‘ರಫೇಲ್ ಜೆಟ್’ ಕುರಿತ ವರದಿಯ ಬಗ್ಗೆ ದೂರು ಬಂದ ಹಿನ್ನೆಲೆ, ತಾಂತ್ರಿಕ ಮಿತಿಯ ಕಾರಣ ಭಾರತದಲ್ಲಿ ನಮ್ಮ ವೆಬ್‌ಸೈಟ್ ನಿರ್ಬಂಧಿಸಲಾಗಿತ್ತು ಎಂಬುವುದಾಗಿ ಕೇಂದ್ರ ಸರ್ಕಾರ ಮೇ 9, ಶುಕ್ರವಾರ ಹೇಳಿದೆ ಎಂದು ಸ್ವತಂತ್ರ ಸುದ್ದಿ ಸಂಸ್ಥೆ ‘ದಿ ವೈರ್’ನ ಸಂಪಾದಕರು ತಿಳಿಸಿದ್ದಾರೆ.
ವೆಬ್‌ಸೈಟ್ ನಿರ್ಬಂಧಕ್ಕೆ ಕಾರಣವಾದ ವರದಿಯನ್ನು ಪ್ರಸ್ತುತ ತೆಗೆದು ಹಾಕಿದ್ದೇವೆ. ಆದರೂ, ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಈ ಅಸಂವಿಧಾನಿಕ ದಾಳಿಗೆ ಪರಿಹಾರಗಳನ್ನು ಹುಡುಕುತ್ತೇವೆ ಎಂದು ದಿ ವೈರ್ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಹೇಳಿದ್ದಾರೆ.
ಮೇ 9, ಶುಕ್ರವಾರದಂದು ಭಾರತದಲ್ಲಿ ದಿ ವೈರ್ ವೆಬ್‌ಸೈಟ್‌ಗೆ ನಿರ್ಬಂಧ ವಿಧಿಸಿದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸಿದ್ಧಾರ್ಥ್ ವರದರಾಜನ್ ಅವರು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ (ಎಂಐಬಿ) ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ (ಎಂಇಐಟಿವೈ) ಪತ್ರ ಬರೆದು ವೆಬ್‌ಸೈಟ್ ಅನ್ನು ಏಕೆ ನಿರ್ಬಂಧಿಸಲಾಗಿದೆ ಎಂಬುದರ ಕುರಿತು ಸ್ಪಷ್ಟೀಕರಣವನ್ನು ಕೋರಿದ್ದರು.
ಅದಕ್ಕೆ ಉತ್ತರಿಸಿದ್ದ ಎಂಐಬಿ, ತಾಂತ್ರಿಕ ಮಿತಿಗಳಿಂದಾಗಿ ಸಂಪೂರ್ಣ ವೆಬ್‌ಸೈಟ್ ಅನ್ನು ನಿರ್ಬಂಧಿಸಲಾಗಿದೆ. http ವೆಬ್‌ಸೈಟ್‌ಗಳಲ್ಲಿ ನಿರ್ದಿಷ್ಟ ಉಪ-ಪುಟಗಳನ್ನು ಅಲ್ಲ, ಪೂರ್ಣ ಡೊಮೇನ್‌ಗಳನ್ನು ಮಾತ್ರ ನಿರ್ಬಂಧಿಸಬಹುದು. ನಿರ್ಬಂಧಕ್ಕೆ ಕಾರಣವಾದ ಕಂಟೆಂಟ್ ಬಗ್ಗೆ ಕೈಗೊಂಡ ಕ್ರಮಗಳನ್ನು ತಿಳಿಸಿ, ಅದು ನಮಗೆ ನಿರ್ಬಂಧ ತೆಗೆದು ಹಾಕಲು ಸಹಕಾರಿಯಾಗುತ್ತದೆ ಎಂಬುವುದಾಗಿ ಹೇಳಿದೆ ಎಂದು ಸಿದ್ದಾರ್ಥ್ ತಿಳಿಸಿದ್ದಾರೆ.
Statement by The Wire on the Government's Blocking and Unblocking of its Website
Read here: https://t.co/c65w2vHkq2
[1/10]👇 pic.twitter.com/S1qDkRo9ma
— The Wire (@thewire_in) May 10, 2025
ವೆಬ್‌ಸೈಟ್ ಮೇಲಿನ ನಿರ್ಬಂಧವನ್ನು ತೆರವುಗೊಳಿಸುವುದು ನಮ್ಮ ಆದ್ಯತೆಯಾಗಿತ್ತು. ಹಾಗಾಗಿ, ಸರ್ಕಾರದ ಅನ್ಯಾಯದ ಬೇಡಿಕೆಯನ್ನು ಅನುಸರಿಸುವುದು ಬಿಟ್ಟು ನಮಗೆ ಬೇರೆ ದಾರಿ ಇರಲಿಲ್ಲ. ಹಾಗಾಗಿ, ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಗೆ ಭಾರತದ ಸಂವಿಧಾನದ ಅಡಿಯಲ್ಲಿ ಪರಿಹಾರ ಕಂಡುಕೊಳ್ಳುವ ಹಕ್ಕನ್ನು ನಮ್ಮಲ್ಲೇ ಉಳಿಸಿಕೊಂಡು, ಮೇ 9, ಶುಕ್ರವಾರ ರಾತ್ರಿ 10.40ಕ್ಕೆ ನಮ್ಮ ವರದಿಯನ್ನು ಸಾರ್ವಜನಿಕರಿಗೆ ಕಾಣದಂತೆ ತೆಗೆದು ಹಾಕಿರುವುದಾಗಿ ಸರ್ಕಾರಕ್ಕೆ ತಿಳಿಸಿದೆವು ಎಂದಿದ್ದಾರೆ.
ಕೇಂದ್ರ ಸರ್ಕಾರದ ಕ್ರಮವು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ನಾವು ಎಂಐಬಿಗೆ ತಿಳಿಸಿದ್ದೇವೆ. ಏಕೆಂದರೆ ಎಂಐಬಿ ಮೊದಲು ನಮಗೆ ನೋಟಿಸ್ ನೀಡಿ, ನಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ನೀಡಬೇಕಾಗಿತ್ತು. ವರದಿಯನ್ನು ತೆಗೆದು ಹಾಕುವಂತೆ ಸರ್ಕಾರದ ನೀಡಿದ್ದ ಸೂಚನೆಯನ್ನು ಪಾಲಿಸಲು ನಾವು ನಿರಾಕರಿಸಿದ್ದರೆ ಮಾತ್ರ ನಮ್ಮ ವೆಬ್‌ಸೈಟ್‌ಗೆ ನಿರ್ಬಂಧ ವಿಧಿಸಬಹುದಿತ್ತು ಎಂದು ಸಿದ್ದಾರ್ಥ್ ಹೇಳಿದ್ದಾರೆ.
ಮೇ 8ರಂದು ನಾವು ರಫೆಲ್ ಕುರಿತ ವರದಿ ಪ್ರಕಟಿಸಿದ್ದೆವು. ಅದಕ್ಕೂ ಕನಿಷ್ಠ 12 ಗಂಟೆಗಳ ಮೊದಲು ಸಿಎನ್‌ಎನ್ ಈ ಬಗ್ಗೆ ವರದಿ ಮಾಡಿತ್ತು. ಅದು ಈಗಲೂ ಇದೆ. ಭಾರತದಲ್ಲಿ ವ್ಯಾಪಕವಾಗಿ ಲಭ್ಯವಿದೆ. ನಮ್ಮ ಸುದ್ದಿಯನ್ನು ಮಾತ್ರ ಅಳಿಸಿಹಾಕಲು ಮತ್ತು ಪ್ರಕಟಗೊಂಡ 24 ಗಂಟೆಗಳ ನಂತರವೂ ಅದನ್ನು ತುರ್ತು ವಿಷಯವಾಗಿ ಪರಿಗಣಿಸಲು ಸರ್ಕಾರ ಏಕೆ ಬಯಸಿತ್ತು ಎಂಬುವುದು ನನಗೆ ಅರ್ಥವಾಗುತ್ತಿಲ್ಲ. ನಿರ್ಬಂಧ ವಿಧಿಸುವ ಮುನ್ನ ನಮಗೆ ಯಾವುದೇ ಸೂಚನೆ ನೀಡಿರಲಿಲ್ಲ. ಅಲ್ಲದೆ, ಸಂಪೂರ್ಣ ವೆಬ್‌ಸೈಟ್ ಅನ್ನು ನಿರ್ಬಂಧಿಸಲಾಗಿತ್ತು ಎಂದು ಸಿದ್ದಾರ್ಥ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತುರ್ತು ಪರಿಸ್ಥಿತಿಯಲ್ಲೂ ಕೂಡ ಕಾರ್ಯವಿಧಾನಗಳನ್ನು ಅನುಸರಿಸಬೇಕಾಗಿತ್ತು. ತುರ್ತು ಅಧಿಕಾರಗಳನ್ನು ಚಲಾಯಿಸುವಾಗಲೂ ಕೂಡ ಮೊದಲ ಹೆಜ್ಜೆ ಸಂಬಂಧಿತ ನಿಯಮಗಳ ಅಡಿಯಲ್ಲಿ ಸಂಬಂಧಪಟ್ಟ ಪಕ್ಷಕ್ಕೆ ನಿರ್ದೇಶನ ನೀಡುವುದಾಗಿದೆ. ನಾವು ಪತ್ರ ಬರೆದ ನಂತರವೂ ಏಳು ಗಂಟೆಗಳ ಕಾಲ ಎಂಐಬಿಉತ್ತರಿಸಿರಲಿಲ್ಲ ಎಂದು ಸಿದ್ದಾರ್ಥ್ ಹೇಳಿದ್ದಾರೆ.
ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021ರ ಅಡಿಯಲ್ಲಿ ರಚಿಸಲಾದ ಅಂತರ-ಇಲಾಖೆಯ ಸಮಿತಿಯ ಮುಂದೆ ತನ್ನ ಅಭಿಪ್ರಾಯ ಮತ್ತು ಸ್ಪಷ್ಟೀಕರಣಗಳನ್ನು ನೀಡಲು ದಿ ವೈರ್‌ಗೆ ಅವಕಾಶ ನೀಡಲಾಗುವುದು ಎಂದು ಎಂಐಬಿ ಪತ್ರದಲ್ಲಿ ತಿಳಿಸಿದೆ ಎಂದು ಸಿದ್ದಾರ್ಥ್ ಮಾಹಿತಿ ನೀಡಿದ್ದಾರೆ.
ಭಾರತದ 26 ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿಗೆ ಯತ್ನಿಸಿದ ಪಾಕಿಸ್ತಾನ: ಮಾಹಿತಿ ನೀಡಿದ ಸೇನೆ


