’ದೆಹಲಿ ಚಲೋ’ ಪ್ರತಿಭಟನಾ ನಿರತ ರೈತರಿಗೆ ಆಮ್ ಆದ್ಮಿ ಪಕ್ಷ ಬೆಂಬಲ ನೀಡಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿರ್ದೇಶನದಂತೆ ರೈತರಿಗೆ ಆಹಾರ, ನೀರು, ವಿದ್ಯುತ್ ವ್ಯವಸ್ಥೆ ಮಾಡಿದೆ.
“ದೆಹಲಿಯಲ್ಲಿ ರೈತರು ಎಲ್ಲೆಲ್ಲಿ ಪ್ರತಿಭಟನೆ ಮಾಡಲು ಬಯಸುತ್ತಾರೋ ಅವರಿಗೆ ಅನುಮತಿ ನೀಡಬೇಕು. ದೆಹಲಿ ಸಿಎಂ ನಿರ್ದೇಶನದಂತೆ, ಎಎಪಿ ಸರ್ಕಾರ ಪ್ರತಿಭಟನಾಕಾರ ರೈತರಿಗೆ ಬೆಂಬಲ ನೀಡಲಿದೆ. ನಾವು ಅವರಿಗೆ ಶೆಡ್‌ಗಳು, ನೀರು, ವಿದ್ಯುತ್ ಇತ್ಯಾದಿಗಳನ್ನು ವ್ಯವಸ್ಥೆ ಮಾಡುತ್ತೇವೆ. ನಾವು ರೈತರ ಪರವಾಗಿ ನಿಲ್ಲುತ್ತೇವೆ” ಎಂದು ಪಕ್ಷದ ರಾಷ್ಟ್ರೀಯ ವಕ್ತಾರ ರಾಘವ್ ಚಾಡ್ಡಾ ಹೇಳಿದ್ದಾರೆ.
दिल्ली जल बोर्ड के उपाध्यक्ष @raghav_chadha लगातार दूसरे दिन पहुंचे बुराड़ी के निरंकारी मैदान, पंजाब हरियाणा से आए हुए किसानों के लिए व्यवस्था का लिया जायजा pic.twitter.com/GVqs1WJgfv
— Delhi Jal Board (@DelhiJalBoard) November 28, 2020
ಇದನ್ನೂ ಓದಿ: ನಾನುಗೌರಿ ವಿಶೇಷ | ದೆಹಲಿ ರೈತ ಹೋರಾಟದ ಸಾಕ್ಷಾತ್ ಅನುಭವ, ಕರ್ನಾಟಕದ ಪ್ರತಿನಿಧಿಯಿಂದ
ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ಧ 32 ರೈತ ಸಂಘಟನೆಗಳು ನೇತೃತ್ವದಲ್ಲಿ ನಡೆಸುತ್ತಿರುವ ಪ್ರತಿಭಟನೆಯು ಇಂದಿಗೆ ಆರನೇ ದಿನಕ್ಕೆ ಕಾಲಿಟ್ಟಿದ್ದು, ರಾಜಧಾನಿಯ ಎಲ್ಲಾ ಪ್ರವೇಶ ದ್ವಾರಗಳನ್ನು ನಿರ್ಬಂಧಿಸಿ, ಬಂದ್ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ದೆಹಲಿಯಲ್ಲಿ ಎಲ್ಲಾ ಪ್ರವೇಶ ದ್ವಾರಗಳನ್ನು ನಿರ್ಬಂಧಿಸಿ ಪ್ರತಿಭಟನೆ ಮಾಡುವ ಎಚ್ಚರಿಕೆ ಹಿನ್ನೆಲೆ, ಇಂದು ಪ್ರತಿಭಟನೆ ತೀವ್ರಗೊಳ್ಳುವ ಲಕ್ಷಣಗಳಿವೆ. ಕೇಂದ್ರದ “ಷರತ್ತುಬದ್ಧ” ಸಂವಾದ ಪ್ರಸ್ತಾಪವನ್ನು ಪ್ರತಿಭಟನಾ ನಿರತ ರೈತ ಸಂಘಟನೆಗಳು ತಿರಸ್ಕರಿಸಿವೆ. ಸರ್ಕಾರ ಡಿಸೆಂಬರ್ 03 ರಂದು ರೈತ ಮುಖಂಡರನ್ನು ಮಾತುಕತೆಗೆ ಕರೆದಿದೆ.
ಕೃಷಿಯನ್ನು ಕಾರ್ಪೊರೇಟ್ ಕುಳಗಳ ವಶವನ್ನಾಗಿ ಮಾಡುವ ಈ ರೈತ ವಿರೋಧಿ ಕಾಯ್ದೆಗಳನ್ನು ಸರ್ಕಾರ ವಾಪಸ್ ಪಡೆದುಕೊಳ್ಳುವವರೆಗೂ ಹೋರಾಟ ನಡೆಸುತ್ತೇವೆ. ನಮ್ಮ ಬಳಿ 3-4 ತಿಂಗಳಿಗಾಗುವಷ್ಟು ರೇಷನ್ ಇದೆ. ಹಾಗಾಗಿ ಪ್ರತಿಭಟನೆ ಅನಿರ್ದಿಷ್ಠಾವಧಿ ನಡೆಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್‌ನ ಅಧ್ಯಕ್ಷ ಸುರ್ಜಿತ್ ಪೌಲ್ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಭಟನೆ ರಾಜಕೀಯ ಎಂದು ನಾನು ಎಂದಿಗೂ ಆರೋಪಿಸಿಲ್ಲ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನಿನ್ನೆಯ ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ಕೃಷಿ ಸುಧಾರಣೆಗಳು ರೈತರನ್ನು ವಿವಿಧ ಸಂಕೋಲೆಗಳಿಂದ ಮುಕ್ತಗೊಳಿಸುತ್ತವೆ ಮತ್ತು ಅವರಿಗೆ ಹೊಸ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡುತ್ತವೆ ಎಂದು ಮತ್ತೆ ಪುನರುಚ್ಚರಿಸಿದ್ದಾರೆ.


