ಜಾತ್ಯತೀತತೆಯ ಸೋಲಿಗೆ ಕಾರಣಗಳೇನು?-ಮೂರು ಊಹಾ ಪ್ರಮೇಯಗಳು
ಜಾತ್ಯತೀತತೆ ‘ಶವವಾಗಿದೆ’ ಎಂದು ಯೋಗೇಂದ್ರ ಅವರು ಹೇಳುವಾಗ, ಅದು ಅವರಲ್ಲಿರುವ ಆತಂಕ-ಕಸಿವಿಸಿಯನ್ನು ತೋರಿಸುತ್ತದೆಯೇ ವಿನಹ ಅದು ಕುಹಕದ ಮಾತಲ್ಲ; ಅಂತಹ ಕಸಿವಿಸಿಗೆ ಒಳಗಾಗದೇ ಹೋದರೆ, ನಮ್ಮ ಸ್ವವಿಮರ್ಶೆ ಮೊಂಡಾಗಿ, ದೇಶಾವರಿ ಆಶಾವಾದಕ್ಕೆ ಬೀಳುತ್ತೇವೆ. ಜಾತ್ಯತೀತತೆ ನಿರ್ಜೀವಗೊಂಡಿರುವುದಕ್ಕೆ ಯೋಗೇಂದ್ರ ಅವರು ನೀಡಿರುವ ಕಾರಣಗಳು ತಕ್ಷಣದ ಊಹಾ ಪ್ರಮೇಯಗಳು (ಹೈಪೋಥಿಸೀಸ್); ಸದ್ಯಕ್ಕೆ ನಮ್ಮ ಬೌದ್ಧಿಕ ಹುಡುಕಾಟವು ಇಂತಹ ಊಹಾ ಪ್ರಮೇಯಗಳ ಮೂಲಕವೇ ಶುರುವಾಗಬೇಕು.
ಭಾರತದ ಉಪಖಂಡದಲ್ಲಿ, ಮತ ಹಾಗು ಪ್ರಭುತ್ವ ಅಧಿಕಾರಗಳ ಮೈತ್ರಿಯ ಇತಿಹಾಸವು ಎರಡು ಸಾವಿರ ವರ್ಷಗಳಿಗಿಂತ ಹೆಚ್ಚಿನದು; ಈ ನೆಲದಲ್ಲೇ ಹುಟ್ಟಿದ ಎರಡು ಮತಗಳು, ಅಲ್ಲೇ ನೆಯುಳಿಸಿಕೊಳ್ಳಲಾಗದಂತಾಗಿದೆ; ಮೂರನೇ ಮತವನ್ನು ಎದುರಾಳಿಯಾಗಿಸಿಕೊಂಡು ಅಧಿಕಾರ ಗಟ್ಟಿಗೊಳಿಸುವ ರಾಜಕೀಯ ತಂತ್ರವು ವಸಾಹತುಶಾಹಿ ಆಗಮನದ ಮೂರು ಶತಮಾನಗಳ ಕಾಲದಿಂದಲೂ ನಡೆಯುತ್ತಿದೆ. ಈ ಬಗೆಯ ಚಾರಿತ್ರಿಕ ಮತಾಧಿಕಾರದ ಎದಿರು ಹುಟ್ಟಿ ಸೆಣಸಿರುವ ‘ಆಧುನಿಕ ಜಾತ್ಯತೀತತೆ’ಯ ಪರಿಕಲ್ಪನೆಯ ವಯಸ್ಸು 150 ವರ್ಷಗಳು ಮಾತ್ರ. ಚಾರಿತ್ರಿಕವಾಗಿ ಸಂಚಯಿತವಾದ ಮತ-ಪ್ರಭುತ್ವ ಮೈತ್ರಿಯ ಯಜಮಾನಿಕೆಯ ಶಕ್ತಿಯನ್ನು ಆಧುನಿಕ ಜಾತ್ಯತೀತ ಪ್ರತಿರೋಧವು ಸರಿಯಾಗಿ ಅಂದಾಜಿಸದೇ, ಒಂದು ಹಂತದ ಮೇಲ್ಪದರದಲ್ಲಿ ಮೈಮರೆತಿದೆಯೇ?

‘ಹಿಂದು’ ಎನ್ನುವುದು ಒಂದು ಮತವಲ್ಲ; ಹಲವಾರು ಮತ ಸಂಪ್ರದಾಯಗಳು ಆಚರಣೆಯಲ್ಲಿರುವ ಭೌಗೋಳಿಕ ಪ್ರದೇಶವನ್ನು ಗುರುತಿಸುವ ಒಂದು ವಿಧಾನ; ಪಶ್ಚಿಮದಿಂದ ಬಂದ ವಸಾಹತುಶಾಹಿ ಆಳರಸರಿಗೆ, ಆಡಳಿತಕ್ಕೋಸ್ಕರ ಜನರನ್ನು ‘ಒಂದು ಮತ’ದ ಅಡಿ ಒತ್ತಟ್ಟಿಗೆ ಸೇರಿಸುವ ತುರ್ತಲ್ಲಿ ಹಚ್ಚಿದ ಸಾಮಾನ್ಯ ಹಣೆಪಟ್ಟಿ; 1884ರಲ್ಲಿ ಮೊದಲ ಜನಗಣತಿಯು ನಡೆದಾಗ, ಎಲ್ಲರೂ ತಮ್ಮ ಜಾತಿಗಳ ಗುರುತನ್ನು ಹೇಳಿಕೊಳ್ಳುತ್ತಿದ್ದರು, ಇಲ್ಲ ವಿವಿಧ ಮತ ಸಂಪ್ರದಾಯಗಳ ಹೆಸರು ಹೇಳಿಕೊಂಡಿದ್ದರು; ಎಷ್ಟರ ಮಟ್ಟಿಗೆ ಎಂದರೆ, ಇಸ್ಲಾಂ ಹಾಗು ‘ಹಿಂದು’ ಮತ ಸಂಪ್ರದಾಯಗಳ ಸಂಕರದ ಪಂಥಗಳಲ್ಲೇ ಕೋಟ್ಯಂತರ ಜನ ತಮ್ಮನ್ನು ಗುರುತಿಸಿಕೊಳ್ಳುವ ವೈವಿಧ್ಯತೆಗೆ ವಸಾಹತುಶಾಹಿ ಆಡಳಿತವೇ ಬೆಚ್ಚಿತ್ತು- ಇದು ತೀರ ಹಳೆಯ ಇತಿಹಾಸವೇನೂ ಅಲ್ಲ. ಇಂತಿಪ್ಪ ನಾಡಲ್ಲಿ, ಎರಡು ಸಾವಿರ ವರ್ಷಗಳ ಸಾಮಾನ್ಯವೆಂದು ಗುರುತಿಸಬಹುದಾದ ಒಂದು ಸಂಗತಿ ಎಂದರೆ, ವೈದಿಕ ಮತಾಚಾರದ ಯಜಮಾನಿಕೆಯ ವಿರುದ್ಧ ಹಲವು ಮತ ಸಂಪ್ರಾದಯಗಳ ಭಿನ್ನಮತ! ಪ್ರತಿ ಪ್ರತಿರೋಧವನ್ನು ಹಿಂಸಾತ್ಮಕವಾಗಿ ದಮನಿಸಿದ ಅಥವ ಸಾಧ್ಯವಾಗದಾದಾಗ ಆ ಮತಸಂಪ್ರದಾಯಗಳ ಒಳಗೆ ನುಸುಳಿ, ತನ್ನ ಕೈಯ್ಯಾಳು ಮಾಡಿಕೊಂಡಿರುವ ವೈದಿಕಮತವು ತನ್ನ ಆಧ್ಯಾತ್ಮಿಕ ಜ್ಞಾನದ ವಿಶಿಷ್ಟತೆಗಿಂತ, ರಾಜಕೀಯ-ಸಾಮಾಜಿಕ ಕಾರ್ಯಾಚರಣೆಯ ತಂತ್ರಗಳ ಕಾರಣಕ್ಕೆ ‘ವೈದಿಕಶಾಹಿ’ ಎಂದೇ ಕುಖ್ಯಾತವಾಗಿದೆ. ಇಂತಾಗಿ ನಮ್ಮ ಭೂಖಂಡದಲ್ಲಿ ‘ಜಾತ್ಯತೀತತೆ’ಯ ಮುಖ್ಯ ಲಕ್ಷಣ ಎಂದರೆ ‘ವೈದಿಕಶಾಹಿ’ಯ ವಿರುದ್ಧದ ಲೌಕಿಕ ಪ್ರತಿರೋಧ. ಇಂತಹ ಪ್ರತಿರೋಧದ ‘ನೆನಪುಗಳ ಸಂಚಿತ ಭಂಡಾರ’ವನ್ನು, ತನ್ನ ವಿಶಿಷ್ಟ ವೈಚಾರಿಕ ಗುರುತುಧಾರಣೆಯಾಗಿ ಮಾಡಿಕೊಳ್ಳಲು ವಿಫಲವಾಗಿರುವುದು ‘ಜಾತ್ಯತೀತತೆ’ಯ ಸೋಲಿಗೆ ಮುಖ್ಯ ಕಾರಣ ಎಂಬುದು ಮೊದಲ ಊಹಾ ಪ್ರಮೇಯ.
ಈ, ಮೊದಲನೇ ಪ್ರಮೇಯದ ಸೋಲಿನ ಮುಖ್ಯ ಸೂಚನೆಗಳನ್ನು, 1970ರ ಹೊತ್ತಿಗೆ, ಬಲಪಂಥೀಯರಲ್ಲದ, ಆದರೆ ಎಡಪಂಥದ ಸಂಘಟನಾ ವ್ಯವಸ್ಥೆಗಳಾಚೆ ಇರುವ, ಭೌದ್ಧಿಕ ಸಮಾಜಶಾಸ್ತ್ರಜ್ಞರು ನೀಡತೊಡಗಿದ್ದರು. ‘ಜಾತ್ಯತೀತತೆ’ಯ ವೈಚಾರಿಕತೆಯು ನೆಹರು ಮಾದರಿಯ ಅಭಿವೃದ್ಧಿಗೆ ಪೂರಕವಾದ ‘ಪಶ್ಚಿಮದ ವೈಜ್ಞಾನಿಕ ಜ್ಞಾನಯುಗದ’ [ಎನ್‍ಲೈಂಟನ್ಮೆಂಟ್] ಮಾದರಿಯ ದಾರಿ ಹಿಡಿದಿದೆ; ಅದು ದಕ್ಷಿಣ ಏಶಿಯಾ ಭೂಖಂಡದ ‘ಜನಸಾಮಾನ್ಯ ನಂಬಿಕೆ’ಗಳಿಗೆ ವಿರುದ್ಧವಾಗಿದ್ದು, ಅದು ‘ಹಿಂಸಾತ್ಮಕ’ವಾಗಿದೆ ಎಂದು ಅವರು ಪ್ರಕಟಿಸತೊಡಗಿದ್ದರು. ನೆಹರು ಅವರು ‘ನೈತಿಕವಾಗಿಯೇ ಪ್ರಗತಿ’ ಎಂದು ನಂಬಿ ಆಚರಣೆಗೆ ತೊಡಗಿದ್ದ ‘ದೊಡ್ಡ ಕೈಗಾರಿಕೆ, ದೊಡ್ಡ ಆಣೆಕಟ್ಟುಗಳು’-ಇವುಗಳ ನಿರ್ಮಾಣ ಕೆಲಸದಲ್ಲಿ ತಮ್ಮ ಜೀವಾನಾಧರವನ್ನು ಕಳೆದುಕೊಂಡ ಜನರು, ತಮ್ಮ ಜೀವನಾಧರಗಳನ್ನು ಕಳೆದುಕೊಂಡದ್ದನ್ನು ತಮ್ಮ ‘ಅವೈಧಿಕ’ಭಾಷೆಗಳಲ್ಲಿ ತೋಡಿಕೊಳ್ಳುತ್ತಿದ್ದರ ಬಗ್ಗೆ ಅವರುಗಳು ಸೂಚಿಸುತ್ತಿದ್ದರು. ವಿಪರ್ಯಾಸವೆಂದರೆ, ಈ ಬಗೆಯಲ್ಲಿ ಜೀವನಾಧಾರ ಕಳೆದುಕೊಂಡ ಜನರ ಲೌಕಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದವರು ‘ನೆಹರು ಯುಗದ ಪ್ರಗತಿ’ಯ ಪರಿಕಲ್ಪನೆಯು ‘ವೈದಿಕಶಾಹಿ’ಯ ಲೌಕಿಕ ಹಿಡಿತವನ್ನು ನಿಶಸ್ತ್ರಗೊಳಿಸುವುದು ಎಂದೇ ನಂಬಿದವರಾಗಿದ್ದರು; ಪ್ರಗತಿಯ ಧನಾತ್ಮಕ ಸಂಪನ್ಮೂಲ ಉತ್ಪಾದನೆಯಲ್ಲಿ ಸಂಚಿತವಾದ ಸಂಪನ್ಮೂಲದ ಅಸಮ ಹಂಚಿಕೆಗೆ ಕಾರಣವಾದ ಅಧಿಕಾರಶಾಹಿಯ ಬಗ್ಗೆ ಅವರು ಮಾತನಾಡುತ್ತಿದ್ದರು. ‘ವೈದಿಕಶಾಹಿ’ಯನ್ನು ಎತ್ತಿ ಹಿಡಿಯುವ ಬಲಪಂಥಕ್ಕೆ ಪ್ರತಿರೋಧದ ‘ಅವೈದಿಕ’ಭಾಷೆಯು ಪಥ್ಯವಾಗಿರಲಿಲ್ಲ; ‘ಪ್ರಗತಿ’ಯಿಂದ ಸಂಚಿತವಾದ ಸಂಪನ್ಮೂಲದ ಸಿಂಹಪಾಲು ‘ವೈದಿಕಶಾಹಿ’ಯನ್ನು ಜತನವಾಗಿಡುವ ಜನ ವರ್ಗಗಳಿಗೆ ತಲುಪುವಂತೆ ‘ಅಧಿಕಾರಶಾಹಿ’ಯು ನೋಡಿಕೊಳ್ಳಲು ಅವರು ಸಹಕರಿಸಿ ಕಾರ್ಯಾಚರಿಸುತ್ತಿದ್ದರು; ಹಾಗಾಗಿ ಈ ಕಾಲದಲ್ಲಿ ನಡೆಯುತ್ತಿದ್ದ ‘ಸಮಾನ ಸಂಪನ್ಮೂಲ, ಸಾಮಾಜಿಕ ಪ್ರತಿನಿಧಿಕರಣ ಹಂಚಿಕೆ’ಗಾಗಿ ನಡೆಯುತ್ತಿದ್ದ ಹೋರಾಟಗಳನ್ನು ನಿಶಸ್ತ್ರಗೊಳಿಸುವ ಹೋರಾಟಗಳ ಕಡೆಗೆ ತಮ್ಮ ಶಕ್ತಿ ಕೇಂದ್ರೀಕರಿಸತೊಡಗಿದರು.
ಇದನ್ನು ಓದಿ: ಮತ ನಂಬಿಕೆ, ಜಾತ್ಯತೀತತೆ : ಮರುಕಟ್ಟಿಕೊಳ್ಳಬೇಕಾದ್ದು ಯಾವ ಭಾಷೆಯನ್ನು? ಭಾಗ: 1 – ಕೆ.ಫಣಿರಾಜ್
‘ಭೂಸುಧಾರಣ ಹೋರಾಟ’ಗಳು, ‘ಮೀಸಲಾತಿ ಚಳುವಳಿ’ಗಳನ್ನು ‘ವೈದಿಕಾಶಾಹಿ’ ಶಕ್ತಿ ಕೇಂದ್ರಗಳು ಹ್ಯಾಗೆ ಪ್ರತಿರೋಧಿಸಿದವು ಎಂಬುದರ ಕುರಿತ ಅಧ್ಯಯನಗಳು ಭೌದ್ಧಿಕ ವಲಯದಲ್ಲಿ ನಡೆದಿವಯೋ ಇಲ್ಲವೋ, ನಡೆದಿದ್ದರೂ ಅವುಗಳ ಪಾಠವನ್ನು ತಳಮಟ್ಟದ ‘ಜಾತ್ಯತೀತ ಹೋರಾಟಗಾರರಿಗೆ’ ತಲುಪಿಸುವ ಸಾಂಸ್ಥಿಕ ವ್ಯವಸ್ಥೆಯಂತೂ ಭಾರತದಲ್ಲಿ ಗೈರು ಹಾಜರಾಗಿತ್ತು. ಯೋಗೇಂದ್ರ ಅವರು ‘ಜಾತ್ಯತೀತರು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವವರಾಗಿದ್ದಾರೆ’ ಎಂದಾಗ ಅವರು ಏನನು ಸೂಚಿಸುತ್ತಿದ್ದಾರೆ? ಅವರು ‘ನೆಹರು ಪ್ರಗತಿ’ಯ ಪರಿಕಲ್ಪನೆಯನ್ನು ತಳಮಟ್ಟದಲ್ಲಿ ಆ ಪ್ರಗತಿಯಿಂದ ಹೊರದೂಡಲ್ಪಟ್ಟ ಸಮುದಾಯಗಳ ಪರವಾಗಿ ಹೋರಾಟ ಮಾಡುತ್ತಿರುವವರಿಗೆ ದಾಟಿಸುತ್ತಿದ್ದ ಭೌದ್ಧಿಕತೆಯ ಬಗ್ಗೆ ಮಾತನಾಡುತ್ತಿದ್ದಾರೆ! ನೆಹರು ಅವರ ವೈಜ್ಞಾನಿಕ ಪ್ರಗತಿಯ ಕಲ್ಪನೆಯನ್ನೇ ‘ಜಾತ್ಯಾತೀತತೆ’ಯ ಗುರುತಾಗಿ ನಿರೂಪಿಸುವ ಭೌದ್ಧಿಕರು ಮತ್ತು ಅವರಿಗೆ ಭಿನ್ನಮತ ತೋರಿದ ಭೌದ್ಧಿಕರ ನಡುವಿನ ವಾಗ್ವಾದಗಳ ನೈಜತೆಯ ನ್ಯಾಯನಿರ್ಣಯವು, ‘ಪ್ರಗತಿ’ಯಿಂದ ನಿರಾಶ್ರಿತರಾದವರ ಪರವಾಗಿ ಹೋರಾಡುತ್ತಿರುವ ಹೋರಾಟಗಾರರು ಮಾಡಬೇಕಿತ್ತು; ತಾವು ಯಾವ ಜನರ ಪರವಾಗಿ ಹೋರಾಡುತ್ತಿದ್ದರೋ ಆ ಜನರಿಗೆ ಈ ವಾಗ್ವಾದಗಳು ನಿಮ್ಮ ಹೆಸರಲ್ಲಿ ನಡೆಯುತ್ತಿವೆ ಎಂಬ ವಾಸ್ತವವನ್ನು ತಿಳಿಸುವ ಒಂದು ಜೀವಂತ ಮಾಧ್ಯಮದ ಅವಶ್ಯಕತೆ ಇತ್ತು. ಆ ಮಾಧ್ಯಮವು- ಯಾವುದನ್ನು ಚಿಂತಕ ಮತ್ತು ಸಮಾಜವಾದಿ ಹೋರಾಟಗಾರ ಗ್ರಾಮ್ಷಿ – ಸಂಘಟಿತ ಭೌದ್ಧಿಕ ಭಿನ್ನಮತಗಳ ಚಿಂತನೆಯ ಸಂವಹನೆಗಳನ್ನು ಸಹಜವಾಗಿಸಿಕೊಂಡ ‘ಜನಾನುರಾಗಿ ಹೋರಾಟಗಳು’ [ನ್ಯಾಷನಲ್ ಪಾಪ್ಯುಲಾರ್] ಎಂದು ಕರೆದನೋ- ಅದು ಗೈರು ಹಾಜಾರಾಗಿರುವುದನ್ನು ನಾವು 1970-90ರ ನಡುವಿನ ಹೋರಾಟಗಳಲ್ಲಿ ಕಾಣಬಹುದು. ಇದು ‘ಜಾತ್ಯತೀತತೆಯ ಸೋಲಿಗೆ’ ಕಾರಣವಾದ ಎರಡನೇ ಊಹಾ ಪ್ರಮೇಯ.
ಸದರಿ ಬರಹಗಾರನ ಸೀಮಿತ ತಿಳುವಳಿಕೆಯಲ್ಲಿ, 1850-1950ರವರೆಗಿನ ಶತಮಾನದ ಕಾಲಾವಧಿಯಲ್ಲಿ, ಭಾರತದ ‘ಜಾತ್ಯತೀತತೆ’ಗೆ ಸಶಕ್ತವಾದ ಭೌದ್ಧಿಕತೆಯನ್ನು ಒದಗಿಸಿದ್ದು ಎರಡು ‘ಜ್ಞಾನ ವಿದ್ಯಮಾನ’ [ರಿನೈಸೆನ್ಸ್] ಗಳು: ಫುಲೇ ದಂಪತಿಗಳ ಚಿಂತನೆ-ಕಾರ್ಯಾಚರಣೆಗಳಿಂದ ಚೋದಿತವಾದ ‘ಮಹಾರಾಷ್ಟ್ರ ಜ್ಞಾನ ವಿದ್ಯಮಾನ’ ಹಾಗು ಈಶ್ವರಚಂದ್ರ ವಿದ್ಯಾಸಾಗರರಿಂದ ರವೀಂದ್ರನಾಥ ಟಾಕೂರರ ಚಿಂತನೆ ಮತ್ತು ಕಾರ್ಯಾಚರಣೆಗಳಿಂದ ಪ್ರೇರಿತವಾದ ‘ಬಂಗಾಳ ಭೌದ್ಧಿಕ ವಿದ್ಯಮಾನ’. ಎಂ.ಕೆ.ಗಾಂಧಿ-ಬಿ.ಆರ್.ಅಂಬೇಡ್ಕರ್ ಅವರ ನಡುವಿನ ಪ್ರಖರ ವಾಗ್ವಾದಗಳು ಈ ಎರಡು ಚಿಂತನೆ-ಆಚರಣೆಗಳ ಚೌಕಟ್ಟಲ್ಲಿ ನಡೆದವು. ಈ ಚಿಂತನೆಗಳು ಜೀವಂತವಾಗಿದ್ದ ಎರಡೂ ನಾಡುಗಳಿಂದ ಇವುಗಳಿಗೆ ‘ವೈದಿಕಶಾಹಿ’ ಪ್ರತಿಕ್ರಿಯೆಗಳೂ ಬಂದವು. ಅವುಗಳಲ್ಲಿ ಒಂದು ಮಹಾರಾಷ್ಟ್ರದಿಂದ ಹುಟ್ಟಿದ ’ಹಿಂದುತ್ವ ಬಹಸಂಖ್ಯಾತವಾದ’. 1920ರಲ್ಲೇ ಹುಟ್ಟಿಬಂದ ಈ ‘ವೈದಿಕಶಾಹಿ ಪ್ರತಿಕ್ರಾಂತಿ’ಯು ತಾನು 1950ರವರೆಗೆ ನಡೆಸಿದ ಕಾರ್ಯಾಚರಣೆಗಳಿಂದ ಸ್ವತಂತ್ರ ಭಾರತದ ಪ್ರಭುತ್ವದ ನೀತಿ ನಡಾವಳಿಗಳ ಮೇಲೆ ಹಿಡಿತ ಸಾಧಿಸಲು ವಿಫಲವಾದರೂ, ಸಮಾಜದಲ್ಲಿ ‘ಪ್ರತಿಕ್ರಾಂತಿಯ ಜ್ಞಾನ ಸಂವಹನೆ’ಯಲ್ಲಿ ಬಹು ಯಶಸ್ವ್ವಿಯಾಗಿದ್ದವು. ಸ್ವಾತಂತ್ರ್ಯೋತ್ತರ ಭಾರತದ ಜಾತ್ಯತೀತತೆಯ ವೈಚಾರಿಕತೆ ಹಾಗು ಕಾರ್ಯಾಚರಣೆಗಳಿಗೆ ‘ಮಹಾರಾಷ್ಟ್ರ –ಬಂಗಾಳ ಜ್ಞಾನ ವಿದ್ಯಮಾನ’ಗಳು ಬುನಾದಿಯಾಗಿ, ‘ಮಹಾರಾಷ್ಟ್ರ ವೈದಿಕಶಾಹಿ’ಯ ಕಾರ್ಯಾಚರಣಾ ತಂತ್ರಗಳು ಎಚ್ಚರಿಕೆಯಾಗಿ ಇರಬೇಕಾಗಿತ್ತು. ಇವರಡೂ ಬಗ್ಗಡವಾದ ಭೌದ್ಧಿಕತೆ ಹಾಗು ಕಾರ್ಯಾಚರಣೆಗಳಲ್ಲಿ ತೊಡಗಿದ ಜಾತ್ಯತೀತ ಚಳುವಳಿಗಳು ‘ವೈದೀಕಶಾಹಿ ಪ್ರತಿಕ್ರಾಂತಿ’ಯ ದಾಂಗುಡಿಯನ್ನು ಹಗುರದಲ್ಲಿ ಪರಿಗಣಿಸಿದವು. 100 ವರ್ಷಗಳಲ್ಲಿ ಹರಳುಗಟ್ಟಿದ ‘ವೈದಿಕಶಾಹಿ ವಿರೋಧಿ ಜಾತ್ಯತೀತತೆ’ಯ ಲೌಕಿಕ ಸಮಾನತೆಯ ಹೋರಾಟದಲ್ಲಿ ‘ಅವೈದಿಕಶಾಹಿ ಪ್ರತಿರೋಧ’ವು ತಾನೇ ತಾನಾಗಿ ಮಿಳಿತವಾಗಿತ್ತು. ಆ ಮಿಳಿತದ ಹೊರತಾಗಿ ಒಂದು ‘ವೈದಿಕಶಾಹಿ ವಿರೋಧಿ ಜಾತ್ಯತೀತ ಜನಾನುರಾಗಿ’ ಬೌದ್ಧಿಕ ನಿರೂಪಣೆಯು ಸಾಧ್ಯವಿಲ್ಲ ಎಂಬ ಅರಿವು ಜಾತ್ಯತೀತ ಬೌದ್ಧಿಕತೆ-ಕಾರ್ಯಾಚರಣೆಗಳಿಗೆ ಇಲ್ಲದ್ದೇಹೋಗಿದ್ದು ಆಧುನಿಕ ‘ಮಹಾರಾಷ್ಟ್ರ ವೈದಿಕಶಾಹಿ ಪ್ರತಿಕ್ರಾಂತಿ’ಯ ಪ್ರಗತಿಗೆ ವರವಾಯಿತು. ಇದು ಜಾತ್ಯತೀತ ಸೋಲಿಗೆ ಮೂರನೇ ಊಹಾ ಪ್ರಮೇಯ.
ಈ ಮೂರು ಊಹಾ ಪ್ರಮೇಯಗಳಿಗೆ ಉದಾಹರಣೆಯಾಗಿ ಹತ್ತು ಹಲವು ಕಾರ್ಯಾಚರಣೆಗಳನ್ನು, ಬದುಕಿನ ಕಥನಗಳನ್ನು ಮತ್ತು ಕಲಾ-ಸೃಜನಶೀಲ ಕೃತಿಗಳನ್ನು ನೀಡಬಹುದು. ಇಂದಿಗೂ ಪ್ರಸ್ತುತವಾದ ಉದಾಹರಣೆಗಳನ್ನು ನೀಡಬಹುದು. ಆ ಮೂಲಕ, ಯೋಗೇಂದ್ರ ಅವರು ಆಶಿಸುವ ‘ಮತ ಸಹಿಷ್ಣು ಜಾತ್ಯತೀತತೆ’ಯ ಹೊಸ ಕಾರ್ಯಸಾಧ್ಯ ಆದರ್ಶಗಳ ಬೀಜ ಕಾಣಬಹುದು. ಸೋತು ಸುಣ್ಣವಾದ ಜಾತ್ಯತೀತೆಯ ಮರುಕಟ್ಟುವಿಕೆಯಲ್ಲೇ ಹೊಸ ‘ಲೌಕಿಕ ಸಮಾನತೆಯ ಹೊಸ ಮತ’ಕ್ಕೆ ದಾರಿಯೂ ಕಾಣಬಹುದು. ಆತ್ಮಕ್ಕೆ ಸಾವಿಲ್ಲ ಎಂಬುದು ‘ಹಿಂದು ಮತ ನಂಬಿಕೆ’ಯಲ್ಲವೇ!
- ಪ್ರೊ.ಕೆ.ಫಣಿರಾಜ್, (ಕೋಮು ಸೌಹಾರ್ದ ಚಳವಳಿಯಲ್ಲಿ ತಳಮಟ್ಟದ ಆಕ್ಟಿವಿಸ್ಟ್ ಥರಾ ಕೆಲಸ ಮಾಡುತ್ತಾ ಅದರ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕೆ.ಫಣಿರಾಜ್ ಅವರ ಆಸಕ್ತಿಯ ಮತ್ತು ಕಾಳಜಿಯ ಕ್ಷೇತ್ರಗಳು ಹಲವು. ನಮ್ಮ ಕಾಲದ (ಗ್ರಾಮ್ಶಿ ಹೇಳಿದ) ಆರ್ಗಾನಿಕ್ ಇಂಟಲೆಕ್ಚುವಲ್‌ಗಳಲ್ಲಿ ಅವರೊಬ್ಬರು ಎಂದರೆ, ಗ್ರಾಮ್ಶಿ ಬಗ್ಗೆ ಪುಸ್ತಕ ಬರೆದ ಫಣಿರಾಜ್ ಅವರು ಮುನಿಸು ತೋರಬಹುದು.)
ಇದನ್ನೂ ಓದಿ: ಮೋದಿ ಎರಡನೆಯ ಬಾರಿಗೆ ಅಧಿಕಾರಕ್ಕೆ ಬರಲು ಯಾರು ಕಾರಣರು? – ಎಚ್.ಎಸ್ ದೊರೆಸ್ವಾಮಿ


