ಬೆಂಗಳೂರು ‘ಭಯೋತ್ಪಾದಕ ಚಟುವಟಿಕೆಗಳ ಕೇಂದ್ರಬಿಂದುವಾಗಿದೆ’ ಎಂಬ ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
“ಕಳೆದ ಕೆಲವು ವರ್ಷಗಳಲ್ಲಿ, ಬೆಂಗಳೂರು ಭಯೋತ್ಪಾದಕ ಚಟುವಟಿಕೆಗಳ ಕೇಂದ್ರಬಿಂದುವಾಗಿದೆ. ನಗರದ ತನಿಖಾ ಸಂಸ್ಥೆಯಿಂದ ನಡೆದ ಅನೇಕ ಬಂಧನಗಳು ಮತ್ತು ಸ್ಲೀಪರ್ ಸೇಲ್‌ಗಳಿಂದ ಇದು ಸಾಬೀತಾಗಿದೆ. ಹಾಗಾಗಿ ಬೆಂಗಳೂರಿನಲ್ಲಿ ಎನ್‌ಐಎಯ ಶಾಶ್ವತ ವಿಭಾಗ ತೆರೆಯುವಂತೆ ಗೃಹ ಸಚಿವರಿಗೆ ಒತ್ತಾಯಿಸಿದ್ದೇನೆ. ಅವರು ಭರವಸೆ ನೀಡಿದ್ದು, ಅದಷ್ಟು ಬೇಗ ಬೆಂಗಳೂರಿನಲ್ಲಿ ಎನ್‌ಐಎ ಕೇಂದ್ರ ಆರಂಭವಾಗಲಿದೆ” ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಯೊಳಗಿನ ಕೆಲ ಅಪ್ರಭುದ್ಧರ ಹೇಳಿಕೆ ಪಕ್ಷದ ಹಿರಿಯ ನಾಯಕರಿಗೆ ಅವಮಾನ ಎಂದಿದ್ದಾರೆ. ಸರಣಿ ಟ್ವೀಟ್‌ಗಳನ್ನು ಮಾಡಿರುವ ಕುಮಾರಸ್ವಾಮಿ ಬೆಂಗಳೂರನ್ನು ಭಯೋತ್ಪಾದಕ ಚಟುವಟಿಕೆಗಳ ಕೇಂದ್ರ ಎಂದು ಹೇಳಿಕೆ ನೀಡಿದವರಿಂದ ಬಿಜೆಪಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ’ಬೆಂಗಳೂರು ಭಯೋತ್ಪಾದಕ ಚಟುವಟಿಕೆಗಳ ಕೇಂದ್ರ’: ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ವ್ಯಾಪಕ ವಿರೋಧ
’ಕೆಂಪೇಗೌಡರು ಬಲಿದಾನಗಳ ಮೂಲಕ ನಿರ್ಮಿಸಿದ ಬೆಂಗಳೂರು ಈಗಾಗಲೇ ಜಗದ್ವಿಖ್ಯಾತಿ ಗಳಿಸಿದೆ. ದೇಶದ ಬೇರೆಲ್ಲ ನಗರಗಳಿಗಿಂತ ವೇಗವಾಗಿ ಬೆಳೆಯುತ್ತಿದೆ. ಇದನ್ನು ಸಹಿಸದ ಉತ್ತರ ಭಾರತೀಯ ರಾಜಕೀಯ ಲಾಭಿಯ ಷಡ್ಯಂತ್ರದ ಭಾಗವೇ ಈ ಹೇಳಿಕೆ ಎಂಬ ಅನುಮಾನಗಳೂ ಮೂಡುತ್ತಿವೆ. ಯಾಕೆಂದರೆ ಕೆಲ ಮಂದಿಗೆ ತಾಯ್ನಾಡಿನ ಗೌರವಕ್ಕಿಂತ ಉತ್ತರದ ವ್ಯಾಮೋಹ ಅಧಿಕ!’ ಎಂದು ವ್ಯಂಗ್ಯವಾಡಿದ್ದಾರೆ.
‘ಬೆಂಗಳೂರು ಕೇವಲ ಬಿಬಿಎಂಪಿ ಚುನಾವಣೆ ಮಾತ್ರವಲ್ಲ, ಬೆಂಗಳೂರು 28 ವಿಧಾನಸಭೆ ಕ್ಷೇತ್ರ ಮಾತ್ರವಲ್ಲ, ಬೆಂಗಳೂರು ನಾಲ್ಕು ಲೋಕಸಭೆ ಕ್ಷೇತ್ರ ಮಾತ್ರವಲ್ಲ. ಬೆಂಗಳೂರು ನಮ್ಮೆಲ್ಲರ ಹೆಮ್ಮೆ. ಮತ ಧೃವೀಕರಣಕ್ಕಾಗಿ ಬೆಂಗಳೂರನ್ನೇ ಅಪಮಾನಿಸುವ ಈ ಕ್ಷುಲ್ಲಕ ಹೇಳಿಕೆ ಅಪರಾಧವೇ ಸರಿ. ಈ ಹೇಳಿಕೆ ಸಂಬಂಧ ಬಿಜೆಪಿ ಸಂಬಂಧಿಸಿದವರಿಂದ ಕ್ಷಮೆ ಕೇಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೆಂಪೇಗೌಡರು ಬಲಿದಾನಗಳ ಮೂಲಕ ನಿರ್ಮಿಸಿದ ಬೆಂಗಳೂರು ಈಗಾಗಲೇ ಜಗದ್ವಿಖ್ಯಾತಿ ಗಳಿಸಿದೆ. ದೇಶದ ಬೇರೆಲ್ಲ ನಗರಗಳಿಗಿಂತ ವೇಗವಾಗಿ ಬೆಳೆಯುತ್ತಿದೆ. ಇದನ್ನು ಸಹಿಸದ ಉತ್ತರ ಭಾರತೀಯ ರಾಜಕೀಯ ಲಾಭಿಯ ಷಡ್ಯಂತ್ರದ ಭಾಗವೇ ಈ ಹೇಳಿಕೆ ಎಂಬ ಅನುಮಾನಗಳೂ ಮೂಡುತ್ತಿವೆ. ಯಾಕೆಂದರೆ ಕೆಲ ಮಂದಿಗೆ ತಾಯ್ನಾಡಿನ ಗೌರವಕ್ಕಿಂತ ಉತ್ತರದ ವ್ಯಾಮೋಹ ಅಧಿಕ!
4/4— H D Kumaraswamy (@hd_kumaraswamy) September 29, 2020
ಇದನ್ನೂ ಓದಿ: ಕೃಷಿ ಮಸೂದೆಗಳಿಂದ ಎಲ್ಲವೂ ಅಸ್ತವ್ಯಸ್ತ: ಪಶ್ಚಿಮ ಬಂಗಾಳ ಸರ್ಕಾರದ ಆತಂಕ
ಇನ್ನೂ ಸಂಸದ ತೇಜಸ್ವಿ ಸೂರ್ಯ ಭಯೋತ್ಪಾದಕ ಚಟುವಟಿಕೆಗೆ ಉದಾಹರಣೆ ನೀಡಿದ್ದ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪ್ರಕರಣಗಳ ಕುರಿತು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ’ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಕೆಲ ಮಂದಿ ಡಿಜೆ ಹಳ್ಳಿ ಘಟನೆ ನಂತರ ಸಿಕ್ಕಿ ಬಿದ್ದಿದ್ದರು. ಹೀಗಾಗಿ ನಮ್ಮ ಟೀಕೆ ಉಗ್ರರ ವಿರುದ್ಧ ಇರಬೇಕು. ಆದರೆ, ಕೋಟ್ಯಂತರ ಜನರಿಗೆ ಅನ್ನ, ಆಶ್ರಯ, ಜೀವನ ನೀಡುತ್ತಿರುವ ತಾಯಿಯಂಥ ಊರಿನ ಬಗ್ಗೆ ಅಲ್ಲ. ಬೆಂಗಳೂರಿನಲ್ಲಿ ಉಗ್ರರು ಸಿಕ್ಕಿಬಿದ್ದ ಮಾತ್ರಕ್ಕೆ ಬೆಂಗಳೂರು ಅವರದ್ದಲ್ಲ. ಬೆಂಗಳೂರು ನಮ್ಮದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಅಪ್ರಭುದ್ಧರ ಹೇಳಿಕೆಯಿಂದ ಬೆಂಗಳೂರಿಗೆ ಅವಮಾನ. ಜೊತೆಗೆ ಪಕ್ಷದ ಹಿರಿಯರಿಗೂ ಅವಮಾನ ಎಂದಿದ್ದಾರೆ.
ಇತ್ತ ಗೃಹ ಸಚಿವ ಅಮಿತ್ ಶಾಗೆ ಮನವಿ ಸಲ್ಲಿಸಿದ್ದೇನೆ. ಶೀಘ್ರದಲ್ಲಿ ಬೆಂಗಳೂರಲ್ಲಿ ಎನ್‌ಐಎ ಕೇಂದ್ರ ಆರಂಭವಾಗುತ್ತದೆ ಎಂದಿದ್ದ ತೇಜಸ್ವಿ ಸೂರ್ಯಗೆ ಮುಖಭಂಗವಾಗಿದೆ. ನಿನ್ನೆ ಎನ್‌ಐಎ ಹೊಸ ಮೂರು ಎನ್‌ಐಎ ಘಟಕಗಳನ್ನು ಮಂಜೂರು ಮಾಡಿದ್ದು, ಸಂಸ್ಥೆ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕದ ಹೆಸರು ಇಲ್ಲ. ಅಂದರೆ ಬೆಂಗಳೂರಿನಲ್ಲಿ ಎನ್‌ಐಎ ಕೇಂದ್ರದ ಆರಂಭಕ್ಕೆ ಯಾವುದೇ ಸೂಚನೆ ದೊರೆತಿಲ್ಲ.
ಇಂಫಾಲ್ (ಮಣಿಪುರ), ಚೆನ್ನೈ (ತಮಿಳುನಾಡು) ಮತ್ತು ರಾಂಚಿ (ಜಾರ್ಖಂಡ್)ಯಲ್ಲಿ ಹೊಸ ಮೂರು ಹೆಚ್ಚುವರಿ ಶಾಖೆಗಳನ್ನು ಮಂಜೂರು ಮಾಡಲು ಗೃಹ ಸಚಿವಾಲಯ (ಎಂಎಚ್‌ಎ) ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗೆ ಮಂಜೂರು ಮಾಡಿದೆ. ಈ ಮೂರು ಕಡೆ ಮಾತ್ರ ಸದ್ಯ ಎನ್‌ಐಎ ಘಟಕ ಆರಂಭಿಸಲಾಗುತ್ತದೆ.
ಇದನ್ನೂ ಓದಿ: ಸಿಎಂ ಪುತ್ರನ ಭ್ರಷ್ಟಾಚಾರದ ಬಗ್ಗೆ ನಿರಂತರ ವರದಿ ಮಾಡಿದ ಪವರ್ ಟಿವಿ MD ಮನೆ ಮೇಲೆ ಪೊಲೀಸರ ದಾಳಿ!
MHA Sanctions 03 New NIA Branches at Imphal, Chennai and Ranchi pic.twitter.com/enkRvNSKSs
— NIA India (@NIA_India) September 28, 2020
ಪ್ರಸ್ತುತ, ಎನ್ಐಎ ಭಾರತದಾದ್ಯಂತ ಒಂಬತ್ತು ಶಾಖೆಗಳನ್ನು ಹೊಂದಿದೆ. ಅವು ಗುವಾಹಟಿ, ಮುಂಬೈ, ಜಮ್ಮು, ಕೋಲ್ಕತಾ, ಹೈದರಾಬಾದ್, ಕೊಚ್ಚಿ, ಲಕ್ನೋ, ರಾಯ್‌ಪುರ ಮತ್ತು ಚಂಡೀಗಡದಲ್ಲಿವೆ, ನವದೆಹಲಿಯಲ್ಲಿ ವಿಶೇಷ ಘಟಕಗಳಿವೆ. ಬೆಂಗಳೂರಿನಲ್ಲಿ ಎನ್‌ಐಎ ಉಪಶಾಖೆ ಇದ್ದು, ಇದು ಹೈದರಾಬಾದ್ ಎನ್‌ಐಎ ಪ್ರಾದೇಶಿಕ ಕಚೇರಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ತೇಜಸ್ವಿ ಸೂರ್ಯ ಹೇಳಿಕೆಗೆ ನೆಟ್ಟಿಗರು ಮತ್ತು ರಾಜಕೀಯ ಮುಖಂಡರು ತೀವ್ರ ಖಂಡನೆ ವ್ಯಕ್ತಪಡಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ, ಶಾಸಕಿ ಸೌಮ್ಯಾ ರೆಡ್ಡಿ ಸೇರಿದಂತೆ ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿ, ತೇಜಸ್ವಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು.


