ಹರಿಯಾಣದಲ್ಲಿ 35 ವರ್ಷದ ಮಹಿಳೆಯೊಬ್ಬರನ್ನು ಪತಿಯೇ ಕಳೆದ ಒಂದೂವರೆ ವರ್ಷದಿಂದ ಶೌಚಾಲಯದಲ್ಲಿ ಬಂಧಿಸಿದ್ದ ಅಮಾನವೀಯ ಘಟನೆ ವರದಿಯಾಗಿದೆ. ಪಾಣಿಪತ್ ಜಿಲ್ಲೆಯ ರಿಶ್ಪುರ್ನಲ್ಲಿ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತ್ಯಂತ ಕಿರಿದಾದ, ಕೆಟ್ಟ ವಾಸನೆ ಬರುತ್ತಿದ್ದ ಶೌಚಾಲಯದಲ್ಲಿ ಬಂಧಿಸಲಾಗಿದ್ದ ಮಹಿಳೆಯನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ತಂಡ ರಕ್ಷಿಸಿದೆ. ಮೂರು ಮಕ್ಕಳ ತಾಯಿಯಾದ ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ನಂತರ ಆಕೆಯ ಸೋದರಸಂಬಂಧಿಗೆ ಒಪ್ಪಿಸಲಾಗಿದೆ.
ಮಹಿಳೆಯನ್ನು ತನ್ನ ಗಂಡನೇ ಸೆರೆಯಲ್ಲಿ ಇಟ್ಟಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರಜನಿ ಗುಪ್ತಾ, ಪೊಲೀಸ್ ಅಧಿಕಾರಿಗಳೊಂದಿಗೆ ಸಂತ್ರಸ್ತೆಯ ಮನೆಗೆ ತಲುಪಿ ಮಹಿಳೆಯನ್ನು ಶೌಚಾಲಯದೊಳಗೆ ಕೂಡಿ ಬೀಗ ಹಾಕಿರುವುದನ್ನು ಕಂಡು ಆಕೆಯನ್ನು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: ಯುಪಿ: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಅಪ್ರಾಪ್ತೆ ಅಸಹಜ ಸಾವು!
’ಸಂತ್ರಸ್ತ ಮಹಿಳೆ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದರು. ಆಕೆ ತುಂಬಾ ಶಕ್ತಿಹೀನರಾಗಿದ್ದರು, ನಡೆಯುವ ಸ್ಥಿತಿಯಲ್ಲಿ ಕೂಡ ಇರಲಿಲ್ಲ. ಆಕೆಗೆ ಸರಿಯಾಗಿ ಆಹಾರ, ಕುಡಿಯಲು ನೀರು ಸಹ ನೀಡಿಲ್ಲ. ನಾವು ಊಟ ಕೊಟ್ಟಾಗ ಒಮ್ಮೆಲೆ 8 ಚಪಾತಿಗಳನ್ನು ತಿಂದರು. ಆಕೆಯನ್ನ ಕಳೆದ ಒಂದೂವರೆ ವರ್ಷದಿಂದ ಈ ಚಿಕ್ಕ ಟಾಯ್ಲೆಟ್ನಲ್ಲೇ ಇರಿಸಲಾಗಿತ್ತು ಅಂತ ತನಿಖೆಯಿಂದ ತಿಳಿದುಬಂದಿದೆ’ ಎಂದು ರಜನಿ ಗುಪ್ತಾ ತಿಳಿದ್ದಾರೆ.

ಮಹಿಳೆಯನ್ನು ಕಳೆದ 17 ವರ್ಷಗಳ ಹಿಂದೆ ನರೇಶ್ ಕುಮಾರ್ ಎಂಬುವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗೆ 15 ವರ್ಷದ ಮಗಳು ಮತ್ತು 11 ಮತ್ತು 13 ವರ್ಷದ ಇಬ್ಬರು ಗಂಡು ಮಕ್ಕಳು ಸೇರಿದಂತೆ ಮೂವರು ಮಕ್ಕಳಿದ್ದಾರೆ.
ನರೇಶ್ ಕುಮಾರ್ ತನ್ನ ಪತ್ನಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳಿಕೊಂಡಿದ್ದಾರೆ. ಆದರೆ ಇಲಾಖೆ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಸಂತ್ರಸ್ತೆ ಸರಿಯಾಗಿ ಉತ್ತರಿಸಿದ್ದಾರೆ. ಜೊತೆಗೆ ಕುಟುಂಬದ ಎಲ್ಲ ಸದಸ್ಯರನ್ನು ಗುರುತಿಸಿದ್ದಾರೆ. ಪತಿ ನರೇಶ್ ಕುಮಾರ್ ತನ್ನ ಪತ್ನಿ ಮಾನಸಿಕ ಅಸ್ವಸ್ಥೆ ಎಂದು ಹೇಳಲು ಆತನ ಬಳಿ ಆಕೆಗೆ ಚಿಕಿತ್ಸೆ ಕೊಡಿಸಿರುವ ಯಾವ ದಾಖಲೆಗಳು ಇಲ್ಲ ಎಂದು ರಜನಿ ಗುಪ್ತಾ ತಿಳಿಸಿದ್ದಾರೆ.
ಐಪಿಸಿಯ ಸೆಕ್ಷನ್ 498 ಎ ಮತ್ತು 342 ರ ಅಡಿಯಲ್ಲಿ ಪತ್ನಿಯನ್ನು ಬಂಧಿಸಿದ್ದ ಪತಿ ನರೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಸನೋಲಿ ಪೊಲೀಸ್ ಠಾಣೆಯ ಉಸ್ತುವಾರಿ ಸುರೇಂದರ್ ದಹಿಯಾ ತಿಳಿಸಿದ್ದಾರೆ.


