ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಮೊಯ್ದೀನ್ ಬಾವಾ ಮೂಲಭೂತವಾದಿಯೊಬ್ಬರ ಬೆದರಿಕೆಗೆ ಜಗ್ಗದೆ ಮತ್ತೆ ಬಜ್ಪೆಯ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಆಡಳಿತ ಮಂಡಳಿಯ ಆಹ್ವಾನದ ಮೇರೆಗೆ ಈ ಬಾರಿಯೂ ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಮಾಜಿ ಶಾಸಕ ಮೊಯ್ದೀನ್ ಬಾವಾ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇಗುಲದ ಆಡಳಿತ ಸಮಿತಿಯ ಆಹ್ವಾನ ಮೇರೆಗೆ, ನವರಾತ್ರಿ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ತೆರಳಿದ್ದರು. ದೇಗುಲಕ್ಕೆ ತೆರಳಿದ ಬಾವಾ ಅಲ್ಲಿನ ಸಂಸ್ಕೃತಿಯಂತೆ ಕೊಪ್ಪರಿಗೆ ಸಲ್ಲಿಸಿದ್ದರು.
ಹಿಂದೂ ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿದ್ದಕ್ಕೆ, ದೇವಸ್ಥಾನದಲ್ಲಿ ಕೊಪ್ಪರಿಗೆ ಸಲ್ಲಿಸಿದ್ದಕ್ಕೆ ಹಲವು ಮೂಲಭೂತವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಹಿಂದೂ ಮೂಲಭೂತವಾದಿಯೊಬ್ಬ ಮೊಯ್ದೀನ್ ಬಾವಾರಿಗೆ ಕರೆ ಮಾಡಿ ಬೆದರಿಕೆ ಹಾಕಿದ ಘಟನೆ ನಡೆದಿತ್ತು.

ಬೆದರಿಕೆ ಹಾಕಿದಾತ, ತಾನು ಮುಂಬೈ ಮೂಲದವ ಅನಿಲ್ ಎಂದು ಪರಿಚಯಿಸಿಕೊಂಡಿದ್ದ. ತುಳುವಿನಲ್ಲೇ ಮಾತು ಆರಂಭಿಸಿ, ದೇವಸ್ಥಾನಕ್ಕೆ ಏಕೆ ಹೋಗಿದ್ದೀರೆಂದು ಪ್ರಶ್ನಿಸಿದ್ದ. ದೇವಸ್ಥಾನ ಆಡಳಿತ ಮಂಡಳಿ ಆಹ್ವಾನಿಸಿದಕ್ಕೆ ಹೋಗಿದ್ದೀನೆಂದು ತಿಳಿಸಿದ್ದಕ್ಕೆ, ಅವರು ಮರ್ಯಾದೆ ಕೊಟ್ಟು ಕರೆದ ಮಾತ್ರಕ್ಕೆ ನೀವು ಯಾಕೆ ಹೋಗಿದ್ದು, ಬರುವುದಿಲ್ಲ ಎನ್ನಬೇಕಿತ್ತು ಎಂದು ಧಮಕಿ ಹಾಕಿದ್ದ
ಇದನ್ನೂ ಓದಿ: “ಹಿಂದಿ ತೆರಿಯಾದು ಪೊಡಾ (ಹಿಂದಿ ಗೊತ್ತಿಲ್ಲ, ಹೋಗೋ)” ಟೀಶರ್ಟ್ ವೈರಲ್; ತಯಾರಿಕರಿಗೆ ಬೆದರಿಕೆ!
ಹಿಂದೂ ದೇವಸ್ಥಾನದಲ್ಲಿ ಹೋಗಿ ಕೊಪ್ಪರಿಗೆ ಇಡುವುದು ಸರಿಯಲ್ಲ ಎಂದು ಹೇಳಿದ ಆತ ಏರು ದನಿಯಲ್ಲಿ ಇದು ನೆಹರೂ ದೇಶವಲ್ಲ, ಇದು ನರೇಂದ್ರ ಮೋದಿ ದೇಶ ಗೊತ್ತಾಯಿತಲ್ಲ… ಇನ್ಮುಂದೆ ಏನಾದ್ರೂ ಗೋಮಾಂಸ ತಿಂದು ದೇವಸ್ಥಾನಕ್ಕೆ ಹೋದ್ರೆ…. ಎಂದು ಬೆದರಿಕೆ ಒಡ್ಡಿದ್ದಾನೆ. ಮೊಯ್ದಿನ್ ಬಾವಾ ಇದು ಮೋದಿಯ ದೇಶವಾಗಿರಬಹುದು. ಆದರೆ ಅವರೇನು ಕ್ರಯಕ್ಕೆ ತೆಗೆದುಕೊಂಡಿಲ್ಲ. ಇದು ನಮ್ಮ ದೇಶ ಫೋನ್ ಇಡಿ ಎಂದು ಕರೆ ಕಟ್ ಮಾಡಿದ್ದರು.
ಬೆದರಿಕೆ ಕರೆ ಮಾಡಿದ ಎನ್ನಲಾದ ಅನಿಲ್ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ದೇವಸ್ಥಾನ ಆಡಳಿತ ಮಂಡಳಿ ಮತ್ತೆ ಅಚ್ಚರಿಯ ನಡೆ ತೋರಿಸಿ, ಮಾಜಿ ಶಾಸಕ ಮೊಯ್ದೀನ್ ಬಾವಾರಿಗೆ ಮತ್ತೆ ದೇವಸ್ಥಾನಕ್ಕ ಆಹ್ವಾನ ನೀಡಿತ್ತು. ಪರ ವಿರೋಧ ಚರ್ಚೆಗಳ ನಡುವೆಯೇ ಈ ಹಿನ್ನೆಲೆ ನಿನ್ನೆ (ಅ.25)ರಂದು ಮೊಯ್ದೀನ್ ಬಾವಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಮುಂದಿನ ವರ್ಷ ನಡೆಯಲಿರುವ ಬ್ರಹ್ಮ ಕಳಶೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲು ಮೊಯ್ದೀನ್ ಬಾವಾ ಅವರಿಗೆ ಮತ್ತೆ ಆಹ್ವಾನ ನೀಡಲಾಯಿತು.
ಬೆದರಿಕೆ ಕರೆ ಬಗ್ಗೆ ಮಾತನಾಡಿದ ಮಾಜಿ ಶಾಸಕರ ಮೊಯ್ದೀನ್ ಬಾವಾ, “ಬೆದರಿಕೆ ಕರೆ ಮಾಡಿ ಸಮಾಜದಲ್ಲಿ ಅಶಾಂತಿ ಎಬ್ಬಿಸುವವರಿಗೆ ದೇವರು ಒಳ್ಳೇಯ ಬುದ್ದಿ ನೀಡಲಿ” ಎಂದು ಹಾರೈಸಿದ್ದಾರೆ.


