ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಾಝಾ ಪ್ರದೇಶಕ್ಕೆ ಸಂಬಂಧಿಸಿದಂತೆ ರಚಿಸಿರುವ ವಿವಾದಾತ್ಮಕ “ಬೋರ್ಡ್ ಆಫ್ ಪೀಸ್” (ಶಾಂತಿ ಮಂಡಳಿ) ಎಂಬ ಉಪಕ್ರಮಕ್ಕೆ ಭಾರತ ಸೇರಿದಂತೆ ಹಲವು ದೇಶಗಳನ್ನು ಆಹ್ವಾನಿಸಿದ್ದಾರೆ.
ಈ ಉಪಕ್ರಮವು ವಿಶ್ವಸಂಸ್ಥೆಯನ್ನು ಪಕ್ಕಕ್ಕೆ ತಳ್ಳಿ, ಗಾಝಾ ಪ್ರದೇಶದಲ್ಲಿ ಸಮಾನಾಂತರ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಲಾಗ್ತಿದೆ.
ಈ ಮಂಡಳಿಯ ಆಶಯಗಳು ಗಾಝಾ ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ, ಭವಿಷ್ಯದಲ್ಲಿ ಇತರ ಅಂತಾರಾಷ್ಟ್ರೀಯ ಸಂಘರ್ಷಗಳಿಗೂ ವಿಸ್ತರಿಸಬಹುದು ಎಂಬ ಸೂಚನೆಗಳಿವೆ. ಟ್ರಂಪ್ ಅವರ ಈ ಯೋಜನೆಯು ಗಾಝಾದಲ್ಲಿ ಇತ್ತೀಚಿನ ಯುದ್ಧದ ನಂತರದ ಪುನರ್ನಿರ್ಮಾಣ, ಆಡಳಿತ, ಹಮಾಸ್ ಸಂಘಟನೆಯ ಸಂಪೂರ್ಣ ನಿಶ್ಯಸ್ತ್ರಗೊಳಿಸುವುದು ಮತ್ತು ಶಾಂತಿ ಸ್ಥಾಪನೆಗೆ ಸಂಬಂಧಿಸಿದ 20-ಸೂತ್ರಗಳ ಯೋಜನೆಯ ಭಾಗವಾಗಿದೆ ಎಂದು ವರದಿಗಳು ಹೇಳಿವೆ.
ಆದರೆ, ಈ ಮಂಡಳಿಯ ಮಸೂದಾ ಚಾರ್ಟರ್‌ನಲ್ಲಿ (ಡ್ರಾಫ್ಟ್ ಚಾರ್ಟರ್) ಗಾಝಾ ಉಲ್ಲೇಖವೇ ಇಲ್ಲದಿರುವುದರಿಂದ, ಇದು ವಿಶ್ವಸಂಸ್ಥೆಯನ್ನು ಬದಲಿಸುವ ಅಥವಾ ಅದಕ್ಕೆ ವಿರುದ್ದವಾಗಿ ಕಾರ್ಯನಿರ್ವಹಿಸುವ ದೊಡ್ಡ ಉದ್ದೇಶವನ್ನು ಹೊಂದಿದೆ ಎಂದು ಹೇಳಲಾಗ್ತಿದೆ. ಮಂಡಳಿಯ ಸದಸ್ಯತ್ವಕ್ಕಾಗಿ ಕೆಲವು ದೇಶಗಳಿಗೆ 1 ಬಿಲಿಯನ್ ಡಾಲರ್ (ಸುಮಾರು 8,300 ಕೋಟಿ ರೂ.) ಪಾವತಿಸುವಂತೆ ಒತ್ತಾಯಿಸಲಾಗುತ್ತಿದೆ ಎಂಬ ವರದಿಗಳೂ ಇವೆ, ಇದರಿಂದ ಶಾಶ್ವತ ಸ್ಥಾನ ದೊರೆಯುತ್ತದೆ.
ಟ್ರಂಪ್ ಕಡೆಯಿಂದ ಭಾರತಕ್ಕೆ ಆಹ್ವಾನ ಬಂದಿರುವುದು ನಿಜ, ಆದರೆ ಭಾರತ ಇನ್ನೂ ಈ ಆಹ್ವಾನವನ್ನು ಸ್ವೀಕರಿಸಬೇಕೇ ಅಥವಾ ತಿರಸ್ಕರಿಸಬೇಕೇ ಎಂಬ ನಿರ್ಧಾರ ತೆಗೆದುಕೊಂಡಿಲ್ಲ. ಅಮೆರಿಕದ ಭಾರತದ ರಾಯಭಾರಿ ಸೆರ್ಜಿಯೊ ಗೊರ್ ಅವರು ಎಕ್ಸ್‌ನಲ್ಲಿ ಇದನ್ನು ದೃಢೀಕರಿಸಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ಪತ್ರವನ್ನು ಹಂಚಿಕೊಂಡಿದ್ದಾರೆ. ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು (ಅನಾಮಧೇಯರಾಗಿ ಮಾತನಾಡಿ) ಆಹ್ವಾನ “ಕೈಯಲ್ಲಿದೆ” ಎಂದು ಹೇಳಿದ್ದಾರೆ, ಆದರೆ ಭಾರತ ಸರ್ಕಾರ ಇನ್ನೂ ಪ್ರತಿಕ್ರಿಯಿಸಿಲ್ಲ ಅಥವಾ ನಿರ್ಧಾರ ತೆಗೆದುಕೊಂಡಿಲ್ಲ. ವಿದೇಶಾಂಗ ಸಚಿವಾಲಯದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ, ಮತ್ತು ಪ್ರಶ್ನೆಗಳಿಗೆ ತಕ್ಷಣ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಗಳು ಹೇಳಿವೆ.

ಜನವರಿ 16ರಂದು ಬರೆದಿರುವ ಪತ್ರದಲ್ಲಿ, “ಮಧ್ಯಪ್ರಾಚ್ಯದಲ್ಲಿ ಶಾಂತಿಯನ್ನು ಗಟ್ಟಿಗೊಳಿಸುವ ಪ್ರಯತ್ನದಲ್ಲಿ ಮತ್ತು ಜಾಗತಿಕ ಸಂಘರ್ಷವನ್ನು ಪರಿಹರಿಸಲು ದಿಟ್ಟ ಹೊಸ ವಿಧಾನವನ್ನು ಕೈಗೊಳ್ಳಲು” ಟ್ರಂಪ್ ಅವರೊಂದಿಗೆ ಕೈ ಜೋಡಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗಿದೆ.
ಪತ್ರದಲ್ಲಿ “ಬೋರ್ಡ್ ಆಫ್ ಪೀಸ್” ಅನ್ನು ಇದುವರೆಗೆ ಸ್ಥಾಪಿತವಾದ ಅತ್ಯಂತ ಪ್ರಭಾವಶಾಲಿ ಮತ್ತು ಪರಿಣಾಮಕಾರಿ ಮಂಡಳಿ ಎಂದು ವಿವರಿಸಲಾಗಿದೆ. ಇದನ್ನು ಹೊಸ ಅಂತಾರಾಷ್ಟ್ರೀಯ ಸಂಸ್ಥೆ ಮತ್ತು ತಾತ್ಕಾಲಿಕ ಆಡಳಿತ ಸಂಸ್ಥೆ ಎಂದು ಸ್ಥಾಪಿಸಲಾಗುತ್ತದೆ ಎಂಬುವುದಾಗಿ ಹೇಳಲಾಗಿದೆ. ಈ ಪದ ಬಳಕೆ, ಚಾರ್ಟರ್, ಅಸ್ತಿತ್ವದಲ್ಲಿರುವ ಬಹುಪಕ್ಷೀಯ ಸಂಸ್ಥೆಗಳಿಗೆ ಪರ್ಯಾಯವನ್ನು ರಚಿಸುವ ಟ್ರಂಪ್ ಅವರ ಉದ್ದೇಶಗಳ ಬಗ್ಗೆ ಆತಂಕವನ್ನು ಉಂಟು ಮಾಡಿದೆ.
ಚಾರ್ಟರ್‌ನಲ್ಲಿ ಗಾಝಾ ಉಲ್ಲೇಖವೇ ಇಲ್ಲ
ಆರಂಭದಲ್ಲಿ ಗಾಝಾ ಪುನರ್ನಿರ್ಮಾಣಕ್ಕಾಗಿ ಮಂಡಳಿ ರಚಿಸಲಾಗುತ್ತಿದೆ ಎಂದರೂ, ಚಾರ್ಟರ್‌ನಲ್ಲಿ “ಗಾಝಾ” ಎಂಬ ಪದವೇ ಇಲ್ಲ. ಬದಲಿಗೆ, ಸಂಘರ್ಷದಿಂದ ಪ್ರಭಾವಿತ ಅಥವಾ ಬೆದರಿಕೆಗೊಳಗಾದ ಪ್ರದೇಶಗಳು ಎಂದು ಹೇಳಲಾಗಿದೆ. ಇದರಿಂದ ಭವಿಷ್ಯದಲ್ಲಿ ಇತರ ಜಾಗತಿಕ ಸಂಘರ್ಷಗಳಿಗೂ (ಉದಾ. ಉಕ್ರೇನ್, ಸಿರಿಯಾ ಇತ್ಯಾದಿ) ವಿಸ್ತರಣೆಯಾಗಬಹುದು ಎಂಬ ಆತಂಕ ಎದುರಾಗಿದೆ.
ಸಂಸ್ಥೆಗಳು ವಿಫಲವಾಗಿವೆ” ಎಂಬ ಭಾಷೆ
ಚಾರ್ಟರ್‌ನ ಪೀಠಿಕೆಯಲ್ಲಿ “institutions that have too often failed” (ತುಂಬಾ ಬಾರಿ ವಿಫಲವಾದ ಸಂಸ್ಥೆಗಳು) ಮತ್ತು “more nimble and effective” (ಹೆಚ್ಚು ಚುರುಕು ಮತ್ತು ಪರಿಣಾಮಕಾರಿ) ಸಂಸ್ಥೆಯ ಅಗತ್ಯ ಎಂದು ಹೇಳಲಾಗಿದೆ. ಇದು ವಿಶ್ವ ಸಂಸ್ಥೆಯನ್ನು ನೇರವಾಗಿ ಟೀಕಿಸುವಂತಿದೆ ಎಂದು ವಿಮರ್ಶಕರು ಹೇಳುತ್ತಾರೆ. ಟ್ರಂಪ್ ಅವರು ವಿಶ್ವ ಸಂಸ್ಥೆಯನ್ನು “bloated” (ಉಬ್ಬಿದ), “ineffective”(ಪರಿಣಾಮಕಾರಿಯಲ್ಲದ) ಎಂದು ಹಲವು ಬಾರಿ ಟೀಕಿಸಿದ್ದಾರೆ.
ಸಮಾನಾಂತರ ಸಂಸ್ಥೆಯ ಆತಂಕ
ಡಿಪ್ಲೊಮ್ಯಾಟ್‌ಗಳು ಇದನ್ನು “Trump United Nations” ಅಥವಾ “Mini-UN” ಎಂದು ಕರೆದಿದ್ದಾರೆ. ಇದು ವಿಶ್ವ ಸಂಸ್ಥೆಯನ್ನು ಸೈಡ್‌ಲೈನ್ ಮಾಡಿ, ಅಮೆರಿಕ ನೇತೃತ್ವದ (ಟ್ರಂಪ್ ಅಧ್ಯಕ್ಷೆಯ) ಹೊಸ ವ್ಯವಸ್ಥೆಯನ್ನು ರಚಿಸುವ ಪ್ರಯತ್ನ ಎಂದು ಯುರೋಪ್, ರಷ್ಯಾ, ಚೀನಾ ಮುಂತಾದ ದೇಶಗಳ ಡಿಪ್ಲೊಮ್ಯಾಟ್‌ಗಳು ಆತಂಕ ವ್ಯಕ್ತಪಡಿಸಿದ್ದಾರೆ. ವಿಶ್ವ ಸಂಸ್ಥೆಯನ್ನು ಬದಲಿಸುವಟ್ರ ಅಥವಾ ಪ್ರತಿರೂಪವಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ ಎಂಬ ಭಯ ವ್ಯಕ್ತವಾಗಿದೆ.
ಟ್ರಂಪ್ ನಿಯಂತ್ರಣ
ಟ್ರಂಪ್ ಅವರು ಮಂಡಳಿಯ ಅಧ್ಯಕ್ಷ ಆಗಿರುತ್ತಾರೆ ಮತ್ತು ಸದಸ್ಯರ ಆಯ್ಕೆ, ನಿರ್ಣಯಗಳ ಅನುಮೋದನೆ, ಅವಧಿ ನವೀಕರಣ ಇತ್ಯಾದಿ ಅಧಿಕಾರಗಳನ್ನು ಹೊಂದಿರುತ್ತಾರೆ. 1 ಬಿಲಿಯನ್ ಡಾಲರ್ ಕೊಡುಗೆಯ ಮೇಲೆ ಶಾಶ್ವತ ಸದಸ್ಯತ್ವ ಸಿಗುವ ವ್ಯವಸ್ಥೆಯೂ ವಿವಾದಾಸ್ಪದವಾಗಿದೆ. ಇದು ಹಣದ ಮೂಲಕ ಪ್ರಭಾವ ಖರೀದಿಸುವಂತಿದೆ ಎಂಬ ಟೀಕೆ ವ್ಯಕ್ತವಾಗಿದೆ.
ವಿಶ್ವಸಂಸ್ಥೆಯ ಅನುಮೋದನೆ ಇದ್ದರೂ ಆಂತಕ ಏಕೆ?
ಟ್ರಂಪ್ ಅವರ ಹೊಸ ಮಂಡಳಿಗೆ ಸಂಬಂಧಿಸಿದಂತೆ ನವೆಂಬರ್ 17, 2025 ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯ 2803 (2025) ಅನ್ನು ಅಂಗೀಕರಿಸಿದೆ. ಚೀನಾ ಮತ್ತು ರಷ್ಯಾ ಹೊರತುಪಡಿಸಿ ಉಳಿದ 13 ಸದಸ್ಯ ರಾಷ್ಟ್ರಗಳು (ಫ್ರಾನ್ಸ್, ಯುಕೆ, ಯುಎಸ್ ಸೇರಿದಂತೆ) ನಿರ್ಣಯದ ಪರವಾಗಿ ಮತ ಚಲಾಯಿಸಿವೆ.
ನಿರ್ಣಯವು ಬೋರ್ಡ್ ಆಫ್ ಪೀಸ್ ಅನ್ನು ಸ್ವಾಗತಿಸುತ್ತದೆ ಮತ್ತು ಅದನ್ನು ತಾತ್ಕಾಲಿಕ ಆಡಳಿತ ಸಂಸ್ಥೆಯಾಗಿದೆ ಗುರುತಿಸುತ್ತದೆ. ಮಂಡಳಿ ಗಾಝಾ ಪುನರ್ನಿರ್ಮಾಣ, ಆಡಳಿತ, ಹಣಕಾಸು ಸಹಾಯ ಮತ್ತು ಸ್ಥಿರತೆಗೆ ನೇತೃತ್ವ ನೀಡುತ್ತದೆ ಎಂದು ನಿರ್ಣಯ ಹೇಳುತ್ತದೆ.
ಅಂತಾರಾಷ್ಟ್ರೀಯ ಸ್ಥಿರೀಕರಣ ಪಡೆ (ಐಎಸ್‌ಎಫ್) ಸ್ಥಾಪಿಸಲು ನಿರ್ಣಯ ಅನುಮತಿ ನೀಡುತ್ತದೆ. ಈ ಪಡೆ ತಾತ್ಕಾಲಿಕ ಅಂತಾರಾಷ್ಟ್ರೀಯ ಸೇನೆಯಾಗಿದ್ದು, ಗಾಝಾದಲ್ಲಿ ಭದ್ರತೆ, ಹಮಾಸ್ ನಿಶಸ್ತ್ರೀಕರಣ ಮತ್ತು ಸಹಾಯ ವಿತರಣೆಗೆ ಸಹಾಯ ಮಾಡುತ್ತದೆ ಎಂದು ನಿರ್ಣಯ ಹೇಳುತ್ತದೆ.
ಗಾಝಾ ಪುನರ್ನಿರ್ಮಾಣಕ್ಕಾಗಿ ಈ ಯೋಜನೆಯನ್ನು ನಿರ್ಣಯ ಬೆಂಬಲಿಸುತ್ತದೆ ಮತ್ತು ಪ್ಯಾಲೆಸ್ಟೈನ್ ಅಥಾರಿಟಿ (ಪಿಎ) ಸುಧಾರಣೆಗಳ ನಂತರ ಭವಿಷ್ಯದಲ್ಲಿ ಪ್ಯಾಲೆಸ್ಟೈನ್ ಸ್ವಯಂ ನಿರ್ಧಾರದ ಹಾದಿ (pathway to self-determination and statehood) ಸಾಧ್ಯವಾಗಬಹುದು ಎಂದು ಹೇಳುತ್ತದೆ.
ಈ ನಿರ್ಣಯದ ಮೂಲಕ ವಿಶ್ವ ಸಂಸ್ಥೆ ಟ್ರಂಪ್ ಅವರ ಯೋಜನೆಗೆ ಅಂತಾರಾಷ್ಟ್ರೀಯ ಕಾನೂನು ಮಾನ್ಯತೆ ನೀಡಿದೆ ಎಂದು ಅಮೆರಿಕ ಮತ್ತು ಬೆಂಬಲಿಗರು ಹೇಳುತ್ತಾರೆ. ಇದು ಯುದ್ಧವನ್ನು ಅಂತ್ಯಗೊಳಿಸಿ, ಸಹಾಯ ಮತ್ತು ಪುನರ್ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತದೆ ಎನ್ನುತ್ತಾರೆ.
ವಿಶ್ವ ಸಂಸ್ಥೆ ನಿರ್ಣಯದ ಮೂಲಕ ಟ್ರಂಪ್ ಅವರ ಗಾಝಾ ಪುನರ್ನಿರ್ಮಾಣಕ್ಕೆ ಮಾನ್ಯತೆ ನೀಡಿದೆ. ಆದರೆ ಮಂಡಳಿಯ ಚಾರ್ಟರ್‌ನ ಜಾಗತಿಕ ವ್ಯಾಪ್ತಿ ಮತ್ತು ವಿಶ್ವ ಸಂಸ್ಥೆ “ವಿಫಲ” ಎಂದು ಟೀಕಿಸುವ ಭಾಷೆಯಿಂದಾಗಿ, ಇದು ವಿಶ್ವ ಸಂಸ್ಥೆಯನ್ನು ಅನ್ನು ಮೀರಿ ಅಥವಾ ಬದಲಿಸುವ ಸಮಾನಾಂತರ ಸಂಸ್ಥೆಯಾಗಿ ಬೆಳೆಯಬಹುದು ಎಂಬ ದೊಡ್ಡ ಆತಂಕ ಉಳಿದಿದೆ. ಭಾರತ ಸೇರಿದಂತೆ ಹಲವು ದೇಶಗಳು ಇದರಿಂದಾಗಿ ಎಚ್ಚರಿಕೆಯಿಂದ ಪ್ರತಿಕ್ರಿಯಿಸುತ್ತಿವೆ.


