಕಿಗೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ವ್ಯವಸಾಯಕ್ಕೆ ಉತ್ತೇಜನ ನೀಡುವಂತ ಕೆಲಸ ಮಾಡಬಹುದು.
ಇವೆಲ್ಲವೂ ತಕ್ಷಣದ ಕ್ರಮಗಳು. ಆದರೆ, ಶಾಶ್ವತ ಪರಿಹಾರದ ಕ್ರಮಗಳು ಯಾವ್ಯಾವಿವೆ?
ಕೃಷಿ ಪೂರ್ತಿ ಸಂಕಷ್ಟದಲ್ಲಿದೆ. ಕೃಷಿಗೆ ವಿಮುಖರಾಗಿ ಜನ ಹೋಗುತ್ತಿದ್ದಾರೆ. ಎಲ್ಲಿ ಕೃಷಿ ಕ್ಷೇತ್ರ ಕುಸಿಯುತ್ತದೆಯೋ ಅಲ್ಲಿ ನಿರುದ್ಯೋಗದ ಸಮಸ್ಯೆ ತಾನಾಗಿಯೇ ಉದ್ಭವಿಸುತ್ತದೆ. ಆಹಾರ ಸಮಸ್ಯೆ ಶುರುವಾಗುತ್ತದೆ. ಎಲ್ಲಾ ರೀತಿಯ ಇಂಡಸ್ಟ್ರಿಗಳು ಮತ್ತು ಇತರ ಸೆಕ್ಟರ್‍ಗಳ ಮೇಲೆ ಕೃಷಿ ಸಂಕಷ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಕೃಷಿಗೆ ಒತ್ತು ಕೊಡುವಂತಹ ಹತ್ತು ವರ್ಷದ ಯೋಜನೆಬೇಕು. ಕೃಷಿಯನ್ನು ಸಂಘಟಿಸಿ ಪರಿಹಾರ ರೂಪಿಸುವ ಕೆಲಸ ಆಗಬೇಕು. ಮಾರುಕಟ್ಟೆ ನೀತಿ ಬದಲಾಗಬೇಕು. ಕನಿಷ್ಟ ವೈಜ್ಞಾನಿಕ ಬೆಲೆ ನಿಗದಿಯಾದರೆ, ಘನತೆಯುಳ್ಳ ಬದುಕಿಗೆ ಬೇಕಾದ ಆದಾಯ ದೊರೆಯುತ್ತದೆ ಎನ್ನುವ ಆತ್ಮವಿಶ್ವಾಸ ತುಂಬಿ ಕೃಷಿಯನ್ನು ಉಳಿಸಬಹುದು. ಗ್ರಾಹಕ ಮತ್ತು ಉತ್ಪಾದಕರ ನಡುವೆ ನೇರ ಸಂಪರ್ಕವಿರಬೇಕು. ಮಧ್ಯವರ್ತಿಗಳ ಹಾವಳಿ ಹೋಗಬೇಕು. ಮೌಲ್ಯಾಧಾರಿತ ಕೃಷಿ ಉತ್ಪನ್ನವಿರುವ ನಮ್ಮ ಮಾರುಕಟ್ಟೆ ಇರಬೇಕು. ಇವು ಶಾಶ್ವತ ಪರಿಹಾರ ಕ್ರಮಗಳು. ರೈತಸಂಘದ ಮುಖ್ಯ ಹೋರಾಟ ಅದಕ್ಕೇನೇ.
ಶಾಶ್ವತವಾಗಿ ಬರ ಇಲ್ಲದಿರುವುದಕ್ಕೆ ನಿಮ್ಮ ಸಂಘದಿಂದ ಏನು ಕಾರ್ಯಕ್ರಮಗಳನ್ನು ಯೋಜಿಸಿದ್ದೀರಿ?
ಕರ್ನಾಟಕ ಬರಮುಕ್ತ ಆಂದೋಲನದ ಕುರಿತ ಯೋಜನೆ ರಾಜೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ಶುರುವಾಗಿದೆ. ಕರ್ನಾಟಕವನ್ನು ಬರ ಮುಕ್ತವಾಗಿ ಮಾಡುವುದಕ್ಕೆ ನೀರನ್ನು ಭೂಮಿಯಲ್ಲಿ ಹೇಗೆ ಇಂಗಿಸಿಕೊಳ್ಳಬೇಕು ಎಂಬುದರ ಬಗ್ಗೆ ಮತ್ತಷ್ಟು ನೀತಿಯಾಗಬೇಕು. ಹವಾಮಾನ ವೈಪರೀತ್ಯ ಉಂಟಾಗುತ್ತಿವೆ. ಹವಾಮಾನವನ್ನು ಸಮತೋಲನಕ್ಕೆ ತರಲು ಹಸಿರೀಕರಣ ಮಾಡಬೇಕು. ಎಲ್ಲ ಕಡೆ ಗಿಡಗಳನ್ನು ನೆಡಬೇಕು, ಯಾವ ಪ್ರದೇಶಕ್ಕೆ ಯಾವ ಗಿಡ ಸೂಕ್ತ ಮತ್ತು ಮುಂದಿನ ಪೀಳಿಗೆಗೆ ಲಾಭವಾಗುವಂತಹ ಗಿಡಗಳನ್ನು ನೆಡಬೇಕು. ಸಣ್ಣ ಪುಟ್ಟ ಕೆರೆಗಳನ್ನು ತುಂಬಿಸಬೇಕು. ಕಡಿಮೆ ನೀರಿದ್ದಾಗ ಯಾವ ರೀತಿಯ ಬೆಳೆ ಬೆಳೆಯಬೇಕು, ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಯಾವ ಬೆಳೆ ಬೆಳೆಯಬೇಕು ಎಂದು ವೈವಿಧ್ಯಮಯವಾದ ಕೃಷಿಯನ್ನು ಮಾಡಿ ರೈತ, ರೈತನಾಗಿ ಉಳಿದುಕೊಳ್ಳಬೇಕು. ಅದಕ್ಕೆ ಪೂರಕವಾಗಿ ಹೈನುಗಾರಿಕೆ, ಮೀನುಗಾರಿಕೆ, ಕೋಳಿ ಸಾಕಾಣಿಕೆಗೆ ಉತ್ತೇಜನ ಮಾಡುವುದರಿಂದ ಆರ್ಥಿಕವಾಗಿ ಲಾಭವಾಗುತ್ತದೆ.
ದೇಶದ ಆರ್ಥಿಕ ಬಿಕ್ಕಟ್ಟಿಗೂ ಕೂಡ ಕೃಷಿಯಿಂದ ಪರಿಹಾರ ಇದೆ ಅಂತ ಹೇಳಿದ್ರಿ, ಅದು ಹೇಗೆ?
ನಮ್ಮ ದೇಶ ಕೃಷಿಕರ ದೇಶ. ಸರ್ಕಾರದ ಅಂಕಿ ಅಂಶಗಳಲ್ಲೆ ಹೇಳಿರುವ ಪ್ರಕಾರ ಪಿ. ಚಿದಂಬರಂ ಹಣಕಾಸು ಮಂತ್ರಿಯಾಗಿದ್ದಾಗ ಶೇ.63ರಷ್ಟು ಉದ್ಯೋಗ ಕೊಡುವುದು ಕೃಷಿಯಿಂದ ಎಂದು ಹೇಳಿದ್ದರು. ಸರ್ಕಾರಗಳು ಆಹಾರ ರಕ್ಷಣೆಗಾಗಿ ಕೃಷಿಗೆ ಒತ್ತು ಕೊಡಬೇಕು. ಹಾಗಾಗಿ ಕೃಷಿ ಪೂರಕವಾಗಿಯೇ ಯೋಜನೆಗಳನ್ನು ರೂಪಿಸಬೇಕು. ಆ ಮುಖಾಂತರ ಬೇರೆ ಸೆಕ್ಟರ್ ಬೆಳೆಯಬೇಕೇ ಹೊರತು ಬೇರೆ ಸೆಕ್ಟರ್‍ನಿಂದ ಕೃಷಿ ಬೆಳೆಯುತ್ತದೆ ಎಂದರೆ ಸಾದ್ಯವಿಲ್ಲ. ಒಟ್ಟು ಕೃಷಿ ಆಧಾರಿತ ಯೋಜನೆಗಳೇ ಆಗಬೇಕಾಗಿರುವಂತದ್ದು. ಇದರಲ್ಲೇ ಉದ್ಯೋಗ ಸೃಷ್ಟಿ ಮಾಡಬಹುದು. ಐಟಿಬಿಟಿಯವರಿಗೂ ಇದರಲ್ಲೇ ಉದ್ಯೋಗ ಸೃಷ್ಟಿ ಮಾಡಬಹುದು. ಹೆಚ್ಚಾಗಿ ಉದ್ಯೋಗ ದೊರೆಯುವುದು ಕೃಷಿಯಲ್ಲಿಯೇ.
ಇದಲ್ಲದೇ ದೇಶದ ಇಷ್ಟೊಂದು ಜನ ಕೃಷಿಯಲ್ಲಿದ್ದಾಗ ಉಳಿದ ವಸ್ತುಗಳಿಗೆ ಬೇಡಿಕೆ ಉಂಟಾಗುವುದು ಕೃಷಿ ಸದೃಢವಾದಾಗ. ಇದನ್ನು ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು.


