‘ನನಿಗನ್ನುಸ್ತಾ ಅದೆ’ ಎಂದು ಗಡ್ಡ ಕೆರೆದ ವಾಟಿಸ್ಸೆ.
‘ಅದೇನನ್ನಸ್ತು ಹೇಳ್ಳ’ ಎಂದಳು ಜುಮ್ಮಿ.
‘ಈ ಕರೋನ ಅಷ್ಟು ಸುಲಬಾಗಿ ಹೋಗದಿಲ್ಲ ಕಣಕ್ಕ’.
‘ಯಾಕ್ಲ’.
‘ಯಾಕೆ ಅಂದ್ರೆ ಅದು ಅವರಿಸಿಗಳದ್ಕೂ ಮದ್ಲು ಇಡೀ ಇಂಡಿಯಾ ಲಾಕ್‍ಡವುನ್ ಅಂದ್ರು. ಅವುರೇಳಿದಂಗೆ ಕೇಳಿದೊ ಈಗ ಅದು ಜಾಸ್ತಿಯಾದ ಮ್ಯಾಲೆ ಲಾಕ್‍ಡವುನ್ ತಗದವುರೆ ಹಿಂಗಾದ್ರೆ ಯಂಗೋಯ್ತದೇ?’.
‘ಹೋಗದಿಲ್ಲ ಅಂತಿಯಾ’.
‘ಚಾನ್ಸೆಯಿಲ್ಲ ದಿನೇ ದಿನೇ ಜಾಸ್ತಿಯಾಯ್ತದೆ’.
‘ಸದ್ಯ ನಮ್ಮೂರಿಗೆ ಬರಲಿಲವಲ್ಲ ಹೇಳು’.
‘ಅಂಗೇಳಂಗೇಯಿಲ್ಲ ಕಣೆ. ಬೊಂಬಾಯಿಲಿರೋರು ಬಂದ್ರೇ ಅದು ಬತ್ತದೆ’.
‘ಮದ್ಲು ಬಂಬಾಯಿಲಿರೋರು ಬಂದಾಗ ಯೇಡಸ ತಂದ್ರು, ಈಗಿವುರು ಬಂದು ಕರೋನ ತತ್ತರಲ್ಲ ಹೇಳು’.
‘ಹೆದರುಬ್ಯಾಡ ಕಣಕ್ಕ ಕರೋನ ಕ್ಯೂರಬಲ್ಲು ಅದೇ ಏಡಸು ನಾನ್ ಕ್ಯೂರಬಲ್’.
‘ಅಂಗದ್ರೆ ಕರೋನ ಬಂದೋರು ಉಸಾರಾಗಿ ಮನಿಗೆದ್ದೊಯ್ತರೆ. ಅದೇ ಏಡಸಾದ್ರೆ ಚಟ್ಟಕಟ್ಟದೆಯ’.
‘ಮತ್ಯಾಕೆ ಹೆದ್ರಿಕಳದು ಬುಡ್ಳ’
‘ನಾನಂತೂ ಯಾವತ್ತು ಹೆದರಿಲ್ಲ ಕಣಕ್ಕ ಈ ಉಗ್ರಿನೆ ಹೆದರಿ ನಡಗ್ತನಂಗೆಯ’.
‘ಅದ್ಯಾಕ್ಲ ಹೆದರತಿ ಉಗ್ರಿ’.
‘ಕ್ವಾರಂಟೈನು ಮಾಡಿ ನಾಯಿ ನೋಡಿದಂಗೆ ನೋಡಿಕತ್ತರಂತೆ. ದೂರ ನಿಂತಗಂಡು ಬಿಸ್ಕತ್ತ ಯಸಿತರಂತೆ. ಅದ್ಕೆ ಕಣೆ’.
‘ಇನ್ನೆನು ನಿನಗೆ ತ್ವಡೆಮ್ಯಾಲೆ ಕುಂಡ್ರಿಸಿಗಂಡು ಉಣ್ಣುಸ್ತರ್ಲ. ಕಾಯಿಲೆ ಬಂದಾಗ ಯಲ್ಲಾನು ಅನುಬವುಸಬೇಕು’.
‘ಯಾವ ಕಾಯಿಲೆ ಬಂದ್ರು ಹೆದರಸೋ ಧೈರ್ಯ ಬರಬೇಕಾದ್ರೆ ವಳ್ಳೆ ಸರಕಾರ ಇರಬೇಕು ಕಣೆ. ಈ ಹಾಳು ಸರಕಾರ ಯಂಗದೆ ಅಂತೀ. ಇದಿಲ್ದೆಯಿದ್ರೆ ಯಂಗೋ ಚನ್ನಾಗಿರತಿದ್ದೊ’.
‘ಮಿಸ್ಟರ್ ಉಗ್ರಿ ಬಿಜೆಪಿ ಸರಕಾರ ಇರದೇ ಹಿಂಗಲವೇನೋ ಅದು ಗೊತ್ತಿಲವೆ ನಿನಗೆ’.
‘ಇರದೆ ಹಿಂಗೆ ಅಂದ್ರೆ’.
‘ಅಂದ್ರೆ ಈ ಸರಕಾರ ನಡೆಸೋರು ಪರಂಪರೆ ಜನ. ಪರಕೀಯರು ದಾಳಿ ಮಾಡಿ ಇಂಡಿಯಾ ದೇಸವ ಆಳತಾಯಿದ್ರೆ ಅವುರು ದೇವಸ್ಥಾನದಲ್ಲಿ ಭಜನೆ ಮಾಡಿಕೊಂಡು ಪ್ರಸಾದ ತಿಂತಾಯಿದ್ರಂತೆ. ಈಗ್ಲು ಅಂಗೇ ಅವುರೆ. ಕೊರೋನಾ ಬಂದ್ರೇನು, ಜನ ಸತ್ತರೆ ಅವುರಿಗೇನೂ. ಯಾವುದ್ಕು ಕೇರ್ ಮಾಡದಂಗೆ ತಾವು ಒಂದು ವರುಸದಲ್ಲಿ ಏನೇನು ಮಾಡಿದೊ ಅಂತ ಪುಸ್ತಕ ಬರದು ಹಂಚತಾಕುಂತವುರೆ ಇದಕೇನೇಳ್ತೀ’.
‘ಹೇಳದಿನ್ನೇನು ನೀನು ಮದ್ಲೆ ಹೇಳಿದಲ್ಲ ಅಂಗೆ ಆಗ್ಯಾದೆ’.
‘ಈಗ್ಯಾವುದೊ ಯಲಕ್ಸನ್ನ ಬಂದು ದ್ಯಾವೇಗೌಡ್ರು ನಿಂತವುರಂತಲ್ಲಾ ಯಾವುದ್ಲ’ ಎಂದಳು ಜುಮ್ಮಿ.
‘ಅದು ಧಾರುಣವಾದ ಯಲಕ್ಸನ್ನು ಕಣಕ್ಕ’.
‘ಅದ್ಯಾಕ್ಲ’.
‘ಪಾಪ ಆ ಉಮೇಸ್ ಕತ್ತಿ ಬಂಡಾಯದ ನಾಟಕ ಎಬ್ಬಿಸಿ ತನ್ನ ತಮ್ಮನಿಗೇ ಟಿಕೇಟು ಗ್ಯಾರಂಟಿ ಅಂತ ಕಾಯ್ತಾಯಿದ್ದ. ಇನ್ನು ಎಜುಕೇಷನ್ ಮಾರ್ವಾಡಿಯಂತಿರೊ ಕೋರೆ, ಈಗಾಗ್ಲೇ ಎಲ್ಡು ಸಲ ಆಗಿದ್ದು ಸಾಲ್ದು ಅಂತ ಮೂರ್ನೇ ಸಲಕ್ಕೂ ಯಡ್ಯೂರಪ್ಪನ ಜಪ ಮಾಡಿಕ್ಯಂಡು ಕುಂತಿದ್ದ. ಅಂತೋರಿಗೆಲ್ಲ ರಾಜ್ಯಸಭೆ ಸಿಗಲಿಲ್ಲ. ಅಂಗಾಗಿ ಅವುರ ಪಾಲಿಗೆ ಇದು ಧಾರುಣವಾದ ವಿಷಯ’.
‘ಮತ್ಯಾರಿಗೆ ಕೊಟ್ರು’.
‘ಬಿಜೆಪೀಲಿ ಯಾವುದೇ ಬೆನಿಫಿಟ್ ಕೊಡಬೇಕಾದ್ರು ಸಣ್ಣುಡಗರಿಂದ ಲಾಟಿ ಬೀಸಿರಬೇಕು. ಅಂಗಾಗಿ ಬೆಳಗಾವಿ ಈರಣ್ಣ, ರಾಯಚೂರು ಅಶೋಕ ಅನ್ನೊರ್ನ ಕ್ಯಾಂಡಿಡೇಟ್ ಮಾಡಿದ್ರು ಕಣಕ್ಕ. ಅವುರು ಹುಟ್ಟಿದಾಗಿಂದ ಲಾಟಿ ಬೀಸಿದ್ರಂತೆ’.
‘ಕಾಂಗ್ರೆಸ್ಸಿಂದ ಯಾರ್ಲ’.
‘ಕಾಂಗ್ರೆಸ್ಸಿಂದ ಖರಗೆ, ದ್ಯಾವೇಗೌಡ್ರು ಕಣಕ್ಕ. ಕಾಂಗ್ರೆಸ್ಸಲ್ಲಿ ಜಾಸ್ತಿ ಓಟಿದ್ದವಂತೆ ಅದ ದ್ಯಾವೇಗೌಡ್ರಿಗೆ ಕೊಡ್ತರೆ ಅಂಗಾಗಿ ದ್ಯಾವೇಗೌಡ್ರು ಅರ್ಧ ಕಾಂಗ್ರೆಸ್ಸು, ಅರ್ಧ ದಳದ ಕ್ಯಾಂಡೇಟು’.
‘ಈ ಯಂಬತ್ತೇಳನೇ ವಯಸಲ್ಲಿ ಅವುರಿಗೆ ಬೇಕಿತ್ತೆ’ ಎಂದ ಉಗ್ರಿ.
‘ಯಂಬತ್ತೇಳು ಅವರ ಶರೀರಕ್ಕಾಗ್ಯದೆ ಮನಸಿಗಲ್ಲ ಕಣೊ, ನೋಡಿವಿರು ಗೆದ್ದು ಪಾರ್ಲಿಮೆಂಟಿಗೆ ಯಂಗೆ ಇಬ್ಬರು ಭುಜ ಹಿಡಕಂಡೋಯ್ತರೆ ಅದ ನೋಡಕ್ಕೆ ಚಂದ’.
ದ್ಯಾವೇಗೌಡ್ರು ಖರಗೆ ಭುಜ ಇಡಕಂಡು ಪಾರ್ಲಿಮೆಂಟಿಗೆ ಹೋಗದೆ ಚೆಂದ ಕಣ್ಳಾ..
- Advertisement -
- Advertisement -
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ


