ಉತ್ತರ ಕರ್ನಾಟಕದ ನೆರೆಪೀಡಿತ ಜಿಲ್ಲೆಗಳ ಕರವೇ ಜಿಲ್ಲಾಧ್ಯಕ್ಷರ ಜತೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಸಭೆ ನಡೆಸಿದ್ದು, 9 ಜಿಲ್ಲೆಗಳಿಂದ ಪ್ರವಾಹದ ಪರಿಸ್ಥಿತಿಯನ್ನು ಕುರಿತು ಚರ್ಚಿಸಲಾಗಿದೆ. ಪ್ರತಿ ಜಿಲ್ಲೆಯ ಕರವೇ ಅಧ್ಯಕ್ಷರು ತಮ್ಮ ಜಿಲ್ಲೆಯ ವಿವರಗಳನ್ನು ಸಲ್ಲಿಸಿದರು.
ಈ ವಿವರಗಳನ್ನೆಲ್ಲಾ ಆಲಿಸಿದ ನಂತರ ಟಿ.ಎ.ನಾರಾಯಣಗೌಡರು, “ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಆಗಿರುವ ಬೆಳೆಹಾನಿ, ಜೀವಹಾನಿ, ಜಾನುವಾರುಗಳ ಮರಣ ಇತ್ಯಾದಿಗಳ ಕುರಿತು ತಾವೆಲ್ಲರೂ ಅಂಕಿಅಂಶಗಳ ಸಮೇತ ಮಾಹಿತಿ ನೀಡಿರುತ್ತೀರಿ. ಸುಮಾರು 25,000 ಕೋಟಿ ರುಪಾಯಿಗಳಷ್ಟು ನಷ್ಟ ಸಂಭವಿಸಿದೆ ಎಂದು ಸ್ವತಃ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ಆದರೆ ವಾಸ್ತವವಾಗಿ ಅದಕ್ಕಿಂದ ದುಪ್ಪಟ್ಟು, ಮೂರುಪಟ್ಟು ನಷ್ಟ ಸಂಭವಿಸಿದೆ ಎಂಬುದು ನಿಮ್ಮ ಮಾತುಗಳಿಂದ ಅರ್ಥವಾಗುತ್ತಿದೆ. ರಾಜ್ಯ ಸರ್ಕಾರದ ಹೇಳಿಕೆಯ ಪ್ರಕಾರ ಇದುವರೆಗೆ ಕೇವಲ 4.5 ಕೋಟಿ ರುಪಾಯಿಗಳಷ್ಟು ಪರಿಹಾರ ವಿತರಿಸಲಾಗಿದೆ. ಆಗಿರುವ ನಷ್ಟಕ್ಕೂ ವಿತರಿಸಲಾಗಿರುವ ಪರಿಹಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕೊಟ್ಟಿರುವ ಪರಿಹಾರದಲ್ಲೂ ರಾಜಕಾರಣಿಗಳು, ಪುಡಾರಿಗಳು ತಾರತಮ್ಯ ಎಸಗಿರುವುದನ್ನು ನೀವು ಗಮನಕ್ಕೆ ತಂದಿರುತ್ತೀರಿ. ಇದೆಲ್ಲವನ್ನೂ ಗಮನಿಸಿದರೆ ರಾಜ್ಯ ಸರ್ಕಾರ ಎಂಬುದು ಅಸ್ತಿತ್ವದಲ್ಲಿ ಇದೆಯೇ ಎಂಬ ಅನುಮಾನ ಮೂಡುತ್ತಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ತರಲು ರಾಜ್ಯ ಸರ್ಕಾರ ದಯನೀಯವಾಗಿ ವಿಫಲವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ನೆರೆಪರಿಹಾರ ತರುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಕೇಂದ್ರದಲ್ಲೂ ರಾಜ್ಯದಲ್ಲೂ ಒಂದೇ ಪಕ್ಷದ ಅಧಿಕಾರವಿದ್ದರೆ ರಾಜ್ಯ ಉದ್ಧಾರವಾಗುತ್ತದೆ ಎಂದು ಚುನಾವಣೆಗಳಲ್ಲಿ ನಂಬಿಸಲಾಗಿತ್ತು. ಆದರೆ ಈಗ ಆಗಿರುವುದೇನು? ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಜನಜಾಗೃತಿ ಮೂಡಿಸಬೇಕಿದ್ದ, ಚಳವಳಿ ರೂಪಿಸಬೇಕಿದ್ದ, ನೊಂದಜನರಿಗೆ ಪರಿಹಾರ ಕೊಡಿಸಬೇಕಿದ್ದ ವಿರೋಧಪಕ್ಷಗಳೂ ಸಹ ಮೌನಕ್ಕೆ ಶರಣಾಗಿವೆ. ಎಲ್ಲ ರಾಜಕೀಯ ಪಕ್ಷಗಳೂ ಉಪಚುನಾವಣೆಗಳ ಅಬ್ಬರದಲ್ಲಿ ಕಳೆದುಹೋಗಿದ್ದಾರೆ. ಸಂತ್ರಸ್ಥರಿಗೆ ಈಗ ಆಡಳಿತ ಪಕ್ಷವೂ ಇಲ್ಲ, ವಿರೋಧಪಕ್ಷವೂ ಇಲ್ಲ ಎಂಬಂತಾಗಿದೆ. ಕರೋನಾ ರೋಗದ ಹೆಸರಿನಲ್ಲಿ ಚಳವಳಿಗಳನ್ನು ಹತ್ತಿಕ್ಕುವ, ಅನುಮತಿಯನ್ನೇ ನೀಡದ ಉದಾಹರಣೆಗಳೂ ಇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪ್ರವಾಹ: ಕಳೆದ ಬಾರಿಗಿಂತ ಹೆಚ್ಚು ಬೆಳೆ ನಷ್ಟ; ಕಡಿಮೆ ಪರಿಹಾರ ಕೇಳಿದ ಬಿಜೆಪಿ- ಸಿದ್ದು ಆಕ್ರೋಶ
“ಇಂಥ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಿರ್ಣಾಯಕ ಹೋರಾಟವನ್ನು ಸಂಘಟಿಸಬೇಕಿದೆ. ಭಾರತ ಒಕ್ಕೂಟದಲ್ಲಿ ಕರ್ನಾಟಕವೆಂಬ ರಾಜ್ಯ ಇದೆಯೋ ಇಲ್ಲವೋ ಎಂದು ನಾವು ಅಧಿಕಾರಸ್ಥ ರಾಜಕಾರಣಿಗಳನ್ನು ಪ್ರಶ್ನಿಸಬೇಕಿದೆ. ನಾವು ಕರ್ನಾಟಕದ ಜನರೂ ಈ ದೇಶದ ಪ್ರಜೆಗಳು ಎಂಬುದನ್ನು ಅವರಿಗೆ ನೆನಪಿಸಬೇಕಿದೆ. ಈ ಹಿನ್ನೆಲೆಯಲ್ಲಿ ನೆರೆಪೀಡಿತ ಜಿಲ್ಲೆಗಳ ಕರವೇ ಜಿಲ್ಲಾಧ್ಯಕ್ಷರುಗಳ ನಿಯೋಗವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಕರೆದೊಯ್ಯಲಿದ್ದೇನೆ. ನಮ್ಮ ಅಹವಾಲುಗಳನ್ನು ಸರ್ಕಾರದ ಮುಂದೆ ಇಡೋಣ. ಪರಿಸ್ಥಿತಿ ಹೀಗೇ ಮುಂದುವರೆದರೆ ಇಡೀ ರಾಜ್ಯಾದ್ಯಂತ ದೊಡ್ಡ ಪ್ರಮಾಣದ ಹೋರಾಟವನ್ನು ಸಂಘಟಿಸೋಣ” ಎಂದು ಕರೆ ನೀಡಿದರು.
ಗದಗ, ಕಲಬುರ್ಗಿ, ಬೀದರ್, ವಿಜಯಪುರ, ಯಾದಗಿರಿ, ರಾಯಚೂರು, ಧಾರವಾಡ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಕರವೇ ಅಧ್ಯಕ್ಷರುಗಳು ತಮ್ಮ ಜಿಲ್ಲೆಯಲ್ಲಿ ಆಗಿರುವ ಪ್ರವಾಹದ ನಷ್ಟದ ಕುರಿತು ಮತ್ತು ತಾವು ಜಿಲ್ಲೆಯಲ್ಲಿ ಇದುವರೆಗೂ ತೆಗೆದುಕೊಂಡಿರುವ ಮತ್ತು ತೆಗೆದುಕೊಳ್ಳುವ ಕ್ರಮಗಳ ಕುರಿತು ಸಲ್ಲಿಸಿರುವ ಮಾಹಿತಿ ಇಲ್ಲಿದೆ.
ಹನುಮಂತ ಅಬ್ಬಿಗೇರಿ, ಗದಗ ಜಿಲ್ಲಾ ಕರವೇ ಜಿಲ್ಲಾಧ್ಯಕ್ಷರು;
ಗದಗ ಜಿಲ್ಲೆಯಲ್ಲಿ ನರಗುಂದ ಮತ್ತು ರೋಣ ತಾಲ್ಲೂಕುಗಳಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ರೈತರು, ಸಾಮಾನ್ಯ ಜನರು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ನಾಲ್ಕು ಜನರು ಜೀವವನ್ನೂ ಕಳೆದುಕೊಂಡಿದ್ದಾರೆ. ನರಗುಂದ ತಾಲ್ಲೂಕಿನ 8 ಗ್ರಾಮಗಳು, ರೋಣ ತಾಲ್ಲೂಕಿನ 9 ಗ್ರಾಮಗಳು ಸಂಪೂರ್ಣ ನಾಶವಾಗಿವೆ. ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಘಟಕ ನೆರೆ ಬಂದ ನಂತರ ಸಂತ್ರಸ್ಥರಿಗೆ ಬೇಕಾದ ಅಗತ್ಯ ನೆರವುಗಳನ್ನು ನೀಡುತ್ತ ಬಂದಿದೆ. ಜಾನುವಾರುಗಳಿಗೆ ಮೇವು ವಿತರಣೆಯೂ ಸೇರಿದಂತೆ, ನಮ್ಮ ಕೈಲಾದಷ್ಟು ಸಹಾಯಗಳನ್ನು ಮಾಡುತ್ತ ಬಂದಿದ್ದೇವೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜತೆ ಮಾತನಾಡಿದ್ದೇವೆ ಮತ್ತು ಒತ್ತಡ ಹೇರುವ ಕೆಲಸವನ್ನು ಮಾಡುತ್ತ ಬಂದಿದ್ದೇವೆ.
ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ: 35 ಸಾವಿರ ಜನರ ಸ್ಥಳಾಂತರ
ಮಹೇಶ್ ಕಾಶಿ, ಕಲ್ಬುರ್ಗಿ ಜಿಲ್ಲಾ ಕರವೇ ಅಧ್ಯಕ್ಷರು;
ನೆರೆಯಿಂದಾಗಿ ಜಿಲ್ಲೆಯ ಸುಮಾರು ನೂರು ಹಳ್ಳಿಗಳು ನೀರುಪಾಲಾಗಿವೆ. ಹಳ್ಳಿಗಳು ಮಾತ್ರವಲ್ಲ, ಪಟ್ಟಣಗಳಲ್ಲೂ ಪ್ರವಾಹದ ನೀರು ನುಗ್ಗಿ ಸಾಮಾನ್ಯ ಜನರು ತೀವ್ರ ನಷ್ಟ ಅನುಭವಿಸಿದ್ದಾರೆ. 40,000 ಹೆಕ್ಟೇರ್ ಪ್ರದೇಶದ ಕೃಷ್ಟಿ ಮತ್ತು ತೋಟಗಾರಿಕಾ ಬೆಳೆ ನಷ್ಟವಾಗಿದೆ. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಸ ಮಾಡುತ್ತಿಲ್ಲ. ನಮ್ಮ ಜಿಲ್ಲೆಗೆ ಒಬ್ಬ ಉಸ್ತುವಾರಿ ಸಚಿವರು ಇದ್ದಾರೋ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ. ಆಳುವ ಪಕ್ಷದ ಶಾಸಕರು ಬಸವಕಲ್ಯಾಣದಲ್ಲಿ ನಡೆಯಬೇಕಿರುವ ಚುನಾವಣೆಗೆ ಹೆಚ್ಚು ಗಮನಹರಿಸುತ್ತಿದ್ದಾರೆ. ಹೀಗಾದಲ್ಲಿ ಸಂತ್ರಸ್ಥರ ನೋವಿಗೆ ಸ್ಪಂದಿಸುವವರು ಯಾರು? ರಾಜ್ಯಾಧ್ಯಕ್ಷರು ಒಂದು ರಾಜ್ಯಮಟ್ಟದ ಚಳವಳಿಗೆ ಕರೆ ನೀಡಿದರೆ ಉತ್ತರ ಕರ್ನಾಟಕ ಭಾಗದ ಸಾವಿರಾರು ಜನರು ಅದರಲ್ಲಿ ಪಾಲ್ಗೊಳ್ಳುತ್ತೇವೆ.
ಸೋಮುನಾಥ ಮುಧೋಳ, ಬೀದರ್ ಜಿಲ್ಲಾ ಕರವೇ ಅಧ್ಯಕ್ಷರು;
ಪ್ರವಾಹದಿಂದ ಬೀದರ ಜಿಲ್ಲೆಯಲ್ಲಿ ಹದಿನೈದರಿಂದ ಇಪ್ಪತ್ತು ಸಾವಿರ ಹೆಕ್ಟೇರ್ ಕೃಷಿ ಜಮೀನು ಹಾಳಾಗಿದೆ. ಸೋಯಾ ಬೀಜವನ್ನು ರಾಶಿ ಮಾಡಿ ಇಡಲಾಗಿರುವ ಗೂಡುಗಳು ಮಳೆಯಿಂದ ಕೊಚ್ಚಿ ಹೋಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂಥ ಸ್ಥಿತಿ ನಮ್ಮ ಜಿಲ್ಲೆಯದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬೇರೆ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರೂ ನಮ್ಮ ಜಿಲ್ಲೆಗೆ ಬರಲೇ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಬರುವ ನಲವತ್ತು ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು, ಇದುವರೆಗೆ ತೆರೆದಿಲ್ಲ. ಇದರಿಂದಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಪರ್ಕವೇ ಕಡಿತಗೊಂಡಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಉತ್ತರ ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ಆಗುತ್ತಿರುವ ಪ್ರವಾಹದಿಂದ ಜನರು ನರಳುತ್ತಿದ್ದರೂ ಯಾವ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ. ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಎಲ್ಲ ಉತ್ತರ ಕರ್ನಾಟಕದ ಜಿಲ್ಲೆಗಳ ಕರವೇ ಕಾರ್ಯಕರ್ತರು ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಕಾರ್ಯಕ್ರಮ ರೂಪಿಸಬೇಕು ಎಂದು ಕೋರುತ್ತೇನೆ.
ಇದನ್ನೂ ಓದಿ: ತೆಲಂಗಾಣ ಪ್ರವಾಹ: ತೆಲುಗು ಚಿತ್ರ ರಂಗದಿಂದ ನೆರವಿನ ’ಮಹಾಮಳೆ’!
ಎಂ.ಸಿ.ಮುಲ್ಲಾ, ಬಿಜಾಪುರ ಜಿಲ್ಲಾ ಕರವೇ ಅಧ್ಯಕ್ಷರು;
ಬಿಜಾಪುರ ಜಿಲ್ಲೆಯಲ್ಲಿ ಈ ಬಾರಿ ನೆರೆಯಿಂದ ಬಹಳಷ್ಟು ನಷ್ಟವಾಗಿದೆ. ಜಿಲ್ಲಾಡಳಿತ ಕಾಟಾಚಾರದ ಸಮೀಕ್ಷೆ ನಡೆಸಿ ಆಗಿರುವ ನಷ್ಟದ ಅಂದಾಜು ಹಾಕಿದೆ. ಎರಡು ಲಕ್ಷ ಹೆಕ್ಟೇರ್ ಗೂ ಹೆಚ್ಚು ಕೃಷಿ ಜಮೀನು ಹಾಳಾಗಿದೆ, ಹನ್ನೊಂದು ಸಾವಿರ ಹೆಕ್ಟೇರ್ ತೋಟಗಾರಿಕೆ ಭೂಮಿ ನಷ್ಟವಾಗಿದೆ. ತೊಗರಿ, ಕಬ್ಬು, ಸೂರ್ಯಕಾಂತಿ, ದ್ರಾಕ್ಷಿ, ಲಿಂಬೆ, ಬಾಳೆ ಇತ್ಯಾದಿ ಬೆಳೆಗಳೆಲ್ಲ ನೀರುಪಾಲಾಗಿದೆ. ಆದರೆ ರಾಜ್ಯ ಸರ್ಕಾರದಿಂದ ಒಂದೇ ಒಂದು ರುಪಾಯಿ ಪರಿಹಾರ ಬಂದಿಲ್ಲ. ವೈಮಾನಿಕ ಸಮೀಕ್ಷೆಗೆಂದು ಬಂದ ಮುಖ್ಯಮಂತ್ರಿಗಳು ಅರ್ಧಕ್ಕೆ ವಾಪಾಸಾದರು. ಬೆಳೆಹಾನಿಯ ಪರಿಹಾರ, ಮನೆಹಾನಿಯ ಪರಿಹಾರಗಳು ಸಮರ್ಪಕವಾಗಿ ವಿತರಣೆಯಾಗಿಲ್ಲ. ಬಂದಿರುವ ಅಲ್ಪಸ್ವಲ್ಪ ಹಣವನ್ನು ಪುಡಾರಿಗಳು ಸುಳ್ಳುದಾಖಲೆ ಸೃಷ್ಟಿಸಿ ಲೂಟಿ ಹೊಡೆಯುತ್ತಿದ್ದಾರೆ. ಗಂಜೀಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೆ ಸಂತ್ರಸ್ಥರು ಪರದಾಡುತ್ತಿದ್ದಾರೆ. ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಬೆಳೆನಷ್ಟ ಪರಿಹಾರದ ಹಣವನ್ನು ಎಕರೆಗೆ ಹತ್ತು ಸಾವಿರದಿಂದ ಒಂದು ಲಕ್ಷಕ್ಕೆ ಏರಿಸಲು ಶಿಫಾರಸು ಮಾಡಿದ್ದಾರೆ. ಸರ್ಕಾರ ಹತ್ತು ಸಾವಿರವನ್ನೇ ಕೊಡುತ್ತಿಲ್ಲ, ಒಂದು ಲಕ್ಷ ರುಪಾಯಿ ಕೊಡುತ್ತದೆಯೇ?
ಭೀಮೂ ನಾಯಕ್, ಯಾದಗಿರಿ ಜಿಲ್ಲಾ ಕರವೇ ಅಧ್ಯಕ್ಷರು;
ಯಾದಗಿರಿ ಜಿಲ್ಲೆ ಶಾಪಗ್ರಸ್ಥ ಜಿಲ್ಲೆಯಾಗಿಹೋಗಿದೆ. 2019 ರಲ್ಲಿ ಘಟಿಸಿದ ಪ್ರವಾಹದಿಂದ ಮನೆಮಠ ಕಳೆದುಕೊಂಡ ಸಂತ್ರಸ್ಥರಿಗೇ ಇದುವರೆಗೆ ಪರಿಹಾರ ದೊರೆತಿಲ್ಲ. ಈ ವರ್ಷ ಮತ್ತೆ ನಾವು ಪ್ರವಾಹಕ್ಕೆ ಬಲಿಯಾಗಿದ್ದೇವೆ. ಜಿಲ್ಲೆಯ ಏಳು ತಾಲ್ಲೂಕುಗಳು ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿವೆ. ಗಂಜೀಕೇಂದ್ರದಲ್ಲಿ ಸಂತ್ರಸ್ಥರಿಗೆ ಸರಿಯಾಗಿ ಊಟವನ್ನೂ ಹಾಕುತ್ತಿಲ್ಲ. ಮಾತು ಕಡಿಮೆ ಮಾಡಿ, ಕೆಲಸ ಮಾಡಿ ಎಂದು ನಾವು ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಆಗ್ರಹಿಸುತ್ತಿದ್ದೇವೆ. ಅಧಿಕಾರಿಗಳು ಆಗಿರುವ ನಷ್ಟದ ವರದಿ ಬಂದಿಲ್ಲ, ಅನುದಾನ ಬಂದಿಲ್ಲ ಎಂದು ಸಬೂಬು ಹೇಳಿಕೊಂಡು ಬರುತ್ತಿದ್ದಾರೆ. ಅತಿಯಾದ ಮಳೆಯಿಂದ ನಾವು ಅನುಭವಿಸಿದ್ದು ಸಾಲದು ಎಂಬಂತೆ ಅಧಿಕಾರಿಗಳ ಬೇಜವಾಬ್ದಾರಿತನದಿಂದಲೂ ಕಷ್ಟ ಅನುಭವಿಸುತ್ತಿದ್ದೇವೆ. ಅಣೆಕಟ್ಟೆಯ ಕ್ಲಸ್ಟರ್ ಗೇಟ್ ಗಳನ್ನು ಸಮರ್ಪಕವಾಗಿ ತೆರೆಯದ ಪರಿಣಾಮವಾಗಿ ಈ ವರ್ಷ ಆಗಬಾರದ ಅನಾಹುತಗಳು ಆಗಿವೆ. ಇನ್ನು 12,000 ಕ್ವಿಂಟಾಲ್ ಶೇಂಗಾ ಬಿತ್ತನೆ ಬೀಜ ವಿತರಣೆ ಮಾಡುವುದಾಗಿ ಹೇಳಿದ್ದ ಜಿಲ್ಲಾಡಳಿತ ಕೇವಲ 7,000 ಕ್ವಿಂಟಾಲ್ ಬೀಜ ವಿತರಣೆ ಮಾಡಿತ್ತು. ನಾವು ಪ್ರತಿಭಟನೆ ನಡೆಸಿ, ಒತ್ತಡ ಹೇರಿದ ಪರಿಣಾಮವಾಗಿ ಇನ್ನೂ ಒಂದು ಸಾವಿರ ಟನ್ ಬೀಜ ಹಂಚಿಕೆ ಮಾಡಲಾಗುತ್ತಿದೆ. ಸರ್ಕಾರ ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡಿದರೆ ನಾವು ಸಹಿಸುವುದಿಲ್ಲ. ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಯಾರ ಬೆದರಿಕೆಗೂ ಅಂಜದೆ ಜನಪರವಾದ, ರೈತಪರವಾದ ಕೆಲಸಗಳನ್ನು ಮುಂದುವರೆಸುತ್ತೇವೆ.
ಇದನ್ನೂ ಓದಿ: ಪ್ರವಾಹ: ಪ್ರಧಾನಿ ಮಾಡಿದ ಕನ್ನಡದ ಒಂದು ಟ್ವೀಟ್ ನೆರೆ ಪರಿಹಾರವಾಗಬಲ್ಲುದೇ?
ವಿನೋದ್ ರೆಡ್ಡಿ, ರಾಯಚೂರು ಜಿಲ್ಲಾ ಕರವೇ ಅಧ್ಯಕ್ಷರು;
ನಮ್ಮ ಜಿಲ್ಲೆಯಲ್ಲಿ ಸುಮಾರು ನೂರು ಕಿ.ಮೀ ಉದ್ದ ಕೃಷ್ಣಾ ಮತ್ತು 56 ಕಿ.ಮೀ ಉದ್ದ ತುಂಗಭದ್ರಾ ನದಿ ಹರಿಯುತ್ತದೆ. ಹೀಗಾಗಿ ಹೊಳೆಗಳು ತುಂಬಿ ಹರಿದಾಗೆಲ್ಲ ನಾವು ಸಮಸ್ಯೆ ಎದುರಿಸುತ್ತಿದ್ದೇವೆ. ನಮ್ಮ ಜಿಲ್ಲೆಯಲ್ಲೇ ಮಳೆ ಬರಬೇಕು ಎಂದೇನಿಲ್ಲ, ಮಹಾರಾಷ್ಟ್ರದಲ್ಲಿ ಜೋರು ಮಳೆ ಬಂದರೆ ನಮ್ಮಲ್ಲಿ ಪ್ರವಾಹವಾಗುತ್ತದೆ. ಈ ವರ್ಷ ಹದಿನೆಂಟು ಮಂದಿ ಅಮಾಯಕ ಜೀವಗಳು ಪ್ರವಾಹದಿಂದ ಬಲಿಯಾದರು. ಪ್ರವಾಹದಲ್ಲಿ ಕೊಚ್ಚಿಹೋದ ಮಸ್ಕಿಯಲ್ಲಿ ಚನ್ನಬಸಪ್ಪ ಎಂಬುವವರ ಶವ ಇದುವರೆಗೆ ಸಿಕ್ಕೇ ಇಲ್ಲ. ಈ ವರ್ಷ ಒಟ್ಟು 96,472 ಹೆಕ್ಟೇರ್ ಕೃಷಿ ಜಮೀನು, 3,370 ಹೆಕ್ಟೇರ್ ತೋಟಗಾರಿಕೆ ಜಮೀನು ಪ್ರವಾಹದಿಂದ ಕೊಚ್ಚಿಹೋಗಿದೆ. ಒಟ್ಟು ಒಂಭತ್ತು ಸಾವಿರ ಕುಟುಂಬಗಳು ಅತಂತ್ರವಾಗಿವೆ. ಫಸಲ್ ಭೀಮಾ ಯೋಜನೆಯಿಂದ ರೈತರಿಗೆ ನಯಾಪೈಸೆ ವಿಮಾ ಹಣ ಬಂದಿಲ್ಲ. ಪ್ರತಿ ವರ್ಷ ವಿಮೆಯ ಹಣವನ್ನು ಒತ್ತಾಯಪೂರ್ವಕವಾಗಿ ಕಟ್ಟಿಸಿಕೊಳ್ಳಲಾಗುತ್ತದೆ, ಆದರೆ ಈಗ ವಿಮೆಯನ್ನೇ ಕೊಡುತ್ತಿಲ್ಲ. ಇದೆಲ್ಲ ಅನ್ಯಾಯಗಳ ವಿರುದ್ಧ ಪ್ರತಿಭಟನೆ ನಡೆಸುವವರ ವಿರುದ್ಧ ಕೋವಿಡ್ ಹಿನ್ನೆಲೆಯಲ್ಲಿ ಕೇಸು ದಾಖಲಿಸುವುದಾಗಿ ಅಧಿಕಾರಿಗಳು ಬೆದರಿಸುತ್ತಿದ್ದಾರೆ.
ರುದ್ರೇಶ್, ಧಾರವಾಡ ಜಿಲ್ಲಾ ಕರವೇ ಅಧ್ಯಕ್ಷರು;
ನಮ್ಮ ಜಿಲ್ಲೆಯಲ್ಲಿ ನವಲಗುಂದ ತಾಲ್ಲೂಕು ಸಂಪೂರ್ಣವಾಗಿ ಬೆಳೆಹಾನಿಯಾಗಿದೆ. ಇದುವರೆಗೆ ರಾಜ್ಯ ಸರ್ಕಾರ ಯಾವುದೇ ಪರಿಹಾರ ಕೊಟ್ಟಿಲ್ಲ. ಪರಿಹಾರ ಕೇಳಿದರೆ, ಕೇಂದ್ರ ಸರ್ಕಾರದಿಂದ ಇನ್ನೂ ಅನುದಾನ ಬಂದಿಲ್ಲ ಎಂಬ ಸಬೂಬು ಹೇಳಲಾಗುತ್ತದೆ. ಮನೆಗಳನ್ನು ಕಳೆದುಕೊಂಡವರನ್ನು ಎ, ಬಿ ಮತ್ತು ಸಿ ಗ್ರೇಡ್ ಎಂದು ವಿಭಜಿಸಲಾಗಿದೆ. ಸಂಪೂರ್ಣವಾಗಿ ಮನೆಗಳು ಕೊಚ್ಚಿಹೋಗಿದ್ದರೆ (ಎ ಗ್ರೇಡ್) ಐದು ಲಕ್ಷ ರೂ ಪರಿಹಾರ, ಭಾಗಶಃ ಹಾನಿಯಾಗಿದ್ದರೆ (ಬಿ ಗ್ರೇಡ್) ಮೂರು ಲಕ್ಷ ರೂ ಹಾಗು ಅಲ್ಲಸ್ವಲ್ಪ ಜಖಂಗೊಂಡಿದ್ದರೆ (ಸಿ ಗ್ರೇಡ್) ಐವತ್ತು ಸಾವಿರ ರುಪಾಯಿಗಳನ್ನು ಕೊಡಲಾಗುತ್ತಿದೆ. ಈ ಪೈಕಿ ಸಿ ಗ್ರೇಡ್ ಪರಿಹಾರಗಳನ್ನು ಮಾತ್ರ ಅಲ್ಲಲ್ಲಿ ನೀಡಲಾಗುತ್ತಿದೆ. ಈ ಪರಿಹಾರವನ್ನೂ ಸಹ ರಾಜಕೀಯ ಪಕ್ಷಗಳ ನಾಯಕರು ಹಿಂಬಾಲಕರು, ಪುಡಾರಿಗಳು ಪಡೆಯುತ್ತಿದ್ದಾರೆ. ನಿಜವಾದ ಫಲಾನುಭವಿಗಳಿಗೆ ಹಣ ತಲುಪುತ್ತಿಲ್ಲ. ಬೆಣ್ಣೆಹೊಳೆಯಲ್ಲಿ ಹೂಳು ತೆಗೆದು ಪ್ರವಾಹ ಆಗದಂತೆ ಎಚ್ಚರ ವಹಿಸಲಾಗುವುದು ಎಂದು ಜಗದೀಶ್ ಶೆಟ್ರ್ ಅವರು ಹಿಂದೆ ಘೋಷಿಸಿದ್ದರು. ಆದರೆ ಆಗಿರುವುದು ಕೇವಲ ಐದು ಕಿ.ಮೀ ಉದ್ದದ ಕೆಲಸವಷ್ಟೇ. ಬಂದ ಹಣವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ನುಂಗಿ ನೀರು ಕುಡಿದ ಪರಿಣಾಮವಾಗಿ ಮತ್ತೆ ಮತ್ತೆ ಪ್ರವಾಹವಾಗುತ್ತಿದೆ. ಅಣ್ಣಿಗೇರಿಯಲ್ಲಿ ಮೃಪಟ್ಟ ಗಂಗಪ್ಪ ಚಲವಾದಿ ಎಂಬುವವರಿಗೆ ಪರಿಹಾರ ನೀಡಲು ಜಿಲ್ಲಾಡಳಿತ ನಿರಾಕರಿಸಿತ್ತು. ನಾವು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳು ಈಗ ಐದು ಲಕ್ಷ ರೂಪಾಯಿ ಪರಿಹಾರದ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಪ್ರವಾಹ ಭೀತಿ: ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ- ಸಿಎಂ ಯಡಿಯೂರಪ್ಪ
ದೀಪಕ್, ಬೆಳಗಾವಿ ಜಿಲ್ಲಾ ಕರವೇ ಅಧ್ಯಕ್ಷರು;
2019 ರಲ್ಲಿ ಬೆಳಗಾವಿಯಲ್ಲಿ ಅಪಾರ ಪ್ರಮಾಣದ ಬೆಳೆಹಾನಿಯಾಗಿತ್ತು. ಈ ವರ್ಷ ಮತ್ತೆ ಹದಿನಾಲ್ಕು ತಾಲ್ಲೂಕುಗಳ ಪೈಕಿ ಆರು ತಾಲ್ಲೂಕುಗಳು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದೆ. ಬೆಳೆಹಾನಿ ಪರಿಹಾರ ಕೊಡಿ ಎಂದು ಅಧಿಕಾರಿಗಳಿಗೆ ಕೇಳಿದರೆ ಇನ್ನೂ ಜಿಪಿಎಸ್ ಸರ್ವೆ ಮುಗಿದಿಲ್ಲ ಎಂದು ಹೇಳುತ್ತಾರೆ. ಸುಮಾರು 1500 ಕೋಟಿ ರುಪಾಯಿಗಳಿಗೂ ಹೆಚ್ಚು ಬೆಳೆಹಾನಿಯಾಗಿದೆ. ರೈತರು ಬದುಕುವುದಾದರೂ ಹೇಗೆ? ಹತ್ತರಿಂದ ಇಪ್ಪತ್ತು ಎಕರೆ ಜಮೀನು ಇಟ್ಟುಕೊಂಡವರು ಬೆಳೆಹಾನಿಯಾಗಿಲ್ಲದಿದ್ದರೂ ರಾಜಕೀಯ ಪ್ರಭಾವ ಬಳಸಿ ಪರಿಹಾರ ಪಡೆಯುತ್ತಿದ್ದಾರೆ. ನಿಜವಾದ ಸಂತ್ರಸ್ಥರು ಕಣ್ಣೀರಿನಲ್ಲಿ ಮುಳುಗಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಎಲ್ಲ ತಾಲ್ಲೂಕುಗಳಲ್ಲಿ ಸಭೆಗಳನ್ನು ನಡೆಸುವುದರ ಜತೆಗೆ ಪರ್ಯಾಯ ಸಮೀಕ್ಷೆ ನಡೆಸಿ ವಸ್ತುಸ್ಥಿತಿಯನ್ನು ಜನರ ಮುಂದಿಡಲಿದೆ. ಚಿಕ್ಕೋಡಿ ಯಕ್ಸಂಬಾದಲ್ಲಿ ಕರವೇ ಜಿಲ್ಲಾಘಟಕದವರು ಈ ಬಾರಿ ನೆರೆಸಂತ್ರಸ್ಥರ ಜತೆ ರಾಜ್ಯೋತ್ಸವ ಆಚರಿಸಿದೆವು. ನಮ್ಮ ಕೈಲಾದ ಸಹಾಯಗಳನ್ನು ಮಾಡಿದೆವು. ಜಿಲ್ಲಾಡಳಿತ ಮುಂದೆಯೂ ಇದೇ ರೀತಿಯ ತಾತ್ಸಾರ ಧೋರಣೆ ಮುಂದುವರೆಸಿದರೆ, ನಾವು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾವಿರಾರು ರೈತರೊಂದಿಗೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ.
ರಮೇಶ್ ಬದ್ನೂರ, ಬಾಗಲಕೋಟೆ ಜಿಲ್ಲೆ ಕರವೇ ಜಿಲ್ಲಾಧ್ಯಕ್ಷರು;
ನಮ್ಮ ಜಿಲ್ಲೆಯಲ್ಲಿ ಈ ಬಾರಿಯ ಪ್ರವಾಹದಿಂದ ಒಟ್ಟು 12,092 ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ ಅರ್ಧದಷ್ಟು ಮನೆಗಳು ಸರ್ವನಾಶವಾಗಿವೆ. ಜತೆಗೆ ಸುಮಾರು 1,12,000 ಹೆಕ್ಟೇರ್ ಬೆಳೆ ನಷ್ಟವಾಗಿದೆ. ಒಟ್ಟು ಮೂರು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಇದುವರೆಗೆ ಪರಿಹಾರ ವಿತರಣೆಯ ಕಾರ್ಯ ಆಗುತ್ತಿಲ್ಲ. 2019 ರಲ್ಲಿ ಮಲಪ್ರಭಾ, ಘಟಪ್ರಭಾ ನದಿಗಳಲ್ಲಿ ಪ್ರವಾಹ ಉಂಟಾಗಿ ನೂರಾರು ಗ್ರಾಮಗಳು ಮುಳುಗಡೆಯಾಗಿದ್ದವು. ಕೆಲವು ಗ್ರಾಮಗಳು ಗುರುತೇ ಸಿಗದಂತೆ ಕಾಣೆಯಾಗಿದ್ದವು. ಗಾಯದ ಮೇಲೆ ಬರೆ ಎಳೆದಂತೆ ಈ ವರ್ಷವೂ ಪ್ರವಾಹದ ನರಕವನ್ನು ಅನುಭವಿಸುತ್ತಿದ್ದೇವೆ. ಇಷ್ಟೆಲ್ಲ ಆದರೂ ಉತ್ತರ ಕರ್ನಾಟಕದ ಜಿಲ್ಲೆಗಳ ಶಾಸಕರು ಏನೂ ರಾಜಕಾರಣ ಮಾಡಿಕೊಂಡು ಓಡಾಡುತ್ತಿದ್ದಾರೆ. ಈ ಎಲ್ಲ ರಾಜಕಾರಣಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರು ಎಚ್ಚರಿಕೆ ನೀಡಬೇಕು. ಅಧ್ಯಕ್ಷರ ಮಾರ್ಗದರ್ಶನದಂತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟಗಳನ್ನು ರೂಪಿಸುತ್ತೇವೆ.
ಇದನ್ನೂ ಓದಿ: ರಾಜ್ಯದ 130 ತಾಲೂಕುಗಳು ‘ಪ್ರವಾಹಪೀಡಿತ’: ಸರ್ಕಾರದ ಘೋಷಣೆ


