Homeಮುಖಪುಟಅದಾನಿ ಕುರಿತ ಪೋಸ್ಟ್ ತೆಗೆದು ಹಾಕಲು ಮಾಧ್ಯಮಗಳಿಗೆ ಆದೇಶ: ಎಡಿಟರ್ಸ್ ಗಿಲ್ಡ್ ಕಳವಳ

ಅದಾನಿ ಕುರಿತ ಪೋಸ್ಟ್ ತೆಗೆದು ಹಾಕಲು ಮಾಧ್ಯಮಗಳಿಗೆ ಆದೇಶ: ಎಡಿಟರ್ಸ್ ಗಿಲ್ಡ್ ಕಳವಳ

- Advertisement -
- Advertisement -

ಅದಾನಿ ಕುರಿತ ವಿಷಯಗಳನ್ನು ತೆಗೆದು ಹಾಕುವಂತೆ ಮಾಧ್ಯಮ ಸಂಸ್ಥೆಗಳಿಗೆ ಆದೇಶ ನೀಡಿರುವ ಬಗ್ಗೆ ಪತ್ರಕರ್ತರ ಸಂಘಟನೆ ‘ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ ತೀವ್ರ ಕಳವಳ ವ್ಯಕ್ತಪಡಿಸಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಮಂಗಳವಾರ (ಸೆಪ್ಟೆಂಬರ್ 16) ಎರಡು ಮಾಧ್ಯಮ ಸಂಸ್ಥೆಗಳು ಮತ್ತು ಹಲವು ಯೂಟ್ಯೂಬ್ ಚಾನೆಲ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದು, ಅದಾನಿ ಸಮೂಹವನ್ನು ಉಲ್ಲೇಖಿಸುವ ಒಟ್ಟು 138 ವಿಡಿಯೋಗಳು ಮತ್ತು 83 ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಆದೇಶಿಸಿದೆ ಎಂದು ವರದಿಯಾಗಿದೆ.

ಅದಾನಿ ಎಂಟರ್‌ಪ್ರೈಸಸ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ವಾಯುವ್ಯ ದೆಹಲಿ ಜಿಲ್ಲಾ ನ್ಯಾಯಾಲಯವು ಸೆಪ್ಟೆಂಬರ್ 6ರಂದು ಹೊರಡಿಸಿದ ಏಕಪಕ್ಷೀಯ ಆದೇಶವನ್ನು ಆಧರಿಸಿ ಈ ನಿರ್ದೇಶನ ನೀಡಲಾಗಿದೆ ಎಂದು ಮಂಗಳವಾರ ಬರೆದ ಪತ್ರದಲ್ಲಿ ಸಚಿವಾಲಯ ತಿಳಿಸಿರುವುದಾಗಿ ದಿ ವೈರ್ ವರದಿ ಮಾಡಿದೆ.

ಅಲ್ಲದೆ, ಗೌತಮ್ ಅದಾನಿ ಅವರ ಅದಾನಿ ಎಂಟರ್‌ಪ್ರೈಸಸ್ ಬಗ್ಗೆ ಮಾನನಷ್ಟಕರ ವಿಷಯಗಳನ್ನು ಪ್ರಕಟಿಸದಂತೆ ಪತ್ರಕರ್ತರಾದ ಪರಂಜೋಯ್ ಗುಹಾ ಠಾಕೂರ್ತಾ, ರವಿ ನಾಯರ್, ಅಬೀರ್ ದಾಸ್‌ಗುಪ್ತ, ಆಯಸ್ಕಾಂತ್ ದಾಸ್, ಆಯುಷ್ ಜೋಶಿ ಮತ್ತು ವೆಬ್‌ಸೈಟ್‌ಗಳಾದ ಪರಂಜೋಯ್ ಡಾಟ್ ಇನ್, ಅದಾನಿ ವಾಚ್ ಡಾಟ್ ಓಆರ್‌ಜಿ, ಮತ್ತು ಅದಾನಿ ಫೈಲ್ಸ್ ಡಾಟ್ ಕಾಮ್ ಡಾಟ್ ಎಯುಗೆ ಸೆಪ್ಟೆಂಬರ್ 6ರಂದು ನ್ಯಾಯಾಲಯ ನಿರ್ಬಂಧ ವಿಧಿಸಿದೆ ಎಂದು ಲೈವ್‌ಲಾ ವರದಿ ಮಾಡಿದೆ.

ದೆಹಲಿಯ ರೋಹಿಣಿ ನ್ಯಾಯಾಲಯದ ವಿಶೇಷ ಸಿವಿಲ್ ನ್ಯಾಯಾಧೀಶ ಅನುಜ್ ಕುಮಾರ್ ಸಿಂಗ್ ಅವರು ಅದಾನಿ ಎಂಟರ್‌ಪ್ರೈಸಸ್ ಪರವಾಗಿ ತಡೆಯಾಜ್ಞೆ ಹೊರಡಿಸಿದ್ದು, ಪ್ರತಿವಾದಿಗಳು ತಮ್ಮ ಲೇಖನಗಳು ಅಥವಾ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ವಿಷಯವನ್ನು ತೆಗೆದುಹಾಕುವಂತೆ ನಿರ್ದೇಶಿಸಿದ್ದಾರೆ ಎಂದಿದೆ.

ಮಂಗಳವಾರ ಪ್ರಕಟಣೆ ನೀಡಿರುವ ಎಡಿಟರ್ಸ್ ಗಿಲ್ಡ್, “ಅದಾನಿ ಎಂಟರ್‌ಪ್ರೈಸಸ್ Vs ಪರಂಜೋಯ್ ಗುಹಾ ಠಾಕೂರ್ತಾ ಮತ್ತು ಇತರರು ಪ್ರಕರಣದಲ್ಲಿ ರೋಹಿಣಿ ಜಿಲ್ಲಾ ನ್ಯಾಯಾಲಯವು ಇತ್ತೀಚೆಗೆ ನೀಡಿರುವ ಆದೇಶದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದೇವೆ. ಈ ಆದೇಶವು ಒಂಬತ್ತು ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು ಹಾಗೂ ಹೆಸರಿಸದ ಇತರರಿಗೆ ಕಂಪನಿಯ ಬಗ್ಗೆ ‘ಪರಿಶೀಲಿಸದ, ಆಧಾರರಹಿತ ಮತ್ತು ಮೇಲ್ನೋಟಕ್ಕೆ ಅವಹೇಳನಕಾರಿ’ ಎಂದು ಆರೋಪಿತ ವಿಷಯವನ್ನು ಪ್ರಕಟಿಸದಂತೆ ಅಥವಾ ಹಂಚಿಕೆ ಮಾಡದಂತೆ ‘ಜಾನ್ ಡೋ’ ಎಂಬ ತಡೆಯಾಜ್ಞೆಯನ್ನು ಏಕಪಕ್ಷೀಯವಾಗಿ ನೀಡಿದೆ” ಎಂದಿದೆ.

ಮುಂದುವರಿದು, “ಇದಕ್ಕಿಂತಲೂ ಗಂಭೀರವಾದ ವಿಷಯವೆಂದರೆ, ಈ ಆದೇಶವು ಕಾರ್ಪೊರೇಟ್ ಸಂಸ್ಥೆಗೆ (ಅದಾನಿ ಸಮೂಹ) ತಾನು ಅವಹೇಳನಕಾರಿ ಎಂದು ಭಾವಿಸುವ ಯಾವುದೇ ವಿಷಯದ ಯುಆರ್‌ಎಲ್‌ಗಳು ಮತ್ತು ಲಿಂಕ್‌ಗಳನ್ನು ಮಧ್ಯವರ್ತಿಗಳಿಗೆ ಅಥವಾ ಸರ್ಕಾರಿ ಸಂಸ್ಥೆಗಳಿಗೆ ಕಳುಹಿಸುವ ಅಧಿಕಾರವನ್ನು ನೀಡಿದೆ. ಅಂತಹ ವಿಷಯವನ್ನು 36 ಗಂಟೆಗಳ ಒಳಗೆ ತೆಗೆದುಹಾಕಲು ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಕಡ್ಡಾಯವಾಗಿ ಬದ್ಧರಾಗಿರುತ್ತಾರೆ” ಎಂದು ವಿವರಿಸಿದೆ.

“ಇದೇ ರೀತಿಯ ಕಳವಳಕಾರಿ ವಿಷಯವೆಂದರೆ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ವೇದಿಕೆಗಳಿಗೆ ನೋಟಿಸ್‌ ಜಾರಿಗೊಳಿಸಿದೆ, 138ಕ್ಕೂ ಹೆಚ್ಚು ಯೂಟ್ಯೂಬ್ ಲಿಂಕ್‌ಗಳನ್ನು ಮತ್ತು 83 ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ತೆಗೆದುಹಾಕಲು ಆದೇಶಿಸಿದೆ. ಈ ಕಾರ್ಯನಿರ್ವಾಹಕ ಅಧಿಕಾರದ ವಿಸ್ತರಣೆಯು ಖಾಸಗಿ ಸಂಸ್ಥೆಗೆ ತಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವ ವಿಷಯವು ಅವಹೇಳನಕಾರಿ ಎಂದು ನಿರ್ಧರಿಸುವ ಅಧಿಕಾರವನ್ನು ಪರಿಣಾಮಕಾರಿಯಾಗಿ ನೀಡಿದೆ, ಇದು ವಿಷಯವನ್ನು ತೆಗೆದುಹಾಕಲು ಆದೇಶಿಸುವ ಅಧಿಕಾರವನ್ನು ವಿಸ್ತರಿಸುತ್ತದೆ” ಎಂದಿದೆ.

“ಒಂದು ಕಾರ್ಪೊರೇಟ್ ಸಂಸ್ಥೆಗೆ ಇಂತಹ ವ್ಯಾಪಕ ಅಧಿಕಾರ ನೀಡಿರುವುದು, ಜೊತೆಗೆ ಸಚಿವಾಲಯ ವಿಷಯವನ್ನು ತೆಗೆದುಹಾಕಲು ಆದೇಶ ನೀಡಿರುವುದು ಸೆನ್ಸಾರ್‌ಶಿಪ್‌ನತ್ತ ಒಂದು ಹೆಜ್ಜೆಯಾಗಿದೆ. ಇವು ಕಾನೂನುಬದ್ಧ ವರದಿಗಾರಿಕೆ, ವಿಮರ್ಶೆ ಮತ್ತು ವ್ಯಂಗ್ಯವನ್ನು ತಡೆಯುವ ಅಪಾಯವನ್ನು ಒಡ್ಡುತ್ತವೆ, ಹಾಗೂ ಭಾಷಣ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ದುರ್ಬಲಗೊಳಿಸುತ್ತವೆ” ಎಂದು ಎಡಿಟರ್ಸ್ ಗಿಲ್ಡ್ ಕಳವಳ ವ್ಯಕ್ತಪಡಿಸಿದೆ.

“ಮಾನನಷ್ಟ ಆರೋಪಗಳನ್ನು ಸೂಕ್ತ ಕಾನೂನು ಪ್ರಕ್ರಿಯೆಯ ಮೂಲಕ ಪರಿಹರಿಸಬೇಕು, ಏಕಪಕ್ಷೀಯ ತಡೆಯಾಜ್ಞೆಗಳ ಮೂಲಕವಲ್ಲ. ಇವು ಪೂರ್ವ ನಿರ್ಬಂಧಕ್ಕೆ ಸಮಾನವಾಗಿರುತ್ತವೆ ಎಂದು ಎಡಿಟರ್ಸ್ ಗಿಲ್ಡ್ ನ್ಯಾಯಾಂಗಕ್ಕೆ ಮನವಿ ಮಾಡಿದೆ. ಇದಲ್ಲದೆ, ಖಾಸಗಿ ವ್ಯಾಜ್ಯಗಾರರಿಗೆ ಸಿವಿಲ್ ವಿವಾದಗಳಲ್ಲಿ ಕಾರ್ಯಗತಗೊಳಿಸುವ ಶಕ್ತಿಯಾಗಿ ಕಾರ್ಯನಿರ್ವಹಿಸದಂತೆ ಸರ್ಕಾರವು ಅತ್ಯಂತ ಸಂಯಮವನ್ನು ವಹಿಸಬೇಕೆಂದು ಗಿಲ್ಡ್ ಕರೆ ನೀಡಿದೆ.

“ಸ್ವತಂತ್ರ ಮತ್ತು ನಿರ್ಭೀತ ಪತ್ರಿಕಾ ವ್ಯವಸ್ಥೆಯು ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯವಾಗಿದೆ. ಖಾಸಗಿ ಹಿತಾಸಕ್ತಿಗಳಿಗೆ ಏಕಪಕ್ಷೀಯವಾಗಿ ಟೀಕಾತ್ಮಕ ಅಥವಾ ಅನಾನುಕೂಲಕರ ಧ್ವನಿಗಳನ್ನು ಮೌನಗೊಳಿಸಲು ಅವಕಾಶ ನೀಡುವ ಯಾವುದೇ ವ್ಯವಸ್ಥೆಯು, ಸಾರ್ವಜನಿಕರಿಗೆ ತಿಳಿಯುವ ಹಕ್ಕಿಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ” ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹೇಳಿದೆ.

ಅದಾನಿ ಕುರಿತ ಪೋಸ್ಟ್ ತೆಗೆದು ಹಾಕಲು ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಆದೇಶ; ವರದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...

ಕರ್ನಾಟಕ ಎಸ್‌ಐಆರ್: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ...

SIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

ರಾಜ್ಯ ರಾಜಕೀಯದ ಶಕ್ತಿಕೇಂದ್ರವಾದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಪ್ರಕ್ರಿಯೆಯು ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಎಸ್‌ಐಆರ್‌ಗೂ ಮುನ್ನ ನಗರದಲ್ಲಿದ್ದ ಸುಮಾರು 1.03...

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'Logical Discrepancy' (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...

‘ಆರ್‌ಎಸ್‌ಎಸ್‌ ಅಡಗಿಕೊಂಡಿದೆ’: ಮೋಹನ್ ಭಾಗವತ್‌ ಯುಕೆ ಭೇಟಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಯುನೈಟೆಡ್ ಕಿಂಗ್‌ಡಮ್‌ ಭೇಟಿಯನ್ನು ವಿರೋಧಿಸಿ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಭಾಗವತ್ ಅವರ ಯುಕೆ ಪ್ರವಾಸದ...

ಪಂಚಾಯಿತಿಯಲ್ಲಿ ಅಸ್ಪೃಶ್ಯತೆ ಆಚರಣೆ-ಪ್ರತ್ಯೇಕ ಟೀ ಲೋಟ; ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮಹಿಳೆ

ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ. ...

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...