ಸತ್ಯಜಿತ್ ರೇ ಅವರ ‘ಆಶಾನಿ ಸಂಕೇತ’ ಸಿನಿಮಾದಾಗ ಒಂದು ದೃಶ್ಯ ಬರ್ತದ. ಊರಿಗೆ ಊರೇ ಉಪವಾಸ ಬಿದ್ದು, ಎಲ್ಲರೂ ತಿನಲಿಕ್ಕೆ ಎನರ ಸಿಗತೆತಿ ಅಂತ ಜಂಗಲ್ಲಿಗೆ ಹೋಗತಾರ. ಅಲ್ಲೇ ಗಡ್ಡಿ, ಗೆಣಸು, ಒಣಗಿದ ಬೀಜ, ಮಣ್ಣು, ಕಲ್ಲು, ಹಂಚು, ಹೀಂಗ ಕೈಗೆ ಸಿಕ್ಕಿದ್ದು ಎಲ್ಲಾ ತಿನ್ನತಾರ. ಒಂದು ಹುಡಿಗಿ ಒಂದು ಗಡ್ಡಿ ತೊಗೊಂಡು ತನ್ನ ತಮ್ಮ- ತಂಗಿಯರಿಗೆ ಕೊಡಬೇಕು ಅಂತ ಊರಿಗೆ ವಾಪಸ್ ಬರತಾಳ. ಬರೋ ದಾರಿಯೊಳಗ ಶಕ್ತಿ ಕಮ್ಮಿ ಆಗಿ, ತಲಿ ತಿರುಗಿ ಬಿದ್ದು ಸಾಯತಾಳ. ಅಕಿ ಸಾಯೋದನ್ನ ಇನ್ನೊಂದು ಹುಡುಗಿ ದೂರ ನಿಂತು ನೋಡ್ತಾ ಇರತಾಳ. ಅಕಿ ಸತ್ತು ಹೋದ ಮರು ಕ್ಷಣ, ಆ ಹುಡುಗಿ ಓಡಿ ಬಂದು ಈ ಹೆಣದ ಕೈ ಒಳಗಿನ ಗಡ್ಡಿ ಕಿತಕೊಂಡು ಓಡಿಹೋಗಿ, ಅದನ್ನ ತಿನ್ನತಾಳ.
ಈ ಸಿನಿಮಾದ ಸಂದೇಶ ಏನು ಅಂದ್ರ `ಕ್ಷಾಮ ಅನ್ನುವುದು ಮಾನವ ನಿರ್ಮಿತ, ನಿಸರ್ಗದತ್ತವಾದದ್ದು ಅಲ್ಲ’ ಅಂತ. ಅಲ್ಲಿನ ಕತಿ ಸುಮಾರು 1940ರ ಆಸು ಪಾಸಿನದು. ಎರಡನೇ ವಿಶ್ವಯುದ್ಧದಾಗ ಪಾಲುಗೊಂಡ ಬ್ರಿಟಿಷ್ ಸೈನಿಕರಿಗೆ ಬೇಕಾಗತದ ಅಂತ ಹೇಳಿ ಸರಕಾರಿ ಅಧಿಕಾರಿಗಳು ಮತ್ತು ವ್ಯಾಪಾರಿಗಳು ಆ ಊರಿನ ರೈತರು ಬೆಳೆದ ಆಹಾರ ಧಾನ್ಯವನ್ನ ಮುಚ್ಚಿ ಇಡತಾರ. ಅಕ್ಕಿ ಇಲ್ಲ, ಬೇಳೆ ಇಲ್ಲ ಅಂತ ಕೃತಕ ಅಭಾವ ಸೃಷ್ಟಿ ಮಾಡತಾರ.
ಆ ಊರಿನ ಜನ ತಿನ್ನಲಿಕ್ಕೆ ಏನೂ ಇಲ್ಲದೆ ಒದ್ದಾಡತಾರ. ಅರ್ಧದಷ್ಟು ಜನ ಸಾಯತಾರ, ಇನ್ನೂ ಅರ್ಧ ಜನಾ ಊರು ಬಿಡತಾರ. ತಮ್ಮ ಜಮೀನು, ಮನಿ ಬಿಟ್ಟು, ಉಟ್ಟ ಬಟ್ಟಿ ಮ್ಯಾಲೆ ಹೆಂಡರು, ಮಕ್ಕಳು ಕಟಿಗೊಂಡು ಅನಿಶ್ಚಿತ ಭವಿಷ್ಯದ ಕಡೆ ನಡಿಯಲಿಕ್ಕೆ ಶುರು ಮಾಡತಾರ. ಅವರಿಗೆ ಬಹಳ ಮಂದಿಗೆ `ನಮ್ಮ ಊರಾಗ ಬೇಕಾದಷ್ಟು ಅಕ್ಕಿ, ಹಿಟ್ಟು ಐತಿ, ಆದರ ಸರಕಾರ ಹಾಗೂ ವ್ಯಾಪಾರಿಗಳು ಸುಳ್ಳು ಹೇಳತಾರ’ ಅನ್ನೋದು ಗೊತ್ತು ಇರೋದಿಲ್ಲ. ಅದರ ಬಗ್ಗೆ ಸತ್ಯ ಗೊತ್ತಿದ್ದ ಕೆಲವರಿಗೆ ಸರಕಾರದ ವಿರುದ್ಧ ಹೋರಾಟ ಮಾಡೋ ಶಕ್ತಿ ಇರೋದಿಲ್ಲ. ಹೋರಾಟ ಮಾಡಿದ ಕೆಲವರನ್ನು ಬ್ರಿಟಿಷ್ ಸರಕಾರ ಜೈಲಿಗೆ ಕಳಿಸಿರತದ, ಗಲ್ಲಿಗೆ ಹಾಕಿರತದ – ಗಡಿಪಾರು ಮಾಡಿರತದ.

ಭೀಕರ ಬರಗಾಲದ ಭಯಂಕರ ಪರಿಣಾಮಗಳನ್ನ ತೋರಿಸಿದ ಈ ಸಿನಿಮಾದಾಗ ನಾಯಕಿ ತನ್ನ ಗಂಡನಿಗೆ ನಾನು ಬಸುರಿ ಎನ್ನುವ ಸಿಹಿ ಸುದ್ದಿ ಹೇಳುವ ದೃಶ್ಯದಿಂದ ಮುಕ್ತಾಯ ಆಗತದ. ಆದರ ಆ ಪುಟ್ಟ ಹುಡುಗಿಯ ಸಾವಿನ ದೃಶ್ಯವೇ ನೋಡುವವರ ನೆನಪಿನಾಗ ಉಳಿತದ. ಸಿನಿಮಾ ನೋಡಿ ಎಷ್ಟೋ ವರ್ಷಗಳು ಆದರೂ ಕೂಡ ಇದು ನಮಗ ಕಾಡತದ.
ಬಂಗಾಳಿ ಭಾಷಾದಾಗ ಆಶಾನಿ ಸಂಕೇತ ಅಂತ ಅಂದ್ರ `ದೂರದಲ್ಲಿ ಎಲ್ಲೋ ಗುಡುಗಿನ ಸದ್ದು’ ಅಂತ ಅರ್ಥ. ಗುಡುಗಿನ ಸದ್ದು ಕೇಳುತ್ತಾ ಇದ್ದರೂ ಕೂಡ ಮಳೆ ಬರಂಗಿಲ್ಲ.
ಆವಾಗ ಹಂಗ ಯಾಕ ಆತು ಅಂದ್ರ ಆಗ ಜಮೀನುದಾರಿ ಪದ್ಧತಿ ಇತ್ತು. ಇಡೀ ಊರಿಗೆ ಒಬ್ಬರೋ – ಇಬ್ಬರೋ ಜಮೀನ್ ಮಾಲೀಕರು ಇದ್ದರು. ಉಳಿದವರು ಎಲ್ಲಾ ಅವರ ಕಡೆ ಕೆಲಸ ಮಾಡೋ ಕೂಲಿಗಳು.
ಭೂಮಿಯ ಮಾಲೀಕರ ಮ್ಯಾಲೆ ಯಾರದೂ ನಿಯಂತ್ರಣ ಇರಲಿಲ್ಲ. ಅವರು ತಮಗ ತಿಳದಿದ್ದು, ತಿಳದಷ್ಟು ಬೆಳದು, ತಿಳದವರಿಗೆ ಮಾರಾಟ ಮಾಡಬಹುದಾಗಿತ್ತು. ಇನ್ನ ಕೆಲವು ಸಣ್ಣ ರೈತರು ಇದ್ದರು ಕೂಡ ಅವರು ದೊಡ್ಡ ಸಾಹುಕಾರನ ಸಾಲಗಾರರಾಗಿ ಇದ್ದರು. ಅವರ ಕೈಸಾಲ ತೀರಿಸಲಿಕ್ಕೆ ತಾವು ಬೆಳೆದದ್ದು ಸಾಹುಕಾರಿಗೆ ಮಾರಾಟ ಮಾಡಬೇಕಾಗಿತ್ತು. ಅವರು ಹೇಳಿದ ಬೆಳೆಗೆ ಮಾರಾಟ ಮಾಡೋ ಅನಿವಾರ್ಯ ಪರಿಸ್ಥಿತಿ ಇತ್ತು.
ಆ ಸಾಹುಕಾರನ ಹತ್ತಿರ ಧಾನ್ಯ ಇಡಲಿಕ್ಕೆ ದೊಡ್ಡ ದೊಡ್ಡ ಗೋಡೌನ್, ಹಗೇವು ಇದ್ದವು. ಅವನ ಸಾಲಾ ತೀರಿಸಲಾರದವರನ್ನು ಕೂಡಿಹಾಕಲಿಕ್ಕೆ ಕತ್ತಲೆ ಕ್ವಾಣಿನೂ ಇದ್ದವು. ಸಾಲ ಕೊಡದೇ ಇದ್ದ ರೈತರ ಜಮೀನು ತಮ್ಮ ಹೆಸರಿಗೆ ಬರೆಸಿಕೊಂಡು ಮೋಸ ಮಾಡಿದ ಸಾಹುಕಾರರ ಕತೆ ಇಡೀ ದೇಶದ ತುಂಬಾ ಅದಾವು. ಬಡ್ಡಿ ಕೊಡಲಾರದ ರೈತರ ಹೆಂಡತಿಯರ ಮ್ಯಾಲೆ ಸಾಹುಕಾರರು ದಬ್ಬಾಳಿಕೆ ಮಾಡಿದ್ದಕ್ಕ ಹುಟ್ಟಿದ ಮಕ್ಕಳಿಗೆ `ಬಡ್ಡಿ ಮಕ್ಕಳು’ ಅಂತ ಅನ್ನೋದು ಬೈಗುಳ ಅಲ್ಲ ಅನ್ನುವಷ್ಟು ನಮ್ಮ ದೇಶದಾಗ ಸಾಮಾನ್ಯ ಆಗಿ ಹೊಗೇತಿ.
ಆವಾಗ ಎಲ್ಲಾ ಸಣ್ಣ ರೈತರು ಕೂಡಿಕೊಂಡು, ತಮ್ಮ ಕಾಳು-ಕಡಿಗೆ ತಾವು ಒಂದು ಬೆಲೆ ನಿಗದಿ ಮಾಡಿ ಮಾರಾಟ ಮಾಡಲಿಕ್ಕೆ ಸಾಧ್ಯ ಆಗುವ ಅವಕಾಶ ಇರಲಿಲ್ಲ. ಅಷ್ಟ ಅಲ್ಲದ, ಸಾಹುಕಾರರು ತಮ್ಮ ಕಾಳು-ಕಡಿಗೆ ಎಷ್ಟು ಬೆಲೆ ಕಟ್ಟಿ ಮಾರಾಟ ಮಾಡತಾರ ಅನ್ನೋದರ ಬಗ್ಗೆ ಒಂದು ಕಾನೂನು ಇರಲಿಲ್ಲ.
ಇಂತಹ ಎಲ್ಲ ಕಲ್ಯಾಣ ಕಾನೂನುಗಳು ಜಾರಿಯಾಗಿದ್ದು ಸ್ವಾತಂತ್ರ ಬಂದ ಮ್ಯಾಲೆ. ಅವಕ್ಕ ಜಮೀನ್‍ದಾರಿ ನಿರ್ಮೂಲನೆ ಕಾಯಿದೆ, ಭೂ ಕಂದಾಯ ಕಾಯಿದೆ, ಭೂ ಸುಧಾರಣೆ ಕಾಯಿದೆ, ಎಪಿಎಂಸಿ ಕಾಯಿದೆ, ಅಗತ್ಯ ವಸ್ತು ಕಾಯಿದೆ ಅಂತ ಹೆಸರು.
ಆದರ ಈಗ `ಸ್ವತಂತ್ರ ಬಂದು ಏಳು ದಶಕಗಳಲ್ಲಿ ಯಾವುದೇ ಒಳ್ಳೆ ಕೆಲಸ ಆಗಿಲ್ಲ’ ಅಂತ ನಂಬುವ ಸರಕಾರ ಬಂದದ. ತಾನು ಕ್ರಾಂತಿಕಾರಿ ಬದಲಾವಣೆ ಮಾಡತೆನಿ ಅನ್ನುವ ರಣ ಘೋಷಣೆ ಮಾಡೇಬಿಟ್ಟೆದ.
ಅದಕ್ಕ ಸಾಮಾನ್ಯ ಮತದಾರರಿಗೆ ಕೊಟ್ಟ ಮಾತು ಮಾತ್ರ ನೆನಪು ಹರಿಬಿಟ್ಟದ. ಆದರ ದೊಡ್ಡ ದೊಡ್ಡ ಕಂಪನಿಗಳಿಗೆ ಕೊಟ್ಟ ಮಾತನ್ನು ಪಾಲಿಸಲಿಕ್ಕೆ ಹತ್ತಿ ಬಿಟ್ಟದ.
`ನಾವು ಮೇಲೆ ಕಂಡ ಎಲ್ಲ ನಿರುಪಯೋಗಿ ಕಾನೂನುಗಳನ್ನು ಬದಲು ಮಾಡಿ ಬಿಟ್ಟೆವು’ ಅಂತ ಹೇಳಿದ ಪಂಥ ಪ್ರಧಾನ ಸೇವಕರು ಈ ತಿದ್ದುಪಡಿ ಕಾಯಿದೆಗಳನ್ನ `ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಸುಧಾರಣೆ ತರಬಲ್ಲ ಕ್ರಾಂತಿಕಾರಿ ಬದಲಾವಣೆ’ಗಳು ಅಂತ ಬಣ್ಣಿಸಿದಾರ. ಹಂಗ ನೋಡಿದರ “ಸುಧಾರಣೆ ಹಾಗೂ ಕ್ರಾಂತಿ’’ ಅನ್ನುವ ಶಬ್ದ ಬಿಟ್ಟು, ಅವರು ಹೇಳಿದ್ದು ಎಲ್ಲಾ ಖರೆ ಐತಿ.
ರೈತರ ಪರ ಇರೋ ಕಲ್ಯಾಣ ಕಾಯಿದೆಗಳನ್ನ ಬದಲು ಮಾಡಿ, ಸಾಹುಕಾರರ – ಮಧ್ಯವರ್ತಿಗಳ ಕೈಯೊಳಗ ಅವರು ಸಿಗಲಾರದ ಹಂಗ ಅವರನ್ನ ಪಾರು ಮಾಡೋ ನೀತಿ – ನಿಯಮಗಳನ್ನ ಬೀಸಿ ಒಗದುಬಿಟ್ಟಾರ.
ಆಧುನಿಕ ಯುಗದ ಬಿಲಿಯನ್ ಡಾಲರ್ ಸಾಹುಕಾರರನ್ನು ಕರದು ಅವರಿಗೆ ಯಾವುದೇ ಮಿತಿ ಇಲ್ಲದೆ ಭೂಮಿ ಒಡೆತನ ಮಾಡುವ, ಬೆಳೆದ ಬೆಲೆಯನ್ನು ಅವೈಜ್ಞಾನಿಕ ಬೆಲೆಗೆ ಖರೀದಿ ಮಾಡುವ ಅವಕಾಶ ಮಾಡಿಕೊಟ್ಟಾರ.

ಹೊಸ ಜಮೀನ್‍ದಾರಿ ಪದ್ಧತಿಯನ್ನು ಒಪ್ಪಂದ ಕೃಷಿ ಅನ್ನೋ ಒಪ್ಪ-ಓರಣದ ಹೆಸರಿನಿಂದ ಜಾರಿಗೆ ತಂದು ಸಣ್ಣ ರೈತರು ಎಲ್ಲಾ ತಮ್ಮದೇ ಹೊಲದೊಳಗ ಕೂಲಿಗಳಾಗಿ ಹೋಗೋ ಅವಕಾಶ ಇದರಾಗ ಐತಿ.
ಅಗತ್ಯ ಸಾಮಗ್ರಿ ಕಾಯಿದೆ ಬದಲಾವಣೆ ಮಾಡಿ ವ್ಯಾಪಾರಿಗಳು ಯಾವುದೇ ಸಾಮಾನು ಎಷ್ಟು ಬೇಕಾದರೂ ಸಂಗ್ರಹ ಮಾಡಿ ಇಟ್ಟುಕೋಬಹುದು ಅಂತ ಮಾಡಿಬಿಟ್ಟಾರ. ನಾಳೆ ಅತ್ಯಂತ ರಾಕ್ಷಸಿ ರೂಪ ಪಡೆಯಬಹುದಾದ ಕಲಂ ಇದು.
ನಮ್ಮಿಂದ ವೋಟು ತೊಗೊಂಡು ಹೋದವರು ಮಾಡಿದ ಕೆಲಸ ಹೆಂಗ ಐತಿ ಅಂದ್ರ ಅದರ ಪರಿಣಾಮ ಇನ್ನೂ ಒಂದು ನೂರು ವರ್ಷ ಆದಮೇಲೆ ಬಹಳ ಮಂದಿಗೆ ಗೊತ್ತಾಗತದ.
ಕೆಲವರ ಪ್ರಕಾರ ಇವು ನಮ್ಮ ರಾಷ್ಟ್ರವನ್ನ ಮುಂದಕ್ಕ ತೊಗೊಂಡು ಹೋಗೋ ಕಾಯಿದೆ ಅಲ್ಲ. 1858ಕ್ಕಿಂತ ಹಿಂದಕ್ಕ ತೊಗೊಂಡು ಹೋಗೋ ಕಾಯಿದೆ. ಇವೆಲ್ಲಾ ಬಡ ರೈತರ ಜುಟ್ಟು ಈಸ್ಟ್ ಇಂಡಿಯಾ ಕಂಪನಿ ಬದಲಿಗೆ ವೆಸ್ಟ್ ಇಂಡಿಯಾ ಕಂಪನಿ ಕೈಯೊಳಗ ಕೊಡೋ ಪಿತೂರಿಯ ಮೊದಲ ಹೆಜ್ಜೆ.
ಆಶಾನಿ ಸಂಕೇತ, ಆಕಾಲೆರ್ ಸಂಧಾನೆ, ಹಾಗೂ ಇತರ ಚಿತ್ರಗಳು ಎಪ್ಪತ್ತರ ದಶಕದಾಗ ಜಗಮನ್ನಣೆ ಗಳಿಸಿದವು. ಬ್ರಿಟಿಷ್ ಸರ್ಕಾರದ ಮಾನವ ವಿರೋಧಿ ನೀತಿಗಳಿಂದಾಗಿ ಕ್ಷಾಮ ಉಂಟಾಗಿ, ಲಕ್ಷಾಂತರ ಜನ ಉಪವಾಸ ಬಿದ್ದ ಕತಿ ಹೇಳಿದವು.
ಹಂಗ ನೋಡಿದರ ನಮ್ಮನ್ನು ಬ್ರಿಟಿಷ್ ಸರಕಾರಕ್ಕಿಂತ ಈಸ್ಟ್ ಇಂಡಿಯಾ ಕಂಪನಿ ಆಳಿದ್ದೇ ಜಾಸ್ತಿ.
1608ರಲ್ಲಿ ವ್ಯಾಪಾರ ಮಾಡುವ ಉದ್ದೇಶದಿಂದ ಬ್ರಿಟಿಷರು ಭಾರತದೊಳಗ ಕಾಲು ಇಟ್ಟರು. ಅಲ್ಲಿಂದ 1858ರ ತನಕಾ ನಮ್ಮಲ್ಲೇ ಕಂಪನಿ ಸರಕಾರ ಇತ್ತು. ನಮ್ಮ ರಾಷ್ಟ್ರಭಕ್ತರು 1857ರ ಸಂಗ್ರಾಮದಾಗ ಒಟ್ಟಾಗಿ ಹೋರಾಟ ಮಾಡಿದಾಗ ಈಸ್ಟ್ ಇಂಡಿಯಾ ಕಂಪನಿಗೆ ರಾಜಕೀಯ ಮಾಡಲಿಕ್ಕೆ ಬರೋದಿಲ್ಲ ಅಂತ ಬ್ರಿಟನ್ ಸಂಸತ್ತಿಗೆ ಮನದಟ್ಟಾಗಿ ಇಲ್ಲಿಯ ಆಡಳಿತವನ್ನ ಅಲ್ಲಿನ ಪ್ರಧಾನಿ ತಮ್ಮ ಕೈಯೊಳಗ ತೊಗೊಂಡರು.
ಈಗ ಈಸ್ಟ್ ಇಂಡಿಯ ಕಂಪನಿ ಹೋಗಿ ವೆಸ್ಟ್ ಇಂಡಿಯನ್ ಕಂಪನಿ ಬಂದದ. ಅವರ ಸಾಮಾನು ನಾವು ಖರೀದಿ ಮಾಡಿ, ನಮ್ಮ ಕಪ್ಪ ಅವರಿಗೆ ಕೊಟ್ಟಿದ್ದಕ್ಕ ಅವರು ದೊಡ್ಡವರಾಗಿಬಿಟ್ಟಾರ. ಎಲ್ಲ ಕ್ಷೇತ್ರದಾಗ ತಮ್ಮ ಏಕಸ್ವಾಮ್ಯ ಬೆಳೆಸಿಕೊಂಡುಬಿಟ್ಟಾರ. ಕಿತ್ತೂರು ರಾಣಿ ಚನ್ನಮ್ಮ ಅವರು ಕಂಪನಿ ಸರಕಾರಕ್ಕ ಕಪ್ಪ ಕೊಡುವ ಸಂಬಂಧ ಯುದ್ಧ ಮಾಡಿದರು. ಅವರ ಬಗ್ಗೆ ಮಾಡಿದ ಸಿನಿಮಾ-ನಾಟಕದೊಳಗೆ ವೀರ ರಾಣಿಯ `ನಿಮಗೇಕೆ ಕೊಡಬೇಕು ಕಪ್ಪ’ ಅನ್ನುವ ಮಾತು ಜನಪ್ರಿಯ ಆಗೇದ.
ಆ ಮಾತನ್ನು ನಾವು ಮರೆಯದಂತೆ ಆಗಲಿ.
`ಇವು ರೈತರ ಬೆನ್ನು ಮುರಿಯಬಲ್ಲ ಕಾಯಿದೆಗಳು, ಇದರಿಂದ ಬರೆ ರೈತರ ನಾಶ ಆಗೋದಿಲ್ಲ, ಕೃಷಿ ಆಧಾರಿತ ದೇಶವಾದ ಭಾರತ ದೇಶ ಸರ್ವ ನಾಶ ಆಗತತಿ’ ಅಂತ ರೈತ ಸಂಘಟನೆ, ವಿರೋಧ ಪಕ್ಷಗಳು ಆಂದೋಲನ ಶುರು ಮಾಡಿದಾರ. ನಿರೀಕ್ಷೆಯಂತೆ ಕಂಗನಾ ರನ್‍ಔಟ್ ಅವರು `ಪ್ರತಿಭಟನಾಕಾರರು ಭಯೋತ್ಪಾದಕರು’ ಅಂತ ಫರಮಾನು ಹೊರಡಿಸಿಬಿಟ್ಟಾರ.
`ಎಲ್ಲಾ ರೈತರಿಗೆ ಒಳ್ಳೇದಾಗಲಿ ಅಂತ ನಮ್ಮ ನಾಯಕರು ಇಂತಹ ಕ್ರಮ ಕೈಗೊಂಡಾರ. ಬರೆ ಹುಳುಕ ಹುಡುಕಬ್ಯಾಡ್ರಿ. ಬರೆ ನೆಗೆಟಿವ್ ಮಾತು ಬ್ಯಾಡ’ ಅಂತ ಕೆಲವರು ಕಿವಿಮಾತು ಹೇಳಲಿಕ್ಕೆ ಹತ್ಯಾರ.
ಇದರಾಗ 99 ಶೇಕಡಾ ಚಲೋ ಆಗಬಹುದು. ಶೇಖಡಾ ಒಂದು ದುರುಪಯೋಗ ಆಗೋ ಸಾಧ್ಯತೆ ಐತಿ ಅಲ್ಲಾ, ಅದಕ್ಕ ಇಷ್ಟು ಮಾತು. ಜನಸಂಖ್ಯೆಯ ಶೇಕಡಾ 99ರಷ್ಟು ಇದ್ದವರು ಶೇಕಡಾ ಒಂದರ ದುರುಪಯೋಗದ ಸಾಧ್ಯತೆ ಹೇಳದೆ ಹೋದರ ಹೆಂಗ?


