Homeಎಲೆಮರೆಗಡಿನಾಡು ಬೀದರಿನಲ್ಲಿ ಸದ್ದಿಲ್ಲದೆ ದುಡಿಯುವ ಚಂದ್ರಪ್ಪ ಹೆಬ್ಬಾಳಕರ

ಗಡಿನಾಡು ಬೀದರಿನಲ್ಲಿ ಸದ್ದಿಲ್ಲದೆ ದುಡಿಯುವ ಚಂದ್ರಪ್ಪ ಹೆಬ್ಬಾಳಕರ

- Advertisement -
- Advertisement -
ಎಲೆಮರೆ-27

ಕುವೆಂಪು ಭಾಷಾ ಭಾರತಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸೆಮಿನಾರಿನೊಂದರಲ್ಲಿ ಚಂದ್ರಪ್ಪ ಹೆಬ್ಬಾಳಕರ್ ಅವರನ್ನು ನಾನು ಮೊದಲಿಗೆ ನೋಡಿದೆ. ಚೂರು ಕುಳ್ಳನೆ ವ್ಯಕ್ತಿ ಪುಟುಪುಟು ಓಡಾಡುತ್ತ ತಮ್ಮ `ಬೀದರ್ ಜಿಲ್ಲೆಯ ದಲಿತ ಕವಿ ಕಾವ್ಯ’ ಕೃತಿಯನ್ನು ಕೆಲವರಿಗೆ ಕೊಡುತ್ತಿದ್ದರು. ನಾನು ಕುತೂಹಲದಿಂದ ಈ ಪುಸ್ತಕವನ್ನು ಗಮನಿಸಿದೆ. ಇದೊಂದು ಶ್ರಮದಾಯಕ ಕೆಲಸ ಅನ್ನಿಸಿತು. ನಂತರ ಜನಪದ ಕವಿಗಳ ಭೇಟಿಗೆಂದು ಬೀದರ ಜಿಲ್ಲೆಯ ಬಸವಕಲ್ಯಾಣಕ್ಕೆ ಹೋದಾಗ ಚಂದ್ರಪ್ಪ ಅವರನ್ನು ಕಂಡು ಮಾತನಾಡಿಸಿ, ಅವರ ಈ ಪುಸ್ತಕವನ್ನು ಪಡೆದೆ. ಈ ಭಾಗದ ಕೆ.ನೀಲಾ, ಮೀನಾಕ್ಷಿ ಬಾಳಿ, ಪ್ರಭು ಖಾನಾಪುರೆ ಮೊದಲಾದವರೊಡಗೂಡಿ ಬಸವ ಕಲ್ಯಾಣದ ಕೆಲವೆಡೆಗಳಲ್ಲಿ ಸುತ್ತಾಡುವಾಗ ಇವರ ಜತೆ ಮತ್ತಷ್ಟು ಮಾತುಕತೆ ನಡೆಯಿತು. ರಾಜ್ಯವ್ಯಾಪಿ ಪ್ರಚಾರವಿಲ್ಲದೆ, ಜನತೆಗೆ ಅರಿವು ಮೂಡಿಸುವ ಕೆಲಸದಲ್ಲಿ ತಣ್ಣಗೆ ದುಡಿದವರಲ್ಲಿ ಚಂದ್ರಪ್ಪ ಹೆಬ್ಬಾಳಕರ ಅವರೂ ಒಬ್ಬರೆಂದು, ಅವರ ಬಗೆಗೆ ಗೌರವ ಮೂಡಿತು.

ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಬೇಮಳಖೇಡದ ಚಂದ್ರಪ್ಪ ಹೆಬ್ಬಾಳಕರ ಅವರು ಇದೀಗ ಬೀದರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಚಂದ್ರಪ್ಪನವರು 1958 ರಲ್ಲಿ ಚಿಟಗುಪ್ಪದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿದವರು, ನಂತರ ಪ್ರೌಢಶಾಲೆ ಶಿಕ್ಷಕರಾಗಿಯೂ, 1998ರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿ ನಿವೃತ್ತರಾದರು. ಶಾಲಾ ಶಿಕ್ಷಕರಾದವರು ಸಮಾಜದೊಂದಿಗೆ ಒಡನಾಡುತ್ತಾ, ಜನತೆಯನ್ನು ತಿದ್ದುವ ಮೇಷ್ಟ್ರುಗಳಾಗಿಯೂ ರೂಪಾಂತರ ಹೊದುವವರು ವಿರಳ. ಅಂತವರಲ್ಲಿ ಚಂದ್ರಪ್ಪ ಹೆಬ್ಬಾಳಕರ ಅವರು ಒಬ್ಬರು.

ಗುಲ್ಬರ್ಗಾ ಬೀದರ ಭಾಗದಲ್ಲಿ `ಬಾನಾಮತಿ’ಯ ಕುರಿತ ಮೌಢ್ಯ ವ್ಯಾಪಕವಾಗಿದೆ. ಈ ಕಾರಣಕ್ಕೆ ಜನರು ಸದಾ ಆತಂಕಿತರಾಗಿರುತ್ತಾರೆ. ಈ ಬಾನಾಮತಿ ಕುರಿತಂತೆ ಬಹಳ ಹಿಂದೆಯೇ ಹೆಚ್.ನರಸಿಂಹಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಇದೊಂದು ಮಾನಸಿಕ ವ್ಯಾಧಿ. ಇದಕ್ಕೆ ಪ್ರಜ್ಞಾವಂತಿಕೆಯೊಂದೆ ಮದ್ದು ಎಂದು ನರಸಿಂಹಯ್ಯ ಹೇಳಿದ್ದರು. ಈ ಬಾನಾಮತಿ ಕುರಿತಂತೆ ಸ್ಥಳೀಯರು ವೈಚಾರಿಕವಾಗಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂಬ ಆಲೋಚನೆಯಲ್ಲಿ ಚಂದ್ರಪ್ಪ ಅವರು ಸ್ಥಳೀಯವಾಗಿ ಹಲವು ಬಾನಾಮತಿ ಪ್ರಕರಣಗಳಲ್ಲಿ ಹಳ್ಳಿಗಳಿಗೆ ತೆರಳಿ ಜನರನ್ನು ಮೌಢ್ಯದಿಂದ ಹೊರಬರುವಂತೆ ಜಾಗೃತಿ ಮೂಡಿಸಿದ್ದಾರೆ. ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಬಾನಾಮತಿ ನಿರ್ಮೂಲನ ಸಮಿತಿಯ ಸಂಚಾಲಕರಾಗಿ ಬೀದರ್ ಭಾಗದ ಪ್ರಾಥಮಿಕ ಮತ್ತು ಪ್ರೌಢಶಾಲೆಗಲ್ಲಿ ನಾಟಕ ಪ್ರದರ್ಶನ ಮತ್ತು ಉಪನ್ಯಾಸಗಳನ್ನು ಏರ್ಪಡಿಸಿ ಶಾಲೆಗಳಲ್ಲಿ ವೈಚಾರಿಕತೆ ಮೂಡಿಸಲು ಚಂದ್ರಪ್ಪ ಅವರು ಶ್ರಮಿಸಿದ್ದಾರೆ. ಭಾರತೀಯ ಜ್ಞಾನವಿಜ್ಞಾನ ಸಂಘಟನೆಯ ಸದಸ್ಯರಾಗಿ ಪವಾಡ ಬಯಲಿನ ಮೂಲಕ ಮೌಢ್ಯಗಳ ಬಗೆಗೆ ಅರಿವು ಮೂಡಿಸುವುದರಲ್ಲಿಯೂ ಸಕ್ರಿಯವಾಗಿದ್ದಾರೆ.

ಬೀದರ ಭಾಗದಲ್ಲಿ ಬೌದ್ಧಧರ್ಮಕ್ಕೆ ಪ್ರವೇಶಿಸಿದ ದಲಿತರ ಸಂಖ್ಯೆ ಹೆಚ್ಚು. ಹಳ್ಳಿ ಹಳ್ಳಿಗಳಲ್ಲಿಯೂ ಚಿಕ್ಕ ಚಿಕ್ಕ ಬೌದ್ಧವಿಹಾರಗಳು ಸ್ಥಾಪನೆಯಾಗಿವೆ. ಹೀಗಿರುವಾಗ ಬೌದ್ಧಧರ್ಮದ ಅನುಸರಣೆಯೂ ಮೌಢ್ಯಕ್ಕೆ ತಿರುಗಬಾರದೆಂದು ಈ ಭಾಗದ ಕೆಲವರು ಬೌದ್ಧ ವೈಚಾರಿಕತೆಯನ್ನು ವಿಸ್ತರಿಸುತ್ತಿದ್ದಾರೆ. ಹೆಬ್ಬಾಳಕರ ಅವರು 1994 ರಿಂದ 2001ರ ತನಕ ಬೌದ್ಧಿಷ್ಟ್ ಸೊಸೈಟಿ ಆಫ್ ಇಂಡಿಯಾದ ಬೀದರ ಜಿಲ್ಲೆಯ ಕಾರ್ಯಕಾರಿ ಸದಸ್ಯರಾಗಿ ನೂರಾರು ಹಳ್ಳಿಗಳಿಗೆ ಬಾಬಾ ಸಾಹೇಬರ ಬೌದ್ಧದಮ್ಮದ ತಿಳಿವನ್ನು ವಿಸ್ತರಿಸಲು ಪ್ರಯತ್ನಿಸಿದ್ದಾರೆ. ಇದಕ್ಕಾಗಿ ನೂರಕ್ಕಿಂತ ಹೆಚ್ಚು ಹಳ್ಳಿಗಳಲ್ಲಿ `ಧಮ್ಮ ದೀಪ’ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುವಲ್ಲಿ ಶ್ರಮಿಸಿದ್ದಾರೆ.

ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಚಂದ್ರಪ್ಪ ಅವರ ಸಾಹಿತ್ಯ ರಚನೆ ಅಷ್ಟಾಗಿ ಚರ್ಚೆಗೆ ಒಳಗಾಗಿಲ್ಲ. ಈ ತನಕ ಅವರು `ಬೀದರ್ ಜಿಲ್ಲೆಯ ಮೊಹರಂ ಪದಗಳು’ `ಭೀಮಕವಿ ಶ್ರೀ ಮಾಣಿಕರಾವ ಜ್ಯೋತಿ’ `ಶೇರ್ ಎ ದಖನ್: ಬಿ.ಶ್ಯಾಮಸುಂದರ್’ `ಉರಿಲಿಂಗ ಪೆದ್ದಿ ಪರಂಪರೆ’ `ದಲಿತೋದ್ಧಾರಕರು’ ಒಳಗೊಂಡಂತೆ ಹದಿನೈದಕ್ಕಿಂತ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ `ಬೀದರ್ ಜಿಲ್ಲೆಯ ದಲಿತ ಕವಿ ಕಾವ್ಯ’ ಒಂದು ಅತ್ಯುತ್ತಮ ಕೃತಿ. ಇಡೀ ಬೀದರನ ಹಳ್ಳಿ ಹಳ್ಳಿಗಳ ಸುತ್ತಿ ಸಂಪಾದಿಸಿದ್ದಾರೆ. ಈ ಕೃತಿ 2012 ರಲ್ಲಿ ಪ್ರಕಟವಾಗಿದೆ. ಹತ್ತೊಂಬತ್ತನೆ ಶತಮಾನದ ಆದಿಯಲ್ಲಿ ಜೀವಿಸಿದ್ದರು ಎನ್ನಲಾಗುವ ಹುಮನಾಬಾದ ತಾಲೂಕಿನ ಚಿಡಗುಪ್ಪಿಯ ತಿಪರಂಚಿ ಮಾಸ್ತರರಿಂದ ಮೊದಲುಗೊಂಡು 1979 ರಲ್ಲಿ ಜನಿಸಿದ ಮಚ್ಚೇಂದ್ರ ಪಿ. ಅಣಕಲ್ ತನಕ ಒಟ್ಟು 85 ದಲಿತ ಕವಿಗಳ ವಿವರ ಮತ್ತು ಆಯ್ದ ಕವಿತೆಗಳನ್ನು ಕೊಡಲಾಗಿದೆ. ಹೆಚ್ಚುಕಡಿಮೆ ಒಂದು ಶತಮಾನದ ಅಂತರದಲ್ಲಿ ಇಷ್ಟು ಕವಿಗಳ ಮೊತ್ತ ದೊಡ್ಡದಲ್ಲವಾದರೂ ದಲಿತ ಕವಿಗಳು ಎನ್ನುವಾಗ ಈ ಸಂಖ್ಯೆಯ ಮಹತ್ವ ಅರಿವಿಗೆ ಬರುತ್ತದೆ.

ಈ ಸಂಕಲನದ ಕವಿತೆಗಳನ್ನು ಕನ್ನಡದ ಆಧುನಿಕ ಕಾವ್ಯದ ಜೊತೆಗಿಟ್ಟು ನೋಡಲಾಗದು. ಅಥವಾ ಇಲ್ಲಿನ ಯಾವ ಕವಿಗಳ ಹೆಸರೂ ನಮ್ಮ ಕನ್ನಡ ಕವಿಗಳ ಪಟ್ಟಿಯಲ್ಲಿ ಕಾಣದು. ಅಷ್ಟರ ಮಟ್ಟಿಗೆ ಈ ಕವಿಗಳು ಮತ್ತವರ ಕವಿತೆ ಬೀದರ ಭಾಗಕ್ಕೆ ಮಾತ್ರ ಸೀಮಿತವಾದಂತೆ ಕಾಣುತ್ತದೆ ಅಥವಾ ಕನ್ನಡ ಸಾಹಿತ್ಯ ಪರಂಪರೆ ಬೀದರ ಭಾಗದ ಕವಿ ಕಾವ್ಯವನ್ನು ಹೊರಗಿಟ್ಟಂತೆ ಗೋಚರಿಸುತ್ತಿದೆ. ಹೀಗೆ ತಮ್ಮದೇ ಆದ ವಿಶಿಷ್ಠತೆಯನ್ನು ಮೈಗೂಡಿಸಿಕೊಂಡ ಈ ಭಾಗದ ದಲಿತ ಕಾವ್ಯಮೀಮಾಂಸೆ ಯಾವುದು? ಕನ್ನಡ ಕಾವ್ಯ ಎಂದು ಕರೆಯುವಾಗ ಈ ಭಾಗದ ಕಾವ್ಯಕ್ಕಿರುವ ವಿಶಿಷ್ಠ ಚಹರೆ ಏನು? ಎನ್ನುವುದರ ಕುರಿತು ಚರ್ಚಿಸುವ ಅಗತ್ಯವಿದೆ.

ಬೀದರ ಜಿಲ್ಲೆಯ ಬಸವಕಲ್ಯಾಣದ ಪ್ರಭಾವ ಈ ಭಾಗದ ಕವಿಗಳ ಮೇಲೆ ಸಹಜವಾಗಿದೆ. ಹೀಗಾಗಿ ಈ ಭಾಗದ ಕವಿಗಳಲ್ಲಿ ವಚನದ ಅನುಕರಣೆಯಿದೆ. ಹೆಬ್ಬಾಳಕರ ಕೂಡ `ಚಂದ್ರಣ್ಣ’ ಎನ್ನುವ ವಚನಾಂಕಿತದಲ್ಲಿ ವಚನಗಳನ್ನು ಬರೆದಿದ್ದಾರೆ. ಚಂದ್ರಪ್ಪ ಜಾನಪದ ವಿದ್ವಾಂಸರೂ ಕೂಡ. ಈ ಭಾಗದ ಮೊಹರಂ ಪದಗಳನ್ನು ಸಂಗ್ರಹಿಸಿದ್ದಾರೆ. ಅಂತೆಯೇ ಬೀದರ್ ಜಿಲ್ಲಾ ಜನಪದ ಸೊಗಡು ಕೃತಿಯಲ್ಲಿ ಈ ಭಾಗದ ಜನಪದ ಸಾಹಿತ್ಯದ ಬಗ್ಗೆ ಗಮನಸೆಳೆದಿದ್ದಾರೆ.

ಚಂದ್ರಪ್ಪ ಹೆಬ್ಬಾಳಕರನ್ನು ಗುರುತಿಸಿ ಬೀದರ್ ಗುಲ್ಬರ್ಗಾ ಭಾಗದ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ, ಸನ್ಮಾನಗಳನ್ನು ಮಾಡಿ ಪುರಸ್ಕರಿಸಿವೆ. 2015 ರಲ್ಲಿ ಇವರ ಸಾಹಿತ್ಯಿಕ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯು ಲಭಿಸಿತು. ಬಹುಶಃ ಆಗ ಹೋರಾಟಗಾರ್ತಿ ಕೆ.ನೀಲಾ ಅವರು ಸಾಹಿತ್ಯ ಅಕಾಡೆಮಿಯ ಸದಸ್ಯರಾಗದೆ ಇದ್ದಿದ್ದರೆ, ಚಂದ್ರಪ್ಪ ಅವರನ್ನು ಸಾಹಿತ್ಯ ಅಕಾಡೆಮಿ ಗುರುತಿಸುತ್ತಿರಲಿಲ್ಲ.

ದುರಂತವೆಂದರೆ, ಇವರ ಆಯ್ಕೆಯನ್ನು ಇತರೆ ಅಕಾಡೆಮಿ ಸದಸ್ಯರು ವಿರೋಧಿಸಿದ್ದರು. ಕಾರಣ ಚಂದ್ರಪ್ಪ ಅವರ ಕೆಲಸವು ರಾಜ್ಯಮಟ್ಟದಲ್ಲಿ ಪ್ರಚಾರಕ್ಕೆ ಬಂದಿರಲಿಲ್ಲ. ಅಂತೆಯೇ ಹಳ್ಳಿಹಳ್ಳಿ ತಿರುಗಾಡಿ ವೈಚಾರಿಕತೆ ರೂಪಿಸುವ ಶ್ರಮದಾಯಕ ಕೆಲಸವು ಸಾಹಿತ್ಯ ಅಕಾಡೆಮಿಯ ಮೌಲ್ಯಮಾಪನಕ್ಕೆ ಸಿಕ್ಕದಿರುವುದು ಅಕಾಡೆಮಿಯ ಮಿತಿಯನ್ನೂ ತೋರಿಸುತ್ತದೆ. ಈ ಭಾಗದಲ್ಲಿ ಹೋರಾಟ ಚಳವಳಿ ವೈಚಾರಿಕ ಎಚ್ಚರವನ್ನು ಮೂಡಿಸುತ್ತಿರುವ ಕೆ.ನೀಲಾ, ಮೀನಾಕ್ಷಿ ಬಾಳಿ, ಪ್ರಭು ಖಾನಾಪುರೆ, ಆರ್.ಕೆ.ಹುಡುಗಿ ಮೊದಲಾದವರ ತಂಡದ ಜತೆ ಚಂದ್ರಪ್ಪ ಅವರೂ ಸೇರಿಕೊಂಡು ಕೆಲಸ ಮಾಡುತ್ತಾರೆ. ಹೀಗೆ ಸ್ಥಳೀಯವಾಗಿ ಗ್ರಾಮಗಳಲ್ಲಿ ವೈಚಾರಿಕತೆ ಮೂಡಿಸುವ ಇಂತಹ ಹಿರಿಯರ ಕೆಲಸಗಳನ್ನು ಗುರುತಿಸುವ ಅಗತ್ಯವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...