ಶಿರಾ ಉಪಚುನಾವಣೆ ಘೋಷಣೆಯಾದ ಬಳಿಕ ಪಕ್ಷ ಬಿಟ್ಟು ಪಕ್ಷಕ್ಕೆ ಸೇರ್ಪಡೆಯಾಗುವ ಮುಖಂಡರ ಸಂಖ್ಯೆ ಹೆಚ್ಚತೊಡಗಿದೆ. ಕಳೆದ ಎರಡು ದಿನಗಳಿಂದ ಈ ಬೆಳವಣಿಗಳು ನಡೆಯತೊಡಗಿವೆ. ಇಂದು 15ಕ್ಕೂ ಹೆಚ್ಚು ಮಂದಿ ಪ್ರಮುಖರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದು ಕಾಂಗ್ರೆಸ್ ಪಕ್ಷ ಶಿರಾದಲ್ಲಿ ಮತ್ತಷ್ಟು ಬಲಿಷ್ಟಗೊಳ್ಳಲು ಸಹಕಾರಿಯಾಗಿದೆ. ಈ ಬೆಳವಣಿಗೆ ಉಪ ಚುನಾವಣೆಯಲ್ಲಿ ಮಹತ್ವದ ಬದಲಾವಣೆಗೂ ಕಾರಣವಾಗಲಿದೆ.
ಮಾಜಿ ಪುರಸಭಾ ಅಧ್ಯಕ್ಷ ಹಾಗೂ ಕುಂಚಿಟಿಗರ ಸಂಘದ ತಾಲೂಕು ಅಧ್ಯಕ್ಷ ತ್ಯಾಗರಾಜು, ಜೆಡಿಎಸ್ ಮುಖಂಡ ರವಿಕುಮಾರ್ ಕಲ್ಕೆರೆ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ವಿನಯ್, ಮಾಗೋಡು ಮತ್ತು ತಾವರೆಕೆರೆ ವಿಎಸ್ಎಸ್ಎನ್ ಅಧ್ಯಕ್ಷರಾದ ಶ್ರೀರಂಗಪ್ಪ, ಕೃಷ್ಣಮೂರ್ತಿ, ಮಾಜಿ ಮಂಡಲ್ ಪಂಚಾಯತ್ ಅಧ್ಯಕ್ಷ ಚಿನ್ನಪ್ಪ, ಶಿರಾ ಬಲಿಜ ಸಂಘದ ಅಧ್ಯಕ್ಷ ಶ್ರೀರಂಗಪ್ಪ, ಯುವ ಬಲಿಜ ಸಂಘದ ಅಧ್ಯಕ್ಷ ವಿನಯ್ (ಕಿಶೋರ್), ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ಆದರ್ಶ, ವಕೀಲರ ಸಂಘದ ಮಾಜಿ ಅಧ್ಯಕ್ಷ ಸರ್ವೇಶ್ ನಗರ ಯುವ ಜೆಡಿಎಸ್ ಅಧ್ಯಕ್ಷ ಮಣಿಕಂಠ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾಘವೇಂದ್ರ, ಜೆಡಿಎಸ್ ಮುಖಂಡರಾದ ಡಾಬ ಬಾಬು, ಶರತ್ ಮತ್ತು ರಾಘವೇಂದ್ರ ಕಾಂಗ್ರೆಸ್ ಸೇರ್ಪಡೆಯಾಗಿರುವ ಮುಖಂಡರು.
ಇದನ್ನೂ ಓದಿ: ಶಿರಾ ಉಪಚುನಾವಣೆ: ದೇವೇಗೌಡ, ಕುಮಾರಸ್ವಾಮಿ ಸ್ಪರ್ಧಿಸಿದರೂ ಜಯಚಂದ್ರ ಗೆಲುವು ನಿಶ್ಚಿತ- ಕೆ.ಎನ್.ರಾಜಣ್ಣ
ವಿವಿಧ ಜಾತಿಗಳ ಮುಖಂಡರ ಕಾಂಗ್ರೆಸ್ ಸೇರ್ಪಡೆಯಿಂದ ಜೆಡಿಎಸ್‌ಗೆ ತೀವ್ರ ಹಿನ್ನಡೆಯಾದಂತೆ ಆಗಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ಅವರ ಪತಿ ರವಿಕುಮಾರ್ ಕಾಂಗ್ರೆಸ್ ಸೇರ್ಪಡೆಗೊಂಡು ಜೆಡಿಎಸ್‌ಗೆ ದೊಡ್ಡ ಪೆಟ್ಟನ್ನೇ ನೀಡಿದ್ದಾರೆ. ಕುರುಬ ಸಮುದಾಯಕ್ಕೆ ಸೇರಿದ ಮತ್ತು ತಾಲೂಕಿನಲ್ಲಿ ಪ್ರಮುಖ ಮುಖಂಡ ರಾಗಿರುವ ರವಿಕುಮಾರ್ ಗೌಡಗೆರೆ ಹೋಬಳಿಯಲ್ಲಿ ಸಾಕಷ್ಟು ಕೆಲಸ ಮಾಡಿರುವ ಬಗ್ಗೆ ಕ್ಷೇತ್ರದ ಜನರಲ್ಲಿ ಒಳ್ಳೆಯ ಭಾವನೆ ಇದೆ.
ರವಿಕುಮಾರ್ ಶಿರಾ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳಲ್ಲಿ ಕೂಡ ಒಬ್ಬರಾಗಿದ್ದರು. ಜೊತೆಗೆ ಪಕ್ಷದ ವರಿಷ್ಠರೇ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ಅವರನ್ನು ಅಧಿಕಾರದಿಂದ ಇಳಿಸಲು ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕುವಂತೆ ಸದಸ್ಯರಿಗೆ ಒಪ್ಪಿಗೆ ನೀಡಿದ್ದರು. ಇದರಿಂದ ರವಿಕುಮಾರ್ ಅಸಮಾಧಾನ ಹೊರಹಾಕಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮೃದು ಧೋರಣೆ ಹೊಂದಿದ್ದರಿಂದ ಜೆಡಿಎಸ್ ವರಿಷ್ಠರು ಜಿಪಂ ಅಧ್ಯಕ್ಷರನ್ನು ಅಧಿಕಾರದಿಂದ ಇಳಿಸುವ ತಂತ್ರಕ್ಕೆ ಮುಂದಾಗಿದ್ದರು.

ಈಗ ರವಿಕುಮಾರ್ ಜೆಡಿಎಸ್ ಬಗ್ಗೆ ಅಸಮಾಧಾನ ಹೊರಹಾಕಿ ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಮತ್ತಷ್ಟು ಬಲ ತಂದುಕೊಟ್ಟಿದೆ. ಕ್ಷೇತ್ರದಲ್ಲಿ ಕುರುಬ ಸಮುದಾಯದ ಮತಗಳು 13 ಸಾವಿರ ಇವೆ. ರವಿಕುಮಾರ್ ಬಗ್ಗೆ ಶಿರಾದಲ್ಲಿ ಒಳ್ಳೆಯ ಹೆಸರು ಕೂಡ ಇದೆ. ಇದು ಕಾಂಗ್ರೆಸ್ ಪಕ್ಷಕ್ಕೆ ವರವಾಗಿ ಪರಿಣಮಿಸಿದೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಸಭೆಯಲ್ಲಿ ಕಾಂಗ್ರೆಸ್ ಭಾಗವಹಿಸುವುದಿಲ್ಲ. ಹಾಗಾಗಿ ಅವಿಶ್ವಾಸ ಗೊತ್ತುವಳಿ ಪರ ಮತಗಳ ಕೊರತೆಯಾಗಿ ಬಿದ್ದುಹೋಗಲಿದೆ. ಅಧ್ಯಕ್ಷರು ಮುಂದಿನ ಅವಧಿಗೂ ಮುಂದುವರಿಯಲು ಅವಕಾಶ ಸಿಗುತ್ತದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಶಿರಾ ಉಪಚುನಾವಣೆ : ಹೊಸ ನಾಣ್ಯ ನಡೆಯೋಲ್ಲ ಅಂತಾರೆ ಜನ
ಶಿರಾ ನಗರದಲ್ಲಿ ಬಲಿಜ ಸಮುದಾಯದ ಮತಗಳು ಏಳು ಸಾವಿರದಷ್ಟಿವೆ. ಈ ಸಮುದಾಯದ ಸಂಘದ ಅಧ್ಯಕ್ಷರು, ಯುವಕ ಸಂಘದ ಅಧ್ಯಕ್ಷರೂ ಮತ್ತು ಪ್ರಧಾನ ಕಾರ್ಯದರ್ಶಿಗಳು ಕಾಂಗ್ರೆಸ್ ಸೇರ್ಪಡೆ ಆಗಿರುವುದು ಜಯಚಂದ್ರ ಅವರ ಗೆಲುವಿನ ಹಾದಿಯನ್ನು ಸುಗಮಗೊಳಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮಾಜಿ ಪುರಸಭಾ ಅಧ್ಯಕ್ಷರು ಮತ್ತು ಕುಂಚಿಟಿಗರ ಸಂಘದ ಅಧ್ಯಕ್ಷರು, ವಿಎಸ್ಎಸ್ಎನ್ ಅಧ್ಯಕ್ಷರು, ಯುವ ಮುಖಂಡರಿಗೆ ಅವರದೇ ಆದ ಬೆಂಬಲಿಗರ ಮತ್ತು ಅಭಿಮಾನಿಗಳ ಪಡೆ ಇದೆ. ಇದು ಜೆಡಿಎಸ್ ಪಕ್ಷಕ್ಕೆ ಹೊಡೆತ ನೀಡುವುದು ಗ್ಯಾರೆಂಟಿ.
ಇನ್ನು ಮದಲೂರು ಜಿಲ್ಲಾ ಪಂಚಾಯತ್ ಸದಸ್ಯೆ ಪತಿ, ಕಾಂಗ್ರೆಸ್ ಮುಖಂಡ ನರಸಿಂಹಮೂರ್ತಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಶ್ರೀರಂಗ ಯಾದವ್ ನಾದೂರು ಜಿಲ್ಲಾ ಪಂಚಾಯಿತಿ ಸದಸ್ಯೆಯ ಪತಿ, ಜೆಡಿಎಸ್ ಮುಖಂಡ ಶ್ರೀರಂಗ ಯಾದವ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.


