ನಿವೃತ್ತ ವಿಂಗ್ ಕಮಾಂಡರ್ ಡಾ. ವಿಜಯಲಕ್ಷ್ಮಿ ರಮಣನ್, ಭಾರತೀಯ ವಾಯುಸೇನೆಯ ಮೊದಲ ಮಹಿಳಾ ಅಧಿಕಾರಿ ತಮ್ಮ 96 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ವಿಶೀಷ್ಠ ಸೇವಾ ಪದಕ (ವಿಎಸ್ಎಂ) ಪಡೆದ ವಿಜಯಲಕ್ಷ್ಮಿ ರಮಣನ್, ವೃದ್ಧಾಪ್ಯ ಸಹಜ ಕಾಯಿಲೆಗಳಿಂದಾಗಿ ತಮ್ಮ ಮಗಳ ಮನೆಯಲ್ಲಿ ನಿಧನರಾದರು ಎಂದು ಅವರ ಅಳಿಯ ಎಸ್.ಎಲ್.ವಿ ನಾರಾಯಣ್ ಹೇಳಿದರು.
ಫೆಬ್ರವರಿ 1924 ರಲ್ಲಿ ಜನಿಸಿದ ಅವರು, ಎಂಬಿಬಿಎಸ್ ಮಾಡಿದ ನಂತರ ಆಗಸ್ಟ್ 22, 1955 ರಂದು ಆರ್ಮಿ ಮೆಡಿಕಲ್ ಕಾರ್ಪ್ಸ್‌ನಲ್ಲಿ ನಿಯೋಜಿಸಲ್ಪಟ್ಟರು. ಇದರ ಜೊತೆಗೆ ವಿವಿಧ ವಾಯುಪಡೆಯ ಆಸ್ಪತ್ರೆಗಳಲ್ಲಿ ಸ್ತ್ರೀರೋಗತಜ್ಞರಾಗಿ ಸೇವೆ ಸಲ್ಲಿಸಿದ್ದು, ಯುದ್ಧಗಳ ಸಮಯದಲ್ಲಿ ಗಾಯಗೊಂಡ ಸೈನಿಕರಿಗೂ ಚಿಕಿತ್ಸೆ ನೀಡುತ್ತಾ ಆಡಳಿತಾತ್ಮಕ ಕರ್ತವ್ಯಗಳನ್ನೂ ನಿರ್ವಹಿಸಿದ್ದರು.
ಇದನ್ನೂ ಓದಿ: ಬಳಸಿದ ಮಾಸ್ಕ್ & ಪಿಪಿಇ ಕಿಟ್ ವಿವೇವಾರಿಗೆ ಮಾರ್ಗಸೂಚಿ ಹೊರಡಿಸುವಂತೆ ರಾಜ್ಯಕ್ಕೆ ಹೈಕೋರ್ಟ್ ಸೂಚನೆ
ಇವರಿಗೆ ಆಗಸ್ಟ್ 1972 ರಲ್ಲಿ ವಿಂಗ್ ಕಮಾಂಡರ್ ಹುದ್ದೆಗೆ ಬಡ್ತಿ ನೀಡಲಾಯಿತು. ಇದಾದ 5 ವರ್ಷಗಳ ನಂತರ ವಿಶಿಷ್ಟ್ ಸೇವಾ ಪದಕ ನೀಡಿ ಗೌರವಿಸಲಾಯಿತು. ನಂತರ ಫೆಬ್ರವರಿ, 1979 ರಲ್ಲಿ ನಿವೃತ್ತರಾಗಿದ್ದರು.
ಇವರ ಪತಿ ದಿವಂಗತ ಕೆ ವಿ ರಮಣನ್ ಕೂಡ ಭಾರತೀಯ ವಾಯುಪಡೆಯ ಅಧಿಕಾರಿಯಾಗಿದ್ದರು.
ಇವರಿಗೆ ಮಗಳು ಮತ್ತು ಮಗ ಇದ್ದಾರೆ. ವಿಜಯಲಕ್ಷ್ಮಿ ರಮಣನ್ ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಆಲ್ ಇಂಡಿಯಾ ರೇಡಿಯೊದಲ್ಲಿ ಕಲಾವಿದರಾಗಿದ್ದರು.
ಇದನ್ನೂ ಓದಿ: ಚಿಲಿ: ಭುಗಿಲೆದ್ದ ಪ್ರತಿಭಟನೆ; ಪೊಲೀಸ್ ಪ್ರಧಾನ ಕಚೇರಿ ಸೇರಿದಂತೆ 2 ಚರ್ಚುಗಳಿಗೆ ಬೆಂಕಿ!


