ಮನೆಗಳ ಹಂಚಿಕೆಯ ವಿಷಯದ ಕುರಿತು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತು ಕುಣಿಗಲ್ ಕ್ಷೇತ್ರದ ಶಾಸಕ ಡಾ.ರಂಗನಾಥ್ ನಡುವೆ ಮಾತಿನ ಜಟಾಪಟಿಗೆ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆ ವೇದಿಕೆಯಾಯಿತು.
ಇಂದು ನಡೆದ ಕೆಡಿಪಿ ಸಭೆಯಲ್ಲಿ ಕುಣಿಗಲ್ ಕ್ಷೇತ್ರದ ಶಾಸಕ ಡಾ. ರಂಗನಾಥ್ ರೈತರಿಗೆ ಮನೆಗಳು ಹಂಚಿಕೆಯಾಗಿವೆ. ನಮಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಕುಣಿಗಲ್ ಕ್ಷೇತ್ರಕ್ಕೆ ಆರು ತಿಂಗಲಿಂದಲೂ ಹಣ ಬಿಡುಗಡೆಯಾಗಿಲ್ಲ. ವಿಳಂಬ ಮಾಡುತ್ತಿದ್ದೀರಿ ಎಂದು ಸಚಿವರಿಗೆ ಕೇಳಿದರು.
ಇದರಿಂದ ಕೆರಳಿದ ಸಚಿವ ಮಾಧುಸ್ವಾಮಿ ಅವರು ಕುಣಿಗಲ್ ಕ್ಷೇತ್ರದಲ್ಲಿ ಫ್ರಾಡ್ ನಡೆದಿದೆ. 38 ಮನೆಗಳಿಗೆ ಎರಡು ಬಾರಿ ಬಿಲ್ ಮಾಡಲಾಗಿದೆ. ಹಾಗಾಗಿ ನೀವು ಫ್ರಾಢ್ ಎಂದು ಮಾತಿನ ಭರದಲ್ಲಿ ಕೂಗಾಡಿದರು ಎನ್ನಲಾಗಿದೆ.
ಸಚಿವರ ಮಾತಿಗೆ ಜೆಡಿಎಸ್ ಜಿಲ್ಲಾ ಪಂಚಾಯತ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸಚಿವರು ಕ್ಷಮೆ ಯಾಚಿಸಬೇಕು ಎಂದು ಘೋಷಣೆ ಕೂಗಿದರು. ಇದರಿಂದ ಸಭೆಯಲ್ಲಿ ಕೋಲಾಹಲ ಉಂಟಾಯಿತು.

ಈ ಸಂದರ್ಭದಲ್ಲಿ ಸಮಾಧಾನದಿಂದಲೇ ಮಾತನಾಡಿದ ಶಾಸಕ ಡಾ.ರಂಗನಾಥ್, ನನ್ನ ಕ್ಷೇತ್ರದಲ್ಲಿ 38 ಮನೆಗಳಿಗೆ ಎರಡು ಬಿಲ್ ಆಗಿದ್ದರೆ ಅದಕ್ಕೆ ಪಿಡಿಓ, ಇಒ ಹೊಣೆಗಾರರು. ಅಲ್ಲಿ ಮೋಸವಾಗಿದ್ದರೆ ಕ್ರಮ ತೆಗೆದುಕೊಳ್ಳಿ. ಅದನ್ನೇ ನೆಪ ಮಾಡಿಕೊಂಡು ನನ್ನನ್ನೇ ಫ್ರಾಡ್ ಎನ್ನುವುದು ಸರಿಯಲ್ಲ ಎಂದು ಸಚಿವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.
ಓದಿ: ಹಿರಿಯ ರೈತ ಹೋರಾಟಗಾರರನ್ನು ಅವಮಾನಿಸಿದ ಸಚಿವ ಮಾಧುಸ್ವಾಮಿ ನಡೆಗೆ ತೀವ್ರ ಆಕ್ರೋಶ
ಕೇವಲ 38 ಮನೆಗಳಲ್ಲಿ ಅಕ್ರಮವಾಗಿದೆ ಎಂದು ಹಣ ಹಂಚಿಕೆ ಮಾಡದೇ ಇರುವುದು ಸರಿಯಲ್ಲ. ಬಡವರಿಗೆ ಮನೆಗಳು ಮಂಜೂರಾಗಿವೆ. ಹಣ ಬಿಡುಗಡೆ ಮಾಡಿ ಬಡ ರೈತರು ನೆಮ್ಮದಿಯಿಂದ ಜೀವನ ನಡೆಸಲು ಅನುವು ಮಾಡಿಕೊಡಿ. ದುಡ್ಡಿದೆ ಅಂದ್ರೆ ಬಿಡುಗಡೆ ಮಾಡಿ. ಇಲ್ಲಾಂದ್ರೆ ಇಲ್ಲವೆಂದು ಹೇಳಿ ಎಂದು ಸಚಿವರಿಗೆ ತಿಳಿಸಿದರು.
ಸಚಿವ ಮಾಧುಸ್ವಾಮಿ ಮಾತುಗಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಸಾರ್ವಜನಿಕ ಸಭೆಯಲ್ಲಿ ಮಾತನಾಡುವಾಗ ರಾಜಕೀಯ ಭಾಷಣದಂತೆ ಮಾತನಾಡಿರುವುದು ಅವರ ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ಜೆಡಿಎಸ್ ಜಿಲ್ಲಾ ಪಂಚಾಯಿತಿ ಸದಸ್ಯರು ಕಿಡಿಕಾರಿದ್ದಾರೆ.
ಈ ಸಂಬಂಧ ಶಾಸಕ ಡಾ.ರಂಗನಾಥ್ ನಾನುಗೌರಿ.ಕಾಂ ಮಾತನಾಡಿ “ಸಚಿವರು ಯಾಕೆ ಹೀಗೆ ಮಾತನಾಡುತ್ತಿದ್ದಾರೆ ಎಂದು ತಿಳಿಯದು. ಹಣ ಬಿಡುಗಡೆ ಮಾಡುವ ಬಗ್ಗೆ ಸಚಿವರಿಂದ ಸೂಕ್ತ ಉತ್ತರ ಬರುತ್ತಿಲ್ಲ. ಇದು ಮೂರನೇ ಬಾರಿ ಹೀಗೆ ಮಾಡುತ್ತಿರುವುದು. ಸರ್ಕಾರದ ಬಳಿ ಹಣ ಇಲ್ಲವೆಂದರೆ ಸ್ಪಷ್ಟನೆ ನೀಡಲಿ ಅದು ಬಿಟ್ಟು ಹೀಗೆಲ್ಲಾ ಮಾಡುವುದರಿ ಸರಿಯಾದ ಕ್ರಮವಲ್ಲ. ದೇವರು ಅವರಿಗೆ ಯಾವಾಗ ಬುದ್ದಿ ಕೊಡುತ್ತಾನೋ ಗೊತ್ತಿಲ್ಲ. ಆದರೂ ನನಗೆ ಫೋನ್ ಮಾಡಿ ಕ್ಷಮೆಯಾಚಿಸಿದ್ದಾರೆ” ಎಂದು ಹೇಳಿದ್ದಾರೆ.
ಓದಿ: ಮಾಧುಸ್ವಾಮಿಗೆ ಕಾನೂನಿನ ಪಾಠ ಹೇಳಿಕೊಡಬೇಕಿದೆ ; ಹೋರಾಟಗಾರ್ತಿಯರ ಆಕ್ರೋಶ


