ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ವಾಯುಮಾಲಿನ್ಯದಿಂದಾಗಿ ದಟ್ಟ ಹೊಗೆ ಆವರಿಸಿಕೊಂಡು ಜನರಿಗೆ ಉಸಿರುಗಟ್ಟಿಸುವ ವಾತಾವರಣದಿಂದಾಗಿ ಆರೋಗ್ಯ ತುರ್ತು ಪರಿಸ್ಥಿತಿ ಉಂಟಾಗಿದ್ದು, ಲಾಕ್ ಡೌನ್ ಅನ್ನು ಶುಕ್ರವಾರ ಜಾರಿ ಮಾಡಲಾಗಿದೆ.
ವಾರದಲ್ಲಿ ಮೂರು ದಿನಗಳ ಕಾಲ ಲಾಹೋರ್ ಮತ್ತು ಮುಲ್ತಾನ್ ನಗರಗಳಲ್ಲಿ ಈ ಲಾಕ್ ಡೌನ್ ಅನ್ನು ಘೋಷಿಸಲಾಗಿದೆ. ಈ ವಾತಾವರಣದಿಂದಾಗಿ ಅಂದಾಜು 20ರಿಂದ25 ಲಕ್ಷ ಜನರು ಅನಾರೋಗ್ಯಕ್ಕೆ ತುತ್ತಾಗಿರುವುದಾಗಿ ವರದಿಯಾಗಿದೆ.
ಪರಿಸ್ಥಿತಿ ಕೈ ಮೀರಿರುವ ಕಾರಣ ಪಂಜಾಬ್ ಪ್ರಾಂತ್ಯದ ಮುಲ್ತಾನ್ ಮತ್ತು ಲಾಹೋರ್ ನಗರಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನದ ಮಾಹಿತಿ ಮತ್ತು ಪರಿಸರ ಸಂರಕ್ಷಣೆ ಸಚಿವೆ ಮರಿಯುಮ್ ಔರಂಗಜೇಬ್ ಮಾಹಿತಿ ನೀಡಿದ್ದಾರೆ.
ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಿದೆ. ಒಂದು ವಾರಗಳ ಕಾಲ ಶಾಲೆಗಳಿಗೆ ರಜೆ ನೀಡಲಾಗಿದೆ. ಮುಂದಿನ ಒಂದೆರಡು ದಿನಗಳ ಕಾಲ ಈ ಪರಿಸ್ಥಿತಿಯ ಸಾಧಕ ಬಾಧಕಗಳನ್ನು ಕಾದು ನೋಡುತ್ತೇವೆ. ನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇವೆ. ಈ ಪರಿಸ್ಥಿತಿಯು ತಿಂಗಳಗಟ್ಟಲೆ ಮುಂದುವರಿಯುವ ಸಾಧ್ಯತೆ ಇರುವುದು ಕಂಡುಬರುತ್ತಿದೆ ಎಂದು ಸಚಿವೆ ತಿಳಿಸಿದ್ದಾರೆ.
ವಾಹನಗಳಿಂದುಂಟಾಗುವ ವಾಯುಮಾಲಿನ್ಯವನ್ನು ನಿಯಂತ್ರಿಸುವುದಕ್ಕಾಗಿ ದೀರ್ಘಾಕಾಲಿಕ ತಂತ್ರಗಳನ್ನು ಕಂಡುಕೊಳ್ಳಲಾಗುವುದು. ಪೆಟ್ರೋಲ್ ಪಂಪ್ ಗಳಲ್ಲಿನ ಅಯಿಲ್ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಪರಿಶೀಲನೆ ನಡೆಸಲಾಗುವುದು ಎಂದು ಸಚಿವೆ ಹೇಳಿದ್ದಾರೆ.
ಈ ನಗರಗಳ ವೈದ್ಯಕೀಯ ಸಿಬ್ಬಂದಿಗಳ ರಜೆಯನ್ನು ಕಡಿತಗೊಳಿಸಲಾಗಿದೆ. ಇಲ್ಲಿನ ವಾಯು ಗುಣಮಟ್ಟ ಸೂಚ್ಯಂಕವು 600ರ ಗಡಿ ದಾಟಿದೆ. ಇದು 300ನ್ನು ದಾಟಿದರೆ, ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಹೆಚ್ಚಿನ ಸಂಖ್ಯೆಯ ವಾಹನಗಳು, ನಿರ್ಮಾಣ ಮತ್ತು ಕೈಗಾರಿಕಾ ಚಟುವಟಿಕೆಗಳು ಹಾಗೂ ಕೃಷಿ ತ್ಯಾಜ್ಯಗಳ ಸುಡುವಿಕೆಯಿಂದ ಹೊಗೆಯು ಹೆಚ್ಚಾಗಿದೆ ಎಂದು ವರದಿಯಾಗಿದೆ.
ಜಾಗತೀಕ ತಾಪಮಾನಕ್ಕೆ ಸಂಬಂಧಿಸಿದಂತೆ ನವೆಂಬರ್ 11ರಿಂದ 20 ರವರೆಗೆ ನಡೆಯುತ್ತಿರುವ ಶೃಂಗಸಭೆಯ ಹಿನ್ನಲೆಯಲ್ಲಿ ವಾಯುಮಾಲಿನ್ಯ ಸಂಬಂಧಿಸಿ ಪಾಕ್ ನಲ್ಲಿ ಲಾಕ್ ಡೌನ್ ಘೋಷಣೆ ಹಲವು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ…ಪಾಕಿಸ್ತಾನದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ: ಲಾಕ್ ಡೌನ್ ಘೋಷಣೆ


