ಅತಿ ವೇಗದ ರೈಲು ಹಳಿತಪ್ಪಿ ಎದುರುಗಡೆಯಿಂದ ಮತ್ತೊಂದು ಹಳಿಯಲ್ಲಿ ಬರುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 21 ಜನರು ಸಾವನ್ನಪ್ಪಿರುವ ಘಟನೆ ದಕ್ಷಿಣ ಸ್ಪೇನ್‌ನಲ್ಲಿ ಭಾನುವಾರ (ಜ.18) ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಸ್ಪೇನ್‌ನ ರಾಜಧಾನಿ ಮ್ಯಾಡ್ರಿಡ್‌ನಿಂದ ದಕ್ಷಿಣಕ್ಕೆ ಸುಮಾರು 360 ಕಿ.ಮೀ (223 ಮೈಲುಗಳು) ದೂರದಲ್ಲಿರುವ ಕಾರ್ಡೋಬಾ ಪ್ರಾಂತ್ಯದ ಆಡಮುಜ್ ಬಳಿ ಈ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಗಾಯಗೊಂಡಿರುವ 75 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ 15 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಆಂಡಲೂಸಿಯಾ ಪ್ರಾದೇಶಿಕ ಸರ್ಕಾರದ ಮುಖ್ಯಸ್ಥೆ ಜುವಾನ್ಮಾ ಮೊರೆನೊ ಸೋಮವಾರ (ಜ.19) ತಿಳಿಸಿದ್ದಾಗಿ ವರದಿ ಉಲ್ಲೇಖಿಸಿದೆ.
ಸಾವಿನ ಸಂಖ್ಯೆ 20 ದಾಟಿದೆ, ಇನ್ನೂ ಹೆಚ್ಚಾಗಬಹುದು. ಅಪಘಾತದ ತೀವ್ರತೆ ನೋಡಿದರೆ ಘಟನಾ ಸ್ಥಳದಲ್ಲಿ ಇನ್ನೂ ಶವಗಳು ಸಿಗುವ ಸಾಧ್ಯತೆ ಇದೆ. ಅಪಘಾತಕ್ಕೀಡಾದ ರೈಲುಗಳ ಅವಶೇಷಗಳನ್ನು ತೆರವುಗೊಳಿಸಲು ಭಾರೀ ಯಂತ್ರೋಪಕರಣಗಳನ್ನು ಬಳಸಿಕೊಳ್ಳಲಾಗಿದೆ ಎಂದು ಮೊರೆನೊ ತಿಳಿಸಿದ್ದಾರೆ.
ಎರಡು ರೈಲುಗಳಲ್ಲಿ ಸುಮಾರು 400 ಪ್ರಯಾಣಿಕರಿದ್ದರು. ಅವರಲ್ಲಿ ಹೆಚ್ಚಿನವರು ವಾರಂತ್ಯದ ನಂತರ ರಾಜಧಾನಿ ಮ್ಯಾಡ್ರಿಡ್‌ಗೆ ಹಿಂತಿರುಗುತ್ತಿದ್ದರು ಎಂದು ರಾಯಿಟರ್ಸ್ ವರದಿ ಉಲ್ಲೇಖಿಸಿದೆ.


