ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಮೇಲೆ ಇಂದು ನೇರ ದಾಳಿ ನಡೆಸಿದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್, “ಸ್ವಾಭಿಮಾನ ಹೊಂದಿರುವ ಯಾರಾದರೂ ಈ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ” ಎಂದು ಕಿಡಿಕಾರಿದ್ದಾರೆ.
ಮಹಾರಾಷ್ಟ್ರದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡುವೆ ಇತ್ತೀಚೆಗೆ ಉಂಟಾದ ಪತ್ರ-ಯುದ್ಧದ ಪ್ರಶ್ನೆಗೆ ಉತ್ತರಿಸಿದ ಪವಾರ್, “ಸ್ವಾಭಿಮಾನ ಹೊಂದಿರುವ ಯಾರಾದರೂ ಈ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ. ಅವರನ್ನು ತೆಗೆದುಹಾಕುವ ಯಾವುದೇ ಬೇಡಿಕೆಗಳನ್ನು ಸಲ್ಲಿಸಲು ನಾವು ಯಾರು” ಎಂದು ಹೇಳಿದ್ದಾರೆ.
“ಕೆಲವು ಪದಗಳ ಬಳಕೆಯನ್ನು ನಿಯಂತ್ರಿಸಬೇಕಿತ್ತು ಎಂದು ರಾಜ್ಯಪಾಲರು ಬರೆದ ಪತ್ರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ” ಎಂದು ಅವರು ಉಲ್ಲೇಖಿಸಿದರು.
“ಅಮಿತ್ ಶಾ ಅವರ ಹೇಳಿಕೆಯ ನಂತರ, ಸ್ವಾಭಿಮಾನ ಹೊಂದಿರುವ ಯಾರಾದರೂ (ರಾಜ್ಯಪಾಲರ) ಹುದ್ದೆಯಲ್ಲಿ ಮುಂದುವರಿಯಬೇಕೇ” ಎಂದು ಶರದ್ ಪವಾರ್ ಹೇಳಿದರು.
ಇದನ್ನೂ ಓದಿ: ನಾವು ಜಾತ್ಯಾತೀತರು, ಜಾತ್ಯಾತೀತರಾಗೇ ಇರುತ್ತೇವೆ- ತನಿಷ್ಕ್ ಜಾಹೀರಾತು ನಿರ್ದೇಶಕಿ
ಆದರೆ, ಶರದ್ ಪವಾರ್ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜ್ಯಪಾಲರ ಬಗ್ಗೆ ದೂರು ನೀಡಿ ಪತ್ರವೊಂದನ್ನು ಬರೆದಿದ್ದರು. ಇದಾದ ನಂತರ ಅಮಿತ್ ಶಾ ರಾಜ್ಯಪಾಲರ ಭಾಷೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಶಿವಸೇನೆ ಮುಖ್ಯ ವಕ್ತಾರ ಮತ್ತು ಸಂಸದ ಸಂಜಯ್ ರಾವತ್, ಅಮಿತ್ ಶಾ ಅವರ ಹೇಳಿಕೆಗಳನ್ನು ಶ್ಲಾಘಿಸಿದ್ದಾರೆ.
ರಾಜ್ಯದ ಪೂಜಾ ಸ್ಥಳಗಳನ್ನು ಪುನಃ ತೆರೆಯುವ ವಿಷಯದ ಬಗ್ಗೆ ಕೊಶಾರಿ ಅಕ್ಟೋಬರ್ 12 ರಂದು ಠಾಕ್ರೆ ಅವರಿಗೆ ಪತ್ರ ಬರೆದಿದ್ದು, ಠಾಕ್ರೆಯ ಹಿಂದುತ್ವ ರುಜುವಾತುಗಳನ್ನು ಪ್ರಶ್ನಿಸಿ, ಸಿಎಂ ಇದ್ದಕ್ಕಿದ್ದಂತೆ ಜಾತ್ಯತೀತವಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದರು.
ತನಗೆ ಯಾರಿಂದಲೂ ‘ಹಿಂದುತ್ವದ’ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಠಾಕ್ರೆ ತಿರುಗೇಟು ನೀಡಿದ್ದರು. ಆದರೆ ಕೊರೊನಾ ಸಾಂಕ್ರಾಮಿಕದ ಸಮಸ್ಯೆಯನ್ನು ಗಣನೆಗೆ ತೆಗೆದುಕೊಂಡು ಪೂಜಾ ಸ್ಥಳಗಳನ್ನು ಪುನಃ ತೆರೆಯುವ ವಿಷಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಕೊರೊನಾ ಸೋಂಕಿತರ ಪ್ರಮಾಣದಲ್ಲಿ ದೇಶದಲ್ಲಿಯೇ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದೆ.
ಇದನ್ನೂ ಓದಿ: ’ನೀವು ಜಾತ್ಯಾತೀತರಾದಿರಾ?’; ಮಹಾ ಮುಖ್ಯಮಂತ್ರಿಗೆ ರಾಜ್ಯಪಾಲರ ಪ್ರಶ್ನೆ- ಶರದ್ ಪವಾರ್ ಆಕ್ರೋಶ


