ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ 20 ಸೈನಿಕರ ವಿಷಯದಲ್ಲಿ ರಾಜಕೀಯ, ನಾಗರಿಕ ಹಾಗೂ ಸೈನ್ಯದ ವಿಫಲತೆ ಹಾಗೂ ಚೀನಾದ ಆಕ್ರಮಣದ ಕುರಿತು ಉತ್ತರ ಕೋರಿ 140 ಕ್ಕೂ ಹೆಚ್ಚು ಮಾಜಿ ವೀರ ಯೋಧರು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.
ಚೀನಾ ಗಾಲ್ವಾನ್ ಕಣಿವೆಯ ಮೇಲಿನ ತನ್ನ ಹಕ್ಕನ್ನು ದೃಢವಾಗಿ ಹೇಳುತ್ತಿರುವಾಗ, ಭಾರತೀಯ ಭೂಪ್ರದೇಶದೊಳಗೆ ಯಾರೂ ಪ್ರವೇಶಿಸಿಲ್ಲ ಹಾಗೂ ಯಾವುದೇ ಭಾರತೀಯ ಪ್ರದೇಶವನ್ನು ಆಕ್ರಮಿಸಿಕೊಂಡಿಲ್ಲ ಎಂಬ ಪ್ರಧಾನಿ ಮೋದಿಯ ಜೂನ್ 19 ರ ಹೇಳಿಕೆಯನ್ನು ಪತ್ರವು ಪ್ರಶ್ನಿಸಿದೆ.
ಆ ವಿವಾದಾತ್ಮಕ ಹೇಳಿಕೆ ಕುರಿತು ಘರ್ಷಣೆಯ ನಂತರದ ಪರಿಸ್ಥಿತಿಯನ್ನು ಮೋದಿ ಉಲ್ಲೇಖಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಒಂದು ದಿನದ ನಂತರ ಸ್ಪಷ್ಟೀಕರಣವನ್ನು ನೀಡಿದ್ದರೂ, ನಿವೃತ್ತ ಸೈನಿಕ ಅಧಿಕಾರಿಗಳು ಅದನ್ನು ಪ್ರಶ್ನಿಸಿದ್ದಾರೆ. ಜೂನ್ 15 ರ ನಂತರವೂ ಚೀನಾದ ಅತಿಕ್ರಮಣವನ್ನು ಮುಂದುವರೆಸಿದೆ ಎಂದು ಉಪಗ್ರಹ ಚಿತ್ರಗಳು ಮತ್ತು ಸ್ಥಳೀಯ ವರದಿಗಳನ್ನು ಅವರು ಉಲ್ಲೇಖಿಸಿದ್ದಾರೆ.
ಪ್ರಧಾನಿ ಕಚೇರಿ ನೀಡಿದ ಸ್ಪಷ್ಟೀಕರಣ ಹೇಳಿಕೆಗಳ ವಿರೋಧಾಭಾಸಗಳಿಂದಾಗಿ ಚೀನಾ ಹೇಗೆ ಅನುಕೂಲ ಪಡೆಯಿತು” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿ ಚೀನಾದ ಒಳನುಸುಳುವಿಕೆಗಳು, ಆಕ್ರಮಣಗಳು ಮತ್ತು ಅತಿಕ್ರಮಣಗಳ ಕುರಿತು ಸತ್ಯ ಶೋಧನಾ ಸಮಿತಿಯನ್ನು ರಚಿಸುವಂತೆ ಪತ್ರವು ಪ್ರಧಾನಿ ಹಾಗೂ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆದ ರಾಷ್ಟ್ರಪತಿಯನ್ನು ಒತ್ತಾಯಿಸಿದೆ. ಅಲ್ಲದೆ ಈ ಸಮಿತಿಯ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಬೇಕೆಂದು ಕೇಳಿದೆ.
ಪತ್ರವನ್ನು ಮಾಜಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಎಲ್. ರಾಮದಾಸ್ ಅವರು ಬರೆದಿದ್ದು, ಅದಕ್ಕೆ 143 ಮಾಜಿ ಯೋಧರು ಅನುಮೋದಿಸಿದ್ದಾರೆ. ಈ ಪತ್ರವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಮೂರೂ ಸೇನಾ ಮುಖ್ಯಸ್ಥರಿಗೆ ಕೂಡಾ ಕಳಿಸಲಾಗಿದೆ.
ಗಡಿ ಪರಿಸ್ಥಿತಿ ಬಗ್ಗೆ ಅಧಿಕಾರಿಗಳಿಂದ ಹೆಚ್ಚಿನ ಸ್ಪಷ್ಟತೆ ನೀಡುವಂತೆ ಒತ್ತಾಯಿಸಿರುವ ಪತ್ರವು, ವಿರೋಧಿ ರಾಷ್ಟ್ರಗಳು ಲಾಭಪಡೆಯುವಂತಹ ವಿರೋಧಾಭಾಸ ಹೇಳಿಕೆಗಳನ್ನು ನೀಡದಂತೆ ಒತ್ತಾಯಿಸಿದೆ.
ಅಲ್ಲದೆ ಭಾರತವನ್ನು ಜಾತ್ಯಾತೀತ ಆಧಾರದಲ್ಲಿ ಮಾತ್ರ ದೃಢವಾಗಿ ಕಟ್ಟಲು ಸಾಧ್ಯ ಎಂದು ಪತ್ರದಲ್ಲಿ ಒತ್ತಿ ಹೇಳಲಾಗಿದ್ದು, ಧರ್ಮ ಹಾಗೂ ಜಾತಿಗಳ ಆಧಾರದಲ್ಲಿ ವಿಭಜಿಸುವ ನೀತಿಯನ್ನು ಬಿಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ.
ಸಹಿ ಮಾಡಿದ ಎಲ್ಲಾ ಮಾಜಿ ವೀರ ಯೋಧರು ದೇಶದಲ್ಲಿ ಯುದ್ದ ಹಾಗೂ ಶಾಂತಿ ಸಮಯದಲ್ಲಿ ಸೇವೆ ಸಲ್ಲಿಸಿದ ಸಶಸ್ತ್ರ ಪಡೆಗಳ ಪರಿಣಿತರಾಗಿದ್ದಾರೆ.
“ನಾವು ಯಾವುದೇ ಗುಂಪು ಅಥವಾ ರಾಜಕೀಯ ಪಕ್ಷವನ್ನು ಪ್ರತಿನಿಧಿಸುವುದಿಲ್ಲ. ನಾವು ಪ್ರತಿಯೊಬ್ಬರೂ ಈ ಹೇಳಿಕೆ ನೀಡುವಾಗ ದೇಶದ ಹಾಗೂ ನಮ್ಮ ಸಶಸ್ತ್ರ ಪಡೆಗಳ ಹಿತಾಸಕ್ತಿಯನ್ನು ಮಾತ್ರ ಹೊಂದಿದ್ದೇವೆ. ಆದ್ದರಿಂದ, ನಮ್ಮ ಗೌರವಾನ್ವಿತ ಅಭಿಪ್ರಾಯ, ವಿನಂತಿಗಳು ಮತ್ತು ತುರ್ತುಗಳನ್ನು ಆ ವಿಚಾರದಲ್ಲಿ ಮಾತ್ರ ತೆಗೆದುಕೊಳ್ಳಬೇಕೆಂದು ನಾವು ವಿನಂತಿಸುತ್ತೇವೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಅಡ್ಮಿರಲ್ ರಾಮದಾಸ್ ನೇತೃತ್ವದ 150 ಕ್ಕೂ ಹೆಚ್ಚು ಯೋಧರು ಕಳೆದ ವರ್ಷದ ಲೋಕಸಭಾ ಚುನಾವಣೆಯ ಸಮಯದಲ್ಲಿ ರಾಜಕೀಯ ಉದ್ದೇಶಗಳಿಗಾಗಿ ಸಶಸ್ತ್ರ ಪಡೆಗಳನ್ನು ಬಳಸುವುದನ್ನು ವಿರೋಧಿಸಿ ರಾಷ್ಟ್ರಪತಿಗೆ ಪತ್ರ ಬರೆದಿದ್ದರು.
ಓದಿ: ಯುಪಿ ಸರ್ಕಾರ ಕುಸಿಯದಂತೆ ತಡೆಯಲು ವಿಕಾಸ್ ದುಬೆ ಹತ್ಯೆ: ವಿರೋಧ ಪಕ್ಷಗಳ ಆರೋಪ


