Homeಮುಖಪುಟಪ್ರಧಾನಿಯವರಿಗೆ ಇನ್ನೂ ಒಂದು ಅವಕಾಶ ಸಿಕ್ಕಿದೆ, ಅವರ ವೈಫಲ್ಯವು ದೇಶಕ್ಕೆ ಅಪಾಯ ತಂದಿಡುತ್ತದೆ

ಪ್ರಧಾನಿಯವರಿಗೆ ಇನ್ನೂ ಒಂದು ಅವಕಾಶ ಸಿಕ್ಕಿದೆ, ಅವರ ವೈಫಲ್ಯವು ದೇಶಕ್ಕೆ ಅಪಾಯ ತಂದಿಡುತ್ತದೆ

- Advertisement -
- Advertisement -

ಅಂಬೇಡ್ಕರ್ ಜಯಂತಿ, ಏಪ್ರಿಲ್ 14ರಂದು ಮೋದಿಯವರು ಕೊರೊನಾ ಲಾಕ್‍ಡೌನ್ ವಿಸ್ತರಿಸುವ ಘೋಷಣೆಯನ್ನು ಮಾಡಿದರು. ಹಿಂದಿನ ಸಾರಿ (ಮಾರ್ಚ್ 24ರಂದು) ಮಾಡಿದ ರೀತಿಯಂತೆಯೇ ಸರ್ಕಾರದಿಂದ ಲಾಕ್‍ಡೌನ್‍ನಿಂದ ಜನರಿಗಾಗುವ ಸಮಸ್ಯೆಗಳನ್ನು `ಅದರಲ್ಲೂ ಆರ್ಥಿಕ ಸಂಕಷ್ಟವನ್ನು’ ತಡೆಯಲು ಏನು ಮಾಡಲಾಗುತ್ತದೆಂಬ ಕುರಿತು ಪ್ರಧಾನಿಯವರು ಬಹುತೇಕ ಏನನ್ನೂ ಹೇಳಲಿಲ್ಲ. ಕೊರೊನಾ ಸೋಂಕು ವ್ಯಾಪಕವಾದರೆ ಅದನ್ನು ನಿಭಾಯಿಸಲು ಮಾಡಿಕೊಂಡಿರುವ ವೈದ್ಯಕೀಯ ತಯಾರಿಯ ವಿವರಗಳನ್ನೂ ಮುಂದಿಡಲಿಲ್ಲ. ಈ ಲಾಕ್‍ಡೌನ್‍ನಿಂದ ಒಟ್ಟಾರೆ ಆರ್ಥಿಕತೆಯೇ ಕುಸಿಯುತ್ತದಾದರೂ, ಒಂದೆರಡು ವಾರಗಳಲ್ಲಿ ಊಟದ ಸಮಸ್ಯೆಯನ್ನು ಎದುರಿಸುವ ಕನಿಷ್ಠ 40 ಕೋಟಿ ಜನರು ದೇಶದಲ್ಲಿದ್ದಾರೆ. ಅಂತಹವರಿಗೆ ತಕ್ಷಣದಲ್ಲೇ ಆಹಾರ ಭದ್ರತೆಯ ಭರವಸೆಯನ್ನು ನೀಡುವ ಅಗತ್ಯವಿತ್ತು. ಕಳೆದ ಸಾರಿ ಅದನ್ನು ಪ್ರಧಾನಿಯವರ ಭಾಷಣದ ಎರಡು ದಿನಗಳ ನಂತರ ಹಣಕಾಸು ಸಚಿವರು ಅರೆಬರೆ ರೂಪದಲ್ಲಿ ಮುಂದಿಟ್ಟರು.

ವಾಸ್ತವದಲ್ಲಿ ಪ್ರತಿನಿತ್ಯ ಊಟ ಹೊಂದಿಸಿಕೊಳ್ಳುತ್ತಿದ್ದವರೇ ಕೋಟಿಗಟ್ಟಲೇ ಜನರು. ಯಾವುದೇ ಬ್ಯಾಂಕ್ ಅಕೌಂಟುಗಳಿಲ್ಲದವರು ಈಗಲೂ ಕೋಟಿಗಟ್ಟಲೇ ಜನರಿದ್ದರು. ಅವರಿಗೆ ದಾನಿಗಳು ನೆರವಿಗೆ ಬಂದರು. ಕರ್ನಾಟಕದಂತಹ ರಾಜ್ಯಗಳಲ್ಲಿ ಮೊದಮೊದಲು ಇಂದಿರಾ ಕ್ಯಾಂಟೀನ್‍ಗಳಿಂದ ಅವರಿಗೆ ಉಚಿತ ಊಟ ಕೊಡಲಾಗುತ್ತಿತ್ತಾದರೂ ನಂತರ ಅದಕ್ಕೂ ಶುಲ್ಕ ವಿಧಿಸಲಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಇನ್ನು ನಮ್ಮ ಸಂಪಾದನೆಗೆ ಖೋತಾ ಬೀಳುತ್ತದೆ, ನಿತ್ಯದ ಊಟಕ್ಕೇ ತತ್ವಾರ ಎದುರಾಗಬಲ್ಲದು ಎಂಬ ಭೀತಿಗೊಳಗಾದವರಿಗೆ ಅನಿಶ್ಚಿತತೆ ಕಾಡತೊಡಗಿತಾದರೂ, ಇದೊಂದು ಅಸಾಧಾರಣ ಸಂದರ್ಭ ಎಂಬ ಕಾರಣಕ್ಕೆ ಜನರು ಅರ್ಥ ಮಾಡಿಕೊಂಡರು.

ಆದರೆ, ಈಗ ಮತ್ತೊಂದು ಲಾಕ್‍ಡೌನ್‍ನ ವಿಸ್ತರಣೆಯನ್ನು ಪ್ರಧಾನಿಯವರು ಘೋಷಿಸಿದ್ದಾರೆ ಮತ್ತು ಆರ್ಥಿಕ ಸಚಿವರು ಇನ್ನೊಮ್ಮೆ ಆರ್ಥಿಕ ನೆರವನ್ನು ಘೋಷಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಈಗಿನ ಪ್ರಧಾನಿಯವರ ಆಡಳಿತಕ್ಕೆ ಇರುವ ಅವಕಾಶಗಳು ಮತ್ತು ಸಾಧ್ಯತೆಗಳ ಕುರಿತು ಒಂದು ಅವಲೋಕನದ ಅಗತ್ಯ ಇದೆಯೆನಿಸಿತು. ಈ ಅವಲೋಕನ ಮಾಡುವಾಗ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕಿಟ್ಟು ಕೇವಲ ಆಡಳಿತಾತ್ಮಕ ಇಕ್ಕಟ್ಟು ಮತ್ತು ಸಾಧ್ಯತೆಳನ್ನಷ್ಟೇ ಗಮನದಲ್ಲಿಟ್ಟುಕೊಳ್ಳಲಾಗಿದೆ.

ಮೋದಿಯವರಿಗೆ ಕಳೆದ ಮೂರು ದಶಕಗಳಲ್ಲಿ ಈ ಹಿಂದಿನ ಯಾವುದೇ ಪ್ರಧಾನಿಗಿಲ್ಲದ ಅನುಕೂಲಗಳು ಕೆಲವಿದ್ದವು.

1. ಲೋಕಸಭೆಯಲ್ಲಿ ಇಷ್ಟು ಬಹುಮತ ಯಾರಿಗೂ ಸಿಕ್ಕಿರಲಿಲ್ಲ. ಹಾಗಾಗಿ ಹಿಂದಿನ ಸರ್ಕಾರಗಳಿಗಿದ್ದ ಸಮಸ್ಯೆ – ನಿರ್ಧಾರ ತೆಗೆದುಕೊಳ್ಳಲಾಗದ ಸಮಸ್ಯೆ ಇವರಿಗಿಲ್ಲ.

2. ಕಚ್ಚಾ ತೈಲ (ಕ್ರೂಡ್ ಆಯಿಲ್)ದ ಬೆಲೆ ಬಿದ್ದು ಹೋದದ್ದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರೀ ಹೊರೆ ತಪ್ಪಿ ಅದರ ಅನುಕೂಲವನ್ನು ಸರ್ಕಾರವು ಚೆನ್ನಾಗಿಯೆ ಪಡೆದುಕೊಂಡಿತು. ತೆರಿಗೆಯನ್ನು ವಿಪರೀತ ಏರಿಸಿ ಬೊಕ್ಕಸವನ್ನು ತುಂಬಿಸಿಕೊಂಡಿತು.

3. ಮೋದಿ ಆಳ್ವಿಕೆ ಶುರುವಾಗುವ ಹೊತ್ತಿಗೆ ಜಗತ್ತು ಮತ್ತೆ ಎರಡು ಧ್ರುವಗಳಾಗಿತ್ತು. ಅಂದರೆ ಬಹಳ ಹಿಂದೆ ಸೋವಿಯತ್ ಒಕ್ಕೂಟ ಮತ್ತು ಅಮೆರಿಕಾಗಳ ನಡುವೆ ಶೀತಲ ಸಮರ ನಡೆಯುತ್ತಿದ್ದಾಗ, ಜಗತ್ತಿಗೆ ಎರಡು ಆಯ್ಕೆಗಳಿದ್ದವು ಮತ್ತು ಇವೆರಡರ ಜೊತೆಗೂ ಇಲ್ಲದಂತೆಯೂ ಇದ್ದು ಅನುಕೂಲ ಪಡೆದುಕೊಳ್ಳುವ ಸಾಧ್ಯತೆಯೂ ಇತ್ತು. ಆದರೆ 1990ರ ನಂತರ ಏಕಧ್ರುವೀ ಜಗತ್ತಾಗಿತ್ತು. ಅಮೆರಿಕಾವು ಹೇಳಿದ್ದೇ ನೀತಿ. ಅದು ಹೋಗಿ ಚೀನಾವು ಬಲಾಢ್ಯವಾಗಿ ಬೆಳೆಯಿತಷ್ಟೇ ಅಲ್ಲ, ಉಳಿದ ದೇಶಗಳಿಗೂ ಮಹತ್ವ ಬಂದಿತು. 130 ಕೋಟಿ ಜನರ ಮಾರುಕಟ್ಟೆ ಹೊಂದಿರುವ ದೇಶಕ್ಕೆ ಒಂದಷ್ಟು ಚೌಕಾಶಿ ಮಾಡುವ ಶಕ್ತಿಯೂ ಒದಗಿ ಬಂದಿತ್ತು.

4. ಇದುವರೆಗೆ ಆಳಿದ ಸರ್ಕಾರಗಳು ನಿರ್ಮಿಸಿಕೊಟ್ಟಿದ್ದ ಬಲಾಢ್ಯವಾದ ಆಡಳಿತ, ಆರ್ಥಿಕ ವ್ಯವಸ್ಥೆ ಮತ್ತು ಮೂಲಸೌಕರ್ಯಗಳು ಹಾಗೂ ತಂತ್ರಜ್ಞಾನವನ್ನು ಬಳಸಿ ಆಡಳಿತ ನಡೆಸಬಲ್ಲ ಹೊಸ ಮಾದರಿಗಳು ಮೋದಿ ಸರ್ಕಾರಕ್ಕೆ ಆಯಾಚಿತವಾಗಿ ಸಿಕ್ಕಿದ್ದವು.

5. ಈ ಸರ್ಕಾರದ ವೈಫಲ್ಯವನ್ನು ಬಯಲುಗೊಳಿಸಿ ಪರ್ಯಾಯವನ್ನು ನಿರ್ಮಿಸಬಲ್ಲ ದೇಶವ್ಯಾಪಿಯಾದ ಒಂದೇ ಒಂದು ಶಕ್ತಿಯೂ ದೇಶದಲ್ಲಿಲ್ಲ ಮತ್ತು ಜನಸಾಮಾನ್ಯರಲ್ಲಿ ಮೋದಿ ಆಳ್ವಿಕೆಯ ಕುರಿತು ಅಪರಿಮಿತವಾದ ವಿಶ್ವಾಸ, ಭಕ್ತಿ, ಭಯ – ಬೇರೆ ದಾರಿ ಇಲ್ಲ ಎಂಬ ಭಾವನೆಗಳ ಮಿಶ್ರಣದಲ್ಲಿ ಎದುರಾಳಿಯೇ ಇಲ್ಲ. (ಹೀಗಾಗಿಯೇ ಮೋದಿ ಸರ್ಕಾರವಲ್ಲದೇ ಇನ್ಯಾವ ಸರ್ಕಾರವಿದ್ದರೂ ಈ ರೀತಿಯ ಲಾಕ್‍ಡೌನ್ ಮಾಡಲು ಸಾಧ್ಯವಿರಲಿಲ್ಲ ಎಂಬ ಮಾತಿದೆ.)

6. ಕಠೋರ ನಿರ್ಧಾರಗಳನ್ನು ತೆಗೆದುಕೊಂಡು ದೇಶದ ಜನರಿಗೆ ಅನುಕೂಲ ಮಾಡಿಕೊಡುವ ಎಲ್ಲಾ ಸಾಧ್ಯತೆಗಳೂ ಮೋದಿಯವರ ಮುಂದೆ ಇತ್ತು. ಅವರು ಅಧಿಕಾರ ವಹಿಸಿಕೊಂಡಾಗ ದೇಶದ ಶೇ.40ರಷ್ಟು ಆರ್ಥಿಕತೆಯು ಕಪ್ಪುಹಣದ ಮೇಲೆ ನಿಂತಿತ್ತು (2016ರಲ್ಲಿ 150 ಲಕ್ಷ ಕೋಟಿಗಳ ಪೈಕಿ ಸುಮಾರು 60 ಲಕ್ಷ ಕೋಟಿ). ಇಷ್ಟು ವರ್ಷಗಳಲ್ಲಿ ಶೇಖರಣೆಯಾಗಿದ್ದ ಕಪ್ಪುಹಣದಲ್ಲಿ ಗಣನೀಯ ಪ್ರಮಾಣವನ್ನು ವಾಪಸ್ ತಂದರೆ ಅಗಾಧವಾದ ಸಂಪನ್ಮೂಲ ಲಭ್ಯವಾಗುತ್ತಿತ್ತು. (ಚಿನ್ನದ ರಸ್ತೆ ಹಾಕಬಹುದು ಎಂಬ ಮೋದಿ ಅಭಿಮಾನಿಗಳ ಉತ್ಪ್ರೇಕ್ಷೆಯ ಉತ್ಪ್ರೇಕ್ಷೆಯನ್ನು ಪಕ್ಕಕ್ಕಿಟ್ಟರೂ) ಅದರಿಂದ ಸಾಧ್ಯವಿದ್ದ ಅಭಿವೃದ್ಧಿಯು ಊಹಿಸಲಸಾಧ್ಯ. ಎರಡನೆಯದಾಗಿ ಮುಂದಿನ ದಿನಗಳಲ್ಲಿ ಅಂತಹ ಕಪ್ಪುಹಣವೇ ಶೇಖರಣೆಯಾಗದಂತೆ ತಡೆದರೆ (ಕನಿಷ್ಠ ಶೇ.50) ದೇಶಕ್ಕೆ ಲಭ್ಯವಾಗುತ್ತಿದ್ದ 30 ಲಕ್ಷ ಕೋಟಿಗಳ ಮೇಲಿನ ತೆರಿಗೆಯೂ ದೊಡ್ಡ ಆಸರೆಯಾಗುತ್ತಿತ್ತು.

7. ಪ್ರಪಂಚದಾದ್ಯಂತ ಪರಿಸರದ ಮೇಲಿನ ಆಸ್ಥೆ ಹೆಚ್ಚಾಗುತ್ತಿತ್ತು. ಮೋದಿಯವರು ಅದನ್ನು ಬಳಸಿಕೊಂಡು ದೇಶದ ಮಧ್ಯಮವರ್ಗದಲ್ಲಿ ತುಂಬಬಹುದಾಗಿದ್ದ ಸುಸ್ಥಿರ ಬದುಕಿನ ತತ್ವಗಳು ಉಳಿದೆಲ್ಲರಿಗೂ ಮಾದರಿಯಾಗಿ ನೆಮ್ಮದಿಯುತ ಬಾಳ್ವೆಗೆ ದಾರಿ ಮಾಡಿಕೊಡುತ್ತಿತ್ತು.
ಈ ಎಲ್ಲಾ ಕಾರಣಗಳಿಂದ ಅಪಾರವಾದ ಸಾಧನೆಗಳನ್ನು ಮಾಡಬಹುದಾಗಿತ್ತು. ಒಂದು ವೇಳೆ ಹೆಚ್ಚಿನ ಸಾಧನೆಯಾಗದಿದ್ದರೆ ಅದರಿಂದ ದೇಶವೇನೂ ಮುಳುಗಿ ಹೋಗುತ್ತಿರಲಿಲ್ಲ. ಆದರೆ ಸಾಧನೆಗಳಲ್ಲದ ಸಾಧನೆಗಳನ್ನು ಬಿಂಬಿಸುವ ಮತ್ತು ಸುಳ್ಳುಗಳನ್ನು ಬಿತ್ತರಿಸುವ ಅಭಿಮಾನಿಗಳ ಪಡೆ ದೊಡ್ಡ ಭ್ರಮೆಯನ್ನು ಸೃಷ್ಟಿಸಿತು. ಮಿಕ್ಕ ಸರ್ಕಾರಗಳು ಭ್ರಮೆಯನ್ನು ಸೃಷ್ಟಿಸಿಲ್ಲವೆಂದೋ, ಅಂತಹ ಭ್ರಮಾತ್ಮಕ ವಿಶ್ವಾಸವಿಲ್ಲದೇ ಅಧಿಕಾರ ನಡೆಸಬಹುದೆಂದೋ ಇದರರ್ಥವಲ್ಲ. ಆದರೆ ತಳಪಾಯ ಗಟ್ಟಿಯಿಲ್ಲದೇ ಉಬ್ಬಿಸುವ ಭ್ರಮೆಗಳು ಮುಂದೊಂದು ದಿನ ಭಾರೀ ದೊಡ್ಡ ಆಘಾತಕ್ಕೆ ದಾರಿಮಾಡಿಕೊಡುತ್ತವೆ. ಅಂತಹ ಆಘಾತವನ್ನು ತಡೆಗಟ್ಟಲೆಂದೇ ಸಾಮಾಜಿಕ, ಧಾರ್ಮಿಕ ಬಿಕ್ಕಟ್ಟಿನ ಮೂಲಕ ದಿಕ್ಕು ತಪ್ಪಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುವಂತೆ ಆಡಳಿತ ಪಕ್ಷದ ಇಡೀ ಪರಿವಾರದ ನಡವಳಿಕೆ ಇದೆ.

ಮತ್ತೊಮ್ಮೆ ಸಂಕ್ರಮಣದ ಸ್ಥಿತಿಯಲ್ಲಿ ಜಗತ್ತೇ ನಿಂತಿರುವಾಗ ಭಾರತವೂ ಸಂಕ್ರಮಣ ಕಾಲಘಟ್ಟದಲ್ಲೇ ಇದೆ. ಕೊರೊನಾ ಉಂಟುಮಾಡಬಹುದಾದ ಆರ್ಥಿಕ ಪರಿಣಾಮಗಳ ಭೀಕರತೆಯು ಇಡೀ ದೇಶವನ್ನು ಅಲ್ಲಾಡಿಸಿಬಿಡುವ ಎಲ್ಲಾ ಸಾಧ್ಯತೆಗಳೂ ಇದೆ. ಆದರೆ ಇಂದಿನ ಸ್ಥಿತಿಯಲ್ಲಿ ಮೋದಿ ಸರ್ಕಾರಕ್ಕೆ ಅವಕಾಶಗಳೂ ಇವೆ. ಅದಕ್ಕೆ ಕಾರಣಗಳನ್ನು ಈಗಾಗಲೇ ಮೇಲೆ ಪಟ್ಟಿ ಮಾಡಲಾಗಿದೆ. ಈಗಲೂ ಅವೆಲ್ಲಾ ಸಂಗತಿಗಳು ಅನ್ವಯವಾಗುತ್ತವೆ. ಕಚ್ಚಾ ತೈಲದ ಬೆಲೆಯೂ ಮತ್ತೊಮ್ಮೆ ತಳಮುಟ್ಟಿದೆ ಮತ್ತು ಸರ್ಕಾರವು ತೆರಿಗೆಯನ್ನು ಮತ್ತಷ್ಟು ಏರಿಸಿ ತಿಜೋರಿ ತುಂಬಿಸಿಕೊಳ್ಳುತ್ತಿದೆ. ಆದರೆ ಈಗ ಒಂದು ವಿಚಾರದಲ್ಲಿ ಬದಲಾವಣೆ ಇದೆ. ಅದೇನೆಂದರೆ ಈಗ ಮೋದಿ ಸರ್ಕಾರವು ತನಗಿರುವ ಅವಕಾಶವನ್ನು ಬಳಸಿಕೊಂಡು ದೇಶದಲ್ಲಿ ಸಕಾರಾತ್ಮಕ ಬದಲಾವಣೆ ತರದಿದ್ದರೆ ನಿಜಕ್ಕೂ ದೇಶ ಮುಳುಗಿ ಹೋಗುತ್ತದೆ.

ಕೊರೊನಾ ಸಂದರ್ಭವು ಮೋದಿಯವರಿಗೆ ಇನ್ನೊಂದು ರೀತಿಯ ಅನುಕೂಲವನ್ನೂ ತಂದಿದೆ ಎಂಬುದನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಪ್ರಪಂಚದ ಹಲವು ದೇಶಗಳಲ್ಲಿಯಂತೆ ಭಾರತದಲ್ಲಿ ಕೊರೊನಾ ಸೋಂಕು ವ್ಯಾಪಕವಾಗುತ್ತಿಲ್ಲ. ಎಚ್ಚರಿಕೆ ತೆಗೆದುಕೊಳ್ಳಲು ಬೇಕಾದ ಸಮಯವೂ ಸಿಕ್ಕಿದೆ. ಸೋಂಕು ಹರಡದಿರಲು ವೈದ್ಯಕೀಯ ಕಾರಣಗಳೇನು ಎಂಬುದರ ಕುರಿತು ಒಮ್ಮತ ಇನ್ನೂ ವೈಜ್ಞಾನಿಕ ವಲಯದಲ್ಲಿ ಮೂಡಿಲ್ಲ. ಬಿಸಿಜಿ (ಟಿಬಿ ರೋಗ ತಡೆಯಲು) ವ್ಯಾಕ್ಸಿನೇಷನ್ ಈ ದೇಶದಲ್ಲಿ ಬಹುತೇಕರಿಗೆ ಆಗಿರುವುದರಿಂದ ಅದು ಕೊರೊನಾವನ್ನು ನಿರೋಧಿಸುತ್ತದೆ; ಈ ದೇಶದಲ್ಲಿ ಮಂದೆ ನಿರೋಧಕತೆ (Herd immunity) ಹಲವು ರೀತಿಯಲ್ಲಿರುವುದರಿಂದ ಇಲ್ಲಿ ಕೊರೊನಾ ಸಮಸ್ಯೆಯಾಗದು; ಭಾರತಕ್ಕೆ ಬಂದಿರುವ ವೈರಸ್‍ನ ತಳಿಯೇ ದುರ್ಬಲವಾದದ್ದು; ಭಾರತದಲ್ಲಿ ಸೋಂಕು ಹರಡುವ ಹೊತ್ತಿಗೆ ಬೇಸಿಗೆ ಶುರುವಾದದ್ದರಿಂದ ಇಲ್ಲಿ ಆ ಪ್ರಮಾಣದಲ್ಲಿ ಹಬ್ಬುವುದಿಲ್ಲ.

ಇವೆಲ್ಲವೂ ಕಾರಣವಿರಬಹುದು. ಅಥವಾ ಇವಕ್ಕಿಂತ ಬೇರೆ ಕಾರಣಗಳಿರಲೂಬಹುದು. ಈ ಸದ್ಯ ಅದರ ಬಗ್ಗೆ ವೈಜ್ಞಾನಿಕ ವಲಯಗಳಲ್ಲೆ ಒಮ್ಮತವಿಲ್ಲ. ಲಾಕ್‍ಡೌನ್‍ನಿಂದ ಎಷ್ಟರಮಟ್ಟಿಗೆ ಅನುಕೂಲ ಎಂಬುದೂ ಚರ್ಚೆಗೆ ಒಳಪಟ್ಟಿದೆ. ಹೀಗಿರುವಾಗ ಎಲ್ಲಾ ಸಮಸ್ಯೆಗಳಿಗೂ ಮೋದಿಯವರೇ ಕಾರಣ ಎಂಬುದು ತಪ್ಪಾಗುತ್ತದೆ; ಹಾಗೆಯೇ ಎಲ್ಲಾ ಸಾಧನೆಗಳಿಗೂ ಮೋದಿಯೇ ಕಾರಣ ಎಂಬುದೂ ತಪ್ಪೇ. ದೇಶದ ಪ್ರಧಾನಿಯಾಗಿ ಅವರು ಲಾಕ್‍ಡೌನ್ ಜಾರಿಮಾಡದೇ ಇರುವ ನಿರ್ಧಾರ ಕೈಗೊಳ್ಳಲು ಸಾಧ್ಯವಿರಲಿಲ್ಲ. ಹಾಗಾಗಿ ಆ ವಿಚಾರದಲ್ಲಿ ಚರ್ಚೆಯನ್ನು ಬೆಳೆಸುವುದರಲ್ಲಿ ಅರ್ಥವಿಲ್ಲ. ಲಾಕ್‍ಡೌನ್ ಅನುಷ್ಠಾನಗೊಳಿಸಲು ಪ್ರಧಾನಿಯವರಿಗೆ ದೇಶದ ಜನರೆಲ್ಲರೂ ಬೇಷರತ್ತಾಗಿ ಸಹಕಾರ ನೀಡಬೇಕು.
ಅದೇ ರೀತಿಯಲ್ಲಿ ಪ್ರಧಾನಿ ಮೋದಿಯವರೂ ಸಹಾ ದೇಶದ ಪ್ರಧಾನಿಯಾಗಿ ತನ್ನನ್ನು ತಾನು ಮರು ನಿರೂಪಿಸಿಕೊಳ್ಳುವ ಅಗತ್ಯವಿದೆ.

ಎಂತಹ ಸಂದರ್ಭದಲ್ಲೂ ಕಾರ್ಪೋರೇಟ್ ಕುಳಗಳ ಪರವಾಗಿ ನಿಲ್ಲುತ್ತಾರೆನ್ನುವ ಆರೋಪದಿಂದ ಹೊರಬರುವ ಕ್ರಮಗಳನ್ನು ತೆಗೆದುಕೊಳ್ಳುವುದು, ಧಾರ್ಮಿಕ ಪಕ್ಷಪಾತ ಹಾಗೂ ದಬ್ಬಾಳಿಕೆಯ ಇಮೇಜ್‍ಅನ್ನು ಬಿಡಿಸಿಕೊಳ್ಳುವುದು, ದಕ್ಷ ಹಾಗೂ ಪರಿಣಾಮಕಾರಿ ಆಡಳಿತಗಾರನಾಗಿ ನಿರೂಪಿಸಿಕೊಳ್ಳುವುದು – ಇವು ಆ ಮರುನಿರೂಪಣೆಯ ಅತ್ಯಗತ್ಯ ಅಂಶಗಳಾಗಿರಬೇಕು

ಈ ದೃಷ್ಟಿಯಿಂದ ಮೋದಿಯವರ ಆಡಳಿತದ ಮಟ್ಟಿಗೆ ಈ ವಾರ ಮತ್ತು ಇನ್ನೊಂದು ತಿಂಗಳು ಬಹಳ ಮಹತ್ವದ್ದಾಗಿದೆ. ಇಂದಿನ ಅವರ ಭಾಷಣವನ್ನಷ್ಟೇ ಗಮನದಲ್ಲಿಟ್ಟುಕೊಂಡರೆ ಗಂಭೀರವಾದ ಆತಂಕ ಎದುರಾಗುತ್ತದೆ. ಏಕೆಂದರೆ ಮತ್ತೆ ದೇಶದ ಆರ್ಥಿಕತೆಯ ಚೇತರಿಕೆಗೆ, ಕೋಟ್ಯಾಂತರ ಬಡವರಿಗೆ ಪುನಶ್ಚೇತನದ ಭರವಸೆ ನೀಡುವ ನಿರ್ದಿಷ್ಟ ಯೋಜನೆ ಇರಲೇ ಇಲ್ಲ. ಏಪ್ರಿಲ್ 20ರ ಹೊತ್ತಿಗೆ ಕೃಷಿ ಸೇರಿದಂತೆ ಹಲವು ವಲಯಗಳಿಗೆ (ದಿನಗೂಲಿ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು) ಸ್ವಲ್ಪ ವಿನಾಯಿತಿ ನೀಡಲಾಗುತ್ತದೆ ಎಂದು ಹೇಳಿದ್ದಾರಾದರೂ, ಒಟ್ಟಾರೆ ಆರ್ಥಿಕತೆಗೆ ಬಿದ್ದಿರುವ ಮತ್ತು ಇನ್ನೂ ಮುಂದುವರೆಯಲಿರುವ ಪೆಟ್ಟನ್ನು ನಿಭಾಯಿಸಲು ಸರ್ಕಾರದಿಂದ ಯಾವ ನಿರ್ದಿಷ್ಟ ಕ್ರಮವೂ ಘೋಷಣೆಯಾಗಲಿಲ್ಲ. ಈಗಿಂದೀಗಲೇ ದೇಶದ ಜಿಡಿಪಿಯ ಶೇ.15ರಷ್ಟನ್ನಾದರೂ ಜನಸಾಮಾನ್ಯರ ಜೇಬಿಗೆ, ಕುಟುಂಬಕ್ಕೆ, ವಿವಿಧ ಉತ್ಪಾದನಾ ಘಟಕಗಳಿಗೆ (ಕೃಷಿ ಜಮೀನೂ ಒಳಗೊಂಡಂತೆ) ತಲುಪಿಸುವ ಕೆಲಸ ಆಗಬೇಕು. ಅದು ಮಾತ್ರವೇ ನಮ್ಮ ಆರ್ಥಿಕತೆಯನ್ನು ಕುಸಿಯದಂತೆ ತಡೆಯಬಲ್ಲುದು.

ಸಬ್‍ಕಾ ಸಾಥ್ ಸಬ್‍ಕಾ ವಿಶ್ವಾಸ್ ಎಂಬುದು ಕೇವಲ ಮಾತಿನ ಗಿಲೀಟು ಎಂಬಂತಾಗಲು ಕಾರಣವಿದೆ. ಪ್ರಧಾನಿಯವರು ಚುನಾವಣಾ ಸಂದರ್ಭದಲ್ಲಿ ಮುಸ್ಲಿಂ ದ್ವೇಷದ ಮಾತುಗಳನ್ನಾಡುತ್ತಾರೆ ಮತ್ತು ಉಳಿದೆಲ್ಲಾ ಸಂದರ್ಭದಲ್ಲಿ ಅವರ ಪಡೆಗಳು ನಿರಂತರವಾಗಿ ಆ ಕೆಲಸ ಮಾಡುತ್ತಲಿರುತ್ತವೆ ಎಂಬುದನ್ನು ಕಳೆದ ಐದೂವರೆ ವರ್ಷಗಳು ಸಾಬೀತುಪಡಿಸಿವೆ. ಮಾನವೀಯ ದುರಂತದ ಸಂದರ್ಭವಾದ ಕೊರೊನಾ ಸೋಂಕಿನ ಹೊತ್ತಿನಲ್ಲೂ ಅದು ಕಂಡುಬಂದಿತು. ಈಗಲಾದರೂ (ಕನಿಷ್ಠ ಯಡಿಯೂರಪ್ಪನವರಂತೆ ಕೇವಲ ಮಾತಿನಲ್ಲಾದರೂ) ಎಚ್ಚರಿಕೆ ನೀಡುವ ಶಬ್ದಗಳು ಪ್ರಧಾನಿಯವರ ಬಾಯಿಯಿಂದ ಹೊರಬರಲಿಲ್ಲ. ಈ ಸಂದರ್ಭದಲ್ಲೂ ಅವರು ಮುತ್ಸದ್ದಿತನ ತೋರಲಿಲ್ಲ.

ಇದರದ್ದೇ ಇನ್ನೊಂದು ವಿಸ್ತರಣೆ ವಿರೋಧ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು. ಇದುವರೆಗೆ ರಾಜ್ಯಗಳಿಗೆ ಕರೆ ನೀಡಿದ್ದು ಬಿಟ್ಟರೆ ವಿಶ್ವಾಸಾರ್ಹ ಮೊತ್ತದ ಅನುದಾನವನ್ನು ಮತ್ತು ಅಧಿಕಾರವನ್ನು ಕೇಂದ್ರ ಸರ್ಕಾರ ನೀಡಿಲ್ಲ. ಇನ್ನು ಮುಂದೆ ರಾಜ್ಯ ಸರ್ಕಾರಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿಕೊಳ್ಳಲಿದ್ದು ಕೇಂದ್ರವು ಎಲ್ಲಾ ರೀತಿಯಲ್ಲಿ ರಾಜ್ಯಗಳಿಗೆ ಅನುದಾನ ಮತ್ತು ಸ್ವಾಯತ್ತತೆಯನ್ನು ಖಾತರಿಪಡಿಸಬೇಕು.

ಜೊತೆಗೆ ಭಾರತದ ವೈದ್ಯಕೀಯ ವ್ಯವಸ್ಥೆಯನ್ನು ಸರ್ಕಾರೀ ವಲಯದಲ್ಲಿ ಬಲಪಡಿಸಲು ಇದೊಂದು ಸುವರ್ಣಾವಕಾಶವಾಗಿದೆ. ಪ್ರತಿಯೊಂದು ಜಿಲ್ಲಾಸ್ಪತ್ರೆಯನ್ನು ಸುಸಜ್ಜಿತವಾದ ಉನ್ನತ ದರ್ಜೆಯ (Tertiary care) ಆಸ್ಪತ್ರೆಯನ್ನಾಗಿಸಲು ಇದಕ್ಕಿಂತ ಇನ್ಯಾವ ಸಂದರ್ಭ ಬೇಕಿದೆ? ವೆಂಟಿಲೇಟರ್, ಡಯಾಲಿಸಿಸ್ ಯಂತ್ರಗಳು ಮತ್ತು ಸಿಬ್ಬಂದಿಯ ನೇಮಕ ಹಾಗೂ ಇರುವ ಸಿಬ್ಬಂದಿಗೆ ಉಪಕರಣಗಳನ್ನು ಒದಗಿಸುವುದು ಕೂಡಲೇ ಆಗಬೇಕು. ಗುತ್ತಿಗೆ ಆಧಾರದಲ್ಲಿ ಇರುವ ಎಲ್ಲಾ ಸಿಬ್ಬಂದಿಯನ್ನು ಖಾಯಂಗೊಳಿಸುವ ಆದೇಶ ಆಗಬೇಕು. ಅಗತ್ಯವಿರುವ ಪರಿಣಿತ ಮಾನವ ಸಂಪನ್ಮೂಲವನ್ನು ಮುಂದಿನ ದಿನಗಳಲ್ಲಾದರೂ ಖಾತರಿಗೊಳಿಸಲು ಮೆಡಿಕಲ್ ಕಾಲೇಜಲ್ಲದ ಜಿಲ್ಲಾಸ್ಪತ್ರೆಗಳೆಲ್ಲಾ ಕಡೆ ಡಿಎನ್‍ಬಿ ತೆರೆದು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಘೋಷಣೆ ಮಾಡಬೇಕು. ಅಲ್ಲಿಯವರೆಗೆ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವವರು ಬಂದು ಕೆಲಸ ಮಾಡುವುದಕ್ಕೆ ಅವಕಾಶ ಇಲ್ಲವೇ ಕಡ್ಡಾಯಗೊಳಿಸುವ ನಿಯಮ ಜಾರಿಗೆ ತರಬೇಕು. ಕೊರೊನಾ ಕಾಲವು ತರಬಹುದಾದ ಒಂದು ಮುಖ್ಯ ಬದಲಾವಣೆ ಇದೂ ಆಗಿರಲು ಸಾಧ್ಯ. ಇವೆಲ್ಲವೂ ಮೋದಿಯವರಿಗೆ ಇರುವ ಅವಕಾಶಗಳ ಕಾರಣಕ್ಕೆ ಮಾತ್ರ ಆಗಬಹುದಾದ್ದಲ್ಲ; ಈ ದೇಶವು ಉಳಿದುಕೊಳ್ಳಲು ಅನಿವಾರ್ಯವಾದ ಕ್ರಮಗಳು. ಆ ನಿಟ್ಟಿನಲ್ಲಿ ಮೋದಿಯವರು ಪ್ರಯತ್ನಿಸಿದರೆ ಅವರ ಅಭಿಮಾನಿಗಳು ಬಯಸುವಂತೆ ಅವರೇ ಇನ್ನು ಹತ್ತು ವರ್ಷ ದೇಶವನ್ನು ಆಳಲು ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ. ಇಲ್ಲವಾದರೆ ಮುಂದಿನ ದಿನಗಳು ಅವರಿಗೆ ಪರ್ಯಾಯವನ್ನು ಹುಡುಕಿಕೊಳ್ಳುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...