ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ 2024ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ, ಕ್ಯಾನ್ಸರ್ ಔಷಧಿಗಳು ಮತ್ತು ಮೊಬೈಲ್ ಫೋನ್‌ಗಳ ಮೇಲಿನ ಕಸ್ಟಮ್ಸ್ ಸುಂಕದಲ್ಲಿ ಭಾರಿ ಕಡಿತವನ್ನು ಘೋಷಿಸಿದರು. ಇದು ಚಿಲ್ಲರೆ ಮಾರುಕಟ್ಟೆಯಲ್ಲಿ ಅವುಗಳ ಬೆಲೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಆಮದು ಮಾಡಿಕೊಳ್ಳುವ ಚಿನ್ನ, ಬೆಳ್ಳಿ, ಚರ್ಮದ ವಸ್ತುಗಳು ಮತ್ತು ಸಮುದ್ರಾಹಾರ ಕೂಡ ಅಗ್ಗವಾಗಲಿದೆ.
“ಸರ್ಕಾರವು ಇನ್ನೂ 3 ಕ್ಯಾನ್ಸರ್ ಚಿಕಿತ್ಸಾ ಔಷಧಗಳಿಗೆ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಿದೆ. ನಾವು ಮೊಬೈಲ್ ಫೋನ್‌ಗಳು, ಚಾರ್ಜರ್‌ಗಳು ಮತ್ತು ಇತರ ಮೊಬೈಲ್ ಭಾಗಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಸಹ ಕಡಿಮೆ ಮಾಡುತ್ತೇವೆ” ಎಂದು ಸಂಸತ್ತಿನಲ್ಲಿ ಬಜೆಟ್ 2024 ಅನ್ನು ಮಂಡಿಸುವಾಗ ಸೀತಾರಾಮನ್ ಹೇಳಿದರು.
ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು 6% ಕ್ಕೆ ಕಡಿತಗೊಳಿಸಿರುವುದಾಗ ಘೋಷಿಸಿದ್ದಾರೆ. ಇದರಿಂದ, ಆಭರಣಗಳ ಚಿಲ್ಲರೆ ಬೇಡಿಕೆಯನ್ನು ಹೆಚ್ಚಿಸಬಹುದು ಮತ್ತು ವಿಶ್ವದ ಎರಡನೇ ಅತಿದೊಡ್ಡ ಬೆಳ್ಳಿಯ ಗ್ರಾಹಕರ ಕಳ್ಳಸಾಗಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಂದಾಜಿಸಲಾಗಿದೆ.
ಭಾರತದಿಂದ ಚಿನ್ನಕ್ಕೆ ಹೆಚ್ಚಿನ ಬೇಡಿಕೆಯು ಜಾಗತಿಕ ಬೆಲೆಗಳನ್ನು ಬೆಂಬಲಿಸಬಹುದು, ಇದು ಈ ವರ್ಷದ ಆರಂಭದಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತು. ಆದರೂ ಅದು ಭಾರತದ ವ್ಯಾಪಾರ ಕೊರತೆಯನ್ನು ಹೆಚ್ಚಿಸುವುದರ ಜತೆಗೆ, ಕುಸಿಯುತ್ತಿರುವ ರೂಪಾಯಿಯ ಮೇಲೆ ಮತ್ತಷ್ಟು ಭಾರವನ್ನು ಉಂಟುಮಾಡಬಹುದು.
ಮತ್ತೊಂದೆಡೆ, ಸರ್ಕಾರವು ಅಮೋನಿಯಂ ನೈಟ್ರೇಟ್ ಮೇಲಿನ ಕಸ್ಟಮ್ಸ್ ಸುಂಕವನ್ನು 10% ಮತ್ತು ಜೈವಿಕ ವಿಘಟನೀಯವಲ್ಲದ ಪ್ಲಾಸ್ಟಿಕ್‌ಗಳ ಮೇಲೆ 25% ರಷ್ಟು ಹೆಚ್ಚಿಸಲಿದೆ.
ಇದು ಮೋದಿ 3.0 ಸರ್ಕಾರದ ಮೊದಲ ಬಜೆಟ್ ಆಗಿದ್ದು, ಮೂಲಸೌಕರ್ಯ ಅಭಿವೃದ್ಧಿಯಿಂದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳವರೆಗೆ ವಿವಿಧ ಕ್ಷೇತ್ರಗಳ ಮೇಲೆ ಸ್ಪರ್ಶಿಸುವ ಭಾರತದ ಆರ್ಥಿಕತೆ ಮೇಲೆ ಗಮನಾರ್ಹ ಪರಿಣಾಮ ಬೀರುವ ನಿರೀಕ್ಷೆಯಿದೆ.
ವಿತ್ತ ಸಚಿವರು ಸದೃಢ ಬಜೆಟ್ ಮಂಡಿಸಲಿದ್ದಾರೆ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ, ಸರ್ಕಾರದ ಭರವಸೆಗಳು ಜನಸಾಮಾನ್ಯರಿಗೆ ತಲುಪುವಂತೆ ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವಾದ ನಿನ್ನೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು.
ಇದನ್ನೂ ಓದಿ; ಕೇಂದ್ರ ಬಜೆಟ್ 2024: ಎನ್‌ಡಿಎ ಮಿತ್ರಪಕ್ಷಗಳ ಆಡಳಿತವಿರುವ ಬಿಹಾರ, ಆಂಧ್ರಪ್ರದೇಶಕ್ಕೆ ಸಿಕ್ಕಿದ್ದೇನು?


