ಇಂದು ಕರ್ನಾಟಕದ 2 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಶಿರಾ ಮತ್ತು ಆರ್‌ಆರ್ ನಗರದಲ್ಲಿ 9 ಗಂಟೆಯ ವರದಿಯ ಪ್ರಕಾರ ಅತ್ಯಂತ ಕಡಿಮೆ ಮತದಾನ ನಡೆದಿದೆ ಎಂದು ವರದಿಯಾಗಿದೆ. ಆರ್‌ಆರ್ ನಗರದಲ್ಲಿ ಶೇ .6.27, ಸಿರಾದಲ್ಲಿ ಶೇ .8.25 ಮತದಾನ ದಾಖಲಾಗಿದೆ.
ಆದರೆ ಆರ್‌ಆರ್ ನಗರ ವಿಧಾನಸಭಾ ಕ್ಷೇತ್ರದ ಕೆಲವು ಮತಗಟ್ಟೆಗಳಲ್ಲಿ ಮಧ್ಯಾಹ್ನ 12 ಗಂಟೆ ವೇಳೆಗೆ ಮತದಾನ ಚುರುಕುಗೊಂಡಿದೆ. ಮತದಾರರು ತಮ್ಮ ಹಕ್ಕು ಚಲಾಯಿಸಲು ಸರದಿಯಲ್ಲಿ ನಿಂತ ದೃಶ್ಯ ಕಂಡುಬಂದಿದೆ. ಮಧ್ಯಾಹ್ನದ ಬಳಿಕ ಮತ್ತುಷ್ಟು ಚುರುಕುಗೊಳ್ಳುವ ಸಾಧ್ಯತೆ ಇದೆ.
ಪ್ರತೀ ಮತಗಟ್ಟೆಯಲ್ಲೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದ ನಡುವೆ ಈ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಮತಗಟ್ಟೆಯಲ್ಲಿ ಬೂತ್‌ಗಳನ್ನು ಸ್ವಚ್ಚಗೊಳಿಸುವುದು, ತಾಪಮಾನವನ್ನು ಪರಿಶೀಲಿಸುವುದು, ಮತದಾರರಿಗೆ ಕೈಗವಸುಗಳನ್ನು ಒದಗಿಸುವುದು, ಸ್ಯಾನಿಟೈಸರ್‌ಗಳನ್ನು ನೀಡುವುದು ಸೇರಿದಂತೆ ಹಲವು ವ್ಯವಸ್ಥೆಗಳನ್ನು ಮಾಡಲಾಗಿದೆ.
ಕೇತ್ರದಲ್ಲಿ ಒಟ್ಟು 678 ಮತಗಟ್ಟೆಗಳಿದ್ದು, ಅದರಲ್ಲಿ 82 ಮತಗಟ್ಟೆಗಳು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಮತದಾನ ಪ್ರಕ್ರಿಯೆ ಸುಸೂತ್ರವಾಗಿ ನಡೆಸಲು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ.
112 ಮೊಬೈಲ್ ಸ್ಕ್ವಾಡ್ ನಿಯೋಜಿಸಲಾಗಿದ್ದು ಈ ತಂಡವು ಪ್ರತಿ ಮತಗಟ್ಟೆಗೆ ತೆರಳಿ ಬಂದೋಬಸ್ತ್ ಹಾಗೂ ಸ್ಥಿತಿಗತಿ ಬಗ್ಗೆ ನಿಗಾ ಇಡಲಿದೆ. ಪೊಲೀಸರ ಗಸ್ತು ಹೆಚ್ಚಿಸಲು 32 ಹೊಯ್ಸಳ ವಾಹನ ಮತ್ತು 91 ಚೀತಾಗಳನ್ನು ಯೋಜಿಸಲಾಗಿದೆ. ಆರ್ ಆರ್ ನಗರ ಅತಿ ಸೂಕ್ಷ್ಮ ಕ್ಷೇತ್ರವಾಗಿದ್ದು ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಸಲುವಾಗಿ 2563 ಪೊಲೀಸರನ್ನು ನಿಯೋಜಿಸಲಾಗಿದೆ.
ಕ್ಷೇತ್ರದಲ್ಲಿ ಮೂವರು ಡಿಸಿಪಿಗಳು, 8 ಎಸಿಪಿ, 30 ಇನ್ಸ್‌ಪೆಕ್ಟರ್, 94 ಪಿಎಸ್ಐ, 185 ಎಎಸ್ಐ, 1547 ಕಾನ್‌ಸ್ಟೆಬಲ್ ಗಳು, 699 ಗೃಹ ರಕ್ಷಕ ಸಿಬ್ಬಂದಿ, 19 ಕೆಎಸ್ಆರ್ ಪಿ, 20 ಸಿಎಆರ್ ತುಕಡಿ, 3 ಸಿಎಪಿಎಫ್ ಪ್ಯಾರಾ ಮಿಲಿಟರಿ ತುಕಡಿ ನಿಯೋಜಿಸಲಾಗಿದೆ.
ಇಲ್ಲಿಯವರೆಗೆ ಎರಡೂ ಕ್ಷೇತ್ರಗಳಲ್ಲಿ ಮತದಾನ ಶಾಂತಿಯುತವಾಗಿಯೇ ನಡೆದಿದೆ. ಇದೀಗ ಬಂದ ವರದಿಯ ಪ್ರಕಾರ ನಾಗರಬಾವಿಯ ಮತಗಟ್ಟೆಸಂಖ್ಯೆ 290ರಲ್ಲಿ ಬಿಜೆಪಿ ಕಾರ್ಯಕರ್ತರು ಕೇಸರಿ ಬಟ್ಟೆ ಧರಿಸಿಕೊಂಡು ಮತದಾನ ಮಾಡಲು ಬಂದಿದ್ದರಿಂದ, ಕಾಂಗ್ರೆಸ್ ಮತ್ತು ನಿಜೆಪಿ ನಾಯಕರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ನಂತರ ಪೊಲೀಸರು ಬಂದು ಇದನ್ನು ತಿಳಿಗೊಳಿಸಿದರು.
ಇದನ್ನೂ ಓದಿ: ಪಕ್ಷಾಂತರದಿಂದ ಆರ್‌ಆರ್ ನಗರ ಉಪಚುನಾವಣೆ: ರಾಜಕೀಯ ದಿಕ್ಕು ಬದಲಿಸುತ್ತಾ?
ಆರ್.ಆರ್.ನಗರದಲ್ಲಿ, 1,200 ಕ್ಕೂ ಹೆಚ್ಚು ಮತದಾರರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಚುನಾವಣಾ ಸಿಬ್ಬಂದಿ ಅವರನ್ನು ಪ್ರತ್ಯೇಕವಾಗಿ ಸಂಪರ್ಕಿಸುತ್ತಿದ್ದು, ಅವರು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಸಂಜೆ 5 ಗಂಟೆ ನಂತರ ಸೋಂಕಿತರಿಗೆ ಮತದಾನ ಮಾಡಲು ಸಹ ವ್ಯವಸ್ಥೆ ಮಾಡಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ತಮ್ಮ ಟ್ವೀಟ್‌ನಲ್ಲಿ ಮತದಾರರು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಬೇಕು ಎಂದು ಕೋರಿದ್ದಾರೆ.
ಇದನ್ನೂ ಓದಿ: ಶಿರಾ ಉಪಚುನಾವಣೆ: ಮೂಲ VS ವಲಸೆ ಬಿಜೆಪಿಗರ ನಡುವೆ ಬಿರುಕು! ಯಾರ ಕೈಹಿಡಿಯಲಿದ್ದಾನೆ ಮತದಾರ
ಸಿರಾದಲ್ಲಿ ಡಾ.ರಾಜೇಶ್ ಗೌಡರನ್ನು ಬಿಜೆಪಿ ಕಣಕ್ಕಿಳಿಸಿದ್ದು, ಕಾಂಗ್ರೆಸ್ ಪಕ್ಷವು ತನ್ನ ಹಿರಿಯ ನಾಯಕ ಮತ್ತು ಮಾಜಿ ಸಚಿವ ಟಿ ಬಿ ಜಯಚಂದ್ರ ಅವರನ್ನು ಕಣಕ್ಕಿಳಿಸಿದೆ. ಸಹಾನುಭೂತಿಯ ಅಲೆಯನ್ನು ಸದುಪಯೋಗಪಡಿಸಿಕೊಳ್ಳುವ ಪ್ರಯತ್ನದಲ್ಲಿ ಜೆಡಿಎಸ್ ಮಾಜಿ ಶಾಸಕ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರನ್ನು ಕಣಕ್ಕಿಳಿಸಿದೆ.
ಆರ್.ಆರ್.ನಗರದಲ್ಲಿ ಜೆಡಿಎಸ್‌ನಿಂದ ವಿ.ಕೃಷ್ಣಮೂರ್ತಿ ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರವಾಗಿದ್ದ ಮುನಿರತ್ನ ಈ ಭಾರಿ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಐಎಎಸ್ ಅಧಿಕಾರಿ ದಿವಂಗತ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಕಣದಲ್ಲಿದ್ದಾರೆ.
ಆರ್‌ಆರ್ ನಗರದಲ್ಲಿ ಮತಚಲಾವಣೆ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, “ಎಲ್ಲರೂ ಹೊರಗೆ ಬಂದು ಮತಚಲಾವಣೆ ಹಾಕುವುದರ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು. ಚುನಾವಣಾ ಆಯೋಗವು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ” ಎಂದು ಹೇಳಿದರು.
ಆರ್.ಆರ್.ನಗರದಲ್ಲಿ 4.6 ಲಕ್ಷಕ್ಕೂ ಹೆಚ್ಚು ಮತದಾರರು ಮತ್ತು ಸಿರಾದಲ್ಲಿ 2.3 ಲಕ್ಷ ಮತದಾರರಿದ್ದಾರೆ. ಮತದಾನ ಎಣಿಕೆ ಮತ್ತು ಫಲಿತಾಂಶ ನವೆಂಬರ್ 10 ಕ್ಕೆ ಹೊರಬೀಳಲಿದೆ.
ಇದನ್ನೂ ಓದಿ: ಉಪಚುನಾವಣೆ: ಮೂರೂ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿದೆ; ಯಾಕೆ?


