ಪಶ್ಚಿಮ ಬಂಗಾಳ ಚುನಾವಣೆ ಮೇಲೆ ಕಣ್ಣೀಟ್ಟಿರುವ ಬಿಜೆಪಿ ಸರ್ಕಾರ ತೃಣಮೂಲ ಕಾಂಗ್ರೆಸ್ ಆಡಳಿತವನ್ನು ಗೂಂಡಾ ರಾಜ್‌ಗೆ ಹೋಲಿಸಿದೆ. ರಾಜ್ಯದಲ್ಲಿರುವ ಪೊಲೀಸ್ ಪಡೆ ಗೂಂಡಾ ರಾಜ್ ಸರ್ಕಾರದ ವಿರುದ್ದ ಏನೂ ಮಾಡುವುದಿಲ್ಲ, ಭಾರತಿಯ ಜನತಾ ಪಕ್ಷ ಅಧಿಕಾರಕ್ಕೆ ಬಂದರೆ ಪೊಲೀಸರು ಬೂಟು ನೆಕ್ಕುವಂತೆ ಮಾಡುತ್ತೇವೆ ಎಂದು ಬಿಜೆಪಿ ಮುಖಂಡ ರಾಜು ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಮುಖಂಡ ರಾಜು ಬ್ಯಾನರ್ಜಿ ಪಶ್ಚಿಮ ಬಂಗಾಳ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದು, “ಪಶ್ಚಿಮ ಬಂಗಾಳದಲ್ಲಿ ಇತ್ತೀಚಿನ ದಿನಗಳಲ್ಲಿ ಏನು ನಡೆಯುತ್ತಿದೆ ಎಂದು ನೋಡಿ, ರಾಜ್ಯದಲ್ಲಿ ಪೊಲೀಸರ ಸಹಾಯವಿಲ್ಲದೇ ‘ಗೂಂಡಾ ರಾಜ್’ ಮೇಲುಗೈ ಸಾಧಿಸುತ್ತದೆಯೇ?, ಅಂತಹ ಪೊಲೀಸ್ ಸಿಬ್ಬಂದಿಯೊಂದಿಗೆ ಏನು ಮಾಡಬೇಕು..? ಎಂದು ಪ್ರಶ್ನಿಸಿದ್ದಾರೆ.
’ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪೊಲೀಸರನ್ನು ಬೂಟು ನೆಕ್ಕುವಂತೆ ಮಾಡುತ್ತೇವೆ” ಎಂದು ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷ ರಾಜು ಬ್ಯಾನರ್ಜಿ ದುರ್ಗಾಪುರದಲ್ಲಿ ನಡೆದ ರ್‍ಯಾಲಿ ವೇಳೆ ಮಾತನಾಡಿದ್ದಾರೆ.
ಇದನ್ನೂ ಓದಿ: ಬಿಹಾರ ವಿಧಾನಸಭಾ ಚುನಾವಣೆ ಬಳಿಕ ಪಶ್ಚಿಮ ಬಂಗಾಳದತ್ತ ಬಿಜೆಪಿ ಚಿತ್ತ!
2021 ರ ಪಶ್ಚಿಮ ಬಂಗಾಳ ಚುನಾವಣೆ ಹಿನ್ನೆಲೆ, ಬಿಜೆಪಿ ರಾಜ್ಯದಲ್ಲಿ ವಿವಿಧ ರ್‍ಯಾಲಿಗಳಲ್ಲಿ ಮತ್ತು ಪಕ್ಷದ ಹೇಳಿಕೆಗಳಲ್ಲಿ ಆಡಳಿತರೂಢ ಪಕ್ಷದ ಮೇಲೆ “ಕಾನೂನು ಉಲ್ಲಂಘನೆ” ನಡೆಸಿದೆ ಎಂದು ಆರೋಪಿಸಿದೆ. ಈ ಹಿಂದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಮಹಿಳೆಯರಿಗೆ ರಾಜ್ಯದಲ್ಲಿ ಭದ್ರತೆ ಇಲ್ಲ ಎಂದು ಹೇಳಿದ್ದಾರೆ.
“ಬಂಗಾಳದಲ್ಲಿ ಮಹಿಳಾ ಮುಖ್ಯಮಂತ್ರಿ ಇದ್ದಾರೆ. ಆದರೆ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ಇತರ ರಾಜ್ಯಗಳಿಗೆ ಹೋಲಿಸಿದರೆ ಬಂಗಾಳದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆ ಅತ್ಯಂತ ಕೆಟ್ಟದಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. 2021 ರ ವಿಧಾನಸಭಾ ಚುನಾವಣೆಯ ನಂತರ ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರನ್ನು ಜೈಲಿಗೆ ಕಳುಹಿಸಲಾಗುವುದು” ಎಂದು ಕೈಲಾಶ್ ವಿಜಯವರ್ಗಿಯ ಆರೋಪಿಸಿದ್ದಾರೆ.
ಚುನಾವಣೆ ಹಿನ್ನೆಲೆ ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ ಎಂದು ಪ್ರತಿ ರ್‍ಯಾಲಿಯಲ್ಲೂ ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಾವುಗಳನ್ನು ತೃಣಮೂಲ ಕಾಂಗ್ರೆಸ್ ಮಾಡಿಸಿದೆ ಎಂದು ಆರೋಪಿಸಲಾಗುತ್ತಿದೆ.


