ಪ್ರವಾಹ ಪರಿಸ್ಥಿತಿ: ಪ್ರಧಾನಿ ಮಾಡಿದ ಕನ್ನಡದ ಒಂದು ಟ್ವೀಟ್ ನೆರೆ ಪರಿಹಾರವಾಗಬಲ್ಲುದೇ?

ಕಳೆದ ವರ್ಷ ರಾಜ್ಯದಲ್ಲಿ ಎದುರಾಗಿದ್ದ ಪ್ರವಾಹದ ಹಾನಿಗೆ ಕೇಂದ್ರ ಸರ್ಕಾರ ಇನ್ನೂ ನ್ಯಾಯಯುತ ಪರಿಹಾರ ಬಿಡುಗಡೆ ಮಾಡಿಲ್ಲ. ಆದರೆ ಈಗಾಗಲೇ ಈ ವರ್ಷವೂ ರಾಜ್ಯದಲ್ಲಿ ಪ್ರವಾಹ ಅಪ್ಪಳಿಸಿದೆ. ಅದರಲ್ಲೂ ದಕ್ಷಿಣ ಭಾರತವಂತೂ ತೀವ್ರ ಸಂಕಷ್ಟಕ್ಕೆ ಎದುರಾಗಿದೆ. ಈ ಸಂದರ್ಭದಲ್ಲಾದರೂ ಕೇಂದ್ರ ಸರ್ಕಾರ ಮತ್ತು ನರೇಂದ್ರ ಮೋದಿಯವರು ಕಣ್ತೆರೆದು ನೋಡುತ್ತಾರೆಯೇ ಎನ್ನುವ ಸಂಶಯ ಮೂಡುತ್ತಿದೆ. ಏಕೆಂದರೆ ಈಗಾಗಲೇ 2 ತಿಂಗಳಿನಿಂದ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಆಗಸ್ಟ್‌ ತಿಂಗಳಿನಿಂದಲೂ ಪರಿಹಾರಕ್ಕೆಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಬಳಿ ಕೈಚಾಚುತ್ತಿದೆ.

.ಇದುವರೆಗೂ ಮಾನ್ಯ ನರೇಂದ್ರ ಮೋದಿಯವರು ಕರ್ನಾಟಕದ ಪರಿಸ್ಥಿತಿಯ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಆದರೆ ಅ. 16 ರಂದು ಕನ್ನಡದಲ್ಲಿ ಟ್ವೀಟ್ ಮಾಡಿರುವ ಮೋದಿ ಈ ಸಂಕಷ್ಟ ಸಂದರ್ಭದಲ್ಲಿ ನಾವು ಕರ್ನಾಟಕದ ಜನತೆಯೊಟ್ಟಿಗೆ ನಿಲ್ಲುತ್ತೇವೆ ಎಂಬ ಭರವಸೆಯನ್ನು ನೀಡುತ್ತೇನೆ ಎಂದು ಹೇಳಿದ್ದಾರೆ. ಕಳೆದ ಬಾರಿಯ ಪರಿಹಾರವನ್ನೇ ಬಿಡುಗಡೆ ಮಾಡದ ಪ್ರಧಾನಿ, ಈ ಬಾರಿ ಯಾವ ರೀತಿಯಲ್ಲಿ ಜೊತೆಗಿರುತ್ತಾರೋ ಗೊತ್ತಿಲ್ಲ!

ಇನ್ನು, ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕಿಂತಲೂ ಮೊದಲಿನಿಂದಲೇ ಪ್ರವಾಹಕ್ಕೆ ತುತ್ತಾಗಿರುವ ಕರ್ನಾಟದ ಪರಿಸ್ಥಿತಿ ಮೋದಿಯವರಿಗೆ ಕಂಡಂತಿಲ್ಲ. ಹಾಗಾಗಿಯೇ, ಅ. 14 ರಂದು ತೆಲುಗಿನಲ್ಲಿ ಆ ರಾಜ್ಯದ ಪ್ರವಾಹ ಪರಿಸ್ಥಿತಿಯ ಬಗ್ಗೆ ಸಹಾಯಹಸ್ತ ಚಾಚುತ್ತೇವೆ ಎಂದು ಟ್ವೀಟ್ ಮಾಡಿರುವ ಮೋದಿಯವರ ನಡೆಗೆ ಕರ್ನಾಟಕದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಕೊನೆಗೂ ಅ. 16ರಂದು, ‘ಹೋಗಲಿ ಪಾಪ’ ಎನ್ನುವಂತೆ ಯಾರದೋ ಒತ್ತಡಕ್ಕೆ ಮಣಿದು ಟ್ವೀಟ್ ಒಂದನ್ನು ಮಾಡಿ, “ಕರ್ನಾಟಕದ ವಿವಿಧ ಭಾಗಗಳಲ್ಲಿ ಸುರಿದ ಮಳೆ ಮತ್ತು ಪ್ರವಾಹ ಪರಿಸ್ಥಿತಿಯ ಬಗ್ಗೆ ಯಡಿಯೂರಪ್ಪನವರೊಂದಿಗೆ ಮಾತನಾಡಿದ್ದೇನೆ. ಪ್ರವಾಹದಿಂದ ಬಾಧಿತರಾದ ಕರ್ನಾಟಕದ ಸಹೋದರಿ ಮತ್ತು ಸಹೋದರರೊಂದಿಗೆ ನಾವು ಜೊತೆಯಾಗಿ ನಿಲ್ಲುತ್ತೇವೆ. ಪ್ರಗತಿಯಲ್ಲಿರುವ ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ ಕೇಂದ್ರದ ಎಲ್ಲ ಅಗತ್ಯ ನೆರವಿನ ಬೆಂಬಲದ ಭರವಸೆ ನೀಡಲಾಗಿದೆ” ಎಂದು ಬರೆದು ಕೈತೊಳೆದುಕೊಂಡಿದ್ದಾರೆ!

ಇದನ್ನೂ ಓದಿ: ಯಡಿಯೂರಪ್ಪನವರಿಗೆ ಮೋದಿ ಕಂಡ್ರೆ ಭಯ. ಹಾಗಾಗಿ ಪ್ರವಾಹ ಪರಿಹಾರಕ್ಕೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿಲ್ಲ? : ಸಿದ್ದು

ಆಯಾ ರಾಜ್ಯಗಳಿಗೆ ಅದರದ್ದೇ ಭಾಷೆಯಲ್ಲಿ ಟ್ವೀಟ್ ಮಾಡಿರುವ ಮೋದಿ ಪರಿಹಾರ ಬಿಡುಗಡೆ ಮಾಡುತ್ತಾರೋ? ಇಲ್ಲವೋ? ಎಂಬುದು ತರ್ಕಕ್ಕೆ ನಿಲುಕದ ವಿಷಯವಾಗಿದೆ.

ಇನ್ನು, 2020ರ ಆಗಸ್ಟ್‌ ತಿಂಗಳಲ್ಲಿ ಉಂಟಾದ ಮಳೆ ಮತ್ತು ಪ್ರವಾಹದಿಂದ ತೀವ್ರ ಹಾನಿಗೊಳಗಾದ ರಾಜ್ಯದ 23 ಜಿಲ್ಲೆಗಳ 130 ತಾಲ್ಲೂಕುಗಳನ್ನು ‘ಪ್ರವಾಹಪೀಡಿತ ತಾಲೂಕುಗಳು’ ಎಂದು ರಾಜ್ಯ ಸರ್ಕಾರ ಘೋಷಿಸಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ನೆರೆಯಿಂದಾದ ಕೃಷಿ ನಷ್ಟ ಎಷ್ಟು?

ಮಹಾರಾಷ್ಟ್ರದ ಕೃಷ್ಣಾಕಣಿವೆ ಜಲಾಶಯಗಳು ತುಂಬಿ ಹರಿದು ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೇ ಸಂದರ್ಭದಲ್ಲಿ ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲೂ ಮಳೆಯಾಗಿ ಅಪಾರ ಪ್ರಮಾಣದ ಜೀವಹಾನಿ, ಬೆಳೆ ಹಾನಿ, ಮನೆ ಕುಸಿತಗಳು ಸಂಭವಿಸಿದ್ದವು.

ಸದ್ಯ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ರಾಜ್ಯದ 23 ಜಿಲ್ಲೆಗಳ 130 ತಾಲ್ಲೂಕುಗಳಲ್ಲಿ ಅತಿವೃಷ್ಟಿಯಿಂದ ಪ್ರವಾಹ ಉಂಟಾಗಿದೆ ಎಂದು ತಿಳಿಸಿದೆ. ಈ ಉಸ್ತುವಾರಿ ಕೇಂದ್ರದ ವರದಿಯನ್ನಾಧರಿಸಿ, 130 ತಾಲೂಕುಗಳನ್ನು (ಪ್ರಸ್ತುತ ಇನ್ನೂ ಹೆಚ್ಚಿದೆ) ಅತಿವೃಷ್ಟಿ/ಪ್ರವಾಹಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ.

ದೇಶದಲ್ಲಿ ಈಗಾಗಲೇ ಪ್ರವಾಹದಿಂದಾಗಿ ಜನ ತತ್ತರಿಸುವಂತಾಗಿದೆ. ಈಗಿರುವ ಕೊರೊನಾ ಸಾಂಕ್ರಾಮಿಕದ ನಡುವೆ ಪ್ರವಾಹದ ಹೊಡೆತ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರ ನಡುವೆ ನೆರೆ ಪರಿಹಾರಕ್ಕಾಗಿ ಪ್ರವಾಹಕ್ಕೆ ತುತ್ತಾದ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದರೂ ಇದುವರೆಗೂ ಕೇಂದ್ರ ಸೂಕ್ತ ಪರಿಹಾರ ನೀಡಿಲ್ಲ. ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್‌ 10 ರಂದು ರಾಜ್ಯ ಸಚಿವರ ಸಭೆ ಕರೆದಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿಯಾದರೂ ನ್ಯಾಯಯುತ ಪರಿಹಾರಕ್ಕಾಗಿ ಸಮರ್ಥವಾಗಿ ದನಿಯೆತ್ತಿ ಪರಿಸ್ಥಿತಿ ನಿಭಾಯಿಸಬೇಕು ಎಂದು ರಾಜ್ಯದ ವಿರೋಧ ಪಕ್ಷಗಳು ಮತ್ತು ಜನತೆ ಆಗ್ರಹಿಸಿತ್ತು. ಆದರೆ ಈ ಸಭೆಯ ನಂತರ ಯಾವುದೇ ಮಹತ್ವದ ಬೆಲವಣಿಗೆಯಾಗಲಿಲ್ಲ.

ಇದನ್ನೂ ಓದಿ: ನಿಲ್ಲದ ಪ್ರವಾಹ, ಬಾರದ ಪರಿಹಾರ: ಇಂದಿನ ಪ್ರಧಾನಿ ಸಭೆಯಲ್ಲಿ ದನಿಯೆತ್ತಲು ವಿಪಕ್ಷಗಳ ಆಗ್ರಹ

2019ರ ಆಗಸ್ಟ್‌ನಲ್ಲಿ ಅಪ್ಪಳಿಸಿದ ನೆರೆಯಿಂದಾಗಿ ರಾಜ್ಯದ ನೂರಾರು ಜನರು ಸಾವನ್ನಪ್ಪಿದ್ದು, ಲಕ್ಷಾಂತರ ಜನ ವಸತಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಲಕ್ಷಾಂತರ ಹೆಕ್ಟೇರ್ ಬೆಳೆ ನಾಶವಾಗಿ ರೈತರು ಬೀದಿಗೆ ಬಿದ್ದರು. ಅದರಲ್ಲಿ ಬಹಳಷ್ಟು ಜನರಿಗೆ ವರ್ಷ ಕಳೆದರೂ ಪರಿಹಾರ ಸಿಕ್ಕಿಲ್ಲ ಎಂಬ ದೂರುಗಳು ಸಾಮಾನ್ಯವಾಗಿವೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋದರೂ ಪರಿಹಾರ ಸಿಕ್ಕಿರಲಿಲ್ಲ. ಕಳೆದ ವರ್ಷ ತುಮಕೂರಿಗೆ ಪ್ರಧಾನಿ ಆಗಮಿಸಿದ್ದಾಗ, ಯಡಿಯೂರಪ್ಪನವರು ವೇದಿಕೆಯ ಮೇಲೆಯೇ ಬೇಡಿಕೊಂಡರೂ ಮೋದಿಯವರು ನೆರೆಯ ಕುರಿತು ಮಾತನಾಡಿರಲಿಲ್ಲ ಮತ್ತು ಪರಿಹಾರ ಬಿಡುಗಡೆ ಮಾಡಲಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಜಿಎಸ್‌ಟಿಯಿಂದ ರಾಜ್ಯಕ್ಕೆ ಬರಬೇಕಾಗಿದ್ದ ಪಾಲು ಬಂದಿಲ್ಲದ್ದರಿಂದ, ಪ್ರವಾಹದೊಟ್ಟಿಗೆ ರಾಜ್ಯದ ಹಲವು ಕಡೆ ಬರವೂ ಆವರಿಸಿದ್ದರಿಂದ ರಾಜ್ಯ ಸಂಕಷ್ಟದಲ್ಲಿ ನರಳಬೇಕಾಯಿತು. ಕಳೆದ 3 ವರ್ಷಗಳಿಂದ ರಾಜ್ಯವು ಬರ-ಪ್ರವಾಹಗಳಿಂದ ನಲುಗುತ್ತಿದೆ. ಈ ವರ್ಷವೂ ಜಿಎಸ್‌ಟಿ ಪರಿಹಾರವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿಲ್ಲ. ಇನ್ನು ಕೊರೊನಾ ನಿರ್ವಹಣೆಗೆಂದು ಪಿಎಂ ಕೇರ್ಸ್‌ನಿಂದ ಬಿಡಿಗಾಸೂ ಬಂದಿಲ್ಲ ಎಂದು ರಾಜ್ಯ ಸರ್ಕಾರವೇ ಹೇಳಿದೆ. ಯಡಿಯೂರಪ್ಪ ನೇತೃತ್ವದ ರಾಜ್ಯಸರ್ಕಾರ ಈಗಾಗಲೇ ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರ ಹೊಟ್ಟೆ ಮೇಲೆ ಕೊರೊನಾ ನೆಪವನ್ನೊಡ್ಡಿ ತಣ್ಣೀರು ಬಟ್ಟೆ ಹಾಕಿದೆ. ಇಂಥಾ ಸಂದರ್ಭದಲ್ಲಿ ನರೇಂದ್ರ ಮೊದಿಯವರ ಕನ್ನಡದ ಒಂದು ಟ್ವೀಟ್ ಹೇಗೆ ಪರಿಹಾರವಾಗಬಲ್ಲುದು ಎಂಬುದನ್ನು ಅವರಿಗೇ ಕೇಳಬೇಕಾದ ಪ್ರಶ್ನೆಯಾಗಿದೆ.

ಇದನ್ನೂ ಓದಿ: ಪ್ರವಾಹ, ಕೊರೊನಾ ಸಂದರ್ಭದಲ್ಲಿ ಕಣ್ಮರೆ, ಗಲಭೆ ಆದಾಗ ಪ್ರತ್ಯಕ್ಷ: ಯಾರಿವರು ಗೊತ್ತೇ?

ಇದುವರೆಗೂ ಕರ್ನಾಟಕ್ಕೆ ಬಂದ ನೆರೆ ಪರಿಹಾರವೆಷ್ಟು?

ಕಳೆದ ವರ್ಷ ಅಕ್ಟೋಬರ್ ನಲ್ಲಿ ಕೇಂದ್ರವು ತಾತ್ಕಾಲಿಕವಾಗಿ 1200 ಕೋಟಿ ನೆರೆ ಪರಿಹಾರ ಧನ ರಾಜ್ಯಕ್ಕೆ ಬಿಡುಗಡೆ ಮಾಡಿತ್ತು. 2ನೇ ಕಂತಿನಲ್ಲಿ 1869 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ ವಾಸ್ತವಾಗಿ ಜನವರಿಯಲ್ಲಿ 669 ಕೋಟಿ ರೂ ಮಾತ್ರ ಬಿಡುಗಡೆ ಮಾಡಿದೆ, ಇನ್ನು 1200 ಕೋಟಿ ರಾಜ್ಯಕ್ಕೆ ಬಂದಿಲ್ಲ. ಇದರ ಕುರಿತು ವಿರೋಧ ಪಕ್ಷಗಳು ಆಕ್ಷೇಪ ಎತ್ತಿದ್ದವು.

“ಕಳೆದ ವರ್ಷದ ಅತಿವೃಷ್ಟಿಯ ಅಂದಾಜು ನಷ್ಟ ರೂ.1,00,000 ಕೋಟಿ. ರಾಜ್ಯಸರ್ಕಾರದ ವರದಿ ಪ್ರಕಾರ ನಷ್ಟ- ರೂ 50,000 ಕೋಟಿ. ಪರಿಹಾರ ಕೇಳಿದ್ದು ರೂ.35,000 ಕೋಟಿ. ಕೇಂದ್ರ ಸರ್ಕಾರ ಕೊಟ್ಟಿದ್ದು ಕೇವಲ ರೂ.1860 ಕೋಟಿ ಮಾತ್ರ. ರಾಜ್ಯದ ಸಚಿವರು ಹಳೆಯ ಬಾಕಿಯನ್ನೂ ಕೇಳುವ ಧೈರ್ಯ ಮಾಡಲಿ” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಈ ಹಿಂದೆಯೇ ಒತ್ತಾಯಿಸಿದ್ದರು.

ಇದನ್ನೂ ಓದಿ: ಪ್ರವಾಹ ಭೀತಿ: ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ- ಸಿಎಂ ಯಡಿಯೂರಪ್ಪ

“ಈ ಬಾರಿಯಾದರೂ ರಾಜ್ಯದಿಂದ ಸಶಕ್ತ ತಂಡವೊಂದನ್ನು ನಿಯೊಗ ಕರೆದುಕೊಂಡು ಹೋಗಬೇಕು. ಪ್ರಧಾನ ಮಂತ್ರಿಯವರ ಮುಂದೆ ವ್ಯರ್ಥ ಕಸರತ್ತು ಆಗಬಾರದು. ತಕ್ಷಣ ಅಧಿಕಾರಿಗಳಿಂದ ಸ್ಥಳಕ್ಕೆ ಭೇಟಿ ಕೊಟ್ಟ ವರದಿಯನ್ನು ಪ್ರಧಾನಮಂತ್ರಿಯವರಿಗೆ ಕಳುಹಿಸಿಕೊಡಬೇಕು. ಹಾಗೆಯೇ, ಪ್ರಧಾನಮಂತ್ರಿಯವರು ಈ ಬಾರಿಯಾದರೂ ರಾಜ್ಯಕ್ಕೆ ಭೆಟಿ ಕೊಟ್ಟು ನೆರೆ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಬೇಕು ಹಾಗೂ ರಾಜ್ಯದ ಸಚಿವರು ಈ ಕುರಿತು ಇಂದಿನ ಸಭೆಯಲ್ಲಿ ಪ್ರಧಾನ ಮಂತ್ರಿಯವರಲ್ಲಿ ಮನವಿ ಮಾಡಬೇಕು” ಎಂದು ಹೇಳಿದ್ದರು.

ನೆರೆಹಾವಳಿಯಿಂದ ಕಳೆದ ವರ್ಷ ನಿರ್ವಸತಿಕರಾದವರಿಗೆ 5,00,000 ರೂಪಾಯಿ ಪರಿಹಾರ ಒದಗಿಸುವ ಹಾಗೂ ಮನೆ ಕಟ್ಟಿಸಿಕೊಡುವ ಸರ್ಕಾರದ ಭರವಸೆ ಬಹುಸಂಖ್ಯಾತರಿಗೆ ಅನುಕೂಲವಾಗಲಿಲ್ಲ. ಈ ವರ್ಷವೂ ಮಳೆಯಿಂದ ನಿರಾಶ್ರಿತರಾದವರಿಗೆ ತಕ್ಷಣವೇ ಸೂರು ಒದಗಿಸುವ (ಕಳೆದ ಬಾರಿಯ ನಿರಾಶ್ರಿತರು ಸೇರಿದಂತೆ) ಶಾಶ್ವತ ಯೋಜನೆಯನ್ನು ಸರ್ಕಾರ ಆದ್ಯತೆಯ ಮೇಲೆ ಅನುಷ್ಠಾನ ಮಾಡಬೇಕು. ಸತ್ಯವನ್ನು ಬಹಳ ಕಾಲ ಮರೆಮಾಚಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಟೀಕಿಸಿದ್ದರು.

ಮುಂಗಾರು ಮಳೆಯಿಂದ ತತ್ತರಿಸಿರುವ ರೈತರಿಗೆ ಬೆಳೆ ಹಾನಿ ಪರಿಹಾರ ನೀಡುವಾಗ ರಾಷ್ಟ್ರೀಯ ಮತ್ತು ರಾಜ್ಯ ಪ್ರಕೃತಿ ವಿಕೋಪ ನಿಧಿಯ ಮಾರ್ಗಸೂಚಿಗಳಿಗೆ ಜೋತುಬೀಳದೆ ಸರ್ಕಾರ ರೈತರಿಗೆ ಹೆಚ್ಚಿನ ಪರಿಹಾರ ತಕ್ಷಣವೇ ನೀಡಬೇಕು. ಸತತ ಮೂರನೇ ವರ್ಷ ಅತಿವೃಷ್ಟಿಗೆ ಸಿಲುಕಿರುವ ರಾಜ್ಯದ ರೈತರು ಈ ಬಾರಿಯೂ ಮಳೆಯ ಅನಾಹುತ ತಡೆದುಕೊಳ್ಳುವ ಶಕ್ತಿ ಇಲ್ಲದೆ ಬಸವಳಿದಿದ್ದಾರೆ. ರಸ್ತೆ, ವಿದ್ಯುತ್ ಸಂಪರ್ಕ ಕಡಿತ ಹಾಗೂ ಮೂಲಭೂತ ಸೌಕರ್ಯಗಳ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಸಮರೋಪಾದಿಯಲ್ಲಿ ಇದನ್ನು ಸರಿಪಡಿಸಲು ತುರ್ತು ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದರು.

ಇಷ್ಟೆಲ್ಲಾ ವಾಸ್ತವಿಕ ಸತ್ಯವಿರುವಾಗ ನರೇಂದ್ರ ಮೋದಿ ಮಾತ್ರ ಒಂದು ಟ್ವೀಟ್ ಮಾಡಿ ಸುಮ್ಮನಾಗಿದ್ದಾರೆ. 


ಇದನ್ನೂ ಓದಿ: ರಾಜ್ಯದ 130 ತಾಲೂಕುಗಳು ‘ಪ್ರವಾಹಪೀಡಿತ’: ಸರ್ಕಾರದ ಘೋಷಣೆ

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here