ಪಶ್ಚಿಮ ಅಮೆರಿಕದ ಸಿಯಾಟಿಲ್‌ನ ಪೊಲೀಸ್ ಮುಕ್ತ ಸ್ವಾಯತ್ತ ವಲಯವನ್ನು ಪ್ರತಿಭಟನೆಯ ವಿಷಯದಲ್ಲಿ ಮಧ್ಯಪ್ರವೇಶಿಸುವುದಾಗಿ ಹೇಳಿದ ಟ್ರಂಪ್‌ಗೆ “ನಿಮ್ಮ ಬಂಕರ್‌ಗೆ ಹಿಂತಿರುಗಿ” ಎಂದು ಸಿಯಾಟಲ್‌ನ ಮೇಯರ್ ಜೆನ್ನಿ ಡರ್ಕನ್ ಎಚ್ಚರಿಕೆ ನೀಡಿದ್ದಾರೆ.
ಜಾರ್ಜ್ ಫ್ಲಾಯ್ಡ್ ಅವರ ಸಾವಿನಿಂದ ಉಂಟಾದ ವರ್ಣಭೇದ ನೀತಿ ಮತ್ತು ಪೋಲಿಸ್ ಕ್ರೌರ್ಯದ ವಿರುದ್ಧದ ಬೃಹತ್ ಪ್ರತಿಭಟನಾ ಪ್ರದರ್ಶನಗಳು ಅಧ್ಯಕ್ಷರ ನಿವಾಸವನ್ನು ತಲುಪಿದ್ದಾಗ ಟ್ರಂಪ್ ಅವರು ಶ್ವೇತಭವನದ ಸುರಕ್ಷಿತ ಪ್ರದೇಶ “ಬಂಕರ್”ನಲ್ಲಿ ಅಡಗಿ ಕೂತಿದ್ದರು ಎಂದು ಕಳೆದ ವಾರ ಮಾಧ್ಯಮಗಳು ವರದಿ ಮಾಡಿದ್ದವು.
ಇದನ್ನೂ ಓದಿ: ಪ್ರತಿಭಟನಾಕಾರರಿಗೆ ಹೆದರಿ ಶ್ವೇತಭವನದ ಬಂಕರ್ ನಲ್ಲಿ ಅಡಗಿದ ಡೊನಾಲ್ಡ್ ಟ್ರಂಪ್
ಸಿಯಾಟಲ್‌ನಲ್ಲಿ “ಕ್ಯಾಪಿಟಲ್ ಹಿಲ್ ಸ್ವಾಯತ್ತ ವಲಯ” ಅಥವಾ CHAZ ಎಂದು ಕರೆಯಲ್ಪಡುವ ನೆರೆಹೊರೆಯಲ್ಲಿ ಪ್ರತಿಭಟನೆಗಳನ್ನು ನಡೆಸಲು ಪ್ರತಿಭಟನಾಕಾರರು ಮತ್ತು ನಗರದ ಪೊಲೀಸ್ ಇಲಾಖೆ ಒಪ್ಪಿಕೊಂಡಿದೆ. ಇಂತಹ ಪ್ರದೇಶಕ್ಕೆ ಮಧ್ಯಪ್ರವೇಶಿಸುವುದಾಗಿ ಟ್ರಂಪ್ ಹೇಳಿದಾಗಿನಿಂದ ವಿವಾದ ಭುಗಿಲೆದ್ದಿದೆ.
ಕ್ರಾಂತಿಕಾರಿ ಎಡಪಂಥೀಯರು ಗವರ್ನರ್ ಜೇಇನ್ಸ್ಲೀ ಮತ್ತು ಸಿಯಾಟಲ್ ಮೇಯರ್ ಅವರನ್ನು ನಮ್ಮ ಮಹಾನ್ ದೇಶ ಹಿಂದೆಂದೂ ನೋಡಿರದ ಮಟ್ಟದಲ್ಲಿ ನಿಂದಿಸುತ್ತಿದ್ದಾರೆ. ಇದೀಗ ನಿಮ್ಮ ನಗರವನ್ನು ಹಿಂತಿಗೆದುಕೊಳ್ಳಿ. ನೀವು ಅದನ್ನು ಮಾಡದಿದ್ದರೆ, ನಾನು ಮಾಡುತ್ತೇನೆ. ಇದು ಆಟವಲ್ಲ. ಈ ಕೊಳಕು ಅರಾಜಕತಾವಾದಿಗಳನ್ನು ತಕ್ಷಣವೇ ನಿಲ್ಲಿಸಬೇಕು. ವೇಗವಾಗಿ ಸರಿಸಿ! ಎಂದು ಡೋನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು.
Radical Left Governor @JayInslee and the Mayor of Seattle are being taunted and played at a level that our great Country has never seen before. Take back your city NOW. If you don’t do it, I will. This is not a game. These ugly Anarchists must be stopped IMMEDIATELY. MOVE FAST!
— Donald J. Trump (@realDonaldTrump) June 11, 2020
ಇದಕ್ಕೆ ಮೇಯರ್ ಜೆನ್ನಿ ಡರ್ಕನ್ ಉತ್ತರಿಸುತ್ತಾ, “ನಮ್ಮೆಲ್ಲರನ್ನೂ ಸುರಕ್ಷಿತರನ್ನಾಗಿ ಮಾಡಿ, ನಿಮ್ಮ ಬಂಕರ್‌ಗೆ ಹಿಂತಿರುಗಿ” ಎಂದು ಅಪಹಾಸ್ಯ ಮಾಡಿದ್ದಾರೆ. ಇನ್ನು ಸಿಯಾಟಲ್ ಗವರ್ನರ್ ಜೇಇನ್ಸ್ಲೀ ಸಹ ಟ್ರಂಪ್‌ಗೆ ತಿರುಗೇಟು ನೀಡಿದ್ದು, “ಆಡಳಿತದಲ್ಲಿ ಸಂಪೂರ್ಣವಾಗಿ ಅಸಮರ್ಥನಾದ ವ್ಯಕ್ತಿ ವಾಷಿಂಗ್ಟನ್‌ನಿಂದ ಹೊರತಾದ ರಾಜ್ಯದ ವ್ಯವಹಾರದಿಂದ ಹೊರಗುಳಿಯಬೇಕು. ಟ್ವೀಟ್ ಮಾಡುವುದನ್ನು ನಿಲ್ಲಿಸಿ” ಎಂದು ಇನ್ಸ್ಲೀ ಬರೆದಿದ್ದಾರೆ.
ಮೇ 25 ರಂದು ಮಿನ್ನಿಯಾಪೋಲಿಸ್‌ನಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಕೊಲ್ಲಲ್ಪಟ್ಟ ನಿರಾಯುಧ ಕಪ್ಪು ವ್ಯಕ್ತಿಯಾದ ಫ್ಲಾಯ್ಡ್ ಸಾವಿನ ನಂತರ ದೇಶಾದ್ಯಂತ ಪ್ರತಿಭಟನೆಗಳು ನಡೆದಿವೆ.
ಸಿಯಾಟಲ್‌ನ ಸ್ವಾಯತ್ತ ವಲಯ ಸ್ಥಾಪನೆಯ ಹಿಂದೆ ಎಡಪಂಥೀಯ ಕಾರ್ಯಕರ್ತರು ಇದ್ದಾರೆ ಎಂಬ ವರದಿಗಳನ್ನು ಸಿಯಾಟಲ್‌ನ ಅಧಿಕಾರಿಗಳು ನಿರಾಕರಿಸಿದ್ದಾರೆ.
‘ನಗರವನ್ನು ಹಿಂದಕ್ಕೆ ತೆಗೆದುಕೊಳ್ಳಿ’ ಎಂದು ಟ್ವೀಟ್ ಮಾಡುವ ಟ್ರಂಪ್ ಮಾತಿನ ಅರ್ಥವೇನು ಎಂದು ಪ್ರತಿಭಟನಾಕಾರರೊಬ್ಬರು ಪ್ರಶ್ನಿಸಿದ್ದಾರೆ. “ಇದು ನಮ್ಮ ನಗರ. ನಾನು ಹುಟ್ಟಿ ಬೆಳೆದದ್ದು ಈ ಡ್ಯಾಮ್ ಸಿಟಿಯಲ್ಲಿ. ಇದನ್ನು ಜನರಿಗೆ, ಸಿಯಾಟಲ್‌ನಲ್ಲಿ ವಾಸಿಸುವ ಮತ್ತು ಇಲ್ಲಿ ಅಭಿವೃದ್ಧಿ ಹೊಂದುತ್ತಿರುವ ಜನರಿಗೆ ನೀಡೋಣ” ಎಂದು ಅವರು ತಿಳಿಸಿದ್ದಾರೆ.
ಆಫ್ರಿಕನ್-ಅಮೇರಿಕನ್ ಪ್ರತಿಭಟನಾಕಾರ ರಿಚ್ ಬ್ರೌನ್ “ಭಾನುವಾರ ಈ ಪ್ರದೇಶವನ್ನು ತೆರವುಗೊಳಿಸುವ ಪ್ರಯತ್ನದಲ್ಲಿ ಪೊಲೀಸರು ಅಶ್ರುವಾಯು ಮತ್ತು ಫ್ಲ್ಯಾಷ್ ಬ್ಯಾಂಗ್ ಗ್ರೆನೇಡ್‌ಗಳನ್ನು ಬಳಸಿದಾಗ ನಾನು ಬಹಳ ಹೆದರಿದ್ದೆ ಎಂದಿದ್ದಾನೆ. ಆದರೆ ಇಂದು ನನಗೆ ಬೆಂಬಲ ಮತ್ತು ಸ್ವಾಗತ ಸಿಕ್ಕಿದೆ. ಈಗ ನಾವು ಬೆದರಿಕೆ ಇಲ್ಲದೆ, ಭಯವಿಲ್ಲದೆ ಮಾತನಾಡಲು ಸಮರ್ಥರಾಗಿದ್ದೇವೆ. ಈ ಸಮಯವನ್ನಲ್ಲವೇ ನಾವು ಬಯಸುತ್ತಿದ್ದುದು?” ಎಂದಿದ್ದಾರೆ.
ಈ ಹಿಂದೆ ಇದೇ ರೀತಿ ಪ್ರತಿಭಟನೆಯ ವಿಷಯವಾಗಿ ಟ್ರಂಪ್ ಹೇಳಿಕೆ ನೀಡಿದ್ದಾಗ ಅಮೆರಿಕಾ ಪೊಲೀಸ್ ಅಧಿಕಾರಿಯೊಬ್ಬ ಅಧ್ಯಕ್ಷ ಟ್ರಂಪ್‌ಗೆ “ಬಾಯಿಮುಚ್ಚಿಕೊಂಡಿರಿ” ಎಂದು ತಾಕೀತು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಮತ್ತಷ್ಟು ಸುದ್ದಿಗಳು
ನಮ್ಮ ಕೋವಿಡ್ ಪ್ಯಾಕೇಜ್ ನಿಮ್ಮ ಜಿಡಿಪಿಗಿಂತ ಡೊಡ್ಡದಿದೆ; ಪಾಕ್ ಸಹಾಯ ತಿರಸ್ಕರಿಸಿದ ಭಾರತ
ಟೆಲಿಕಾಂ ಕುರಿತ ನಮ್ಮ ತೀರ್ಪು ದುರುಪಯೋಗವಾಗುತ್ತಿದೆ : ಕೇಂದ್ರಕ್ಕೆ ಸುಪ್ರೀಂ ಚಾಟಿ
ತಮಾಷೆಗಾಗಿ ಕೆರೆಗೆ ಕಲ್ಲೆಸೆದ ವ್ಯಕ್ತಿ: ತುಂಬಿದ ಕೆರೆ ಖಾಲಿ ಮಾಡಿ ಪರಿತಪಿಸುತ್ತಿರುವ ಜನ!


