ಬಳ್ಳಾರಿ ಜಿಲ್ಲೆಯ ಬಂಡಿಹಟ್ಟಿ-ದಾನಪ್ಪ ಬೀದಿಯ ಬಡರೈತರ ಮೇಲೆ ದೌರ್ಜನ್ಯ ಎಸಗುತ್ತಿರುವ ಎನ್.ಪ್ರತಾಪ ರೆಡ್ಡಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ಮುಖಂಡರು ಆಗ್ರಹಿಸಿದರು.
ಬಳ್ಳಾರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಸಮಿತಿ ಮುಖಂಡರು, “ಉಳುವವನೇ ಭೂಮಿ ಒಡೆಯ ಕಾನೂನು ಜಾರಿಯಿಂದ ಬಳ್ಳಾರಿ ಬಂಡಿಹಟ್ಟಿ-ದಾನಪ್ಪ ಬೀದಿಯ ರೈತರಿಗೆ ಸರ್ವೆ ನಂ.715 ರಲ್ಲಿ ಮಾದಿಗ, ಅಗಸ, ಕುರುಬ, ಈಡಿಗರು ಸಮುದಾಯಗಳಿಗೆ ಭೂಮಿ ಮಂಜೂರಾಗಿತ್ತು. ಇದರಂತೆ ಎಲ್ಲಾ ದಾಖಲೆಗಳು ಈ ಬಡವರ ಪರವಾಗಿಯೇ ಇಂದಿಗೂ ಇವೆ. ಭೂಮಿ ಮಂಜೂರಾತಿ ಪಡೆದು 40 ವರ್ಷಗಳ ಸಂತರ ಎನ್.ಪ್ರತಾಪರೆಡ್ಡಿ ಎಂಬುವವರು ಈ ಬಡವರ ಭೂಮಿಯೇ ನಮ್ಮ ಭೂಮಿ, ಕೊಂಡುಕೊಂಡಿದ್ದೇವೆಂದು ಹೇಳುತ್ತಾ ರೈತರ ಮೇಲೆ ದೌರ್ಜನ್ಯ ನಡೆಸುತ್ತಾ ಬರುತ್ತಿದ್ದಾರೆ” ಎಂದು ಆರೋಪಿಸಿದರು.
“ಇದರ ಬಗ್ಗೆ 2015 ರಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮತ್ತು ಇನ್ನಿತರೆ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಆ ನಂತರ ಕಾನೂನು ಹೋರಾಟ ಮುಂದುವರೆಸಲಾಗಿತ್ತಲ್ಲದೆ, ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ವಿವಾದಿತ ಜಮೀನಿನಲ್ಲಿ ಪ್ರಸ್ತುತ ಅನುಭೋಗದಲ್ಲಿರುವವರಿಗೂ ಸರ್ವೆ ನೋಟೀಸ್ ಸಹ ನೀಡದೆ ಏಕಾಏಕಿ ಜೆಸಿಬಿ, ಟ್ರ್ಯಾಕ್ಟರ್ ಬಳಸಿ ದೌರ್ಜನ್ಯದಿಂದ ರೈತರ ಭೂಮಿಗೆ ಅಳವಡಿಸಿದ್ದ ಬೇಲಿ, ಬೆಳೆಯನ್ನು ನಾಶ ಮಾಡಿದ್ದಾರೆ. ರೈತರ ಮೇಲೆ ದೌರ್ಜನ್ಯ ಎಸಗಿ ಸರ್ವೆ ನಡೆಸುತ್ತಿರುವುದು ಕಾನೂನು ಬಾಹಿರ” ಎಂದು ಆಕ್ರೋಶ ಹೊರಹಾಕಿದರು.
“ಎನ್. ಪ್ರತಾಪರೆಡ್ಡಿ ಮಾಡುತ್ತಿರುವ ದೌರ್ಜನ್ಯವನ್ನು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ತೀರ್ವವಾಗಿ ಖಂಡಿಸುತ್ತದೆ. ನೆಲದ ಕಾನೂನಿನ ವಿರುದ್ಧವಾಗಿ ನಡೆದುಕೊಳ್ಳುತ್ತಿರುವವ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರೂ ಜಿಲ್ಲಾಡಳಿತ ಕ್ರಮ ಜರುಗಿಸುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳಗೆ ದೂರು ನೀಡಲಾಗಿದೆ. ಕೆಲ ಕಂದಾಯ ಅಧಿಕಾರಿಗಳು ನಿಯಮಬಾಹಿರವಾಗಿ ನಡೆದುಕೊಳ್ಳುತ್ತಿದ್ದು, ಮೇಲಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕೆಂದು ಒತ್ತಾಯಿಸುತ್ತೇವೆ. ಈ ಭೂಮಿ ವಿಷಯವು ಬಹಳ ದೀರ್ಘ ಕಾಲದಿಂದ ಬಡವರ ವಿರುದ್ದ ನಡೆಸುತ್ತಿರುವ ಸಂಚಾಗಿದ್ದು, ಈ ಬಗ್ಗೆ ತನಿಖೆ ನಡೆಸುವ ಮೂಲಕ ಬಡವರಿಗೆ ನ್ಯಾಯ ಒದಗಿಸಲು ಮುಂದಾಗಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ” ಎಂದು ಒತ್ತಾಯಿಸಿದರು.
“ಎನ್.ಪ್ರತಾಪರೆಡ್ಡಿಯವರ ಭೂ ಹಗರಣಗಳ ಬಗ್ಗೆ ನ್ಯಾಯಾಂಗ ವಿಚಾರಣೆ ನಡೆಸುಬೇಕೆಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆಗ್ರಹಿಸುತ್ತದೆ. ಜೊತೆಗೆ, ಬಡವರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಮನವಿ ಮಾಡುತ್ತೇವೆ. ಜಿಲ್ಲಾಡಳಿತ ನ್ಯಾಯದ ತಕ್ಕಡಿಯಂತೆ ಕೆಲಸ ಮಾಡಬೇಕೆ ಹೊರತು ಒಬ್ಬರಿಗೆ ಬೆಣ್ಣೆ, ಇನ್ನೊಬ್ಬರಿಗೆ ಸುಣ್ಣ ಹಚ್ಚುವ ಕೆಲಸ ಮಾಡಬಾರದೆಂದು ಮನವಿ ಮಾಡಿಕೊಳ್ಳುತ್ತದೆ” ಎಂದರು.


