ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಮ್ಮ ರಾಜ್ಯವನ್ನು “ರಾಷ್ಟ್ರ ವಿರೋಧಿ” ಎಂದು ಕರೆದವರ ಮೇಲೆ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ದೇಶದ ಶಾಂತಿಯನ್ನು ಕಾಪಾಡಲು, ದೇಶ ರಕ್ಷಣೆಗಾಗಿ ಚೀನಾ ಮತ್ತು ಪಾಕಿಸ್ತಾನದ ಗಡಿಗಳಲ್ಲಿ ಸಾವಿರಾರು ಪಂಜಾಬಿ ಸೈನಿಕರು ಸೇವೆ ಸಲ್ಲಿಸುತ್ತಿದ್ದಾರೆ ಎಂದಿದ್ದಾರೆ.
ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ಧ, ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದಲ್ಲಿ ಪಂಜಾಬ್‌ನ ಶಾಸಕರು ಪ್ರಾರಂಭಿಸಿರುವ ಪ್ರತಿಭಟನೆಯಲ್ಲಿ ಅವರು ಮಾತನಾಡಿದ್ದಾರೆ.
“ದಯವಿಟ್ಟು, ದೇಶದ ಶಾಂತಿಯನ್ನು ಭಂಗಗೊಳಿಸಲು ಪಂಜಾಬ್ ಹೊರಟಿದೆ ಎಂದು ಭಾವಿಸಬೇಡಿ. ಅದು ನಿಜವಲ್ಲ. ದೇಶದ ಶಾಂತಿಯನ್ನು ಕಾಪಾಡಲು ನಾವಿದ್ದೇವೆ. ನಾವು ಈ ಹಿಂದೆ ಹಲವು ಬಾರಿ ದೇಶಕ್ಕಾಗಿ ರಕ್ತ ಹರಿಸಿದ್ದೇವೆ ಮತ್ತು ಭವಿಷ್ಯದಲ್ಲಿ ಕೂಡ ನಾವು ದೇಶಕ್ಕಾಗಿ ರಕ್ತ ಹರಿಸಲು, ಜೀವ ನೀಡಲು ಎಂದಿಗೂ ನಾಚಿಕೆಪಡಿಸುವುದಿಲ್ಲ ’ಎಂದು ಅಮರಿಂದರ್ ಸಿಂಗ್ ಹೇಳಿದರು.
ಇದನ್ನೂ ಓದಿ: ಕೃಷಿ ಕಾಯ್ದೆಗಳ ಕುರಿತು ಚರ್ಚೆಗೆ ನಿರಾಕರಣೆ: ರಾಷ್ಟ್ರಪತಿಗಳ ವಿರುದ್ಧ ಪ್ರತಿಭಟನೆಗೆ ಮುಂದಾದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್
ಕೇಂದ್ರದ ಕೃಷಿ ಕಾಯ್ದೆಗಳಿಗೆ ಸೆಡ್ಡು ಹೊಡೆದು ಪಂಜಾಬ್‌ನಲ್ಲಿ ಹೊಸ ಕಾನೂನುಗಳನ್ನು ಅಮರಿಂದರ್ ಸಿಂಗ್ ಅಂಗೀಕರಿಸಿದ್ದರು. ವಿವಾದಿತ ಮೂರು ಕೃಷಿ ಕಾಯ್ದೆಗಳ ಕುರಿತು ಚರ್ಚೆಗೆ ಅವಕಾಶ ನೀಡದೆ, ರಾಜ್ಯ ವಿಧಾನಸಭೆ ಅಂಗೀಕರಿಸಿದ ಮೂರು ಕೃಷಿ ಮಸೂದೆಗಳ ಕುರಿತು ಸಿಎಂ ನೇತೃತ್ವದ ರಾಜ್ಯದ ನಿಯೋಗವನ್ನು ಭೇಟಿ ಮಾಡಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
“ಪಂಜಾಬ್ ರಾಷ್ಟ್ರ ವಿರೋಧಿ ಚಟುವಟಿಕೆ ಮಾಡುತ್ತದೆ ಎಂದು ಎಂದಿಗೂ ಯೋಚಿಸಬೇಡಿ. ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನ, ಮೂರು ಡ್ರೋನ್‌ಗಳ ಮೂಲಕ ಮದ್ದುಗುಂಡುಗಳನ್ನು ಹಾಕಿ, ನಮ್ಮನ್ನು ಪ್ರಚೋದಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಈ ಶಸ್ತ್ರಾಸ್ತ್ರಗಳು ಅಪರಾಧಿಗಳು ಮತ್ತು ರಾಷ್ಟ್ರ ವಿರೋಧಿಗಳ ಕೈಗೆ ಹೋಗುವ ಸಾಧ್ಯತೆಯಿದೆ. ನಾವು ಈ ವಿಷಯಗಳನ್ನು ಮತ್ತು ನಮ್ಮ ಆತಂಕವನ್ನು ಕೇಂದ್ರ ಸರ್ಕಾರದೊಂದಿಗೆ ಹಂಚಿಕೊಂಡಿದ್ದೇವೆ. ನಮ್ಮದು ಗಡಿ ರಾಜ್ಯವಾದ್ದರಿಂದ ಪಂಜಾಬ್‌ನಲ್ಲಿ ನಾವು ಯಾವುದೇ ತೊಂದರೆ ಬಯಸುವುದಿಲ್ಲ. ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದು ದೇಶದ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ ”ಎಂದು ಅಮರಿಂದರ್ ಸಿಂಗ್ ಹೇಳಿದರು.
“ಮಸೂದೆಗಳು ರಾಜಭವನ ತಲುಪಿವೆ. ಈ ಮಸೂದೆಗಳನ್ನು ರಾಜ್ಯಪಾಲರು ಏಕೆ ತಡೆಹಿಡಿಯುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಅವರಿಗೆ ಇದರಲ್ಲಿ ಯಾವುದೇ ಪಾತ್ರವಿಲ್ಲ. ರಾಜ್ಯಪಾಲರು ಕೇವಲ ಪೋಸ್ಟ್ ಬಾಕ್ಸ್ ಆಗಿದ್ದು, ಮಸೂದೆಯನ್ನು ರಾಷ್ಟ್ರಪತಿಗೆ ರವಾನಿಸುವುದು ಮಾತ್ರ ಅವರ ಕರ್ತವ್ಯವಾಗಿದೆ. ಅವರು ಯಾವುದೇ ಪ್ರತಿಕ್ರಿಯೆಗಳನ್ನು ನೀಡಬೇಕಾಗಿಲ್ಲ”ಎಂದು ಸಿಎಂ ಹೇಳಿದರು.
ಇತ್ತೀಚಿನ ಕೃಷಿ ಮಸೂದೆಗಳ ವಿರುದ್ಧ ಕಾಂಗ್ರೆಸ್ ಸೇರಿದಂತೆ ಇತರ ಹಲವು ವಿರೋಧ ಪಕ್ಷಗಳು, ಹಲವಾರು ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಇವು ರೈತರ ಹಿತಾಸಕ್ತಿಗೆ ಧಕ್ಕೆ ತರುತ್ತವೆ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಪ್ರಯೋಜನ ನೀಡುತ್ತವೆ ಎಂದು ಆರೋಪಿಸಿದ್ದಾರೆ. ಈ ಆರೋಪವನ್ನು ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರ ನಿರಾಕರಿಸಿದೆ.


