ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೋಯ್ ಗುವಾಹಟಿಯಲ್ಲಿ ಇಂದು ಸಂಜೆ 5.34ರ ಹೊತ್ತಿಗೆ ನಿಧನರಾಗಿದ್ದಾರೆ. ಕೊರೊನಾ ನಂತರದ ತೊಂದರೆಗಳಿಗಾಗಿ ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ರಾಜ್ಯ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
86 ವರ್ಷದ ತರುಣ್ ಗೊಗೋಯ್ ಅವರು ನವೆಂಬರ್ 2 ರಂದು ಗುವಾಹಟಿ ಮೆಡಿಕಲ್ ಕಾಲೇಜ್ ಮತ್ತು ಹಾಸ್ಪಿಟಲ್ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಅವರನ್ನು ವೆಂಟಿಲೇಟರ್ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆಯ ಅಧೀಕ್ಷಕ ಅಭಿಜಿತ್ ಶರ್ಮಾ, ಗೊಗೋಯ್ ಅವರ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಹೇಳಿದ್ದರು.
ತರುಣ್ ಗೊಗೋಯ್ ಅವರು ಕಳೆದ ಆಗಸ್ಟ್ 25 ರಂದು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಹೀಗಾಗಿ ಅವರನ್ನು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ತರುವಾಯ ಅವರು ಕೊರೋನಾದಿಂದ ಚೇತರಿಸಿಕೊಂಡು ಮನೆಗೆ ಮರಳಿದ್ದರು. ಆದರೆ, ಎರಡು ತಿಂಗಳ ನಂತರ ಮತ್ತೆ ಉಲ್ಭಣಿಸಿದ ಅನಾರೋಗ್ಯದ ಸಮಸ್ಯೆಯಿಂದಾಗಿ ತರುಣ್ ಗೊಗೊಯ್ ಅವರನ್ನು ನವೆಂಬರ್ 2 ರಂದು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಂದು ಬೆಳಗ್ಗೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್, ಮಾಜಿ ಸಿಎಂ ಅವರ ಗಂಭೀರ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ವಿಮಾನದಲ್ಲಿ ಗುವಾಹಟಿಗೆ ತೆರಳಿದರು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಗೊಗೋಯ್ ಆರೋಗ್ಯದ ಬಗ್ಗೆ ವಿಚಾರಿಸಿದರು ಎಂದು ಅವರ ಪುತ್ರ ಗೌರವ್ ಗೊಗೊಯ್ ಹೇಳಿದ್ದಾರೆ.
Flying back to Guwahati from Dibrugarh after cancelling my programmes midway to be on the side of respected Tarun Gogoi da & his family as the former CM's health deteriorates. He has always been a father figure to me. I join millions in praying for his recovery. @GauravGogoiAsm
— Sarbananda Sonowal (@sarbanandsonwal) November 23, 2020


