“ಛತ್ತಿಸ್‌ಘಡದಲ್ಲಿ ರೈತರು ಒಂದು ಕ್ವಿಂಟಲ್ ಭತ್ತಕ್ಕೆ 2,500 ರೂಪಾಯಿ ಪಡೆಯುತ್ತಿದ್ದಾರೆ. ಆದರೆ ಬಿಹಾರದ ರೈತರಿಗೆ ಕೇವಲ 700 ರೂಪಾಯಿ ಮಾತ್ರ ಸಿಗುತ್ತದೆ. ಯಾಕೆ..? ನಿಮ್ಮ ಬಳಿ ನೀರು, ವಿದ್ಯುತ್ ಮತ್ತು ಹೊಲ ಎಲ್ಲಾ ಸೌಲಭ್ಯಗಳು ಇವೆಯೇ..? ಕನಿಷ್ಟ ಬೆಂಬಲ ಬೆಲೆ ಬಿಡಿ, ಹೋಗಲಿ ನಿಮಗೆ ಒಂದು ಕ್ವಿಂಟಾಲ್ ಭತ್ತಕ್ಕೆ ಒಂದು ಸಾವಿರವಾದರೂ ಸಿಗುತ್ತಿದೆಯೇ..?” ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಬಿಹಾರ ಚುನಾವಣೆಯ ಮೂರನೇ ಹಂತದ ಚುನಾವಣಾ ಪ್ರಚಾರದಲ್ಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಹಾರದ ಮತದಾರರು ನಿತೀಶ್ ಜಿ ಮತ್ತು ಮೋದಿಯವರಿಗೆ ಮತ ನೀಡಿ ತಪ್ಪು ಮಾಡಿದ್ದಿರಿ. ಈಗ ಸರಿಪಡಿಸಿಕೊಳ್ಳಲು ಇರುವ ಅವಕಾಶ ಈ ಚುನಾವಣೆ ಎಂದಿದ್ದಾರೆ.
ಬಿಹಾರದ ಕತಿಹಾರ್‌ನಲ್ಲಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪಕ್ಕದ ಕಾಂಗ್ರೆಸ್ ಆಡಳಿತದ ಛತ್ತೀಸ್‌ಘಡವನ್ನು ಉದಾಹರಣೆಯಾಗಿ ನೀಡುವ ಮೂಲಕ ಬಿಹಾರದ ರೈತರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದಿದ್ದಾರೆ.
“ಛತ್ತೀಸ್‌ಘಡದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಅಲ್ಲಿನ ರೈತರು ಅಷ್ಟು ಬೆಲೆ ಪಡೆಯುವಾಗ, ಬಿಹಾರದ ರೈತರಾದ ನೀವು ಇಷ್ಟು ಕಡಿಮೆ ಬೆಲೆ ಪಡೆಯಲು ಯಾವ ತಪ್ಪು ಮಾಡಿದ್ದೀರಿ..? ಎಂದು ಪ್ರಶ್ನಿಸಿದ ರಾಹುಲ್, “ನೀವು ನಿತೀಶ್ ಜಿ ಮತ್ತು ಮೋದಿ ಜಿ ಅವರಿಗೆ ಮತ ಹಾಕಿದ್ದೀರಿ. ಅದೇ ನಿಮ್ಮ ತಪ್ಪು. ಈಗ ತಪ್ಪನ್ನು ಸರಿಪಡಿಸುವ ಸಮಯ ಬಂದಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸುಳ್ಳು ಹೇಳುವುದರಲ್ಲಿ ಪ್ರಧಾನಿಗೆ ಪೈಪೋಟಿ ನೀಡಲಾರೆವು; ರಾಹುಲ್ ಗಾಂಧಿ
#WATCH: In Chhattisgarh farmers get Rs 2,500 per quintal for paddy, here you get Rs 700. What mistake did you make? You voted for Nitish ji and Modi ji. Now is the time to rectify the mistake: Congress leader Rahul Gandhi in Katihar#BiharElections pic.twitter.com/ga24GQ5Lxl
— ANI (@ANI) November 3, 2020
ಇದಕ್ಕೂ ಮೊದಲು ಎರಡನೇ ಹಂತದ ಮತದಾನಕ್ಕೆ ಮುನ್ನಾ ಬೆಳಗ್ಗೆಯೇ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ‘ತಪ್ಪದೇ ಎಲ್ಲರೂ ಮತದಾನ ಮಾಡಿ. ಇದರಿಂದ ರಾಜ್ಯದಲ್ಲಿ ನಿಮ್ಮ ಆಯ್ಕೆಯ ಸರ್ಕಾರ ರಚನೆಯಾಗಲಿದೆ’ ಎಂದು ಬಿಹಾರದ ಮತದಾರರಲ್ಲಿ ಮನವಿ ಮಾಡಿದ್ದರು.
ಜೊತೆಗೆ ಇಂದು ನಾನು ಬಿಹಾರದ ಕೋಡಾ ಮತ್ತು ಕಿಷನ್‌ಗಂಜ್‌ನಲ್ಲಿ, ನಿರುದ್ಯೋಗ ಸಮಸ್ಯೆ, ಕೃಷಿಕರ ಸಮಸ್ಯೆಗಳು ಮತ್ತು ದುರ್ಬಲ ಆರ್ಥಿಕತೆ ಕುರಿತು ಮಾತನಾಡಲಿದ್ದೇನೆ’ ಎಂದೂ ಅವರು ತಿಳಿಸಿದ್ದರು. ತಮ್ಮ ರ್‍ಯಾಲಿಗಳಲ್ಲಿ ಈ ವಿಷಯಗಳನ್ನೇ ಚರ್ಚಿಸಿದ್ದಾರೆ.
ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಪಕ್ಷಗಳ ನೇತೃತ್ವದ ಎನ್‌ಡಿಎಗೆ ಆರ್‌ಜೆಡಿಯ ಮುಖ್ಯಸ್ಥ ತೇಜಸ್ವಿ ಯಾದವ್ ಮತ್ತು ಕಾಂಗ್ರೆಸ್ ಜೊತೆಗೆ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದಾರೆ. ಸದ್ಯ ಬಿಹಾರದಲ್ಲಿ 2 ಹಂತದ ಮತದಾನ ಪ್ರಕ್ರಿಯೆ ನಡೆದಿದ್ದು, ಕೊನೆಯ ಹಂತದ ಮತದಾನ ನವೆಂಬರ್ 7 ರಂದು ನಡೆಲಿದೆ. ನವೆಂಬರ್ 10 ರಂದು ಫಲಿತಾಂಶ ಹೊರಬೀಳಲಿದೆ.


