ಈಶಾನ್ಯ ದೆಹಲಿಯಲ್ಲಿ 2020ರಲ್ಲಿ ಗಲಭೆ ನಡೆದ ವೇಳೆ ವಂದೇ ಮಾತರಂ ಹಾಡಲು ಒತ್ತಾಯಿಸಲ್ಪಟ್ಟ 23 ವರ್ಷದ ಫೈಝಾನ್ ಎಂಬ ಯುವಕನ ಸಾವಿನ ತನಿಖೆಯನ್ನು ದೆಹಲಿ ಹೈಕೋರ್ಟ್ ಮಂಗಳವಾರ (ಜು.23) ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ವರ್ಗಾಯಿಸಿದೆ.
ತಮ್ಮ ಮಗನ ಸಾವಿನ ಬಗ್ಗೆ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಕೋರಿ 2020ರಲ್ಲಿ ಫೈಝಾನ್ ಅವರ ತಾಯಿ ಕಿಸ್ಮಾತುನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಅವರು ಅಂಗೀಕರಿಸಿದ್ದಾರೆ.
“ನಾನು ಅರ್ಜಿಯನ್ನು ಅಂಗೀಕರಿಸಿದ್ದು, ಫೈಝಾನ್ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿದ್ದೇನೆ” ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ವಿಡಿಯೋ ಸಂಬಂಧಿಸಿದೆ. ವಿಡಿಯೋದಲ್ಲಿ ಪೊಲೀಸರು ಫೈಝಾನ್ ಜೊತೆ ಇತರ ನಾಲ್ವರು ವ್ಯಕ್ತಿಗಳಿಗೆ ವಂದೇ ಮಾತರಂ ಹಾಡುವಂತೆ ಒತ್ತಾಯಿಸಿ ಥಳಿಸಿದ ದೃಶ್ಯವಿತ್ತು.
ಫೈಝಾನ್ ತಾಯಿ ಪರ ವಕೀಲರಾದ ವೃಂದಾ ಗ್ರೋವರ್, ಸೌತಿಕ್ ಬ್ಯಾನರ್ಜಿ ಮತ್ತು ದೇವಿಕಾ ತುಳಸಿಯಾನಿ ವಾದ ಮಂಡಿಸಿದರು. ದೆಹಲಿ ಪೊಲೀಸರ ಪರವಾಗಿ ಎಸ್‌ಪಿಪಿ ಅಮಿತ್ ಪ್ರಸಾದ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.
“ದೆಹಲಿ ಪೊಲೀಸರು ನನ್ನ ಮಗನನ್ನು ಅಕ್ರಮವಾಗಿ ಬಂಧಿಸಿದ್ದರು. ಆತನ ಗಂಭೀರ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ನಿರಾಕರಿಸಿದ್ದರು. ಪರಿಣಾಮ ನನ್ನ ಮಗ ಫೆಬ್ರವರಿ 26, 2020ರಂದು ಸಾವನ್ನಪ್ಪಿದ” ಎಂದು ಫೈಝಾನ್ ತಾಯಿ ಆರೋಪಿಸಿದ್ದಾರೆ.
ಫೈಝಾನ್ ದೆಹಲಿಯ ಜ್ಯೋತಿ ನಗರ ಪೊಲೀಸ್ ಠಾಣೆಯಿಂದ ಬಿಡುಗಡೆಯಾದ 24 ಗಂಟೆಗಳ ಒಳಗೆ ನಗರದ ಜಿಟಿಬಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದ. ಇದಕ್ಕೂ ಮುನ್ನ ಪೊಲೀಸರು ಆತನಿಗೆ ತೀವ್ರವಾಗಿ ಥಳಿಸಿದ್ದರು ಎಂದು ಆರೋಪಿಸಲಾಗಿದೆ.
“ನನ್ನ ಮಗನ ಸಾವು ‘ದ್ವೇಷದ ಅಪರಾಧ ಮತ್ತು ಕಸ್ಟಡಿಯಲ್ ಕೊಲೆ’ ಎಂದು ಫೈಝಾನ್ ತಾಯಿ ನ್ಯಾಯಾಲಯಕ್ಕೆ ತಿಳಿಸಿದ್ದು, ಫೈಝಾನ್ ಆತನ ಧರ್ಮದ ಕಾರಣಕ್ಕೆ ಪೊಲೀಸರಿಂದ ಗುರಿಯಾಗಿದ್ದ” ಎಂದು ವಕೀಲೆ ವೃಂದಾ ಗ್ರೋವರ್ ನ್ಯಾಯಾಲಯಕ್ಕೆ ಹೇಳಿದ್ದಾರೆ.
2022ರಲ್ಲಿ ಹೈಕೋರ್ಟ್‌ನ ಸಮನ್ವಯ ಪೀಠವು ಪ್ರಕರಣದ ತನಿಖೆಯಲ್ಲಿ ವಿಳಂಬದ ಬಗ್ಗೆ ದೆಹಲಿ ಪೊಲೀಸರನ್ನು ಪ್ರಶ್ನಿಸಿತ್ತು ಮತ್ತು ಸಂಬಂಧಿತ ಉಪ ಪೊಲೀಸ್ ಆಯುಕ್ತರ ಸಹಿಯೊಂದಿಗೆ ವಿವರವಾದ ಸ್ಥಿತಿ ವರದಿಯನ್ನು ಕೇಳಿತ್ತು.
ಇದನ್ನೂ ಓದಿ : ಡಿಸಿಎಂ ಸ್ವಕ್ಷೇತ್ರದಲ್ಲಿ ದಲಿತ ಯುವಕನ ಕೈ ಕತ್ತರಿಸಿದ ಬಲಾಢ್ಯ ಜಾತಿ ಗುಂಪು; ಗಡಿಪಾರಾಗಿದ್ದ ರೌಡಿಶೀಟರ್‌ನಿಂದ ದುಷ್ಕೃತ್ಯ


