Homeಮುಖಪುಟದಿಲ್ಲಿ ಪೊಲೀಸರಿಗೆ ಪರಮಾಧಿಕಾರ: ಏನಿದು ರಾಸು ಕಾಯಿದೆ?

ದಿಲ್ಲಿ ಪೊಲೀಸರಿಗೆ ಪರಮಾಧಿಕಾರ: ಏನಿದು ರಾಸು ಕಾಯಿದೆ?

ಹಂಗಂತ ಇದನ್ನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾಡಿಲ್ಲ. ದೆಹಲಿ ಪೊಲಿಸರು ಕೇಂದ್ರ ಸರಕಾರದ ಪ್ರತಿನಿಧಿಯಾದ ಲೆಫ್ಟನಂಟ ಜನರಲ್ ಅವರ ಅಡಿಯಾಳು ಮಾಡಿರೋದು.

- Advertisement -
- Advertisement -

ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್‌

ಕರ್ನಾಟಕ ಪೊಲಿಸ ಬಗ್ಗೆ ಒಂದು ಹಳೇ ಜೋಕು ಅದ. ಪ್ರತಿ ಠಾಣಾಕ್ಕ ಇಬ್ಬರು ಸಬ್ಬು ಇನ್ಸಪೆಕ್ಟರು ಇರತಾರ. ಒಬ್ಬ ಅಪರಾಧ ಸಂಬಂಧಪಟ್ಟಂಗ, ಇನ್ನೊಬ್ಬ ಕಾ.ಸು ಸಲುವಾಗಿ, ಅಂದರ ಕಾನೂನು ಸುವ್ಯವಸ್ಥೆ. ಒಬ್ಬ ಎಸ್ಸೈ ಅಪರಾಧ ಮಾಡಲಿಕ್ಕೆ, ಇನ್ನೊಬ್ಬ ಎಸ್ಸೈ ಕಾಸು ಮಾಡಲಿಕ್ಕೆ ಅಂತ ಜನಾ ಮಾತಾಡಿಕೋತಾರ.

ಇಡೀ ದೇಶದ ಪೊಲಿಸರು ಕಾಸು ಆದರ ಇನ್ನು ಮೂರು ತಿಂಗಳು ದೆಹಲಿ ಪೊಲಿಸರು ರಾಸು. ಪ್ರತಿಭಟನೆಗಳನ್ನ ಹತ್ತಿಕ್ಕಲಿಕ್ಕೆ ಕೇಂದ್ರ ಸರಕಾರ ಇವರಿಗೆ ವಿಶೇಷ ಅಧಿಕಾರ ಕೊಟ್ಟದ. ಯಾವ ಕಾಯಿದೆ ಕೆಳಗ ಕೊಟ್ಟದ ಅಂದರ ರಾಷ್ಟ್ರೀಯ ಸುರಕ್ಷಾ ಕಾಯಿದೆ ಕೆಳಗ. ಹಿಂಗಾಗಿ ಅವರು ರಾಸು. ಅವರು ರಾಸೋ, ಅವರ ಕೈಯ್ಯಾಗ ಸಿಕ್ಕವರು ರಾಸೋ ಗೊತ್ತಿಲ್ಲ.

ಜನವರಿ 19, 2020 ರಿಂದ ಎಪ್ರಿಲ್ 18, 2020ರವರೆಗೆ ದೆಹಲಿ ಪೊಲಿಸರಿಗೆ ಈ ವಿಶೇಷ ಅಧಿಕಾರ ಇರತದ. ಈ ರಾಸುಕಾದಾಗ ಏನದ? 1980 ರಲ್ಲಿ ಸಂಸತ್ತಿನಲ್ಲಿ ಪಾಸಾದ ಈ ಕಾಯಿದೆ ಪೊಲಿಸ ಆಯುಕ್ತರಿಗೆ ವಿಶೇಷ ಅಧಿಕಾರ ಕೊಡತದ. ಅದನ್ನು ವಿಶೇಷ ಸಂದರ್ಭಗಳಲ್ಲಿ ಉಪಯೋಗಿಸಬೇಕು.

ಯಾರು ರಾಷ್ಟ್ರೀಯ ಸುರಕ್ಷೆಗೆ ಅಪಾಯ ಮಾಡಬಹುದು ಎಂಬ ಸಂದೇಹ ಪೊಲಿಸರಿಗೆ ಇರತದೋ, ಅಂಥವರನ್ನ ಪೊಲಿಸರು ಯಾವುದೇ ಮುನ್ಸೂಚನೆ ಕೊಡದೇ, ನಿಶ್ಚಿತ ಆರೋಪ ಮಾಡದೇ, ಸಾಕ್ಷಿ ತೋರಿಸದೇ, ಮೂರು ತಿಂಗಳು ಜೈಲಿನಲ್ಲಿ ಇಡಬಹುದು. ಇದು ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾದದ್ದು. ಆದರ ಇದನ್ನ ತಪ್ಪು ಅನ್ನಲಿಕ್ಕೆ ಬರಂಗಿಲ್ಲ. ಇದನ್ನ ನೈಸರ್ಗಿಕ ನ್ಯಾಯಕ್ಕೆ ಅಪವಾದ ಅಂತ ಕಾನೂನು ಪಂಡಿತರು ಕರೀತಾರ.

ಕಾನೂನು ದಂಡ ಪ್ರಕ್ರಿಯಾ ಸಂಹಿತೆ ಪ್ರಕಾರ ಯಾವುದೇ ಮನುಷ್ಯನನ್ನ, ಕಾನೂನು ರೀತ್ಯಾ ಅಲ್ಲದೇ ಬೇರೆ ರೀತಿಯಿಂದ ದಸ್ತಗಿರಿ ಮಾಡಲಿಕ್ಕೆ ಬರಂಗಿಲ್ಲ. ಅದು ಅವನ ಸಾಂವಿಧಾನಿಕ ಮೂಲಭೂತ ಹಕ್ಕಿನ ಉಲ್ಲಂಘನೆ. ಆದರೆ ಕಾ.ಸು ಸಲುವಾಗಿ ಮುಂಜಾಗೃತ ಕ್ರಮವಾಗಿ ಅವರನ್ನು ಬಂಧಿಸಬಹುದು. ಅದೂ ಕೂಡ ಸಕಾರಣವಿಲ್ಲದೇ ಬಂಧಿಸೊ ಹಂಗಿಲ್ಲ ಅಂತ ಸುಪ್ರೀಮ ಕೋರ್ಟು ಹೇಳೇದ.

ಸಾಮಾನ್ಯ ಬಂಧನ ಪ್ರಕ್ರಿಯಾದೊಳಗ ಆ ಮನುಷ್ಯಗ ಅವನ ಮ್ಯಾಲೆ ಇರೋ ಆರೋಪವನ್ನು ಸರಿಯಾಗಿ ತಿಳಿಸಿ, ಅವನು ತನ್ನ ವಿರುದ್ಧ ತಾನೇ ಸಾಕ್ಷಿ ಹೇಳಲಾರದಂಗ ಅವನಿಗೆ ಸಲಹೆ ಕೊಟ್ಟು, ಬಂಧನ ಮಾಡಬಹುದು. ಅವನ ಬಂಧನದ ನಂತರ ಅವನ ಸಂಬಂಧಿಕರಿಗೆ ವಿಷಯ ತಿಳಿಸಿ, ಅವನ ಆಯ್ಕೆಯ ವಕೀಲರನ್ನು ಭೇಟಿ ಮಾಡಿಸಿ, ವೈದ್ಯಕೀಯ ತಪಾಸಣೆ ಮಾಡಿಸಿ, 24 ತಾಸಿನೊಳಗ ನ್ಯಾಯಾಧೀಶರ ಮುಂದೆ ಹಾಜರು ಮಾಡಬೇಕು.

ಇವೆಲ್ಲಾ ಕಡ್ಡಾಯ ನಿಯಮಗಳಿಂದ ದೆಹಲಿ ಪೊಲಿಸರಿಗೆ ಮುಕ್ತಿ ಸಿಕ್ಕದ. ಅದು ಯಾಕ ಅಂತೀರಿ? ಅವರು ಸಿ ಎ ಎ ಹಾಗೂ ಎನ್ ಆರ್ ಸಿ ಗಳ ವಿರುದ್ಧ ಹೋರಾಟ ಮಾಡಲಿಕ್ಕೆ ಹತ್ತಿರೋ ಹೆಣ್ಣು ಮಕ್ಕಳು ಹಾಗೂ ಯುವಕರನ್ನ ಸಂಭಾಳಸಬೇಕಾಗೇದ. ಅದಕ್ಕ. ಅದು ಅವರಿಗೆ ಘನ ಗಂಭೀರ ವಿಷಯ. ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಬಂಗ್ಲಾ ಇಬ್ಭಾಗ, ಭಾರತ ವಿಭಜನೆ, ತುರ್ತು ಪರಿಸ್ಥಿತಿ, 47, 84, 92 ರ ಕೋಮು ದಂಗೆಗಳು, ಸರಣಿ ಬಾಂಬು ಸ್ಪೋಟ, ಸಂಸತ್ ದಾಳಿ, ವಿ. ಪಿ ಸಿಂಗ್ ಸರಕಾರ ಇದ್ದಾಗ ಕಾಶ್ಮೀರದಿಂದ ಪಂಡಿತರನ್ನ ಹೊರಗ ಹಾಕಿದ್ದು ಮುಂತಾದವುಗಳಿಗಿಂತ ಈ ಹೆಣ್ಣಮಕ್ಕಳ ಹಾಗೂ ಸಣ್ಣ ಮಕ್ಕಳ ಹೋರಾಟ ಅತಿ ಅನ್ನಿಸೇದ.

ಈ ದೇಶದ ಅತಿ ಸಣ್ಣ ಕಾಯಿದೆಗಳಲ್ಲಿ ಒಂದು ರಾಸುಕಾ. ಅದು ಕೇವಲ 18 ಪರಿಚ್ಛೇದಗಳ ಕಾನೂನು. ಅದರ ಪ್ರಕಾರ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಯಾವುದೇ ವ್ಯಕ್ತಿಯನ್ನ, ಯಾವುದೇ ಕಾರಣವಿಲ್ಲದೇ 90 ದಿನ ಬಂಧನ ದೊಳಗ ಇಡಬಹುದು. ಈ ಮನಿಷಾ ದೇಶದ ರಕ್ಷಣೆಗೆ, ಭಾರತ ಹಾಗೂ ಇತರ ದೇಶಗಳ ನಡುವಿನ ಸಂಬಂಧಕ್ಕ ಅಥವಾ ಸಾರ್ವಜನಿಕ ಶಾಂತಿಗೆ ಅಪಾಯ ತರಬಹುದು ಅಂತ ಪೊಲಿಸರಿಗೆ ಗುಮಾನಿ ಬಂದರ ಸಾಕು. ಅವರು ದಸ್ತಗಿರಿ ಮಾಡಬಹುದು.

`ಬೇಲು ನಿಯಮ, ಜೈಲು ಅಪವಾದ’ ಅನ್ನೋ ಮಾತನ್ನ ಠೀವಿ ವಕೀಲ ತಲಗವಾರ ಸೀತಾರಾಮ ಅವರು ಮತ್ತ ಮತ್ತ ಹೇಳೋದನ್ನ ನಾವೆಲ್ಲಾ ಕೇಳೇವಿ. ಅದನ್ನ ಮೊದಲ ಹೇಳಿದವರು ಯಾರು ಅನ್ನೋದನ್ನ ಅವರು ಹೇಳಂಗಿಲ್ಲ. ಅದನ್ನ ಮೊದಲ ಬಾರಿಗೆ ಹೇಳಿದವರು ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರು. ಅವರ ಪ್ರಕಾರ ಯಾವ ವ್ಯಕ್ತಿ ಉದ್ದೇಶಪೂರ್ವಕವಾಗಿ ಕಾನೂನಿಗೆ ಅಗೌರವ ಕೊಡತಾನೋ, ಹೊರಗ ಬಿಟಬಿಟ್ಟರ ಅಪರಾಧ ಮಾಡತಾನ ಅಂತ ಖಾತ್ರಿ ಇರತದೋ, ನ್ಯಾಯಾಧೀಶರ ಮುಂದ ಬರಲಾರದ ತಪ್ಪಿಸಿಗೊಂಡು ಅಡ್ಯಾಡತಾನೋ, ಅಂಥವನನ್ನ ಮಾತ್ರ ಜೈಲಿಗೆ ಹಾಕಬೇಕು. ಉಳಿದವರಿಗೆ ಬೇಲು ಕೊಡಲೇಬೇಕು. ಆದರ ರಾಸುಕಾಗೆ ಈ ನಿಯಮಕ್ಕ ಒಗ್ಗಂಗಿಲ್ಲ. ಈ ಕಾಯಿದೆ ಕೆಳಗ ಯಾರರ ದಸ್ತಗಿರಿ ಆದರ ನ್ಯಾಯಾಧೀಶರ ಕೈ ಕಟ್ಟಿ ಹಾಕಿದಂಗ. ಅವರಿಗೆ ಬೇಲು ಕೊಡಲಿಕ್ಕೆ ಬರಂಗಿಲ್ಲ. ಇದನ್ನ ಒಂದು ವರ್ಷದವರೆಗೆ ವಿಸ್ತರಿಸಬಹುದು.

ಇದರ ಹಿಂದಿನ ಕಾರಣ ದೆಹಲಿ ಜಾಮಾ ಮಸೀದಿಯಲ್ಲಿ ಚಂದ್ರಶೇಖರ ಆಝಾದ ರಾವಣ ಅವರು ನಡೆಸಿದ ಪ್ರತಿಭಟನೆ ಅಂತ ಗುಸುಗುಸು ಪಿಸಿಪಿಸಿ ಸುದ್ದಿ ನಡದಾವ. ದೇಶದ ತುಂಬಾ ಇಷ್ಟು ಪ್ರತಿಭಟನೆ ನಡದಾವಲ್ಲಾ, ರಾಗಿ ಒಣಾ ಹಾಕಿದಂಗ ಜನ ಸೇರಲಿಕ್ಕೆ ಹತ್ಯಾರ. ಆದರನೂ ಆಝಾದ ಅವರ ಹೋರಾಟ ಯಾಕ ಅಷ್ಟು ಮಟ್ಟಿಗೆ ಆಳುವವರ ನಿದ್ದಿ ಕೆಡಿಸಿತು? ಯಾಕಂದರ ಅವರು ಮುಸ್ಲೀಮರು – ದಲಿತರು ಯಾವಾಗಿದ್ದರೂ ಒಂದಾಗಂಗಿಲ್ಲ ಅಂತ ತಿಳಕೊಂಡಿದ್ದರು. ಅವರ ಲೆಕ್ಕಾಚಾರ ಖೊಟ್ಟಿ ಅಂತ, ಆಪತ್ಕಾಲ ಬಂದಾಗ ಇವರು ಒಂದಾಗಬಹುದು ಅಂತ ಆಝಾದ ತೋರಿಸಿ ಬಿಟ್ಟರು. ಅದಕ್ಕ.
ದೆಹಲಿ ಪೊಲಿಸ್ ಆಯುಕ್ತರು ಮಾತ್ರ- “ಇದರಾಗೇನು ವಿಶೇಷ ಇಲ್ಲರಿ, ಇದು ಹಂಗ ಮಾಮೂಲು. ನಡಕೋತನ ಇರೋದು” ಅಂತ ಹೇಳ್ಯಾರ. ದೆಹಲಿ ಪೊಲಿಸರು ದಿನಾ ಬೆಳಿಗ್ಗೆ- ಸಂಜೆ ಯುನಿವರ್ಸಿಟಿಗಳಿಗೆ ನುಗ್ಗಿ ಹುಡುಗ- ಹುಡುಗಿಯರನ್ನ ದನಾ ಬಡದಂಗ ಬಡದು ಬರೋದು ಮಾಮೂಲಾಗಿ ನಡದದ. ನಾವು ಅದರ ಬಗ್ಗೆ ಕೇಳೇವಿ ಅಂತ ತಿಳಕೊಂಡಾರೇನೋ ಮತ್ತ!.

ಹಂಗಂತ ಇದನ್ನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾಡಿಲ್ಲ. ದೆಹಲಿ ಪೊಲಿಸರು ಕೇಂದ್ರ ಸರಕಾರದ ಪ್ರತಿನಿಧಿಯಾದ ಲೆಫ್ಟನಂಟ ಜನರಲ್ ಅವರ ಅಡಿಯಾಳು. ಅನಿಲ ಬೈಜಲ ಅಂತ ಅವರ ಹೆಸರು. ಅವರು ಮಾಜಿ ಐಎಎಸ್ ಅಧಿಕಾರಿ. ಅವರು ಕೇಂದ್ರಾಡಳಿತ ಪ್ರದೇಶಗಳ ಕೇಡರಿಗೆ ಸೇರಿದ್ದವರು. ಹಂಗ ನದಿ ಮೂಲ, ಯೋಗಿ ಮೂಲ ಕೇಳಬಾರದು ಅಂತಾರ. ಆದರೂ ನಿಮಗ ಗೊತ್ತಿರಲಿ ಅಂತ ಹೇಳತೇನಿ. ಈ ಯೋಗಿಯ ಮೂಲ ಅಲಹಾಬಾದು. ಅವರು ಪಾಲಿಸುವ ಆದೇಶಗಳು ನೇರವಾಗಿ ಕೇಂದ್ರ ಗೃಹಮಂತ್ರಿಗಳಾದ ಅಮಿತ ಷಾ ಅವರಿಂದ ಬರತಾವ. ಇದು ಪದ್ಧತಿ.

ಮಾಜಿ ಪ್ರಧಾನ ಮಂತ್ರಿ ಚರಣ ಸಿಂಗ್ ಅವರ ಕಾಲದಾಗ ಬಂದ ಈ ಕಾನೂನು ವಿರಳಾತಿ ವಿರಳ ಸಂದರ್ಭದಾಗ ಉಪಯೋಗಸತೇವಿ ಅಂತ ಹೇಳಿ ಕೇಂದ್ರ ಸರಕಾರ ನ್ಯಾಯಾಲಯಕ್ಕ ಮಾತು ಕೊಟ್ಟದ. ಹಂಗಾರ ಆ ಮಾತಿನ ಪಾಲನೆ ಆಗೇದೇನು? ಇತ್ತೀಚೆಗೆ ಈ ಕಾಯಿದೆ ಕೆಳಗ ಯಾವಯಾವ ಭಯಂಕರ ಭಯೋತ್ಪಾದಕರ ವಿರುದ್ಧ ಕೇಸು ಆಗೇದ ಅನ್ನೋದು ತಿಳಕೊಂಡರ ಇದಕ್ಕ ಉತ್ತರ ಸಿಗತದ. ಅವರು ಯಾರು ಅಂದರ – ಉತ್ತರ ಪ್ರದೇಶದ ಸರಕಾರದ ವಿರುದ್ಧ ಶಾಂತಿಯುತ ಪ್ರತಿಭಟನೆ ಮಾಡಿದ ಚಂದ್ರಶೇಖರ ಆಝಾದು, ಮಣಿಪುರದ ಮುಖ್ಯಮಂತ್ರಿ ವಿರುದ್ಧ ಫೇಸುಬುಕ್ಕು ಪೋಸ್ಟು ಹಾಕಿದ ಕಿಶೋರ ಚಂದ್ರ ವಾಂಗಖೇಮ ಅನ್ನೋ ಪತ್ರಕರ್ತ ಹಾಗು ಬುಲಂದಶಹರದಾಗ ಗೋ ಹತ್ಯೆ ಆರೋಪದ ಮ್ಯಾಲೆ ಬಂಧಿತರಾದ ಮೂರು ಜನ ಅಭಾಗನರು.

ರಾಷ್ಟ್ರ ರಕ್ಷಣೆ ಹೆಸರಿನ್ಯಾಗ ಜಾರಿ ಆಗತಿರೋ ಇದು ರಾಸುಕಾ ಆಗತದೋ ಅಥವಾ ಸ್ಪೆಲಿಂಗ್ ಮಿಸ್ಟೇಕ್ ಆಗಿ ರಾಕ್ಷಸಾ ಆಗತದೋ ಗೊತ್ತಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಕನ್ನಡ ಭಾಷೆಯಲ್ಲಿ ಹೇಳುವುದಾದರೆ ದೀಪ ಆರುವುದಕ್ಕೆ ಮುಂಚೆ

    ಪ್ರಕಾಶಮಾನವಾದ ಬೆಳಕನ್ನು ಹೊರಚೆಲ್ಲುತ್ತದೆ ಅನ್ನೋದು ತುಂಬಾ ಸತ್ಯ
    ಇನ್ನೂ ನಾಲ್ಕು ವರ್ಷ ಪೂರೈಸುವ ವರೆಗೆ ಗೃಹಮಂತ್ರಿ ಅಮಿತ್ ಶಾ ಅವರು ಯಾವ ಆಟವಾಡಿದರು ಅದು ತುಂಬಾ ಅದ್ಭುತ ಬೆಳಕಾಗಿ ಇರುತ್ತದೆ
    ಇದು ನಿಲ್ಲುವ ಆಟ ನೆಕ್ಸ್ಟ್ ಬಾರಿ ಚುನಾವಣೆ ಹತ್ತಿರ ಬಂದಾಗ ಹಣತೆ ಹಚ್ಚುವ ಮೊದಲು ದೇಶದ ಉದ್ದಗಲದ ನಾಗರಿಕರೇ ಆಯ್ಕೆ ಮಾಡುತ್ತಾರೆ ಮರೆಯುವಂತಿಲ್ಲ ಮತದಾರರು ಕೊಡುವ
    ಮತ ಯಾಚನೆಯನ್ನು
    ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಹೇಳಿದ ಮಾತನ್ನು ತುಂಬಾ ಸತ್ಯವಿದೆ
    ಮತದಾನದ ಹಕ್ಕನ್ನು ಮಾಡಿಕೊಳ್ಳುವವರು ನಮ್ಮ ಹೆಣ್ಣುಮಕ್ಕಳ ಮಾರಿದಂತೆ ಎಂದು ಅವರು ಆ ದಿನದಂದೇ ಎಚ್ಚರಿಸಿದ್ದಾರೆ
    ಅಧಿಕಾರದ ವ್ಯಾಮೋಹ ಮದವೇರಿದ ಆನೆಯಂತೆ ಇದೆ ಎಂದು ಅಮಿತ್ ಶಾ ಎಂದರೆ ಗೊತ್ತಾಗುತ್ತೆ ಜನಸಾಮಾನ್ಯರಿಗೆ ಜೈ ಭೀಮ್ ಸಂವಿಧಾನ

  2. ಕನ್ನಡ ಭಾಷೆಯಲ್ಲಿ ಹೇಳುವುದಾದರೆ ದೀಪ ಆರುವುದಕ್ಕೆ ಮುಂಚೆ

    ಪ್ರಕಾಶಮಾನವಾದ ಬೆಳಕನ್ನು ಹೊರಚೆಲ್ಲುತ್ತದೆ ಅನ್ನೋದು ತುಂಬಾ ಸತ್ಯ
    ಇನ್ನೂ ನಾಲ್ಕು ವರ್ಷ ಪೂರೈಸುವ ವರೆಗೆ ಗೃಹಮಂತ್ರಿ ಅಮಿತ್ ಶಾ ಅವರು ಯಾವ ಆಟವಾಡಿದರು ಅದು ತುಂಬಾ ಅದ್ಭುತ ಬೆಳಕಾಗಿ ಇರುತ್ತದೆ
    ಇದು ನಿಲ್ಲುವ ಆಟ ನೆಕ್ಸ್ಟ್ ಬಾರಿ ಚುನಾವಣೆ ಹತ್ತಿರ ಬಂದಾಗ ಹಣತೆ ಹಚ್ಚುವ ಮೊದಲು ದೇಶದ ಉದ್ದಗಲದ ನಾಗರಿಕರೇ ಆಯ್ಕೆ ಮಾಡುತ್ತಾರೆ ಮರೆಯುವಂತಿಲ್ಲ ಮತದಾರರು ಕೊಡುವ
    ಮತ ಯಾಚನೆಯನ್ನು
    ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಹೇಳಿದ ಮಾತನ್ನು ತುಂಬಾ ಸತ್ಯವಿದೆ
    ಮತದಾನದ ಹಕ್ಕನ್ನು ಮಾರಿಕೊಳ್ಳುವವರು ನಮ್ಮ ಹೆಣ್ಣುಮಕ್ಕಳ ಮಾರಿದಂತೆ ಎಂದು ಅವರು ಆ ದಿನದಂದೇ ಎಚ್ಚರಿಸಿದ್ದಾರೆ
    ಅಧಿಕಾರದ ವ್ಯಾಮೋಹ ಮದವೇರಿದ ಆನೆಯಂತೆ ಇದೆ ಎಂದು ಅಮಿತ್ ಶಾ ಎಂದರೆ ಗೊತ್ತಾಗುತ್ತೆ ಜನಸಾಮಾನ್ಯರಿಗೆ ಜೈ ಭೀಮ್ ಸಂವಿಧಾನ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...