ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆ 2022ರಲ್ಲಿ ನಡೆಯಲಿದ್ದು, ಚುನಾವಣೆಯಲ್ಲಿ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಸೇರಿದಂತೆ ಮಹಾ ವಿಕಾಸ್ ಅಘಾಡಿ (MVA) ಬಣ ಒಟ್ಟಾಗಿ ಸ್ಪರ್ಧಿಸಲಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ದೃಢಪಡಿಸಿದ್ದಾರೆ.
ಮಹಾ ವಿಕಾಸ್ ಅಘಾಡಿ ಆಡಳಿತದ ಮಹಾರಾಷ್ಟ್ರ ಸರ್ಕಾರ ಇಲ್ಲಿಯೇ ಉಳಿಯಲಿದೆ ಎಂದು ಶಿವಸೇನೆಯ ಮುಖ್ಯ ವಕ್ತಾರರು ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದರು. ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪಾಲಿಕೆ ಚುನಾವಣೆಗಳನ್ನು ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಶಿವಸೇನೆ ಆಡಳಿತದ ಬೃಹನ್ಮುಂಬೈ ಮಹಾನಗರ ಪಾಲಿಕೆ ದೇಶದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆಯಾಗಿದ್ದು, ಇದರ ವಾರ್ಷಿಕ ಬಜೆಟ್ 33,400 ಕೋಟಿ ರೂಪಾಯಿಗಳು.
ಇದನ್ನೂ ಓದಿ: ರಿಯಾ ಜೊತೆ ಮಾಧ್ಯಮಗಳ ದುರ್ವತನೆ: ಕೊನೆಗೂ ಎಚ್ಚೆತ್ತ ಮುಂಬೈ ಪೊಲೀಸರು
“ಶಿವಸೇನೆ ನೇತೃತ್ವದ ಎಂವಿಎ ಮಹಾರಾಷ್ಟ್ರದ ರಾಜಧಾನಿಯಲ್ಲಿ ನಡೆಯುವ ಪಾಲಿಕೆ ಚುನಾವಣೆಯಲ್ಲಿ ಹೋರಾಡುತ್ತದೆ ಮತ್ತು ಗೆಲ್ಲುತ್ತದೆ. ಮುಂಬೈಯಲ್ಲಿ ಶಿವಸೇನೆ ಹೊರತುಪಡಿಸಿ ಬೇರೆ ಯಾರು ಗೆಲ್ಲಬಹುದು..? ಇಲ್ಲಿ ಶಾಶ್ವತವಾಗಿ ಉಳಿಯಲು ಮಹಾ ವಿಕಾಸ್ ಅಘಾಡಿ ಬಣ ಇಲ್ಲಿದೆ, ”ಎಂದು ರಾವತ್ ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಹುದ್ದೆ ಹಂಚಿಕೆ ವಿಷಯದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಪಕ್ಷವು ದೀರ್ಘಕಾಲದ ಮಿತ್ರ ಬಿಜೆಪಿಯೊಂದಿಗೆ ಬೇರ್ಪಟ್ಟ ನಂತರ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಸೇರಿ ಕಳೆದ ವರ್ಷ ಸರ್ಕಾರ ರಚಿಸಲು ಮೈತ್ರಿ ಮಾಡಿಕೊಂಡಿದ್ದವು.
ಬಿಎಂಸಿ ಸೇರಿದಂತೆ ಮಹಾರಾಷ್ಟ್ರದ 10 ಪುರಸಭೆ ನಿಗಮಗಳಲ್ಲಿ ಮತ್ತು 27 ಜಿಲ್ಲಾ ಪರಿಷತ್ತು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ 2022ರಲ್ಲಿ ಚುನಾವಣೆ ನಡೆಯಲಿದೆ.