Homeಮುಖಪುಟಬೆಂಗಳೂರಿನ ಮತ್ತೊಂದು `ಕೆರೆ'ಗೂ ಬಂತು ಸಂಕಷ್ಟ!

ಬೆಂಗಳೂರಿನ ಮತ್ತೊಂದು `ಕೆರೆ’ಗೂ ಬಂತು ಸಂಕಷ್ಟ!

- Advertisement -
- Advertisement -

ಬೃಹತ್ ಬೆಂಗಳೂರಿನಲ್ಲಿ ಸಮಸ್ಯೆಗಳ ಆಗರವೇ ತುಂಬಿ ಹೋಗಿದೆ. ಗುಂಡಿಗಳಿಂದ ತುಂಬಿರುವ ರಸ್ತೆ, ಕಿತ್ತು ಹೋಗಿರುವ ಫುಟ್ ಪಾತ್ ಗಳು, ಒಳಚರಂಡಿ ನೀರಿನ ವ್ಯವಸ್ಥೆ ಇಲ್ಲದಿರುವುದು, ಕುಡಿಯುವ ನೀರು ಸೇರಿದಂತೆ ರಾಶಿ ರಾಶಿ ಮೂಲಭೂತ ಸಮಸ್ಯೆಗಳಿಂದ ಉದ್ಯಾನನಗರಿ ಬಳಲಿ ಬೆಂಡಾಗುತ್ತಿದೆ. ಹಸಿರು ಉದ್ಯಾನಗಳಿಂದ ಕಂಗೊಳಿಸುತ್ತಿದ್ದ ನಗರವೀಗ ತ್ಯಾಜ್ಯಗಳಿಂದ ಗಬ್ಬೆದ್ದು ಹೋಗಿದೆ. ಕೆರೆಗಳ ಸೂಕ್ತ ನಿರ್ವಹಣೆಯಿಲ್ಲದೆ, ಕಸ, ಪಾಚಿ, ಪ್ಲಾಸ್ಟಿಕ್ ಗಳಿಂದ ಕೆರೆಗಳು ರೋಗಗಳ ತಾಣವಾಗಿ ಮಾರ್ಪಟ್ಟಿವೆ. ಇದಕ್ಕೆ ತಾಜಾ ಮತ್ತು ಉತ್ತಮ ಉದಾಹರಣೆ ಅಂದರೆ ಕೆಂಗೇರಿಯ ಹೊಸಕೆರೆ ಕೆರೆ.

ಹೊಸಕೆರೆ ಕೆರೆ ಈಗ ತ್ಯಾಜ್ಯದ ಆವಾಸ ಸ್ಥಾನವಾಗಿದೆ. ವಿಶ್ವೇಶ್ವರಯ್ಯ ಲೇಔಟ್ ಪಕ್ಕದ ಕೆರೆಯ ನೀರಿನಲ್ಲಿ ಬರೀ ಕಸವೇ ತುಂಬಿದೆ. ಪ್ಲಾಸ್ಟಿಕ್ ಬಾಟಲಿಗಳು, ಕಾಗದ, ಮಲಿನ ನೀರು, ಒಳಚರಂಡಿ ನೀರು ಕೆರೆಯಲ್ಲೇ ಹರಿಯುತ್ತಿದೆ. ಕೆರೆ ಅಭಿವೃದ್ಧಿಗಾಗಿ ಬಿಡಿಎ ಲಕ್ಷ ಲಕ್ಷ ರೂ. ವೆಚ್ಚ ಮಾಡಿದೆ. ಮಿನಿ ಚೆಕ್ ಡ್ಯಾಂ ಕಟ್ಟಿ, ತ್ಯಾಜ್ಯ ಕೆರೆಯ ನೀರಿಗೆ ಸೇರದಂತೆ ತಡೆಯಲು ಹಲವು ಕ್ರಮಗಳನ್ನೂ ಕೈಗೊಂಡಿತ್ತು. ಆದರೆ ಅದ್ಯಾವುದೂ ಉಪಯೋಗವಾಗಲಿಲ್ಲ. ಕೆರೆಯ ಸುತ್ತಮುತ್ತ ವಾಕಿಂಗ್ ಪಾಥ್ ಕೂಡ ನಿರ್ಮಾಣ ಮಾಡಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿತ್ತು. ಆದರೆ ಕೆರೆಯಿಂದ ಹೊರಡುವ ಗಬ್ಬು ವಾಸನೆಯಿಂದ ಜನ ವಾಕಿಂಗ್ ಪಾಥ್ ಬಳಸುವುದಿಲ್ಲ. ಈ ಬಗ್ಗೆ ದೂರು ನೀಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ನಾಲ್ಕು ವರ್ಷಗಳ ಹಿಂದೆ ಕೆರೆ ಸ್ವಚ್ಛಗೊಳಿಸಿದ್ದನ್ನು ಬಿಟ್ಟರೆ, ಇದುವರೆಗೆ ಮತ್ತೆ ಯಾವುದೇ ನಿರ್ವಹಣೆಯ ಕ್ರಮ ತೆಗೆದುಕೊಂಡಿಲ್ಲ ಎಂಬುದು ಸ್ಥಳೀಯರ ಆರೋಪ.

ಏರಿಯಾದಲ್ಲಿ ಬೇರೆ ಸಮಸ್ಯೆಗಳು ಅಷ್ಟಾಗಿಲ್ಲ. ಆದರೆ ಕೆರೆಯಿಂದ ಬರುವ ಕೆಟ್ಟ ವಾಸನೆ ಮತ್ತು ಕಲುಷಿತ ನೀರು ರೋಗದ ತಾಣವಾಗಿದೆ. ತೀರಾ ಅಸಹ್ಯವೆನಿಸುತ್ತದೆ. ಹೀಗಾಗಿ ಕೆರೆಯನ್ನು ಆದಷ್ಟು ಬೇಗ ಸ್ವಚ್ಛಗೊಳಿಸಿ, ಸ್ಥಳೀಯರಿಗೆ ಅನುಕೂಲ ಮಾಡಿಕೊಡಬೇಕು ಎಂಬುದಾಗಿ ಮನವಿ ಮಾಡುತ್ತೇವೆ ಅಂತಾರೆ ಸ್ಥಳೀಯರು. ಅಷ್ಟಕ್ಕೂ ಲಕ್ಷಾನುಲಕ್ಷ ರೂ. ಖರ್ಚು ಮಾಡಿ ಮಿನಿ ಚೆಕ್ ಡ್ಯಾಂ ಕಟ್ಟಿ, ತ್ಯಾಜ್ಯ ಕೆರೆ ನೀರಿಗೆ ಸೇರದಂತೆ ತಡೆಯದಂತೆ ಮಾಡಲಾಗಿದೆ. ಆದರೆ ಇದು ಉಪಯೋಗವಾಗ್ತಿಲ್ಲ, ಇದು ಶಾಶ್ವತ ಪರಿಹಾರವಲ್ಲ. ಕೆರೆಯಲ್ಲಿ ಹಾವುಗಳ ವಾಸ ಸಾಮಾನ್ಯವಾಗಿದೆ. ನಮಗೆ ಮಕ್ಕಳ ಸುರಕ್ಷತೆಯದ್ದೇ ಚಿಂತೆಯಾಗಿದೆ. ಕೆರೆ ಸಂಪೂರ್ಣ ಹಸಿರು ಕಳೆಯಿಂದ ಕೂಡಿದೆ. ಅದನ್ನೆಲ್ಲಾ ಸ್ವಚ್ಛಗೊಳಿಸಿ, ವಾಕಿಂಗ್ ಪಾಥ್ ನ್ನು ಸರಿಪಡಿಸಿ ಎಂಬುದಾಗಿ ಮನವಿ ಮಾಡಿದ್ದೇವೆ ಅಂತಾರೆ ಸ್ಥಳೀಯರು.

ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಬಿಡಿಎ ಎಂಜಿನಿಯರು, ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸಹ ವ್ಯರ್ಥವಾಗಿದೆ ಎಂಬುದು ವಿಶ್ವೇಶ್ವರಯ್ಯ ಲೇಔಟ್ ನಿವಾಸಿಗಳು ಬೇಸರದ ಮಾತು. ಹಲವು ಬಾರಿ ಮನವಿ ಮಾಡಿದ್ದೇವೆ, ಪತ್ರವನ್ನೂ ಬರೆದಿದ್ದೇವೆ ಇದ್ಯಾವುದಕ್ಕೂ ಬಿಡಿಎ ತಲೆಕೆಡಿಸಿಕೊಳ್ಳುತ್ತಿಲ್ಲ ಅನ್ನೋದು ಸ್ಥಳೀಯರ ಆರೋಪ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಡಿಎ ಕಾರ್ಯನಿರ್ವಾಹಕ ಎಂಜಿನಿಯರ್ ರಾಜು, ಸಮಸ್ಯೆಯನ್ನು ನಾವು ಬಿಬಿಎಂಪಿಗೆ ವರ್ಗಾಯಿಸಿದ್ದೇವೆ. ಆದರೆ ಬಿಬಿಎಂಪಿ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ. ಇತ್ತ ಬಿಡಬ್ಲ್ಯುಎಸ್ ಎಸ್ ಬಿ ಅಧಿಕಾರಿಗಳು, ಕೆರೆಯ ಸುರಕ್ಷತೆ ಮತ್ತು ಸ್ವಚ್ಛತೆಗೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ ಅಂತಾರೆ. ಒಟ್ನಲ್ಲಿ ಇರುವುದೋ, ಬಿಡುವುದೋ ಎಂಬಂಥ ಇಕ್ಕಟ್ಟಿನಲ್ಲಿ ನಿವಾಸಿಗಳು ದಿನ ದೂಡುವಂತಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...