Homeಅಂಕಣಗಳುಕೀಲಾರ ಟೆಂಟ್ ಹೌಸ್ಕೀಲಾರ ಟೆಂಟ್ ಹೌಸ್-1: ʼದ ಕಾನ್ಸ್ಟಿಟ್ಯೂಶನ್ʼ - ಸಂವಿಧಾನ, ಸಮುದಾಯ ಪ್ರಜ್ಞೆಯ ಸಮನ್ವಯ ಸಾರುವ ಚಿತ್ರ

ಕೀಲಾರ ಟೆಂಟ್ ಹೌಸ್-1: ʼದ ಕಾನ್ಸ್ಟಿಟ್ಯೂಶನ್ʼ – ಸಂವಿಧಾನ, ಸಮುದಾಯ ಪ್ರಜ್ಞೆಯ ಸಮನ್ವಯ ಸಾರುವ ಚಿತ್ರ

ನಿಜವಾದ ಜ್ಞಾನ ಅಂದರೆ, ನಾವು ಇದುವರೆಗೂ ಶೈಕ್ಷಣಿಕವಾಗಿ ತಲೆಯಲ್ಲಿ ತುಂಬಿಕೊಂಡಿರುವ ಅಪಾಯದ ಕಲ್ಮಶವನ್ನು ಹೊರೆಗೆ ಹಾಕುವುದು.

- Advertisement -
- Advertisement -

ಕ್ರೊಯೇಷಿಯಾ ದೇಶದ ರಾಜಧಾನಿ ಝಗ್ರೆಬ್(Zagreb)ನ ಅಪಾರ್ಟ್ಮೆಂಟ್ ಒಂದರಲ್ಲಿ ಭಿನ್ನ ಸಾಂಸ್ಕೃತಿಕ, ರಾಷ್ಟ್ರೀಯ ಮತ್ತು ಜನಾಂಗೀಯ ಹಿನ್ನಲೆಯ ಎರಡು ಕುಟುಂಬಗಳು ವಾಸಮಾಡುತ್ತಿವೆ. ಇವರ ನಡುವೆ ಆರ್ಥಿಕವಾಗಿಯೂ ಸಾಕಷ್ಟು ಅಂತರವಿದೆ. ವಿಶಾಲವಾದ ಮೇಲ್ಮನೆಯಲ್ಲಿ ವಾಸಿಸುವ ಜೆಕೊಸ್ಲಾವ್ ಕ್ರಾಲ್ಜ್ (Vjeko Kralj) ಮತ್ತವನ ತಂದೆ ಹರ್ವಜೆ ಕ್ರಾಲ್ಜ್(Hrvoje Kralj) ಬಲಪಂಥೀಯ ಅಲೋಚನೆ ಉಳ್ಳವರು, ಅದಕ್ಕೆ ಸಾಕಷ್ಟು ಪ್ರಭಾವ ಮತ್ತು ಕಾರಣಗಳಿವೆ. ತಂದೆ ‘ಹರ್ವಜೆ ಕ್ರಾಲ್ಜ್’ ನಾಝಿ ಪರವಾಗಿದ್ದ Ustashe regimeನ ಮಾಜಿ ಸದಸ್ಯ, ಯುದ್ಧದಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡು ಸದ್ಯ ಮಗನ ಆರೈಕೆಯಲ್ಲಿದ್ದಾನೆ. ದೇಶಕ್ಕಾಗಿ ಮಾಡಿದ ತ್ಯಾಗದ ಪ್ರತಿಫಲವಾಗಿ ಅವನಿಗೆ ಕಾಲಕಾಲಕ್ಕೆ ಜೀವನಾಂಶವೂ ಸಿಗುತ್ತಿದೆ. ಜೆಕೊ ಒಂದು ಪ್ರತಿಷ್ಠಿತ ಶಾಲೆಯಲ್ಲಿ ಪ್ರಾಧ್ಯಾಪಕನಾಗಿದ್ದು ವೃದ್ಧ ತಂದೆಯ ಶುಶ್ರೂಷೆ ಅವನ ದಿನಚರಿಗಳಲ್ಲಿ ಒಂದು. ಸಲಿಂಗ ಪ್ರೇಮಿಯಾದ ಈತ ತನ್ನ ಸಂಗಾತಿ ಬೊಬೊನ ಅಕಾಲಿಕ ಸಾವಿನಿಂದ ಅಗಾದ ನೋವಿನಲ್ಲಿದ್ದಾನೆ. ಬದುಕಲು ಅವನಿಗಿರವ ಏಕೈಕ ಅನಿವಾರ್ಯತೆ ಅವನ ತಂದೆ ಮಾತ್ರ. ಈ ನೋವನ್ನು ಮರೆಯಲು ಅವನು ಪ್ರತಿರಾತ್ರಿ ಹೆಣ್ಣುಡುಗೆ ತೊಟ್ಟು, ಬೊಬೊ ಮತ್ತು ಅವನು, ಹಿಂದೆ ತಾವು ಸೇರುತ್ತಿದ್ದ ಬಾರಿಗೆ ಹೋಗಿ ಕುಡಿಯುತ್ತಿರುತ್ತಾನೆ. ಆದರೆ, ಜೆಕೊನ ಸಲಿಂಗ ಪ್ರೇಮದ ಬಗ್ಗೆ ಅವನ ತಂದೆಗೆ ಅಸಾಧ್ಯವಾದ ಸಿಟ್ಟು. ಸಲಿಂಗಪ್ರೇಮಿಯಾದ ಕಾರಣ ಜೆಕೊ ಸಮುದಾಯದ ಜೊತೆ ಬೆರೆಯುವುದಿಲ್ಲ. ಕನಿಷ್ಟ ತನ್ನ ನೆರೆಹೊರೆಯವರ ಜೊತೆಯಲ್ಲೇ ಅವನ ಸಂವಹನ ಇರುವುದಿಲ್ಲ. ಕೆಳ ಮಹಡಿಯಲ್ಲಿ ವಾಸಿಸುವ, ಮಾಜಾ (Maja Samardzic) ಮತ್ತು ಆಕೆಯ ಗಂಡ ಆಂತೆ (Ante Samardzic), ಇಬ್ಬರದೂ ಪ್ರೇಮ ವಿವಾಹ. ಮಾಜಾ ಒಂದು ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ಗಂಡ ಆಂತೆ ಸೆರ್ಬಿಯಾ ಮೂಲದವನು, ಪೋಲಿಸ್ ಇಲಾಖೆಯಲ್ಲಿ ಕೆಲಸ. ಮೊದಲೇ ನಿಧಾನ ಕಲಿಕೆ ಸಾಮರ್ಥ್ಯ ಇರುವ ಆಂತೆ ತನ್ನ ಕೆಲಸ ಉಳಿಸಿಕೊಳ್ಳಲು ಕ್ರೊಯೇಷಿಯಾ ಸಂವಿಧಾನ ಕುರಿತ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕಾದ ಅನಿವಾರ್ಯತೆ ಇದೆ.

ಒಮ್ಮೆ ಜೆಕೊ ಹೆಣ್ಣುಡುಗೆ ತೊಟ್ಟು ರಸ್ತೆಯಲ್ಲಿ ಬರಬೇಕಾದರೆ, ಕೆಲವು ಪುಂಡರು (ಸಂಸ್ಕೃತಿ ವಕ್ತಾರರು) ಅವನ ಮೇಲೆ ದೈಹಿಕ ಹಲ್ಲೆ ಮಾಡುತ್ತಾರೆ. ತುಂಬಾ ಪೆಟ್ಟು ತಿಂದಿದ್ದ ಅವನನ್ನು ಆಸ್ಪತ್ರೆಗೆ ಸಾಗಿಸಲಾಗುತ್ತದೆ, ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುವ  ಮಾಜಾಳನ್ನು ಮೊದಲ ಬಾರಿ ಮಾತಾನಾಡಿಸುವ ಸಂದರ್ಭ ಬರುತ್ತದೆ. ಮುಂದೆ ಜೆಕೋ ಮತ್ತು ಅವನ ತಂದೆಯನ್ನು ಸ್ಪಲ್ಪ ದಿನದ ಮಟ್ಟಿಗೆ ನೋಡಿಕೊಳ್ಳುವ ಜವಬ್ದಾರಿಯನ್ನು ಮಾಜಾ ವಹಿಸಿಕೊಳ್ಳುತ್ತಾಳೆ.  ಇದಕ್ಕೆ ಪ್ರತಿಯಾಗಿ ಜೆಕೋ ಹಣ ಕೊಡಲು ಹೋದಾಗ ಮಾಜಾ ನೀರಾಕರಿಸುತ್ತಾಳೆ. ನೆರೆಹೊರೆಯವರಾಗಿ ಬದುಕುವ ನಾವು ಸಮಯಕ್ಕೆ ಇಷ್ಟೂ ಆಗದಿದ್ದರೆ ಹೇಗೆ ಎನ್ನುವುದು ಅವಳ ಪ್ರಶ್ನೆ. ಆದರೆ, ಒಂದು ಸಹಾಯ ಕೇಳುತ್ತಾಳೆ, ತನ್ನ ಗಂಡ ಪೋಲಿಸ್ ಇಲಾಖೆಯ ಸಂವಿಧಾನ ಪರೀಕ್ಷೆಯಲ್ಲಿ ಪಾಸಾಗಲು ಮನೆ ಪಾಠ ಮಾಡಿಕೊಡಲು ಕೇಳಿಕೊಳ್ಳುತ್ತಾಳೆ. ಜೆಕೊ  ಒಪ್ಪುತ್ತಾನೆ. ಮೊದಲ ಭೇಟಿಯಲ್ಲಿ ಜೆಕೋ, ಆಂತೆಗೆ ಸಂವಿಧಾನದ ಮೂಲ ಆಶಯ ‘ಕ್ರೋಯೇಷಿಯಾದ ನಾಗರಿಕರು ಎಲ್ಲಾ ವಿಧದಲ್ಲೂ ಸಮಾನರು’ ಎಂದು ಹೇಳುವ ಮೊದಲ ಅನುಚ್ಚೇದವನ್ನು ಪಾಠ ಮಾಡುತ್ತಾನೆ. ಎರಡನೇ ಭೇಟಿಯಲ್ಲಿ ಜೆಕೋಗೆ ಸೆರ್ಬಿಯಾದ ಮೇಲಿನ ಅಸಹನೆ ವ್ಯಕ್ತವಾಗುತ್ತದೆ. ಈ ಕಾರಣವಾಗಿ ಅವನು ಸೆರ್ಬಿಯಾ ಮೂಲದ ಆಂತೆಯನ್ನೂ ಅವನ ಹಿನ್ನಲೆ ಹಿಡಿದು ಕೆಣಕುತ್ತಾನೆ. ಇದರಿಂದ ಆಂತೆಗೆ ಅಸಾಧ್ಯವಾದ ಸಿಟ್ಟು ಬಂದು, ‘ಹಾಗಿದ್ದರೆ, ಈಗಿರುವ ಸಂವಿಧಾನ ನಿಮಗೆ ಸೂಕ್ತವಲ್ಲ, ಎಲ್ಲರನ್ನೂ ಹೊರಗಿರಿಸಿ ನೀವು ಮಾತ್ರವೇ ಇರುವ ಸಂವಿಧಾನವನ್ನು ರಚಿಸಿಕೊಳ್ಳಿ’ ಎಂದು ಹೇಳಿ ಹೊರನಡೆಯುತ್ತಾನೆ. ನಂತರ ಮಾಜಾಳ ಮಧ್ಯಸ್ಥಿಕೆಯಿಂದ ಆಂತೆಗೆ ಜೆಕೊ ಮತ್ತೆ ಪಾಠ ಹೇಳುತ್ತಾನೆ ಮತ್ತು ಆಂತೆ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಾನೆ.

‘ಕ್ರೊಯೇಷಿಯಾ’ ನೈರುತ್ಯ ಯುರೋಪ್’ನ ಬಹಳ ಸುಂದರವಾದ ಪುಟ್ಟ ದೇಶ. ಇದರ ವಿಸ್ತೀರ್ಣ ಕರ್ನಾಟಕದ ಮುಕ್ಕಾಲು ಭಾಗದಷ್ಟು. ಜನಸಂಖ್ಯೆಯಲ್ಲಿ ಬೆಂಗಳೂರಿನ ಅರ್ಧದಷ್ಟು. ಕ್ರೊಯೇಷಿಯನ್ನರ ಮೂಲವನ್ನು ಪ್ರಾಚೀನ ಶೀಲಾಯುಗದಿಂದ ಗುರುತಿಸಲಾಗುತ್ತದೆ. ತಮ್ಮದೇ ಭಾಷೆ, ಪರಂಪರೆ, ಆಚರಣೆ, ಜೀವನ ಪದ್ಧತಿಗಳಿರುವ ಇವರು ಸುಮಾರು ಆರನೇ ಶತಮಾನದಲ್ಲಿ ಈಗಿರುವ ಪ್ರದೇಶಕ್ಕೆ ಬಂದು ನೆಲೆಸಿರುತ್ತಾರೆ. ಒಂಭತ್ತನೇ ಶತಮಾನದ ಹೊತ್ತಿಗೆ ಎರಡು ವ್ಯವಸ್ಥಿತ ಆಡಳಿತ ಪ್ರದೇಶಗಳೊಂದಿಗೆ ಆಳ್ವಿಕೆ ಶುರುಮಾಡುತ್ತಾರೆ. ರಾಜ ಬ್ರನಿಮಿರ್ ನ ಆಳ್ವಿಕೆಯ ಕಾಲ ಕ್ರಿ.ಶ.879ರಲ್ಲಿ ರೋಮ್‌ನ ಬಿಷಪ್ ‘ಪೊಪ್ ಜಾನ್ VIII’ ನಿಂದ ಸ್ವತಂತ್ರ್ಯ ರಾಜ್ಯವಾಗಿ ಘೋಷಿಸಿಕೊಳ್ಳುತ್ತದೆ. ಸುಮಾರು ಎರಡು ಶತಮಾನಗಳ ಸ್ವತಂತ್ರ ಸಾಮ್ರಾಜ್ಯದ ಸ್ಥಾನಮಾನ ಹೊಂದಿದ್ದ ಕ್ರೊಯೇಷಿಯಾ, ಹನ್ನೇರಡನೇ ಶತಮಾನದ ಪ್ರಾರಂಭದ ಹೊತ್ತಿಗೆ ಕೆಲವು ಆಂತರಿಕ ಬಿಕ್ಕಟ್ಟುಗಳ ಕಾರಣವಾಗಿ ಹಂಗೆರಿ ಜೊತೆ ಖಾಸಗಿ ಒಕ್ಕೂಟವನ್ನು ಸೇರುತ್ತದೆ. ಹಲವು ಯುದ್ಧಗಳ ತರುವಾಯ ಹದಿನಾರನೆಯ ಶತಮಾನದ ಕೊನೆಯಷ್ಟರಲ್ಲಿ ಹಂಗೆರಿ ಮತ್ತು ಕ್ರೊಯೇಷಿಯಾವನ್ನು ಒಟೊಮನ್‌ರು ತಮ್ಮ ಸುಪರ್ಧಿಗೆ ಪಡೆಯುತ್ತಾರೆ. ಸುಮಾರು ಎರಡು ಶತಮಾನಗಳ ನಂತರ ಅಂದರೆ, ಹದಿನೆಂಟನೇ ಶತಮಾನದಲ್ಲಿ ಒಟಮನ್ನರು ಹಂಗೆರಿ ಬಿಡುತ್ತಾರೆ. ಆ ನಂತರ ಆಸ್ಟ್ರಿಯಾ ಹಿಡಿತಕ್ಕೆ ಕ್ರೊಯೇಷಿಯಾ ಬರುತ್ತದೆ.

ನೈರುತ್ಯ ಯುರೋಪ್ ನ ಸಣ್ಣ ಸಣ್ಣ ಸ್ಲಾವಿಯಾನ್ ದೇಶಗಳು, ಮೊದಲನೇ ಮಹಾಯುದ್ಧದ ನಂತರ ನಾಝಿ ಪ್ರಭಾವವಿದ್ದ ಇಟಲಿ ಮತ್ತು ಜರ್ಮನ್ ದೇಶಗಳ ಕಾರಣವಾಗಿ, ಒಂದೇ ಆಳ್ವಿಕೆಯ ‘ಯುಗೊಸ್ಲಾವಿಯಾ’ ಅಸ್ಥಿತ್ವಕ್ಕೆ ಬರುತ್ತದೆ. 1930 ರಿಂದ 1945ರ ಅವಧಿಯಲ್ಲಿ ಉಗ್ರ ಬಲಪಂಥೀಯರ ಆಳ್ವಿಕೆ ಮತ್ತು ಪ್ರಭಾವದಲ್ಲಿದ್ದ ಕ್ರೋಯೇಷಿಯಾ ಮತ್ತದರ ಉಗ್ರ ಬಲಪಂಥೀಯ ಸಂಘಟನೆ Ustashe regime ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ತನ್ನ ದೇಶದೊಳಗಿದ್ದ ಸರಿಸುಮಾರು 4.5 ಲಕ್ಷ ಸೆರ್ಬಿಯನ್ನರು ಮತ್ತು ಯಹೂದಿಗಳನ್ನ ಜನಾಂಗೀಯ ಹತ್ಯೆ ಮಾಡುತ್ತವೆ. ಎರಡನೇ ಮಹಾಯುದ್ಧದಲ್ಲಿ ಮಿತ್ರ ರಾಷ್ಟ್ರಗಳು ಗೆಲವು ಹೊಂದಿದ ನಂತರ, ಇವರ ಪರವಾಗಿದ್ದ ಸೆರ್ಬಿಯಾ, ಸ್ಲಾವಿಯಾ ದೇಶಗಳನ್ನು ಒಟ್ಟು ಮಾಡಿ ತನ್ನ ಪ್ರಾಬಲ್ಯದ ‘ಯುಗೊಸ್ಲಾವಿಯಾ ಸಮಾಜವಾದಿ ಗಣರಾಜ್ಯಗಳ ಒಕ್ಕೂಟ’ವನ್ನು ರಚನೆ ಮಾಡುತ್ತದೆ. ಈ ಒಕ್ಕೂಟದಲ್ಲಿ ಕ್ರೊಯೇಷಿಯಾ, ಸ್ಲೊವೇನಿಯಾ, ಬೊಸ್ನಿಯಾ ಮತ್ತು ಹರ್ಝೆಗೋನಿಯಾ, ಮೆಸಿಡೋನಿಯಾ, ಮಾಂಟೆನಿಗ್ರೊ ಮತ್ತು ಸೆರ್ಬಿಯಾ (ಇಂದಿನ ಸ್ವಾಯತ್ತ ಪ್ರಾಂತ್ಯಗಳಾದ ವೊಜ್ವೋಡಿನಾ ಮತ್ತು ಕೊಸೊವೊಗಳನ್ನು ಸೇರಿ) ಈ ಆರು ರಾಷ್ಟ್ರಗಳನ್ನು ಸೇರ್ಪಡೆಗೊಳಿಸಲಾಗುತ್ತದೆ. ಸುಮಾರು 35 ವರ್ಷಗಳ ಕಾಲ ಅಧ್ಯಕ್ಷನಾಗಿ ಯುಗೋಸ್ಲಾವಿಯಾ ಗಣರಾಜ್ಯಗಳ ಒಕ್ಕೂಟವನ್ನು ‘ಜೊಸಿಪ್ ಬ್ರೊಝ್ ಟಿಟೊ’ ಆಳುತ್ತಾನೆ.

ಕ್ರೊಯೇಷಿಯಾ

‘ಜೊಸಿಪ್ ಬ್ರೊಝ್ ಟಿಟೊ’ ಸಾವಿನ ತರುವಾಯ, ಪ್ರಥಮ ಬಾರಿಗೆ 1980ರಲ್ಲಿ ಸೆರ್ಬಿಯಾ ಒಳಗಿದ್ದ ಕೊಸೊವೊದಲ್ಲಿನ ಅಲ್ಬೇನಿಯನ್ಸ್, ನಮ್ಮ ಪ್ರಾಂತ್ಯವನ್ನು ಸ್ವತಂತ್ರ ಸಾಂವಿಧಾನಿಕ ಗಣರಾಜ್ಯವನ್ನಾಗಿ ಘೋಷಿಸಬೇಕೆಂದು ಬೇಡಿಕೆಯನ್ನಿಡುತ್ತದೆ. ಇದಕ್ಕೂ ಮೊದಲು ಅಂದರೆ 1960ರ ಸುಮಾರಿಗೆ ಕ್ರೋಯೇಷಿಯಾದಲ್ಲಿ ಭಾಷಾ ಚಳವಳಿ ಪ್ರಾರಂಭವಾಗಿ ದಿನೇ ದಿನೇ ಕೊಸೊವೊದಲ್ಲಿನ ಅಲ್ಬೇನಿಯನ್ಸ್ ಮತ್ತು ಸೆರ್ಬಿಯನ್ನರ ನಡುವೆ ಸಾಂಸ್ಕೃತಿಕ, ರಾಷ್ಟ್ರೀಯ ಮತ್ತು ಜನಾಂಗೀಯ ಭಿನ್ನತೆಗಳ ಉದ್ವೇಗ ಹೆಚ್ಚಾಗುತ್ತದೆ. ಇದು 1990ರವರೆಗೂ ಮುಂದುವರೆಯುತ್ತದೆ. ಈ ಭಿನ್ನತೆಗಳ ಉದ್ವೇಗ ಇಡೀ ಗಣರಾಜ್ಯಗಳ ಒಕ್ಕೂಟಕ್ಕೆ ಪೂರ್ಣ ವ್ಯಾಪಿಸಿ 1991ರ ‘ಯುಗೋಸ್ಲಾವಿಯಾ ಯುದ್ಧ’ಕ್ಕೆ ಕಾರಣವಾಗುತ್ತದೆ. ಯುದ್ಧದ ಸಂದರ್ಭದಲ್ಲೇ ಒಕ್ಕೂಟದ ಒಳಗಿದ್ದ 6 ಗಣರಾಜ್ಯಗಳು ಕೇವಲ ಎರಡು ವರ್ಷಗಳ ಅವಧಿಯಲ್ಲಿ, ಅಂದರೆ 1991 ಮತ್ತು 1992 ರ ನಡುವೆಯೇ ತಾವು ಸ್ವತಂತ್ರ ಸಾಂವಿಧಾನಿಕ ರಾಷ್ಟ್ರಗಳೆಂದು ಘೋಷಿಸಿಕೊಂಡುಹೊಸ ಸಂವಿಧಾನವನ್ನು ರಚಿಸಿಕೊಳ್ಳುತ್ತವೆ. ಯುದ್ಧ ಮಾತ್ರ ಸತತ ಹತ್ತು ವರ್ಷಗಳ ಕಾಲ ಅಂದರೆ 2001ರ ವರೆಗೆ ಮುಂದುವರೆಯುತ್ತದೆ.

ಗಣರಾಜ್ಯಗಳ ಒಕ್ಕೂಟದಿಂದ ಪ್ರತ್ಯೇಕಗೊಂಡ ಆರು ರಾಷ್ಟ್ರಗಳಲ್ಲಿ, ಕ್ರೊಯೇಷಿಯಾ ಮೊದಲನೆಯದು. ಇದಕ್ಕೆ ಒಂದು ವರ್ಷ ಮೊದಲು ಅಂದರೆ 1990ರಲ್ಲಿ ಹೊಸ ಸಂವಿಧಾನವನ್ನು ರಚಿಸಿಕೊಂಡಿತ್ತು. ಅದುವರೆಗೂ ಇದ್ದ ‘ಕಮ್ಯುನಿಸ್ಟ್ ಏಕ ಪಕ್ಷ’ ಮಾದರಿಯನ್ನು ರದ್ದುಗೊಳಿಸಿ ‘ಉದಾರ ಪ್ರಜಾಪ್ರಭುತ್ವ’ ಸಂವಿಧಾನವನ್ನು ಅಳವಡಿಸಿಕೊಂಡಿರುತ್ತದೆ. ಯುಗೋಸ್ಲಾವಿಯಾ ಒಕ್ಕೂಟದಿಂದ ಹೊರ ಬಂದ ನಂತರದ ವರ್ಷಗಳಲ್ಲಿ ಕ್ರೊಯೇಷಿಯಕ್ಕೆ ಅಸಾಧ್ಯ ಹಣಕಾಸು ಮುಗ್ಗಟ್ಟು, ಆರ್ಥಿಕ ಕುಸಿತ ಮತ್ತು ನಿರುದ್ಯೋಗದಂತಹ ಸವಾಲುಗಳು ಎದುರಾಗುತ್ತವೆ. ಇದರಿಂದ ಹೊರಬರಲು ಯೂರೋಪಿಯನ್ ಒಕ್ಕೂಟವನ್ನು ಸೇರಲು ಬಯಸಿ 2004ರಲ್ಲಿ ಅರ್ಜಿ ಸಲ್ಲಿಸುತ್ತದೆ. ಇದಕ್ಕೆ ಪೂರಕವಾದ ಸಿದ್ಧತೆಗಳನ್ನು ಹಿಂದಿನಿಂದಲೇ ಮಾಡಿಕೊಂಡು ಬಂದಿರುತ್ತದೆ. ಯುರೋಪಿಯನ್ ಒಕ್ಕೂಟ ಕ್ರೊಯೇಷಿಯಾ ಸಂವಿಧಾನ, ಕೇವಲ ರಾಜಕೀಯ ಸಂವಿಧಾನ ಮಾತ್ರವಾಗಿದ್ದು, ಇದರ ಆಶಯಗಳನ್ನು ರಕ್ಷಣೆ ಮಾಡಲು ಸಾಂವಿಧಾನಿಕ ನ್ಯಾಯಲಯಗಳೇ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ, ಮಾನವ ಹಕ್ಕುಗಳ ರಕ್ಷಣೆ, ಅಂತರಾಷ್ಟ್ರೀಯ ಸಂಬಂಧಗಳು ಮತ್ತು ಯುರೋಪಿನ ಉದಾತ್ತ ಆಶಯಗಳನ್ನು ಅಳವಡಿಸಿಕೊಳ್ಳುವ ಕ್ರೊಯೇಷಿಯಾ ತನ್ನ ಸಂವಿಧಾನಕ್ಕೆ ತಿದ್ದುಪಡಿ ತಂದು 2013ರಲ್ಲಿ ಅಧಿಕೃತವಾಗಿ ಯೂರೋಪಿಯನ್ ಒಕ್ಕೂಟಕ್ಕೆ ಪ್ರವೇಶ ಪಡೆಯುತ್ತದೆ.

ಕ್ರೊಯೇಷಿಯಾ

2016ರಲ್ಲಿ ತೆರೆಕಂಡ Rajko Grlic ನಿರ್ದೇಶನದ The Constitution ಹೆಚ್ಚು ಸಂಕೀರ್ಣತೆಗಳಿಲ್ಲದೆ ಸರಳವಾಗಿ ಹೆಣೆದಿರುವ, ಪ್ರಸ್ತುತ ಸಂದರ್ಭದಲ್ಲಿ ಬಹಳ ಮುಖ್ಯವಾದ ಸಿನಿಮಾ. ಉದಾತ್ತ ಆಶಯಗಳೊಂದಿಗೆ ನಾವು ಕಟ್ಟಿಕೊಂಡ ಸಂವಿಧಾನಕ್ಕೂ ಮತ್ತು ಸಮುದಾಯದ ಒಳಗಿರುವ ಪ್ರಜ್ಞೆ ಹಾಗೂ ಅದು ರೂಪುಗೊಳ್ಳಲು ಕಾರಣವಾದ ಸಂಗತಿಗಳ ನಡುವೆ ಇರುವ ವೈರುಧ್ಯಗಳನ್ನ ಬಹಳ ಸ್ಪಷ್ಟವಾಗಿ ಕಟ್ಟಿಕೊಡಲಾಗಿದೆ.  ಈ ವೈರುಧ್ಯಗಳ ಹಿನ್ನಲೆಯಲ್ಲಿ ನಾಲ್ಕು ಅಂಶಗಳನ್ನು ಪ್ರಸ್ತಾಪಿಸಲು ಬಯಸುತ್ತೇನೆ.

ಒಂದು: ಸಿನಿಮಾದ ಪ್ರಧಾನ ಪಾತ್ರಗಳಲ್ಲಿ ಒಂದಾದ ಜೆಕೋ, ತನ್ನ ಪ್ರಾಣಕ್ಕಿಂತಲೂ ಮಿಗಿಲಾಗಿ ಮತ್ತೊಬ್ಬ ವ್ಯಕ್ತಿಯನ್ನು ಪ್ರೀತಿಸಬಹುದಾದಷ್ಟು ಹೃದಯವಂತಿಕೆ ಇರುವವನು. ಅದೇ ಸಂದರ್ಭದಲ್ಲಿ ಅಕಾರಣವಾಗಿ ಮತ್ತೊಬ್ಬ ವ್ಯಕ್ತಿಯನ್ನು ದ್ವೇಷ ಕೂಡ ಮಾಡುತ್ತಾನೆ. ಹಾಗಾದರೆ ಜೆಕೋನಲ್ಲಿರುವ ಆ ದ್ವೇಷದ ಪ್ರಜ್ಞೆಯ ಮೂಲ ಯಾವುದು?

ಜೆಕೋ ಪಾತ್ರದ ವೃತ್ತಿಯನ್ನು ಪರಿಚಯಿಸುವ ದೃಶ್ಯದಲ್ಲಿ, ಮಕ್ಕಳಿಗೆ ಇತಿಹಾಸ ಭೋದಿಸುವ ಜೆಕೋ, ತನ್ನ ನೆರೆಯ ದೇಶ ಸೆರ್ಬಿಯಾ ಪ್ರಸ್ತಾಪ ಬಂದಾಗಲೆಲ್ಲ ‘Communist Pigs’ ಅಂತ ಬಯ್ಯುತ್ತಿರುತ್ತಾನೆ. ಸರ್ಬಿಯಾದ ಮೇಲಿನ ಜೆಕೋವಿನ ಖಾಸಗಿಯಾದ ದ್ವೇಷ, ಸಮುದಾಯದ ದ್ವೇಷವಾಗಿ  ರೂಪಾಂತರವಾಗುತ್ತಿರುತ್ತದೆ (ಯುದ್ಧ ಖೈದಿಯಾಗಿ ಜೈಲಿನಲ್ಲಿದ್ದ ತನ್ನತಂದೆಯನ್ನು ನೋಡಲು ತಾಯಿಯೊಂದಿಗೆ ಹೋದಾಗ ಅಲ್ಲಿನ ಸೆರ್ಬಿಯಾದ ಜೈಲಿನಾಧಿಕಾರಿಗಳು ಇವರನ್ನು ಬೆತ್ತಲುಗೊಳಿಸಿ ಪರಿಶೀಲಿಸಿರುತ್ತಾರೆ). ನಾವು ಶೈಕ್ಷಣಿಕವಾಗಿ ಕಲಿತ ನಮ್ಮದೇ ದೇಶದ ಇತಿಹಾಸದ ಪಠ್ಯಗಳನ್ನು ತೆಗೆದುಕೊಂಡರೆ ಮುಸ್ಲಿಮರು ದಾಳಿ ಮಾಡಿದರು, ಬ್ರಿಟಿಷರು ಆಗಮಿಸಿದರು, …..’ ಎಂಬ ಭಾಷೆಯನ್ನು ನೋಡುತ್ತೇವೆ. ನಮ್ಮಲ್ಲೇ ಒಬ್ಬರಾಗಿ ಬದುಕಿದ ಮತ್ತು ಬದುಕುತ್ತಿರುವ ಸಮುದಾಯವನ್ನು ಇತಿಹಾಸ ಯಾವ ಭಾಷೆಯಿಂದ ನಿರ್ವಚಿಸುತ್ತದೆ? ನಮ್ಮನ್ನು ಸುಲಿಗೆ ಮಾಡಿ ಅಡಿಯಾಳನ್ನಾಗಿ ಮಾಡಿಕೊಂಡ ಸಮುದಾಯವನ್ನು ಅದೇ ಇತಿಹಾಸ ಯಾವ ಭಾಷೆಯಿಂದ ನಿರ್ವಚಿಸುತ್ತದೆ? ಇದು ನಮ್ಮಲ್ಲಿರುವ ಇತಿಹಾಸದ ಪ್ರಜ್ಞೆ. ಆದರೆ, ನಾವು ರಚಿಸಿಕೊಂಡಿರುವ ಸಂವಿಧಾನದ ಪ್ರಜ್ಞೆ ಇದಕ್ಕೆ ವಿರುದ್ಧವಾದದ್ದು ಮತ್ತು ಉದಾತ್ತವಾದದ್ದು.

ಕ್ರೊಯೇಷಿಯಾ

ಎರಡು: ನಮ್ಮನ್ನು ಆಳುವ ಪ್ರಭುತ್ವ ಅಥವಾ ಸಂಸ್ಕೃತಿಯ ವಕ್ತಾರರಿಂದ ಪ್ರತಿನಿತ್ಯ ರಾಷ್ಟ್ರೀಯತೆ, ಸಂಸ್ಕೃತಿ ಮತ್ತು ಇನ್ಯಾವುದೋ ಹೆಸರಲ್ಲಿ ನಮ್ಮ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಘನತೆಗೆ ಧಕ್ಕೆ ಆಗುತ್ತಲೇ ಇರುತ್ತದೆ. ಆದರೆ ಇದ್ಯಾವುದು ನಮಗೆ ಮುಖ್ಯವಾಗುವುದೇ ಇಲ್ಲ. ಜೆಕೋವಿನಂತೆ ನಾವೆಲ್ಲಾ ದೇಶ ಪ್ರೇಮಿಗಳು ಮತ್ತು ಸಂಸ್ಕೃತಿ ರಕ್ಷಕರು.  ಜೆಕೋವಿನ ಪ್ರೇಮದ ವಿಚಾರ ವೈಯಕ್ತಿಕವಾದದ್ದು ಅವನ ಪ್ರೇಮಿಯ ಆಯ್ಕೆ ಕೂಡ. ಆದರೆ ಸಲಿಂಗ ಪ್ರೇಮದ ಕಾರಣವಾಗಿ ಅವನದೇ ಸಮುದಾಯದವರು ಅವನ ಮೇಲೆ ಮಾರಾಣಾಂತಿಕ ಹಲ್ಲೆ ಮಾಡುತ್ತಾರೆ. ಇದ್ಯಾವುದರ ಮೇಲೂ ಜೆಕೋವಿಗೆ ಸಿಟ್ಟಾಗಲಿ, ಪ್ರತಿಭಟನೆಯಾಗಲಿ ಇಲ್ಲ. ಆದರೆ ತನಗೆ ಎಂದೂ ಪರಿಚಯವೇ ಇಲ್ಲದ, ಯವಾತ್ತೂ ಖಾಸಗಿಯಾಗಿ ತೊಂದರೆಮಾಡದ ‘ಆಂತೆ’ ಮೇಲೆ ಮಾತ್ರ ಅಸಾಧ್ಯವಾದ ಸಿಟ್ಟು ಮತ್ತು ದ್ವೇಷ. ಈ ತರಹದ ವೈರುಧ್ಯಗಳು ನಮ್ಮ ದೇಶದಲ್ಲಂತೂ ಲೆಕ್ಕವೇ ಇಲ್ಲ. ತಮ್ಮ ಸಾಹಿತ್ಯದಲ್ಲಿ ಅಸಾಧ್ಯ ಮಾನವೀಯ ಪಾತ್ರಗಳನ್ನು ಸೃಷ್ಟಿಮಾಡಿದ ಕನ್ನಡದ ಪ್ರಸಿದ್ಧ ಸಾಹಿತಿ ಒಬ್ಬರು ಹೇಳಿದ ಮಾತು ‘ಸುಮಾರು ಶತಮಾನಗಳ ಹಿಂದೆ ಮುಸ್ಲಿಮರಿಂದ ಹಿಂದುಗಳ ಮೇಲೆ ದೌರ್ಜನ್ಯ ನಡೆದಿದೆ. ಈ ದೌರ್ಜನ್ಯದ ಬಗ್ಗೆ ಈಗಿನ ಮುಸ್ಲಿಂ ಸಮುದಾಯಕ್ಕೆ ಪಶ್ಚಾತ್ತಾಪ ಇರಬೇಕು’. ಈ ಮಾತಿನ ಹಿಂದಿನ ಉದ್ದೇಶಕ್ಕೂ ಅವರ ಸಾಹಿತ್ಯದಲ್ಲಿ ಸೃಷ್ಟಿಸಿದ ಪಾತ್ರಗಳಿಗೂ ಏನಾದರೂ ಸಂಬಂಧ ಇದೆಯೇ!!?

ಮೂರು: ತಾನು ಎಲ್ಲಿ ಬದುಕುತ್ತಿದ್ದೇನೆ, ತನ್ನ ಬದುಕಿನ ಸಂಬಂಧಗಳು ಎಲ್ಲಿ ಹೆಣೆದುಕೊಂಡಿವೆ ಮತ್ತು ಯಾವ ದೇಶದ ನಾಗರಿಕತ್ವವನ್ನು ಪಡೆದಿದ್ದೇನೆ, ಅದೇ ನನ್ನ ನೆಲ ಹಾಗೂ ಅದೇ ನನ್ನ ದೇಶ ಎಂದು ಬದುಕುತ್ತಿರುವ ‘ಆಂತೆ’ ಯಂತಹ ಅಲ್ಪಸಂಖ್ಯಾತರು ಈ ತರಹದ ಇತಿಹಾಸದ ಪ್ರಜ್ಞೆ ಹೊಂದಿರುವ ಬಹುಸಂಖ್ಯಾತರ ನಡುವೆ ಯಾವ ರೀತಿ ವರ್ತಿಸಬೇಕು?. ‘ಆಂತೆ’ ಸಂವಿಧಾನಬದ್ಧವಾಗಿ ಕ್ರೋಯೇಷಿಯಾ ದೇಶದ ನಾಗರಿಕತ್ವವನ್ನು ಹೊಂದಿದ್ದಾನೆ, ಅವನ ಕ್ರೋಯೇಷಿಯಾ ಮೇಲಿನ ದೇಶ ಪ್ರೇಮ ಸ್ವಾಭಾವಿಕವಾದದ್ದು. ಆದರೆ, ಜೆಕೋವಿನಂತ ಬಹುಸಂಖ್ಯಾತ ಸಮುದಾಯ ಅವನನ್ನು ಯಾವಾಗಲೂ ಅನುಮಾನದಿಂದಲೇ ನೋಡುತ್ತದೆ. ಅಲ್ಪಸಂಖ್ಯಾತ ಸಮುದಾಯ ತಮ್ಮ ಬದುಕಿನ ಪ್ರತಿ ಹೆಜ್ಜೆಯಲ್ಲೂ ದೇಶಪ್ರೇಮವನ್ನು ಸಾಬೀತಪಡಿಸುವ ಅನಿವಾರ್ಯತೆಗೆ ಒಳಗಾಗುತ್ತಾದೆ. ಸಣ್ಣ ಸಣ್ಣ ಕಾರಣಗಳಿಗೂ ಅನಾಯಾಸವಾಗಿ ಅವರ ಮೇಲೆ ದೇಶದ್ರೋಹದ ಪಟ್ಟ ಕಟ್ಟಲಾಗುತ್ತದೆ, ಯಾವಾಗಲೂ ಅವರು ಎರಡನೇ ದರ್ಜೆ ಪ್ರಜೆಗಳಾಗಿರಬೇಕು ಎಂದು ಬಯಸಲಾಗುತ್ತದೆ. ಒಂದು ಸಂಗತಿ: ತಮ್ಮ ವೃತ್ತಿ ಜೀವನ ಪೂರ್ತಿ  ಭಾರತ ಸಂವಿಧಾನವನ್ನು ಭೋದಿಸಿದ ಪ್ರಾಧ್ಯಾಪಕರೊಬ್ಬರು, ತಮ್ಮ ನಿವೃತ್ತಿಯ ನಂತರ ಸ್ಪರ್ಧಾತ್ಮಕ ಪರೀಕ್ಷಾರ್ತಿಗಳಿಗೆ ‘ಸಂವಿಧಾನ’ ಮತ್ತು ‘ಸಾರ್ವಜನಿಕ ಆಡಳಿತ’ ವಿಷಯವಾಗಿ ಮನೆಯಲ್ಲೇ ತರಭೇತಿ ನೀಡುತಿದ್ದರು.  ಮುಸ್ಲಿಂ ಆಡಳಿತಗಾರರ ಬಗ್ಗೆ ಪ್ರಸ್ತಾಪ ಬಂದಾಗಲೆಲ್ಲ, ಅವರನ್ನು ಹೀಗಳೆಯುವುದು, ಟೀಕಿಸುವುದು ಮಾಡುತಿದ್ದರು. ಮೈಸೂರು ನಗರದ ಸುಸಜ್ಜಿತ ಏರಿಯಾದಲ್ಲಿದ್ದ ಅವರ ವಿಶಾಲವಾದ ಬಾಡಿಗೆ ಮನೆಯ ಮಾಲೀಕರು ಮುಸ್ಲಿಂ ಸಮುದಾಯದವರೇ. ಆ ಮನೆಯನ್ನು ಪ್ರಾಧ್ಯಾಪಕರಿಗೆ ಬಹಳ ಕಡಿಮೆ ಬೆಲೆಗೆ ಬಾಡಿಗೆಗೆ ಕೊಟ್ಟಿದ್ದರು. ಪ್ರಾಧ್ಯಾಪಕರಿಗೆ ‘ನಿಮ್ಮ ಮನೆಯ ಮಾಲಿಕರು ಕೂಡ ಮುಸ್ಲಿಂ, ಅವರು ಹೇಗೆ ಸರ್?’ ಎಂದು ಕೇಳಿದಾಗ ‘ಅವರು ಬಿಡಿ ಎಕ್ಸಪ್ಷನಲ್, ಬಹಳ ಒಳ್ಳೆಯ ಜನ’ ಅನ್ನೋರು.

ನಾಲ್ಕು: ಒಂದು ದೇಶದ  ನಾಗರಿಕ,ಅದರಲ್ಲೂ ಬಹುಸಂಖ್ಯಾತರ ಪ್ರಜ್ಞೆ ಯಾವ ರೀತಿಯದ್ದಾಗಿರವಬೇಕು ಎಂಬುದಕ್ಕೆ ಈ ಸಿನಿಮಾದಲ್ಲಿನ ‘ಮಾಜಾ’ ಪಾತ್ರ ಅತ್ಯುತ್ತಮ ಉದಾಹರಣೆ. ಜೆಕೋ, ಮಾಜಾಳನ್ನು ‘ಸೆರ್ಬಿಯಾ ಮೂಲದ ಆಂತೆಯನ್ನು ನೀನು ಮದುವೆಯಾಗಿದ್ದಾದರೂ ಹೇಗೆ? ಎಂದು ಕೇಳುತ್ತಾನೆ. ಅದಕ್ಕೆ ಮಾಜಾ ಹೇಳುತ್ತಾಳೆ ‘ಪ್ರೀತಿಗೆ ಗಡಿಗಳಿಗಳಿಲ್ಲ, ಆಂತೆಯ ಮುಗ್ದತೆ ನನಗೆ ಇಷ್ಟ ಆಯ್ತು, ಪ್ರೀತಿಸಿದೆವು’. ಜೆಕೋ, ಆಂತೆಯನ್ನು ಅವನ ಸರ್ಬಿಯಾದ ಹಿನ್ನಲೆ ಕಾರಣವಾಗಿ ಅವಮಾನಿಸಿದಾಗ, ಮಾಜಾ ಅಪಮಾನದಿಂದ ದು:ಖಿತನಾದ ತನ್ನ ಗಂಡನನ್ನು ಸಂತೈಸುತ್ತಾಳೆ. ಆದರೆ ಅವಳು ಜೆಕೋವಿನ ಮೇಲೆ ಕೋಪವಾಗಲಿ ಸಿಟ್ಟಾಗಲಿ ತೋರಿಸುವುದಿಲ್ಲ. ಬಹಳ ಸಹನೆಯಿಂದಲೇ ಒಂದು ಮಾತನ್ನು ಹೇಳುತ್ತಾಳೆ ‘ನೀನು ಯಾರನ್ನು ಪ್ರೀತಿಸಲು ಸಾಧ್ಯವಿಲ್ಲ, ಏಕೆಂದರೆ ನಿನ್ನ ಮನಸ್ಸಿನಲ್ಲಿ ಬರೀ ದ್ವೇಷವೇ ತುಂಬಿದೆ’  ಎಂದು. ಆಗ ಜೆಕೋ, ‘ಒಬ್ಬ ಗಂಡಸನ್ನು ನಾನು ಪ್ರೀತಿಸಿದಷ್ಟು ನೀನು ಪ್ರೀತಿಸಲು ಸಾಧ್ಯವೇ ಇಲ್ಲ’ ಎಂದು ತನ್ನ ಮತ್ತು ಬೊಬೊ ನಡುವಿನ ಸಲಿಂಗ ಪ್ರೇಮದ ಕತೆಯನ್ನು ಹೇಳುತ್ತಾನೆ. ಇದನ್ನು ಕೇಳಿದ ಮಾಜಾಳಂತು ಏಕಾಂತವಾಗಿ ಬಿಕ್ಕಿ ಬಿಕ್ಕಿ ಅಳುತ್ತಾಳೆ.

ಮಲೆಯಾಳಂನ ಪ್ರಸಿದ್ಧ ಲೇಖಕಿ ‘ಕಮಲಾ ದಾಸ್’ ಒಂದು ಕಡೆ ಹೇಳುತ್ತಾರೆ “ನಿಜವಾದ ಜ್ಞಾನ ಅಂದರೆ, ನಾವು ಇದುವರೆಗೂ ಶೈಕ್ಷಣಿಕವಾಗಿ ತಲೆಯಲ್ಲಿ ತುಂಬಿಕೊಂಡಿರುವ ಅಪಾಯದ ಕಲ್ಮಶವನ್ನು ಹೊರೆಗೆ ಹಾಕುವುದು”. ದ ಕಾನ್ಸ್ಟಿಟ್ಯೂಷನ್ ಸಿನಿಮಾದಲ್ಲಿ ಬರುವ ‘ಮಾಜಾ’ ಪಾತ್ರದಲ್ಲಿನ ಸಹಜವಾದ ಮತ್ತು ಮಾನವೀಯ ಪ್ರಜ್ಞೆ ನಮ್ಮೆಲ್ಲರದೂ ಆಗಬೇಕು.

ಯದುನಂದನ್ ಕೀಲಾರ, ಅವರಿಗೆ ವಿಶ್ವದ ಎಲ್ಲ ಭಾಷೆಯ ಸಿನೆಮಾಗಳ ಬಗ್ಗೆಯೂ ಅಪಾರ ಕುತೂಹಲ. ಸಿನೆಮ ಸಮಾಜವನ್ನು ಪ್ರಭಾವಿಸುವುದರ ಬಗ್ಗೆ ಗಮನ ಹರಿಸಿ ಚಲನಚಿತ್ರಗಳ ಬಗ್ಗೆ ಬರೆಯುವ ಯದುನಂದನ್, ಹಲವು ಜನಪರ ಚಲನಚಿತ್ರ ಉತ್ಸವಗಳ ಭಾಗವಾಗಿ ದುಡಿದಿದ್ದಾರೆ.


ಇದನ್ನೂ ಓದಿ: ನಿರಾಶ್ರಿತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಈ ಐದು ಚಲನಚಿತ್ರಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...