ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ತಮಿಳುನಾಡಿಗೆ ಭೇಟಿ ನೀಡಿದ್ದಾರೆ. ರಾಜ್ಯದಲ್ಲಿ ಹಲವು ಅಭಿವೃದಿ ಕಾರ್ಯಗಳಿಗೆ ಚಾಲನೆ ನೀಡುವುದರ ಜೊತೆಗೆ ಪಕ್ಷ ಸಂಘಟನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಅಮಿತ್ ಶಾ ಭೇಟಿ ರಾಜ್ಯ ರಾಜಕಾರಣದಲ್ಲಿ ಹಲವು ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಲಿದೆ ಎಂದು ಅಂದಾಜಿಸಲಾಗಿದೆ. ತಮಿಳುನಾಡು ಡಿಎಂಕೆ ಪಕ್ಷದಿಂದ ಉಚ್ಚಾಟನೆಯಾಗಿದ್ದ ಮಾಜಿ ಸಂಸದ ಕೆ.ಪಿ. ರಾಮಲಿಂಗಂ ಅವರು ಇಂದು ಬಿಜೆಪಿಗೆ ಸೇರ್ಪಡೆಯಾದರು.
ಇನ್ನೂ ಹೊಸ ಪಕ್ಷ ಸ್ಥಾಪನೆ ಮಾಡಿ 2021ರಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ವದಂತಿಯಿರುವ ಕರುಣಾನಿಧಿ ಅವರ ಹಿರಿಯ ಪುತ್ರ ಎಂ.ಕೆ.ಅಳಗಿರಿ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ಹೊಸ ಪಕ್ಷ ಸ್ಥಾಪನೆ ಮಾಡುವರೋ ಅಥವಾ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸಾಥ್ ನೀಡುವರೊ ಎಂಬುದು ಭೇಟಿಯ ನಂತರ ಬಳಕಿಗೆ ಬರಲಿದೆ.
ಇದನ್ನೂ ಓದಿ: ಅಮಿತ್ ಶಾ ತಮಿಳುನಾಡು ಭೇಟಿ: ಟ್ವಿಟ್ಟರ್‌ನಲ್ಲಿ #GoBackAmitShah ಟ್ರೆಂಡ್!
Thank you Tamil Nadu!
Some more pictures from Chennai. pic.twitter.com/FaUNxAQft5
— Amit Shah (@AmitShah) November 21, 2020
ಸ್ಟಾಲಿನ್ ಸಹೋದರ ಅಳಗಿರಿ ಹೊಸ ಪಕ್ಷ ಸ್ಥಾಪಿಸಿದರೆ ಡಿಎಂಕೆ ಮತಗಳನ್ನು ಅಳಗಿರಿ ಛಿದ್ರಗೊಳಿಸಲಿದ್ದಾರೆ. ಇದರಿಂದ ಮತಗಳು ಒಡೆದು ಬಿಜೆಪಿಗೆ ಲಾಭವಾಗುತ್ತದೆ. ಅವರು ಬಿಜೆಪಿ ಜೊತೆ ಕೈ ಜೊಡಿಸಿದರೂ ಬಿಜೆಪಿಗೆ ಲಾಭ. ಈ ಹಿನ್ನೆಲೆ ಅಳಗಿರಿ-ಅಮಿತ್ ಶಾ ಭೇಟಿ ಕುತೂಹಲ ಮೂಡಿಸಿದೆ.
ಇತ್ತ ಬಿಜೆಪಿಗೆ ಸೇರ್ಪಡೆಯಾಗಿರುವ ಡಿಎಂಕೆ ಪಕ್ಷದಿಂದ ಉಚ್ಚಾಟನೆಯಾಗಿದ್ದ ಮಾಜಿ ಸಂಸದ ಕೆ.ಪಿ. ರಾಮಲಿಂಗಂ, ಡಿಎಂಕೆ ನಾಯಕ ಎಂ.ಕೆ. ಅಳಗಿರಿ ಅವರನ್ನೂ ಬಿಜೆಪಿಗೆ ಕರೆತರುವುದಾಗಿ ಹೇಳಿಕೊಂಡಿದ್ದಾರೆ. ’ನಾನು ಅವರಿಗೆ ಬಿಜೆಪಿ ಸೇರಲು ಮನವೊಲಿಸಲು ಪ್ರಯತ್ನಿಸುತ್ತೇನೆ. ಆದರೆ ನಿರ್ಧಾರ ಮಾತ್ರ ಅವರಿಗೆ ಬಿಟ್ಟಿದೆ’ ಎಂದು ಹೇಳಿದ್ದಾರೆ.
ತಮಿಳುನಾಡು ಚುನಾವಣೆ ಹಿನ್ನೆಲೆ ಈ ಬಾರಿ ಕಳೆದ ಹಲವು ತಿಂಗಳುಗಳಿಂದಲೇ ಬಿಜೆಪಿ ಕಾರ್ಯಪ್ರವೃತ್ತವಾಗಿದೆ. 2016ರ ಚುನಾವಣೆಯಲ್ಲಿ 243 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ ಒಂದೂ ಸ್ಥಾನ ಗೆಲ್ಲಲ್ಲು ವಿಫಲವಾಗಿದ್ದ ಬಿಜೆಪಿ ಈ ಬಾರಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ನಟಿ, ರಾಜಕಾರಣಿ ಖುಷ್ಬೂ ತಮಿಳುನಾಡು ರಾಜಕಿಯದಲ್ಲಿ ಬಿಜೆಪಿಯ ಹೊಸ ಶಕೆ ಆರಂಭಕ್ಕೆ ಕಾರಣವಾಗಲಿದ್ದಾರೆ ಎಂಬ ವಿಶ್ವಾಸದಲ್ಲಿದೆ.
ಇತ್ತ ಧರ್ಮದ ಹೆಸರಲ್ಲಿ ಜನರನ್ನು ಸೆಳೆಯಲು ಬಿಜೆಪಿ ವೆಟ್ರಿವೇಲ್ ಯಾತ್ರೆಯನ್ನು ಸಹ ಆರಂಭಿಸಿದೆ. ಕೊರೊನಾ ಕಾರಣ ನೀಡಿ ಸರ್ಕಾರ ಅನುಮತಿ ನೀಡದೇ ಇದ್ದರೂ ಸಹ ಯಾತ್ರೆ ಆರಂಭಿಸಿ ಸರ್ಕಾರದ ವಿರುದ್ಧ ಟೊಂಕ ಕಟ್ಟಿ ನಿಂತಿದೆ.
ಒಟ್ಟಾರೆ ತಮಿಳುನಾಡಿನಲ್ಲಿ ಈ ಬಾರಿ ಹೇಗಾದರೂ ಅಧಿಕಾರದ ಸಮೀಪಕ್ಕಾದರೂ ಹೋಗಲೇ ಬೇಕು ಎಂದು ಪಣ ತೊಟ್ಟಿರುವ ಬಿಜೆಪಿ ತನ್ನ ಕಡೆಯಿಂದಾಗುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಡಿಎಂಕೆ ಒಳಗಿನ ಒಳ ಮುನಿಸನ್ನು ಲಾಭ ಮಾಡಿಕೊಳ್ಳುವ ಯೋಜನೆಯಲ್ಲಿದೆ.
ಪಶ್ಚಿಮ ಬಂಗಾಳದಲ್ಲೂ ತೃಣಮೂಲ ಕಾಂಗ್ರೆಸ್ ಅನ್ನು ಕೆಳಗಿಳಿಸಿ ಅಧಿಕಾರಕ್ಕೆ ಬರಲು ಬಿಜೆಪಿ ಅಲ್ಲಿ ಸತತ ರ್‍ಯಾಲಿಗಳನ್ನು ಆಯೋಜಿಸುತ್ತಿದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಅಮಿತ್ ಶಾ ತಿಂಗಳಲ್ಲಿ 2 ಬಾರಿ ಬಂಗಾಳ ಭೇಟಿಗೆ ಯೋಜನೆ ರೂಪಿಸಿದ್ದಾರೆ.


