| ಬಿ.ಚಂದ್ರೇಗೌಡ |
ಲಂಕೇಶ್ ಏನೆಂದು ಇಡಿಯಾಗಿ ಗ್ರಹಿಸಿ ಆಗಾಗ್ಗೆ ಮನಸ್ತಾಪದೊಂದಿಗೆ ಬದುಕಿದವರು ಶೂದ್ರ ಶ್ರೀನಿವಾಸ್. ಆದ್ದರಿಂದಲೇ ಅವರ ಬದುಕಿನ ಬಹುಭಾಗ ಲಂಕೇಶ್ ಮೋಹಕ ರೂಪಕಗಳಲ್ಲಿ ದಾಖಲಾಗಿರುವುದು. ಹಾಗೆ ನೋಡಿದರೆ ಲಂಕೇಶ್ ಎಂಬ ದೈತ್ಯ ಪ್ರತಿಭೆಯ ಒಡನಾಟವಿದ್ದವರೆಲ್ಲಾ, ಒಂದೊಂದು ಕೃತಿಯನ್ನ ಹೊರತಂದರೆ ಮಾತ್ರ ಲಂಕೇಶ್ ಇಡಿಯಾಗಿ ಸಿಕ್ಕಬಲ್ಲರು ಅನ್ನಿಸುತ್ತೆ.
ಶೂದ್ರ ಶ್ರೀನಿವಾಸ್ ಕಳೆದ ಅರ್ಧ ಶತಮಾನದಿಂದ ಕನ್ನಡದ ಸಾಂಸ್ಕೃತಿಕ ಲೋಕದ ಸಂಚಾಲಕರಂತಿದ್ದವರು. ಶೂದ್ರ ಪತ್ರಿಕೆ ನಡೆಸುತ್ತಲೇ ಪತ್ರಿಕೆಯನ್ನು ಬಗಲಚೀಲದಲ್ಲಿ ತುಂಬಿಕೊಂಡು ಚಂದಾದಾರರನ್ನ ಮಾಡುತ್ತ ಪತ್ರಿಕೆಯಲ್ಲಿ ಸಾಹಿತಿಗಳ ಸಂವಾದ ಏರ್ಪಡಿಸುತ್ತಾ, ಎಲ್ಲಾ ಒಳ್ಳೆಯ ಬರಹಗಾರರ ನಡುವೆ ಕೊಂಡಿಯಂತಿದ್ದವರು. ಅವರ ನಿರಂತರವಾದ ಚಟುವಟಿಕೆಯ ಕೇಂದ್ರಬಿಂದು ಲಂಕೇಶರಾಗಿದ್ದರು. ವಿದ್ಯಾರ್ಥಿ ದಿಸೆಯಲ್ಲೇ ಲಂಕೇಶರ ಆಪ್ತ ಶಿಷ್ಯರಾದ ಶೂದ್ರಶ್ರೀ ಲಂಕೇಶರ ಕಡೇ ಗಳಿಗೆಯವರೆಗೂ ಜೊತೆಯಲ್ಲಿದ್ದವರು. ಆ ಕಾರಣವಾಗಿ ಅವರು ಬರೆದಿರುವ “ಲಂಕೇಶ್ ಮೋಹಕ ರೂಪಕಗಳ ನಡುವೆ” ಎಂಬ ಕೃತಿ. ಲಂಕೇಶರ ಬಗೆಗೆ ಪೂರ್ವಾಗ್ರಹ ಪೀಡಿತರಾಗಿ ದೂರ ಇದ್ದವರೆಲ್ಲಾ ಓದಿ ತಮ್ಮ ಅಭಿಪ್ರಾಯಗಳ ತಿದ್ದಿಕೊಂಡು ಚಿಂತಿಸುವ ಕೃತಿಯಾಗಿದೆ. ನಾಲ್ಕೈದು ದಶಕಗಳ ಕರ್ನಾಟಕದ ಸಾಂಸ್ಕೃತಿಕ ಲೋಕದ ಘಟನೆಗಳ ಸರಮಾಲೆಯೇ ಈ ಕೃತಿಯಲ್ಲಿ ದಟೈಸಿದೆ. ಲಂಕೇಶರ ಬಗ್ಗೆ ಈಚೆಗೆ ಒಂದೆರಡು ಕೃತಿ ಮತ್ತು ಕತೆಗಳೂ ಬಂದಿವೆ. ಈ ಬರಹಗಾರರ ಮೂಲವೆಲ್ಲಾ ಒಂದೇ ಎಂಬುದನ್ನ ನೋಡಿದಾಗ ತರಡಿಲ್ಲದ ನರಿಗಳು ಸಿಂಹ ತೀರಿಕೊಂಡ ನಂತರ ಊಳಿಟ್ಟಂತಿದೆ.
ಅವುಗಳೆಲ್ಲಾ ಶೂದ್ರಶ್ರೀಯವರ ಈ ಪುಸ್ತಕವನ್ನ ಓದಿ ತಮ್ಮ ಪೂರ್ವಗ್ರಹಗಳನ್ನ ತಿದ್ದಿಕೊಳ್ಳುವುದು ಅವುಗಳ ಆರೋಗ್ಯಕ್ಕೆ ಒಳ್ಳೆಯದು. ಮುಖ್ಯವಾಗಿ ಲಂಕೇಶರು ಬದುಕಿದ್ದಾಗ ಅವರ ಮೇಲೆ ಸ್ಪೆಷಲ್ ಸಂಚಿಕೆಗಳೇ ಬಂದವು. ಟೀಕೆಗಳು ನಿರಂತರವಾಗಿದ್ದವು ಅವುಗಳನ್ನೆಲ್ಲಾ ತಡೆದುಕೊಳ್ಳುವ ಶಕ್ತಿ ಲಂಕೇಶ್ ಪ್ರತಿಭೆಗಿತ್ತು.
ನನಗನ್ನಿಸಿದಂತೆ ಶೂದ್ರ ಶ್ರೀನಿವಾಸರಷ್ಟು ಲಂಕೇಶ್ ಸಮೀಪ ಹೋದವರ್ಯಾರು ಇಲ್ಲ. ಅವರೆಲ್ಲಾ ಕಷ್ಟಕಾಲದಲ್ಲಿ ಅವರ ಜೊತೆಯಿದ್ದವರು. ಅವರು ರೂಪಿಸುವ ಕಾರ್ಯಕ್ರಮಗಳ ರೂವಾರಿಯಾಗಿದ್ದರು. ಲಂಕೇಶ್ ತೀರಿಕೊಂಡ ನಂತರ ಶೂದ್ರಶ್ರೀ ಕತೆಯೇನು ಎಂದು ನಾವೆಲ್ಲಾ ನಗುತ್ತಿದ್ದೆವು. ಆದರೆ ಲಂಕೇಶ್ ಶೂದ್ರಶ್ರೀಗೆ ಸಂಜೆ ತಲುಪಬಹುದಾದ ನಿಲ್ದಾಣವಾಗಿದ್ದರು. ಉಳಿದಂತೆ ಅವರು ಹಗಲು ಸಂಚಾರಿಯಾಗಿ ತಮ್ಮ ಲೋಕವನ್ನ ವಿಸ್ತರಿಸಿಕೊಂಡಿದ್ದರು. ಆದ್ದರಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಒಂದು ಭಾಗವೇ ಆಗಿದ್ದರು.
ಶೂದ್ರಶ್ರೀ ಲಂಕೇಶ್‍ರಿಗೆ ಎಷ್ಟು ಆಪ್ತರೆಂಬುದು ನಮಗೆ ಗೊತ್ತಿರಲಿಲ್ಲ. ಅವರು ತಮ್ಮ ಕೃತಿಯೊಂದನ್ನ ಶೂದ್ರಶ್ರೀಗೆ ಅರ್ಪಿಸಿದಾಗ “ಏನ್ಸಾರ್ ಒಳ್ಳೆ ಪುಸ್ತಕ ತಗಂಡೋಗಿ ಶೂದ್ರನಿಗೆ ಅರ್ಪಿಸಿದ್ದೀರಲ್ಲಾ” ಎಂದಾಗ “ಆತ ತನ್ನ ಜೀವಕ್ಕೆ ನೆರವಾದವನು” ಎಂದು ನಮ್ಮ ಬಾಯಿ ಮುಚ್ಚಿಸಿದ್ದರು. ಮುಂದೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ, ಆ ಹಣವನ್ನ ಯಾರಿಗೆ ಕೊಡುವುದೆಂದು ಅವರು ಯೋಚಿಸುತ್ತಿದ್ದಾಗ ನಾನು “ಶಿವಮೊಗ್ಗದ ಶಾರದಾ ಅಂಧವಿಕಾಸ ಕೇಂದ್ರಕ್ಕೆ ಕೊಡಿ ಸಾರ್” ಎಂದೆ. ಯೋಚಿಸಿದ ಅವರು “ಬೇಡಿ, ಶೂದ್ರನಿಗೆ ಕೊಡ್ತೀನಿ” ಎಂದರು. ಶೂದ್ರಶ್ರೀ ಅರ್ಥಪೂರ್ಣವಾಗಿ ಸಾಹಿತ್ಯದ ಗೋಷ್ಠಿಯನ್ನೇರ್ಪಡಿಸಿ ಆ ದುಡ್ಡನ್ನು ಖರ್ಚು ಮಾಡಬಹುದೆಂದು ಅವರ ತೀರ್ಮಾನ. ನಮಗಂತೂ ಶೂದ್ರಶ್ರೀ ಲಂಕೇಶರಿಗೆ ಎಷ್ಟು ಆಪ್ತನೆಂಬುದರ ಅರಿವಾಯ್ತು. ನಮ್ಮಲ್ಲಿರುವ ಹೊಟ್ಟೆಕಿಚ್ಚನ್ನು ಗ್ರಹಿಸಿ ಲಂಕೇಶ್ ಶಮನ ಮಾಡುತ್ತಿದ್ದರು. ತೀರ ಕಿಡಿಗೇಡಿಗಳಾಗಿದ್ದರೆ ಅವರವರಿಗೇ ಹಚ್ಚಿಬಿಡುತ್ತಿದ್ದರು!
ಶೂದ್ರಶ್ರೀ ಲಂಕೇಶರನ್ನ ಆರಾಧಿಸಿದರೂ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ತಿರುಗಿ ಬೀಳುವ ವ್ಯಕ್ತಿಯಾಗಿದ್ದರು. ಒಮ್ಮೆ ಬಸವನಗುಡಿಯ ಪತ್ರಿಕಾಲಯದಲ್ಲಿ ಪತ್ರಿಕೆ ಮೀಟಿಂಗ್ ನಡೆಯುವಾಗ ಮಲಯಾಳಿ ಲೇಖಕರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಚರ್ಚೆಯಲ್ಲಿ ಲಂಕೇಶ್ ರೇಗಿದ್ದಕ್ಕೆ ಶೂದ್ರಶ್ರೀ ನಿರ್ಗಮಿಸುತ್ತ ಎಲ್ಲರನ್ನ ಬೈದು ಹೋದರು. ನಾನು ಇನ್ನಿವರ ಸಂಬಂಧ ಮುಗಿಯಿತು ಎಂದುಕೊಂಡರೆ, ಅದೇವಾರ ಶೂದ್ರಶ್ರೀ ಲಂಕೇಶರ ಎದುರು ಕೂತು ಹರಟೆ ಹೊಡೆಯುತ್ತಿದ್ದರು.
ಇಂತಹ ನೂರಾರು ಮನಸ್ತಾಪಗಳು ನಡೆದಿವೆ. ಅದಕ್ಕೆ ಕಾರಣಗಳನ್ನ ಪತ್ರ ಮುಖೇನ ತಿಳಿಸುತ್ತಿದ್ದ ಶೂದ್ರಶ್ರೀ. ಇಷ್ಟೊತ್ತಿಗೆ ಮೇಷ್ಟ್ರು ಓದಿಕೊಂಡಿರಬಹುದು ಎಂದು ಆಫೀಸಿಗೋಗಿ ಇಣುಕಿದರೆ, ಬಾ ಎಂದು ಲಂಕೇಶ್ ಹಸುವಿನ ಕರು ಕರೆದಂತೆ ಕರೆಯುತ್ತಿದ್ದರು. ಡಿ.ಆರ್ ನಾಗರಾಜು ಬರೆದ ಕೃತಿಯೊಂದನ್ನು ಲಂಕೇಶ್ ಕಟುವಾಗಿ ವಿಮರ್ಶೆ ಮಾಡಿದಾಗ ಅದಕ್ಕೆ ನಾಗರಾಜ್ ಶೂದ್ರರಲ್ಲಿ ಉತ್ತರ ಕೊಟ್ಟರು. ಆಗ ನಾಗರಾಜ್ ಪರವಿದ್ದ ಶೂದ್ರಶ್ರೀ ಲಂಕೇಶ್‍ರಿಂದ ದೂರವಿದ್ದರು. ಆಗೊಮ್ಮೆ ಡಿ.ಆರ್. ನಾಗರಾಜ್ ಹಠಾತ್ತನೆ ಕಾಣಿಸಿಕೊಂಡು “ಈ ಲಂಕೇಶ್ ಬಿಟ್ಟಿರಕ್ಕಾಗಲ್ಲ ಗೌಡ್ರೆ” ಎಂದುಕೊಂಡು ಒಳ ಬಂದರು. ಆಗ ಲಂಕೇಶ್ “ಎಲ್ಲಿ ಅವುನು” ಎಂದರು. “ಬರಲಿಲ್ಲ ಸಾರ್ ಇಪ್ಪತ್ತೆರಡು ದಿನ ಆಯ್ತು ಮೇಷ್ಟ್ರು ನೋಡಿ ಅಂತ ಡಲ್ಲಾಗಿದ್ದ” ಎಂದು ನಕ್ಕರು. “ನೋಡು ದಿನವೂ ಎಣಿಸ್ಸವುನೇ” ಎಂದು ಲಂಕೇಶ್ ನಕ್ಕರು. ಇಂತೆಲ್ಲಾ ಸನ್ನಿವೇಶಗಳು ಶೂದ್ರಶ್ರೀ ಬರೆದ “ಲಂಕೇಶರ ಮೋಹಕ ರೂಪದಲ್ಲಿ” ದಟೈಸಿವೆ.
ಲಂಕೇಶರಿಂದ ಟೀಕಿಸಿಕೊಂಡವರು ಅವಮಾನಗೊಂಡವರು ಮತ್ತೆ ಅವರ ಬಳಿ ಸುಳಿಯದಂತೆ ಹೊರಟುಹೋಗುತ್ತಿದ್ದರೆ, ಲಂಕೇಶರ ಆ ಕ್ಷಣದ ಸಿಟ್ಟು ಗ್ರಹಿಸಿದವರು ಅವರ ಸಂಬಂಧವನ್ನ ಕಳೆದುಕೊಳ್ಳದೆ ಬಾಳಿಕೆ ಬಂದರು. ಲಂಕೇಶ್ ಏನೆಂದು ಇತಿಯಾಗಿ ಗ್ರಹಿಸಿ ಆಗಾಗ್ಗೆ ಮನಸ್ತಾಪದೊಂದಿಗೆ ಬದುಕಿದವರು ಶೂದ್ರ ಶ್ರೀನಿವಾಸ್. ಆದ್ದರಿಂದಲೇ ಅವರ ಬದುಕಿನ ಬಹುಭಾಗ ಲಂಕೇಶ್ ಮೋಹಕ ರೂಪಕಗಳಲ್ಲಿ ದಾಖಲಾಗಿರುವುದು.
ಹಾಗೆ ನೋಡಿದರೆ ಲಂಕೇಶ್ ಎಂಬ ದೈತ್ಯ ಪ್ರತಿಭೆಯ ಒಡನಾಟವಿದ್ದವರೆಲ್ಲಾ, ಒಂದೊಂದು ಕೃತಿಯನ್ನ ಹೊರತಂದರೆ ಮಾತ್ರ ಲಂಕೇಶ್ ಇಡಿಯಾಗಿ ಸಿಕ್ಕಬಲ್ಲರು ಅನ್ನಿಸುತ್ತೆ. ಈ ಕೃತಿಯನ್ನ ಓದಿ ಮುಗಿಸಿದಾಗ ಗಾಢವಿಷಾದವೊಂದು ನಮ್ಮನ್ನು ಮುತ್ತುತ್ತದೆ. ಏಕೆಂದರೆ ಅವರ ಎದುರು ಕೂತು ಉಗ್ರ ಪ್ರಾಮಾಣಿಕರಂತೆ ಮಾತನಾಡುತ್ತ ಬರೆದವರೆಲ್ಲಾ ನೈತಿಕವಾಗಿ ಹಾಳಾಗಿಹೋದರು, ಮತಾಂಧರಾದರು, ಶಾಸ್ತ್ರ ಹೇಳುವವರಾದರು, ದೇವಿ ಆರಾಧಕರಾದರು. ಲಂಕೇಶರಿಂದ ಏನನ್ನ ಪಡೆಯದ ಪ್ರಾಮಾಣಿಕರು ತೊಂದರೆಯಲ್ಲಿದ್ದಾರೆ. ಬೀದಿಯಲ್ಲಿದ್ದಾರೆ.
ಶೂದ್ರ ಶ್ರೀನಿವಾಸರು, ಲಂಕೇಶರು ಕಟ್ಟಿದ ಸಾಮ್ರಾಜ್ಯದ ಒಂದು ಭಾಗವಾದ ಮನೆ, ತೋಟ, ತೋಟದ ಮನೆ, ಅಲ್ಲಿ ನಡೆದ ಅವರ ಮತ್ತು ಪತ್ರಿಕೆಯ ಹುಟ್ಟುಹಬ್ಬ, ಯಕ್ಷಗಾನ, ತಾಳಮದ್ದಳೆ, ಉತ್ತರ ಕರ್ನಾಟಕದ ಸಂಗ್ಯಾಬಾಳ್ಯಾ ನಾಟಕ, ಸುಭದ್ರಮ್ಮನವರ ಸಂಗೀತ ಇವನ್ನೆಲ್ಲಾ ಕಣ್ತುಂಬಿಕೊಂಡು ಪರಭಾರೆಯಾದ ಆ ಜಾಗದಲ್ಲಿ ಲಂಕೇಶರ ಸಮಾಧಿ ಸ್ಥಿತಿ ನೋಡಿ ಆರ್ದತೆಯಿಂದ ದಾಖಲಿಸಿದ್ದಾರೆ. ಆದರೇನು ಮಾಡುವುದು ಲಂಕೇಶರು ತಮ್ಮ ಜೀವನ ಚರಿತ್ರೆ ಹುಳಿಮಾವಿನ ಮರದಲ್ಲಿ ತಮ್ಮ ಮಗನನ್ನ “ಮುಗ್ಧ” ಎಂದು ದಾಖಲಿಸಿದ್ದಾರೆ. ಈ ಮುಗ್ಧನಿಗೆ ಲಂಕೇಶ್ ಏನು ಎಂಬುದೇ ತಿಳಿದಿರಲಿಲ್ಲ. ಅದಕ್ಕಾಗಿ ಸಿನಿಮಾ ತೆಗೆಯಲು ಹೊರಟಾಗ ಅವನಿಗೆ ಕಾಣಿಸಿದ್ದು ತೋಟ ಮತ್ತು ಮನೆ. ಅವನ್ನು ಕೊಳ್ಳುವವರು ಕೇಳಿದ ರೇಟಿಗೆ ಕೊಟ್ಟ ಮುಗ್ದ ಹುಡುಗ.
ಹಾಗೆಯೇ ಲಂಕೇಶ್, ಲವ್ಲಿ ಲವ್ಲಿ ಎಂದುಕೊಂಡು ತನ್ನ ಅಭಿರುಚಿಗೆ ತಕ್ಕಂತೆ ಮನೆಕಟ್ಟಿಸಿ ಅದಕ್ಕೆ ‘ನವಿಲು’ ಎಂದು ಹೆಸರಿಟ್ಟು, ಆಪ್ತ ಗೆಳೆಯರನ್ನ ಕರೆದು ಔತಣಕೊಟ್ಟ ಮನೆ ಇಂದು ಅವರದ್ದಾಗಿ ಉಳಿದಿಲ್ಲ. ಅಲ್ಲದೆ, ಕರ್ನಾಟಕದ ಜನ ಪತ್ರಿಕೆ ಕೊಂಡು ಓದಿದ ಫಲವಾಗಿ ಮತ್ತು ಕೊಟ್ಟಷ್ಟು ಸಂಭಾವನೆ ಪಡೆದ ಲೇಖಕರ ಉದಾರ ಮನಸ್ಸಿನ ಫಲವಾಗಿ, ರೂಪುಗೊಂಡಿದ್ದ ಮನೆ ಮಠ ತೋಟ ಇದ್ಯಾವುದೂ ಇಂದು ಉಳಿದಿಲ್ಲ. ಇದಕ್ಕಿಂತ ಭೀಕರ ಸಂಗತಿ ಯಾವುದೆಂದರೆ, ಅವರ ಸಮಾಧಿಯ ಸ್ಥಿತಿ. ಎಂದಾದರು ಕಾಣೆಯಾಗಲು ಕಾಯುತ್ತಿರುವ ಈ ಸಮಾಧಿಯನ್ನು ಲಂಕೇಶರ ಊರಾದ ಕೊನವಳ್ಳಿಯ ಜನ, ನಾವೇ ತಂದು ಮರು ಸಮಾಧಿ ಮಾಡುತ್ತೇವೆಂದು ಹೋರಾಡಿದ್ದರು. ಅವರಿಗೆ ಲಂಕೇಶರಿಂದ ಏನೂ ಆಗಿರಲಿಲ್ಲ. ಆದರೂ ಅವರ ಉತ್ಸಾಹ ಕಂಡು ಆಶ್ಚರ್ಯಪಡುವಂತಾಯ್ತು.
ತುಂಬ ಲವಲವಿಕೆಯಿಂದ ಓದಿಸುತ್ತಾ ಹೋದ ಶೂದ್ರಶ್ರೀಯವರ “ಲಂಕೇಶ್ ಮೋಹಕ ರೂಪಕಗಳ ನಡುವೆ” ಕೃತಿ ಗಾಢ ವಿಷಾದದೊಂದಿಗೆ ಮುಗಿಯುತ್ತದೆ. ನಮ್ಮ ನಡುವೆ ಆಗಿಹೋದ ಇತಿಹಾಸವೊಂದನ್ನ ಶೂದ್ರಶ್ರೀ ಪ್ರಾಮಾಣಿಕವಾಗಿ ಒಂಥರದ ಭಾವುಕತೆಯಲ್ಲಿ ನಿರೂಪಿಸಿದ್ದಾರೆ. ತುಂಬ ವಸ್ತುನಿಷ್ಠವಾದ ರಾಜೇಂದ್ರ ಚೆನ್ನಿಯವರ ಮುನ್ನುಡಿ ಕೃತಿ ವಜೆಯನ್ನ ಹೆಚ್ಚಿಸಿದೆ. ಶೂದ್ರ ಶ್ರೀನಿವಾಸರ ಈವರೆಗಿನ ಬರವಣಿಗೆಗೆ ಈ ರೂಪಕ ಮೆರಗು ಕೊಟ್ಟಂತಿದೆ.


