ರಾಷ್ಟ್ರೀಯ ಅರ್ಹತೆ-ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಕೇವಲ ಆರು ಅಂಕ ಪಡೆದಿದ್ದರಿಂದ ಆಘಾತಕ್ಕೊಳಗಾದ ಯುವತಿಯೊಬ್ಬಳು ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲೆಯ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ವೈದ್ಯಕೀಯ ಆಕಾಂಕ್ಷಿಗಳಿಗಾಗಿ ನಡೆದ ಪ್ರವೇಶ ಪರೀಕ್ಷೆಯಲ್ಲಿ ಆಕೆ 590 ಅಂಕ ಗಳಿಸಿದ್ದಾಳೆ ಎಂದು ಆಕೆಯ ಪೋಷಕರು 18 ವರ್ಷದ ವಿಧಿ ಸೂರ್ಯವಂಶಿ ಅವರನ್ನು ಉತ್ಸಾಹಗೊಳಿಸಲು ಪ್ರಯತ್ನಿಸಿದ್ದರು.
ಆಕೆಗೆ 590 ಅಂಕ ದೊರೆತಿವೆ ಎಂದು ಪೋಷಕರು ತಿಳಿಸಿದರೂ, ತೀವ್ರ ಖಿನ್ನತೆಗೆ ಒಳಗಾದ ಯುವತಿ ಅಕ್ಟೋಬರ್ 20 ರಂದು ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ. “ವಿಧಿ ಮಂಗಳವಾರ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕುಟುಂಬವು ಮರುದಿನ ಈ ವಿಷಯವನ್ನು ವರದಿ ಮಾಡಿದೆ. ಪ್ರಾಥಮಿಕ ತನಿಖೆಯು ನೀಟ್‌ನಲ್ಲಿನ ಕಡಿಮೆ ಅಂಕಗಳು ಆತ್ಮಹತ್ಯೆಗೆ ಕಾರಣವಾಯಿತು ಎಂದು ಸೂಚಿಸುತ್ತದೆ. ಆದರೆ ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಪರಾಸಿಯಾ ಪೊಲೀಸ್ ಠಾಣೆಯ ಉಸ್ತುವಾರಿ ಸುಮೇರ್ ಸಿಂಗ್ ಜಗ್ಟೆ ಹೇಳಿದ್ದಾರೆ.
ಇದನ್ನೂ ಓದಿ: ಜೆಇಇ-ನೀಟ್ ‘ಮನುನೀತಿ’ ಪರೀಕ್ಷೆಗಳಿದ್ದಂತೆ-ತಮಿಳು ನಟ ಸೂರ್ಯ ಟ್ವೀಟ್
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಈಗಾಗಲೇ ನೀಟ್ ಪರೀಕ್ಷೆಯ ಎಲ್ಲಾ ವಿಭಾಗಗಳ ನೀಟ್ ತಾತ್ಕಾಲಿಕ ಉತ್ತರದ ಕೀಗಳನ್ನು ಮತ್ತು ಅಭ್ಯರ್ಥಿಗಳ ನೀಟ್ ಒಎಂಆರ್ ಹಾಳೆಗಳನ್ನು ಬಿಡುಗಡೆ ಮಾಡಿದೆ. ಚಿಂದ್ವಾರ ಜಿಲ್ಲೆಯಲ್ಲಿ ಪರಾಸಿಯಾ ಪೊಲೀಸರು ತನಿಖೆ ನಡೆಸುತ್ತಿರುವ ವರದಿಯನ್ನು ಕಾಂಗ್ರೆಸ್ ಸಂಸದ ನಕುಲ್ ನಾಥ್ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
“ರಾಷ್ಟ್ರೀಯ ಪ್ರವೇಶ ಪರೀಕ್ಷೆಯಲ್ಲಿ ಇಂತಹ ಗಂಭೀರ ನಷ್ಟವನ್ನು ಹೇಗೆ ಒಪ್ಪಿಕೊಳ್ಳುವುದು. ಈ ವಿಷಯದ ಬಗ್ಗೆ ತಕ್ಷಣವೇ ಅರಿವು ಮೂಡಿಸಿ, ಗಂಭೀರ ನಷ್ಟಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ” ಎಂದು ಚಿಂದ್ವರ ಸಂಸದ ಗುರುವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ನೀಟ್ ವಿದ್ಯಾರ್ಥಿಗಳ ಆತ್ಮಹತ್ಯೆ: ಟ್ವಿಟರ್‌ನಲ್ಲಿ #Govt_killed_Neet_students ಟ್ರೆಂಡಿಂಗ್!
ಈ ಹಿಂದೆಯೂ ತಮಿಳುನಾಡಿನಲ್ಲಿ ನಿಡಿ ಪರೀಕ್ಷೆಗೆ ಹೆದರಿ ಅನೇಕ ಯುವ ಮನಸ್ಸುಗಳು ಆತ್ಮಹತ್ಯೆಯ ಮನಸ್ಸು ಮಾಡಿದ್ದವು. ಕೇವಲ ಒಂದು ಪರೀಕ್ಷೆಗೆ ಹೆದರಿ ತಮ್ಮ ಜೀವನವನ್ನು ಕೊನೆಗೊಳಿಸಿಕೊಳ್ಳುವುದು ಅತ್ಯಂತ ಹೇಡಿತನದ ಕೆಲಸ. ಹಾಗಾಗಿ ಅವರಿಗೆ ನಮ್ಮ ಸಮಾಜ ಮತ್ತು ಸರ್ಕಾರ ಮಾನಸಿಕ ಸ್ಥೈರ್ಯ ತುಂಬುವಂತಹ ಕ್ರಮಗಳನ್ನು ಕೈಗೊಂಡು ಬೆಳೆಯುವ ಮುನ್ನವೆ ಬಾಡಿಹೋಗುವ ಜೀವಗಳನ್ನು ಉಳಿಸಿಕೊಳ್ಳಬೇಕಾಗಿದೆ.
ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:
ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ
ಕರ್ನಾಟಕ ಆರೋಗ್ಯ ಸಹಾಯವಾಣಿ: 104
ಇದನ್ನೂ ಓದಿ: ಒಂದೇ ವಾರದಲ್ಲಿ ತಮಿಳುನಾಡಿನ ಐವರು ನೀಟ್ ಆಕಾಂಕ್ಷಿಗಳ ಆತ್ಮಹತ್ಯೆ!: ವಿದ್ಯಾರ್ಥಿಗಳಿಂದ ಪ್ರತಿಭಟನೆ


